ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಬೆಟ್ಟಿಂಗ್...ಬೆಟ್ಟಿಂಗ್..ಡಾ.ಸಿಂಗ್ ಫೇವರಿಟ್!
ಮತಸಮರ
ND
ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ದೇಶಾದ್ಯಂತ ಬೆಟ್ಟಿಂಗ್ ಜ್ವರ ಏರತೊಡಗಿದೆ. ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನ ತಮ್ಮ ನೆಚ್ಚಿನ ಪಕ್ಷ, ನೇತಾರರ ಗೆಲುಗಾಗಿ ಅಂದಾಜು 5ಸಾವಿರ ಕೋಟಿ ರೂ.ಬೆಟ್ಟಿಂಗ್ ಕಟ್ಟಲಾಗಿದೆ ಎಂದು ಬುಕ್ಕಿ ಮೂಲಗಳು ತಿಳಿಸಿವೆ.

ಮೇ 13ರಂದು ಲೋಕಸಭೆ ಮತಸಮರ ಮುಕ್ತಾಯ ಕಂಡಿದೆ. ಅಲ್ಲದೇ 15ನೇ ನೂತನ ಲೋಕಸಭೆ ರಚನೆಯ ಹಿನ್ನೆಲೆಯಲ್ಲಿ ಮೇ 17ರಂದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಏತನ್ಮಧ್ಯೆ ನೂತನ ಸರ್ಕಾರ ರಚನೆಯ ಮುನ್ನ ದೇಶಾದ್ಯಂತ ಕೋಟ್ಯಂತರ ರೂ. ಬೆಟ್ಟಿಂಗ್ ಶುರುವಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ಕೇವಲ 5ರಿಂದ 10 ಸೀಟುಗಳ ವ್ಯತ್ಯಾಸವಾಗಲಿದೆ ಎಂಬುದು ಬುಕ್ಕಿಗಳ ಲೆಕ್ಕಚಾರವಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪರವೇ ಬುಕ್ಕಿಗಳು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಪರವಾರಿ 1,200ಕೋಟಿ ರೂ., ಬಿಜೆಪಿ ಪರ ಒಂದು ಸಾವಿರ ಕೋಟಿ ರೂ.ಗಳಷ್ಟು ಬೆಟ್ಟಿಂಗ್‌ ಕಟ್ಟಲಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆಗಳು ಎನ್‌ಸಿಪಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿವೆ. ತಮಿಳುನಾಡಿನಲ್ಲಿ ಜಯಲಲಿತಾ ಪರ, ಉತ್ತರಪ್ರದೇಶದಲ್ಲಿ ಮಾಯಾವತಿ ಪರ ಬೆಟ್ಟಿಂಗ್ ಭರಾಟೆ ಜೋರಾಗಿದೆ.

PTI
ಬೆಟ್ಟಿಂಗ್‌ನಲ್ಲಿ ಸಿಂಗ್‌ಗೆ ಪ್ರಥಮ ಸ್ಥಾನ: ಬೆಟ್ಟಿಂಗ್‌‌ನಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಪ್ರಸ್ತುತ ಪ್ರಧಾನಿ ಮನಮೋಹನ್ ಸಿಂಗ್ ಪ್ರಥಮ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನವನ್ನು ಅವರ ಬದ್ಧ ಎದುರಾಳಿ ಬಿಜೆಪಿಯ ಪ್ರಧಾನಿ ಹುದ್ದೆ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಇದ್ದಾರೆ.

ಮುಂಬೈಯಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿ ಸಾಗಿದೆ. ರಾಷ್ಟ್ರೀಯ ಪಕ್ಷಗಳು, ವಿವಿಧ ಪ್ರಾದೇಶಿಕ ಪಕ್ಷಗಳು ಪಡೆಯುವ ಸ್ಥಾನ, ತಮ್ಮ ನೆಚ್ಚಿನ ಸ್ಥಳೀಯ ಅಭ್ಯರ್ಥಿಗಳು, ರಾಜ್ಯ ನಾಯಕರು, ರಾಷ್ಟ್ರೀಯ ನೇತಾರರ ಮೇಲೆ ಈಗಾಗಲೇ 30 ಕೋಟಿ ರುಪಾಯಿಗಿಂತಲೂ ಹೆಚ್ಚಿನ ಹಣವನ್ನು ಬೆಟ್ಟಿಂಗ್ ಕಟ್ಟಲಾಗಿದೆ. ಚುನಾವಣೆ ಬೆಟ್ಟಿಂಗ್ ರಿಯಲ್ ಎಸ್ಟೇಟ್ ಉದ್ಯಮವನ್ನು ಮೀರಿಸಿದೆ. ಹಲವಾರು ಜನರು ಇದನ್ನು ದಂಧೆಯಾಗಿಸಿಕೊಂಡಿದ್ದಾರೆ ಮುಂಬೈನ ಪ್ರಮುಖ ಬುಕ್ಕಿಯೊಬ್ಬರು ನ್ಯೂಸ್ ಎಕ್ಸ್ ಪ್ರತಿನಿಧಿಯೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ಬುಕ್ಕಿಗಳ ಹಾಟ್ ಫೆವರೀಟ್ ಎನಿಸಿದ್ದು, ಮನಮೋಹನ್ ಸಿಗ್ ಅವರೇ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಕಟ್ಟಲಾಗಿದೆ. ಎನ್ ಡಿಎ ಸರಕಾರ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಅವರ ಮೇಲೆ ಬೆಟ್ಟಿಂಗ್ ಕಟ್ಟಲು ಜನರು ಅಷ್ಟಾಗಿ ಉತ್ಸಾಹ ತೋರುತ್ತಿಲ್ಲ. ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು ಕೂಡಾ ಪ್ರಧಾನಿ ಆಗಲಿದ್ದಾರೆ ಎಂದು ಬೆಟ್ ಕಟ್ಟಲಾಗಿದೆ ಎಂದು ಬುಕ್ಕಿ ತಿಳಿಸಿದ್ದಾರೆ. ಒಟ್ಟಿನಲ್ಲಿ ದೇಶದ ತುಂಬ ಫಲಿತಾಂಶದ ಕಾವು ತೀವ್ರಗೊಂಡಿದೆ.

PTI
ಕರ್ನಾಟಕದಲ್ಲೂ ಬೆಟ್ಟಿಂಗ್ ಜ್ವರ: ಫಲಿತಾಂಶ ಬಹಿರಂಗಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ, ತಮ್ಮ ನೆಚ್ಚಿನ ಮುಖಂಡನ ಗೆಲುವಿಗೆ ಶುಭ ಹಾರೈಸಿ ಕೆಲವೆಡೆ ದೇವಾಲಯಗಳಲ್ಲಿ ಪೂಜೆ-ಪುನಸ್ಕಾರ ಸೇರಿದಂತೆ ಭರ್ಜರಿ ಬೆಟ್ಟಿಂಗ್ ಆರಂಭವಾಗಿದೆ. ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಗೆಲುವಿನ ಕುದುರೆ ಎಂಬುದಾಗಿ ಮನೆ, ಗದ್ದೆ, ಟ್ರ್ಯಾಕ್ಟರ್‌ಗಳನ್ನು ಕೂಡ ಬೆಟ್ಟಿಂಗ್‌ಗೆ ಇಡಲಾಗಿದೆ!.

ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟ, ಕಾಂಗ್ರೆಸ್ ಅಭ್ಯರ್ಥಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಮಾಜಿ ಸಚಿವ ಜೆಡಿಎಸ್ ಅಭ್ಯರ್ಥಿ ಚಲುವರಾಯಸ್ವಾಮಿ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದ್ದು, ಅಂಬಿ ಹಾಗೂ ಚಲುವರಾಯಸ್ವಾಮಿ ಪರ ಬೆಳಗೊಳ ಗ್ರಾಮದಲ್ಲಿ ಲಕ್ಷಾಂತರ ರೂ ಬೆಟ್ಟಿಂಗ್ ಕಟ್ಟಲಾಗಿದೆ. ಹಲವಡೆ ದೇವಾಲಯಗಳಲ್ಲಿ ಅಂಬಿ ಪರ ದೇವರಿಗೆ ಈಡುಗಾಯಿ ಒಡೆಯಲಾಗುತ್ತಿದೆ, ಕೆಲವು ಅಭಿಮಾನಿಗಳು ಅಂಬಿ ಗೆಲ್ಲಬೇಕು ಎಂದು ಹರಿಸಿ ರಕ್ತದಾನದಲ್ಲಿ ತೊಡಗಿದ್ದಾರೆ.

ಒಟ್ಟಾರೆ ಕರ್ನಾಟಕ, ಮುಂಬೈ, ದೆಹಲಿ ಸೇರಿದಂತೆ ರಾಷ್ಟ್ರಾದ್ಯಂತ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆಯುತ್ತಿದ್ದರೆ, ಅವೆಲ್ಲಕ್ಕೂ ಇತೀಶ್ರೀ ಹಾಡಲು ಶನಿವಾರ ಹೊರಬೀಳುವ 'ಜನಾದೇಶ' ಎಲ್ಲ ಕುತೂಹಲ, ಬೆಟ್ಟಿಂಗ್‌ಗಳಿಗೆ ಉತ್ತರ ದೊರೆಯಲಿದೆ.