ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಈಗಾಗಲೇ ಅನೇಕ ಅಭ್ಯರ್ಥಿಗಳ ಭವಿಷ್ಯ ನಿರ್ಧಾರದ ಹಂತಕ್ಕೆ ಬಂದಿದೆ. ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿ ಸುಮಾರು 16 ಕ್ಷೇತ್ರಗಳಲ್ಲಿ ತನ್ನ ಮುನ್ನಡೆಯನ್ನು ಸಾಧಿಸಿದೆ. ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಜನಾರ್ದನಸ್ವಾಮಿ ಪ್ರಥಮ ಗೆಲುವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ 09 ಹಾಗೂ ಜೆಡಿಎಸ್ 3 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುಮಾರು 1ಲಕ್ಷ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ಸುಮಾರು 3108 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ಅವರು ಬಿಜೆಪಿಯ ಅನಂತ್ ಕುಮಾರ್ ಅವರಿಗಿಂತ ಸುಮಾರು 14133 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಹಾವೇರಿಯ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವರು ಸುಮಾರು 52410 ಮತಗಳ ಅಂತರದಿಂದ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ಬಾಗಿಲಿಗೆ ಬಂದು ನಿಂತಿದ್ದಾರೆ. ಭಾರೀ ಕುತೂಹಲ ಕೆರಳಿಸಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಸುಮಾರು 28 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಗುಲ್ಬರ್ಗಾದಲ್ಲಿ ಬಿಜೆಪಿ ಅಭ್ಯರ್ಥಿ ರೇವೂ ನಾಯಕ ಬೆಳಮಗಿ ಸುಮಾರು 4094 ಮತಗಳ ಅಂತರದಿಂದ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ಸರದಾರ ಎನ್ನಿಸಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರು ಸೋಲಿನ ದವಡೆಯತ್ತ ಸಾಗಿದ್ದಾರೆ.