ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಕಾಂಗ್ರೇಸೇತರ ಪಕ್ಷಗಳ ಪಾಲಿಗೆ ದುಸ್ವಪ್ನವಾದ ಪ್ರಜಾರಾಜ್ಯಂ
ಮತಸಮರ
PR
ಆಂಧ್ರಪ್ರದೇಶದ ಮುಖ್ಯಮಂತ್ರಿ ಹುದ್ದೆಯ ಭಾರೀ ಸ್ಪರ್ಧಿಯೆಂದೇ ಬಿಂಬಿತವಾಗಿರುವ ನಟ ಹಾಗೂ ರಾಜಕಾರಣಿ ಚಿರಂಜೀವಿ ಈಗ ಹಲವರ ನಿದ್ದೆಗೆಡಿಸಿರುವುದರಲ್ಲಿ ಯಾವ ಸಂದೇಹವೂ ಇಲ್ಲ. ಏಕಮಾತ್ರ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವತ್ತ ದಾಪುಗಾಲು ಇಡುತ್ತಿರುವ ಪ್ರಜಾರಾಜ್ಯಂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕನಿಷ್ಟ ಐದು ಸೀಟುಗಳನ್ನು ಪಡೆಯವ ಸಂಭವವಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಹೀಗಾಗಿ ಇದು ಕಾಂಗ್ರೆಸನ್ನು ಹೊರತುಪಡಿಸಿ ಉಳಿದೆಲ್ಲ ಪಕ್ಷಗಳ ಪಾಲಿಗೆ ನಷ್ಟವನ್ನೇ ತಂದೊಡ್ಡುವುದರಲ್ಲಿ ಸಂಶಯವಿಲ್ಲ.

ಆದರೂ, ಚಿರಂಜೀವಿಯವರ ಗ್ಲಾಮರಸ್ ಇಮೇಜ್ ಆಂಧ್ರದ ಎಲ್ಲ 294 ವಿಧಾನಸಭಾ ಹಾಗೂ 42 ಲೋಕಸಭಾ ಕ್ಷೇತ್ರಗಳಲ್ಲಿ ಅಷ್ಟಾಗಿ ಗೋಚರಿಸುತ್ತಿಲ್ಲ. ಪೂರ್ವ ಹಾಗೂ ಪಶ್ಚಿಮ ಗೋದಾವರಿ ಪ್ರದೇಶ, ಗುಂಟೂರು, ಪ್ರಕಾಶಂ, ಆಂಧ್ರ ಕರಾವಳಿಯ ಉತ್ತರ ಭಾಗ ಹಾಗೂ ಚಿತ್ತೂರುಗಳಲ್ಲಿ ಚಿರಂಜೀವಿ ಪ್ರಭಾವ ಕಾಣುತ್ತಿದೆ. ಚಿರಂಜೀವಿಯವರ ಚಿತ್ರಗಳೂ ಹೆಚ್ಚಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದೂ ಕೂಡಾ ಇವೇ ಭಾಗಗಳಲ್ಲಿ.

ಪ್ರಜಾರಾಜ್ಯಂ ಎರಡು ವರ್ಗಗಳ ಜನರಿಂದ ಮತ ಕಬಳಿಸಲು ಶಕ್ತವಾಗಲಿದೆ. ಒಂದು ಬದಲಾವಣೆ ಬಯಸುವವ ವರ್ಗ ಹಾಗೂ ಇನ್ನೊಂದು ಚಿರಂಜೀವಿ ಚಿತ್ರಗಳಲ್ಲಿ ಮುಳುಗಿಹೋಗಿರುವ ಅಭಿಮಾನಿ ವರ್ಗ. ಆದರೆ ಇವೆರಡೇ ಚಿರಂಜೀವಿಯ ವಿಜಯಕ್ಕೆ ಮೆಟ್ಟಿಲಾಗಲು ಕಷ್ಟವಿದೆ. ಕಾಂಗ್ರೆಸ್ ಹಾಗೂ ಟಿಡಿಪಿಯ ಕಾರ್ಯಕರ್ತರ ಪ್ರಕಾರ, ಪ್ರಜಾರಾಜ್ಯಂ ಈ ಬಾರಿ ಕಾಂಗ್ರೆಸೇತರ ಪಕ್ಷಗಳಿಗಂತೂ ಸುಲಭದ ಪೈಪೋಟಿಯಾಗದು.

ಜಾರಾಜ್ಯಂನ ಮೂಲಗಳ ಪ್ರಕಾರ, ಸಮೀಕ್ಷೆಯಲ್ಲಿ ಟಿಡಿಪಿ ಹಾಗೂ ಇತರ ಎಡಪಕ್ಷಗಳ ವೋಟ್‌ಬ್ಯಾಂಕ್‌ನ್ನು ಪ್ರಜಾರಾಜ್ಯಂ ಇಬ್ಭಾಗವಾಗಿಸುವುದರಲ್ಲಿ ಸಂದೇಹವೇ ಇಲ್ಲ. ಆದರೆ, ವಿಶೇಷವೆಂದರೆ ಕಾಂಗ್ರೆಸ್ ಮತಬ್ಯಾಂಕ್ ಒಡೆಯಲು ಪ್ರಜಾರಾಜ್ಯಂಗೆ ಕಷ್ಟಸಾಧ್ಯ. ಹಾಗಾಗಿ ಉಳಿದ ಪಕ್ಷಗಳ ಮತ ಬ್ಯಾಂಕ್ ಒಡೆಯುವ ಚಿರಂಜೀವಿ ಪಕ್ಷದ ಪರೋಕ್ಷ ಸಹಾಯದಿಂದ ಕಾಂಗ್ರೆಸ್ ಮೇಲೆ ಬರುವ ಸಾಧ್ಯತೆಗಳೂ ಇವೆ.

ಆಂಧ್ರಪ್ರದೇಶದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ತೆಲಂಗಾಣ ಹಾಗೂ ಉತ್ತರ ಆಂಧ್ರದ ಭಾಗಗಳಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದರೆ, ಉಳಿದ ಭಾಗಗಳಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಪ್ರಜಾರಾಜ್ಯಂ ಅಸ್ತಿತ್ವ ಅಷ್ಟಾಗಿ ಕಾಣಿಸದಿದ್ದರೂ, ರಡನೇ ಹಂತದಲ್ಲಿ ಬಹುತೇಕ ಪ್ರಜಾರಾಜ್ಯಂ ಕಡೆಗೆ ಮತದಾನ ವಾಲಿತ್ತು.

ಆದರೆ ಟಿಡಿಪಿ ಒಳಮೂಲಗಳ ಪ್ರಕಾರ, ಪ್ರಜಾರಾಜ್ಯಂ ಮೊದಲ ಹಂತದಲ್ಲೂ ತನ್ನ ಅಸ್ತಿತ್ವ ಬಿಂಬಿಸಿದೆ. ಕರೀಂನಗರದಂತಹ ಪ್ರದೇಶವೇ ಇದಕ್ಕೆ ಸಾಕ್ಷಿ. ಪ್ರಜಾರಾಜ್ಯಂ ಕಾಂಗ್ರೇಸೇತರ ಪಕ್ಷಗಳ ಮತಗಳನ್ನು ಇಬ್ಭಾಗ ಮಾಡಿರುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಪ್ರಜಾರಾಜ್ಯಂ ಎಫೆಕ್ಟ್ ಹೆಚ್ಚಾಗಿ ಬೀಳುವುದು ವಿರೋಧ ಪಕ್ಷಗಳ ಮೇಲೆ. ಹಾಗಾಗಿ ಈ ಬಾರಿ ಕಷ್ಟಪಟ್ಟರೂ ಕಾಂಗ್ರೆಸ್‌ಗಿಂತ ಮೇಲುಗೈ ಸಾಧಿಸಲು ವಿರೋಧ ಪಕ್ಷಗಳಿಗೆ ಕಷ್ಟಸಾಧ್ಯ ಎನ್ನಲಾಗಿದೆ.