'ಹಲವೆಡೆ'ಗಳಿಂದ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವ, ಎಡಪಕ್ಷಗಳೊಂದಿಗೆ ಸೇರಿಕೊಂಡು ತೃತೀಯ ರಂಗದ ಅಂಗವಾಗಿ ಈ ಚುನಾವಣಾ ಕಣಕ್ಕಿಳಿದಿರುವ ಎಐಎಡಿಎಂಕೆ, ಫಲಿತಾಂಶಗಳು ಹೊರಬಿದ್ದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿರುವುದರೊಂದಿಗೆ, ತಾವು ಕೂಡ ತೃತೀಯ ರಂಗದಿಂದ ದೂರವಾಗುವ ಕುರಿತು ಸುಳಿವು ನೀಡಿದ್ದಾರೆ.
ಅಂತಿಮ ಹಂತದ ಮತದಾನ ನಡೆಯುತ್ತಿರುವ ಪುದುಚೇರಿಯ 1 ಸೇರಿದಂತೆ ತಮಿಳುನಾಡಿನಲ್ಲಿರುವ ಒಟ್ಟು 40 ಕ್ಷೇತ್ರಗಳಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಪಡೆಯುವ ಪಕ್ಷವು ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸುವ ಸಾಮರ್ಥ್ಯ ಪಡೆಯುವುದು ಖಚಿತವಾಗಿದ್ದು, ಈ ಬಾರಿ ಎಐಎಡಿಎಂಕೆ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಹೀಗಾಗಿ ಜಯಲಲಿತಾ ಅವರತ್ತ ಯುಪಿಎ ಮತ್ತು ಎನ್‌ಡಿಎಗಳೆರಡೂ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ.
ಎರಡು ದಿನಗಳ ಹಿಂದೆ ಟಿಆರ್ಎಸ್ ತೃತೀಯ ರಂಗದಿಂದ ದೂರವಾಗಿದ್ದು, ನಿನ್ನೆಯಷ್ಟೇ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ನಿವಾಸಕ್ಕೆ ಗುಪ್ತವಾಗಿ ನುಗ್ಗಿದ್ದರು. ಇದೀಗ ತಮಿಳುನಾಡಿನಲ್ಲಿ ತೃತೀಯ ರಂಗದಿಂದ ಎಡಪಕ್ಷಗಳು, ಪಿಎಂಕೆ ಮತ್ತು ಎಂಡಿಎಂಕೆ ಜೊತೆ ಸೇರಿಕೊಂಡು ಯುಪಿಎ (ಡಿಎಂಕೆ, ಕಾಂಗ್ರೆಸ್) ವಿರುದ್ಧ ಸ್ಪರ್ಧಿಸುತ್ತಿರುವ ಎಐಎಡಿಎಂಕೆ ಕೂಡ ಅದೇ ದಾರಿ ತುಳಿಯುತ್ತಾ, "ತೃತೀಯ ರಂಗ ಗಟ್ಟಿಯಾಗಿದೆ" ಎಂಬ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡರ ಹೇಳಿಕೆಗೆ ಸದ್ಯಕ್ಕೆ ಯಾವುದೇ ರೀತಿ ಪ್ರತಿಕ್ರಿಯಿಸಲಾರೆ ಎಂದುತ್ತರಿಸಿದ್ದಾರೆ.
ಹಲವು ಕಡೆಗಳಿಂದ ದೂತರ ಸಂಪರ್ಕಗಳು ಆಗುತ್ತಿವೆ. ಆದರೆ ಮೇ 16ರಂದು, ಫಲಿತಾಂಶ ನನ್ನ ಕೈಸೇರುವವರೆಗೆ ಕಾದು, ಆ ಬಳಿಕ ಮಿತ್ರಪಕ್ಷಗಳೊಂದಿಗೆ ಸೇರಿಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
ತಮಿಳುನಾಡಿನಲ್ಲಿ ಮತದಾನವು "ಮುಕ್ತ ಮತ್ತು ನ್ಯಾಯಯುತ"ವಾಗಿ ನಡೆದರೆ ನಾವು ಈ ಬಾರಿ ತಮಿಳುನಾಡಿನಲ್ಲಿ ಪೂರ್ಣ ವಿಜಯ ಸಾಧಿಸುತ್ತೇವೆ ಎಂದು ವಿಶ್ವಾಸದಿಂದ ನುಡಿದ ಅವರು, ಫಲಿತಾಂಶ ಬಂದ ಬಳಿಕ ನಾನು ದೆಹಲಿಗೆ ತೆರಳುವುದನ್ನು ನಿರೀಕ್ಷಿಸುತ್ತೇನೆ ಎಂದರು.