ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಮತ ಎಣಿಕೆ ಶನಿವಾರ ಆರಂಭಗೊಂಡಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ತೇಜಸ್ವಿನಿಗಿಂತ ಮುನ್ನಡೆ ಸಾಧಿಸಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗಿಂತ ಜೆಡಿಎಸ್‌ನ ಚಲುವರಾಯಸ್ವಾಮಿ ಮುನ್ನಡೆ, ಮೈಸೂರಿನಲ್ಲಿ ಬಿಜೆಪಿಯ ವಿಜಯ್ ಶಂಕರ್, ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ನ ಮಾರ್ಗರೇಟ್ ಆಳ್ವಗಿಂತ ಬಿಜೆಪಿಯ ಅನಂತಕುಮಾರ್ ಹೆಗಡೆ ಮುನ್ನಡೆಯಲ್ಲಿದ್ದಾರೆ.
ಮತಎಣಿಕೆ ಇಂದು ಬೆಳಿಗ್ಗೆನಿಂದ ಆರಂಭಗೊಂಡಿದ್ದು, ಪ್ರಥಮವಾಗಿ ಅಂಚೆ ಮತ ಎಣಿಕೆ ನಡೆಯುತ್ತಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಇದೀಗ ಆರಂಭಿಕ ಮತಎಣಿಕೆಯಲ್ಲಿ ಬಿಜೆಪಿ ಮೂರು ಕ್ಷೇತ್ರ, ಜೆಡಿಎಸ್ 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಮಧ್ನಾಹ್ನದೊಳಗೆ ಪೂರ್ಣ ಪ್ರಮಾಣದ ಫಲಿತಾಂಶ ದೊರೆಯುವ ನಿರೀಕ್ಷೆ ಇದೆ.
ಮತ ಎಣಿಕೆಯಲ್ಲಿ ಒಟ್ಟು 501 ಸುತ್ತುಗಳಿದ್ದು, ಅಂದಾಜು 23 ಸಾವಿರ ಮಂದಿಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಎಲ್ಲ ಕಡೆಗಳಲ್ಲಿ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದ್ದು, 3,172 ಸೂಕ್ಷ್ಮ ವೀಕ್ಷಕರಿಂದ ಮತ ಎಣಿಕೆಯ ಉಸ್ತುವಾರಿ ವಹಿಸಲಾಗಿದೆ.
ಅಲ್ಲದೆ, ಭದ್ರತೆಯ ದೃಷ್ಟಿಯಿಂದ ಪ್ರತಿ ಮತ ಎಣಿಕೆ ಕೇಂದ್ರದಲ್ಲೂ ಮತ ಎಣಿಕೆ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ನಡೆಯಲಿದ್ದು, ಸುಮಾರು 43 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.