ಚುನಾವಣಾ ಫಲಿತಾಂಶ ಹೊರಬೀಳಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪಕ್ಷಗಳು ಸಭೆ ಸೇರುವ ನಿರ್ಧಾರಗಳೂ ಹೊರಬೀಳುತ್ತಿವೆ. ತೃತೀಯ ರಂಗದಂತೆಯೇ ಚತುರ್ಥ ರಂಗವೂ ಮೇ 17ರಂದು ಸಭೆ ಸೇರಲಿದ್ದು, ತನ್ನ ಭವಿಷ್ಯದ ಸಾಧ್ಯಾಸಾಧ್ಯತೆಗಳ ಚರ್ಚೆ ನಡೆಸಲಿದೆ ಎಂದು ಸಮಾಜವಾದಿ ಪಕ್ಷ ಪ್ರಕಟಿಸಿದೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಮೇ 16ರ ಫಲಿತಾಂಶಕ್ಕೂ ಮೊದಲು ಯಾವುದೇ ಕಾರಣಕ್ಕೆ ರಾಜಕೀಯ ನಡೆಯನ್ನು ಹೊರಹಾಕುವುದಿಲ್ಲ. ಫಲಿತಾಂಶ ಹೊರಬಿದ್ದ ತಕ್ಷಣ ಲೋಕಜನಶಕ್ತಿ ಹಾಗೂ ಆರ್‌ಜೆಡಿಯ ಜತೆಗೆ ತನ್ನ ನಡೆಯನ್ನು ಪ್ರಕಟಿಸಲಿದೆ. ಅದ್ಕಕಾಗಿ ಮೇ 17ರಂದು ಚತುರ್ಥ ರಂಗ ಸಭೆ ಸೇರಲಿದ್ದು, ರಾಜಕೀಯ ಲೆಕ್ಕಾಚಾರಗಳನ್ನು ನಡೆಸಲಿದೆ ಎಂದರು.
ಇದಕ್ಕೂ ಮೊದಲು ಅವರು ಸಮಾಜವಾದಿ ಮುಖಂಡರಾದ ಅಮರ್ ಸಿಂಗ್ ಹಾಗೂ ರಾಮ್ ಗೋಪಾಲ್ ಯಾದವ್ ಜತೆಗೆ ರಹಸ್ಯ ಸಮಾಲೋಚನೆ ನಡೆಸಿದರು. ನಂತರ ಅಮರ್ ಸಿಂಗ್ ಹಾಗೂ ಮುಲಾಯಂ ಸಿಂಗ್ ಲೋಕಜನಶಕ್ತಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಲಾಯಂ, ಅಂತಹ ಸಮೀಕ್ಷೆಗಳೆಲ್ಲ ನಿಜವಾಗುವುದಿಲ್ಲ ಹಾಗೂ ಅವು ರಾಜಕೀಯ ಪ್ರೇರಿತವಾಗಿವೆ ಎಂದು ಟೀಕಿಸಿದರು.
ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷ 30 ಸೀಟುಗಳನ್ನು ಪಡೆಯಲಿದೆ ಎಂಬುದನ್ನು ದೃಢವಾಗಿ ಒತ್ತಿ ಹೇಳಿದ ಮುಲಾಯಂ, ತಾವು ಸರ್ಕಾರ ರಚನೆಗೆ ಯಾರಿಗೆ ಬೆಂಬಲ ನೀಡುತ್ತೇವೆ ಎಂಬ ಒಳಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.
ಸಮಾಜವಾದಿ ಅಭ್ಯರ್ಥಿ ಜಯಪ್ರದಾ ಕುರಿತು ಅಮರ್ ಸಿಂಗ್ ಹಾಗೂ ಅಜಮ್ ಖಾನ್ ನಡುವೆ ಎದ್ದಿರುವ ಕಲಹದ ಕುರಿತು ಮಾತನಾಡಿದ ಮುಲಾಯಂ ಸಿಂಗ್, ಅಮರ್ ಹಾಗೂ ಅಜಮ್ ನಡುವೆ ಈಗ ವಿರಸ ಇಲ್ಲ. ಎವೆಲ್ಲವೂ ಸರಿಯಾಗಿವೆ. ಾನು ಅಮರ್ ಬಳಿ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿದ್ದೇನೆ. ಅವರೀಗ ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಅಮರ್ ಸಿಂಗ್ ಇತ್ತೀಚೆಗೆ ಅಜಂ ನಡುವಿನ ಕಲಹದ ಹಿನ್ನೆಲೆಯಲ್ಲಿ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಘೋಷಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಮುಲಾಯಂ, ಅಮರ್ ಸಿಂಗ್ ಎಂದಿಗೂ ನನ್ನನ್ನು ಬಿಟ್ಟು ಹೋಗುವುದಿಲ್ಲ ಎಂಬುದು ನನಗೆ ಗೊತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದರು.