'ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ' ಎಂಬ ಪದ ಸಮೂಹಕ್ಕೆ ಮತ್ತಷ್ಟು ಪುಷ್ಟಿ ದೊರೆತಿದ್ದು, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ನಡುವಣ ಭೇಟಿ ಹಾಗೂ ಪಿಸು ಮಾತುಗಳು ರಾಜಕೀಯದಲ್ಲಿ ಏನೆಲ್ಲಾ ನಡೆಯಬಹುದೆಂಬುದಕ್ಕೆ ಮುನ್ನುಡಿ ಬರೆದಿದೆ.
ಗುರುವಾರ ರಾತ್ರಿ ಬದ್ಧ ಪೈರಿ ಪಕ್ಷಗಳ ಉಭಯ ನಾಯಕರು ಔತಣಕೂಟವೊಂದರಲ್ಲಿ ಪಿಸು ಮಾತಿನಲ್ಲಿ ತೊಡಗಿರುವುದು ಎನ್‌ಡಿಎ ಮತ್ತು ಯುಪಿಎ ಪಾಳಯಗಳಲ್ಲಿ ತಲ್ಲಣ ಸೃಷ್ಟಿಸಿವೆ. ರಾಜನಾಥ್ ಸಿಂಗ್ ಆತಿಥ್ಯದ ವಿವಾಹ ಔತಣಕೂಟದಲ್ಲಿ ಈ ವಿದ್ಯಮಾನ ನಡೆದಿದೆ.
ಮೇ 16ರಂದು ಫಲಿತಾಂಶ ಪ್ರಕಟವಾಗುವವರೆಗೆ ಕಾಯುವುದಕ್ಕೆ ಉಭಯ ನಾಯಕರೂ ಸಮ್ಮತಿಸಿದ್ದಾರೆ ಎಂದು ರಾಜನಾಥ್ ಆಪ್ತ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಮತ್ತೊಂದು ಬಲಾಢ್ಯ ಪಕ್ಷ, ಮಾಯಾವತಿಯವರ ಬಿಎಸ್ಪಿಯನ್ನು ದೂರವಿರಿಸಬೇಕಿದ್ದರೆ, ಎಸ್ಪಿ ಮತ್ತು ಬಿಜೆಪಿಗಳು ಒಟ್ಟಾಗಿ ಕೆಲಸ ಮಾಡಬೇಕಾದೀತು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಮತ್ತು ಎಸ್ಪಿ ನಡುವಣ ರಾಜಕೀಯ ದ್ವೇಷ ಎಲ್ಲರಿಗೂ ತಿಳಿದದ್ದೇ. ಹೀಗಾಗಿ ಒಂದರ ವಿರುದ್ಧ ಮೇಲುಗೈ ಸಾಧಿಸಲು ಮತ್ತೊಂದು ಪಕ್ಷವು ಕೇಂದ್ರದಲ್ಲಿ ಯಾವುದೇ ಕೂಟದೊಂದಿಗೆ ಕೈಜೋಡಿಸಬಹುದಾಗಿದೆ.
ಎಲ್‌ಜೆಪಿ, ಆರ್‌ಜೆಡಿ ಒಳಗೊಂಡಿರುವ ಚತುರ್ಥರಂಗದ ಸದಸ್ಯ ಪಕ್ಷವಾಗಿರುವ ಎಸ್ಪಿಯೊಂದಿಗೆ ಕೆಲಸ ಮಾಡುವುದೂ ಸೇರಿದಂತೆ ಎಲ್ಲ ಆಯ್ಕೆಗಳನ್ನು ಬಿಜೆಪಿ ಮುಕ್ತವಾಗಿರಿಸಿದೆ ಎಂದು ಇನ್ನೊಬ್ಬ ಬಿಜೆಪಿ ನೇತಾರ ತಿಳಿಸಿದ್ದಾರೆ.