15ನೇ ಲೋಕಸಭೆಯ ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ರಾಜಧಾನಿ ನವದೆಹಲಿಯಲ್ಲಿ ರಾಜಕೀಯ ಬಂಡವಾಳವನ್ನು ಗಟ್ಟಿಮಾಡಿಕೊಳ್ಳುವ ಪ್ರಕ್ರಿಯೆ ಬಿರುಸಾಗೇ ಸಾಗುತ್ತಿದೆ. ಮತದಾನೋತ್ತರ ಸಮೀಕ್ಷೆಯ ನಂತರ ಹಲವು ಪಕ್ಷಗಳು ರಾಜಕೀಯ ಲೆಕ್ಕಾಚಾರದಲ್ಲಿ ತಮ್ಮ ಮುಂದಿನ ನಡೆಯ ಬಗ್ಗೆ ಚಿಂತನೆ ನಡೆಸುವಲ್ಲಿ ಸಮಯ ಕಳೆಯುತ್ತಿದ್ದಾರೆ.
ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್‌ಗಳೆರಡೂ ಈಗ ತಮ್ಮ ಒಕ್ಕೂಟದ ಸಂಖ್ಯಾಬಲ ಹೆಚ್ಚಿಸವತ್ತ ಹೆಚ್ಚಿನ ಗಮನ ಹರಿಸುತ್ತಿವೆ. ಜನತಾದಳ ಸಂಯುಕ್ತ ಪಕ್ಷದ ರಾಝ್ಯಸಭಾ ಸದಸ್ಯರೊಬ್ಬರ ಮನೆಯಲ್ಲಿ ನಡೆದ ಮದುವೆ ರಿಸೆಪ್ಶನ್ ಕೂಡಾ ರಾಜಕೀಯ ವೇದಿಕೆಯಂತೆ ಕಂಡಿತು. ಶತ್ರು ಮಿತ್ರ ಪಕ್ಷಗಳೆರಡೂ ಒಂದೇ ಕಡೆ ಸೇರಿದ್ದುದು ಗಮನ ಸೆಳೆದಿತ್ತು.
ಬಿಜೆಪಿ ನೇತೃತ್ವದ ಎನ್‌ಡಿಎಯೂ ತನ್ನ ಹಿಂದಿನ ರಾಗವನ್ನು ಈಗ ಬದಲಿಸಿದೆ. ಬಿಜೆಡಿ ಜತೆಗೆ ಸಂಬಂಧ ಕಡಿದುಕೊಂಡಿದ್ದ ಬಿಜೆಪಿ ಈಗ ಬಿಜೆಡಿ ವಾಪಸ್ ಬರುವುದಿದ್ದರೆ ನನಗೇನೂ ಅಭ್ಯಂತರವಿಲ್ಲ ಎಂದು ಪರೋಕ್ಷ ಆಹ್ವಾನ ನೀಡಿದೆ. ಇಷ್ಟೇ ಅಲ್ಲ, ಪ್ರಧಾನ ಮಂತ್ರಿ ಅಭ್ಯರ್ಥಿ ಲಾಲ್‌ಕೃಷ್ಣ ಅಡ್ವಾಣಿ, ಕಾಂಗ್ರೆಸ್ ಪಕ್ಷವೂ ಕೂಡಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕಾಲ ದೂರವಿಲ್ಲ ಎಂದು ಹೇಳುವಷ್ಟರ ಮಟ್ಟಿಗೆ ಮುಂದುವರಿದಿದ್ದರು. ಆದರೂ, ಬಿಜೆಪಿ ಮುಖಂಡರು ತಮನೆ ಎಡಪಕ್ಷ, ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಜನತಾದಳದ ಸಹಕಾರ ಅಗತ್ಯವಿಲ್ಲ ಎಂದಿದ್ದರು.
ಆದರೂ ಹೊಸ ಹೊಸ ರಾಜಕೀಯ ಸಂಬಂಧಗಳು ದಿನೇ ದಿನೇ ಬದಲಾಗುವ ಲತ್ಕ್ಷಣಗಳನ್ನೂ ತಳ್ಳಿ ಹಾಕುವಂತಿಲ್ಲ. ಏಕೆಂದರೆ ಎಡಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿ ಲುಧಿಯಾನದಲ್ಲಿ ನಡೆದ ಎನ್‌ಡಿಎ ರ್ಯಾಲಿಯಲ್ಲಿ ಭಾಗವಹಿಸಿತ್ತು. ಅಷ್ಟೇ ಅಲ್ಲ, ಎಡಪಕ್ಷದ ರೂವಾರಿಯಾದಿದ್ದ ಜನತಾದಳ ಜಾತ್ಯತೀತದ ಮುಖಂಡ ಎಚ್.ಡಿ.ಕುಮಾರಸ್ವಾಮಿ ಕದ್ದುಮುಚ್ಚಿ ಇದ್ದಕ್ಕಿದ್ದಂತೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ, ಭೇಟಿಯ ಉದ್ದೇಶವನ್ನು ಅರುಹಲು ತಡವರಿಸಿದ್ದು ಇವೆಲ್ಲ ಹೊಸ ರಾಜಕೀಯ ಗಾಳಿಗೆ ಸಂಕೇತಗಳು ಎಂಬುದನ್ನು ನಿರ್ಲಕ್ಷಿಸುವಂತಿಲ್ಲ ಕೂಡಾ.
ಇದರ ಜತೆಗೇ ಇತ್ತೀಚೆಗೆ, ಕೇಂದ್ರ ಸಚಿವ ಹಾಗೂ ಲೋಕಜನಶಕ್ತಿ ಮುಖಂಡ ರಾಮ್ ವಿಲಾಸ್ ಪಾಸ್ವಾನ್, ಯುಪಿಎ ಸರ್ಕಾರ ಈ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಸ್ಪಷ್ಟ ಬಹುಮತ ಪಡೆಯದಿದ್ದಲ್ಲಿ, ತಮ್ಮ ಪಕ್ಷ ಪರ್ಯಾಯವಾದ ಇನ್ನೊಂದು ಜಾತ್ಯತೀತವಾದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದೂ ಹೇಳಿದ್ದರು. ಆದರೂ ಈ ನಿರ್ಧಾರವನ್ನು ಚತುರ್ಥರಂಗ ಒಟ್ಟಾಗಿ ಚರ್ಚಿಸಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.