ಲೋಕಸಭಾ ಚುನಾವಣೆಗಳಲ್ಲಿ ಬಹುತೇಕ ಸೋಲೊಪ್ಪಿಕೊಂಡಂತಿರುವ ಬಿಜೆಪಿ, ಫಲಿತಾಂಶಗಳು ತಮಗೆ 'ನಿರಾಶಾದಾಯಕ'ವಾಗಿದ್ದು, ಅನಿರೀಕ್ಷಿತ ಎಂದು ಪ್ರತಿಕ್ರಿಯಿಸಿದೆ.
ಟ್ರೆಂಡ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದು ನಿರಾಶಾದಾಯಕ. ಯುಪಿಎ ಮುನ್ನಡೆ ಸಾಧಿಸಿದೆ ಎಂಬುದನ್ನು ಒಪ್ಪಿಕೊಂಡಿದ್ದೇವೆ ಎಂದು ಬಿಜೆಪಿ ವಕ್ತಾರ ಬಲಬೀರ್ ಪುಂಜ್ ಅವರು ಸುದ್ದಿಗಾರರೆದುರು ಹೇಳಿದ್ದಾರೆ.
ಎಲ್ಲಿ ತಪ್ಪಾಗಿದೆ ಎಂಬುದರ ಬಗ್ಗೆ ಚರ್ಚಿಸಲು ಪಕ್ಷದ ಸಂಸದೀಯ ಮಂಡಳಿಯ ಸಭೆಯು ಪರಾಮರ್ಶೆ ನಡೆಸಲಿದೆ ಎಂದು ತಿಳಿಸಿದ ಅವರು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ತೃತೀಯ ರಂಗದ ಸಾಧನೆ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮೇಲುಗೈ ಸಾಧಿಸಿದಂತೆ ತೋರುತ್ತಿದೆ ಎಂಬುದನ್ನು ಒಪ್ಪಿಕೊಂಡ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು, ಇದು ನಿರಾಶೆ ಮೂಡಿಸಿದೆ ಎಂದು ಒಪ್ಪಿಕೊಂಡಿದ್ದಾರೆ.