ಜಾಗತಿಕ ಹಣಕಾಸು ಬಿಕ್ಕಟ್ಟಿನಲ್ಲಿಯೂ ಹಣ ಮಾಡಬಹುದು. ಮಹಾ ಚುನಾವಣೆಯ ಫಲಿತಾಂಶ ಶನಿವಾರ ಆರಂಭಗೊಳ್ಳುವ ಮೊದಲೇ ಫಲಿತಾಂಶವನ್ನು ನಿಖರವಾಗಿ ಹೇಳಿದ ಯಾವುದೇ ಜ್ಯೋತಿಷಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕೋಲ್ಕತಾದ ಸರಕಾರೇತರ ಸಂಸ್ಥೆಯೊಂದು ಘೋಷಿಸಿದೆ.
ಇಂಥ ಜ್ಯೋತಿಷಿಗಳಿಗೆ ನಮ್ಮಿಂದ ಎರಡು ಪ್ರಶ್ನೆಗಳಿರುತ್ತವೆ. ಮೊದಲನೆಯದಾಗಿ ಅವರು ಕಾಂಗ್ರೆಸ್, ಬಿಜೆಪಿ, ತೃಣಮೂಲ ಕಾಂಗ್ರೆಸ್, ಸಿಪಿಎಂ, ಬಿಎಸ್ಪಿ, ಆರ್‌ಜೆಡಿ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಎಐಎಡಿಎಂಕೆ ಮುಂತಾದ ಪ್ರಮುಖ ರಾಜಕೀಯ ಪಕ್ಷಗಳು ಎಷ್ಟು ಸ್ಥಾನ ಪಡೆಯುತ್ತವೆ ಎಂಬುದನ್ನು ನಿಖರವಾಗಿ ಹೇಳಬೇಕು. ಎರಡನೆಯದಾಗಿ, ಸೋನಿಯಾ ಗಾಂಧಿ, ಎಲ್.ಕೆ.ಆಡ್ವಾಣಿ, ಮಮತಾ ಬ್ಯಾನರ್ಜಿ, ಲಾಲು ಯಾದವ್, ರಾಮ ವಿಲಾಸ್ ಪಾಸ್ವಾನ್ ಮುಂತಾದ ಪ್ರಮುಖ ವ್ಯಕ್ತಿಗಳು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಅಥವಾ ಸೋಲುತ್ತಾರೆ ಎಂಬುದನ್ನು ತಿಳಿಸಬೇಕು ಎಂದು ಭಾರತೀಯ ವಿಜ್ಞಾನ ಮತ್ತು ವಿಚಾರವಾದಿಗಳ ಒಕ್ಕೂಟ (ಎಸ್ಆರ್ಎಐ) ಮುಖ್ಯಸ್ಥ ಪ್ರಬೀರ್ ಘೋಷ್ ತಿಳಿಸಿದ್ದಾರೆ.
ಇದುವರೆಗೆ ಈ ಸವಾಲು ಸ್ವೀಕರಿಸಲು ಯಾವುದೇ ಜ್ಯೋತಿಷಿ ಮುಂದೆ ಬಂದಿಲ್ಲ ಎಂದು ತಿಳಿಸಿದ ಅವರು, ಯಾರು ಕೂಡ ಸಂಪರ್ಕಿಸಲಾರರು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಅವರು ನೀಡುವ ಕಾರಣವೆಂದರೆ, ಜ್ಯೋತಿಷ್ಯ ಎಂಬುದು ಅವೈಜ್ಞಾನಿಕ. ಇದರ ಮೂಲಕ ನಿಖರವಾಗಿ ಯಾವುದನ್ನೂ ಯಾವತ್ತೂ ಹೇಳಲಾಗದು ಎಂದು ಘೋಷ್ ಹೇಳಿಕೊಂಡಿದ್ದಾರೆ. ಢಂಬಾಚಾರ, ಮೂಢನಂಬಿಕೆ, ದೇವಮಾನವರು ಮತ್ತು ಜ್ಯೋತಿಷಿಗಳ ವಿರುದ್ಧ ಹೋರಾಡುವುದಕ್ಕಾಗಿಯೇ 1985ರಲ್ಲಿ ಎಸ್ಆರ್ಎಐ ಸ್ಥಾಪಿಸಲಾಗಿತ್ತು.