ಬಹುಮತದ ಬಾಗಿಲಲ್ಲಿ ಯುಪಿಎ, ಎಡ, ಎನ್‌ಡಿಎಗೆ ಹಿನ್ನಡೆ ನವದೆಹಲಿ, ಶನಿವಾರ, 16 ಮೇ 2009( 14:37 IST ) | |
ಯುಪಿಎ ಭರ್ಜರಿ ವಿಜಯದತ್ತ ಮುನ್ನಡೆಯುತ್ತಿದ್ದು, ಒಂದಿಷ್ಟು ಸ್ವತಂತ್ರರ ಬೆಂಬಲ ದೊರೆತರೆ ಎಡಪಕ್ಷಗಳ ಸಹಕಾರವಿಲ್ಲದೆಯೇ ಸರಕಾರ ರಚಿಸುವ ಸಾಧ್ಯತೆಗಳಿವೆ. ಈ ಮಧ್ಯೆ, ಮನಮೋಹನ್ ಸಿಂಗ್ ಅವರೇ ಈ ಬಾರಿ ಪ್ರಧಾನಿಯಾಗಿ ಮುಂದುವರಿಯಲಿದ್ದು, ರಾಹುಲ್ ಗಾಂಧಿ ಭವಿಷ್ಯದ ಪ್ರಧಾನಿ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಅಪರಾಹ್ನದ ವರದಿಗಳ ಪ್ರಕಾರ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಯುಪಿಎಗೆ ಭರ್ಜರಿ ಬೆಂಬಲ ದೊರೆತಿದ್ದು, 250 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷವೇ 190ರಲ್ಲಿ ಮುನ್ನಡೆ ಸಾಧಿಸಿದೆ. 543 ಸದಸ್ಯ ಬಲದ ಸಂಸತ್ತಿನಲ್ಲಿ ಸರಳ ಬಹುಮತಕ್ಕೆ ಬೇಕಾಗಿರುವ 272 ಸ್ಥಾನಗಳಿಗೆ ತೀರಾ ಸಮೀಪಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿವೆ.
ಎನ್‌ಡಿಎಗೆ ದೇಶಾದ್ಯಂತ ತೀರಾ ಹಿನ್ನಡೆಯಾಗಿದ್ದು, ಬಿಜೆಪಿಯು 119ರಲ್ಲಿ ಸೇರಿದಂತೆ ಎನ್‌ಡಿಎ 157 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಬಳಿಕ, ಚುನಾವಣೆಯಲ್ಲಿ ಪ್ರಧಾನಿ ಎಂದು ಬಿಂಬಿಸಲ್ಪಟ್ಟು ಮತ್ತೆ ಅಧಿಕಾರಕ್ಕೇರಿದ ದಾಖಲೆಯನ್ನು ಮನಮೋಹನ್ ಸಿಂಗ್ ಅವರೂ ಮಾಡಲಿದ್ದಾರೆ.
ಕೇರಳದಲ್ಲಿ ಎಡರಂಗದ ಕೋಟೆಗಳನ್ನೆಲ್ಲಾ ಪುಡಿಗಟ್ಟಿರುವ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿಯೂ ಮಿತ್ರ ಪಕ್ಷವಾದ ತೃಣಮೂಲ ಕಾಂಗ್ರೆಸ್ ಜೊತೆ ಸೇರಿಕೊಂಡು ಎಡ ರಂಗವನ್ನು ಬಗ್ಗು ಬಡಿದಿದೆ.
ದೆಹಲಿಯಲ್ಲಿಯೂ ಸ್ವೀಪ್ ಮಾಡಿರುವ ಕಾಂಗ್ರೆಸ್, ರಾಜಸ್ಥಾನ, ಹರ್ಯಾಣ, ಪಂಜಾಬ್, ಉತ್ತರಾಖಂಡಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ್ದು, ಉತ್ತರ ಪ್ರದೇಶದಲ್ಲಿಯೂ ಚೇತರಿಸಿಕೊಂಡಿದೆ.
ಮತ್ತಷ್ಟು ಜಾತ್ಯತೀತ ಪಕ್ಷಗಳು ನಮ್ಮನ್ನು ಸೇರಿಕೊಳ್ಳಬಹುದು ಎಂದು ಉತ್ಸಾಹದಿಂದ ಹೇಳಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ ಹಾಗೂ ಜೆಡಿಎಸ್ ಸೇರಿಕೊಂಡಲ್ಲಿ ಬಹುಮತಕ್ಕಿರುವ 272 ಸ್ಥಾನಗಳನ್ನು ಒಟ್ಟುಗೂಡಿಸುವಲ್ಲಿ ಕಷ್ಟವಾಗಲಾರದು.
ಈ ಚುನಾವಣೆಯಲ್ಲಿ ಮನಮೋಹನ್ ಸಿಂಗ್ ಅವರೇ ನಮ್ಮ ಪ್ರಧಾನಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರು ಸುದ್ದಿಗಾರರಿಗೆ ತಿಳಸಿದ್ದಾರೆ.
ಯುಪಿಎ ವಿಜಯ ಸಾಧಿಸುವತ್ತ ಮುನ್ನಡೆಯುತ್ತಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, ಎಡಪಕ್ಷಗಳಿಗೆ ಆತ್ಮಾವಲೋಕನ ಮಾಡಿಕೊಳ್ಳುವುದರ ಹೊರತು ಅನ್ಯದಾರಿಯಿಲ್ಲ ಎಂದು ತಿಳಿಸಿದರು.
ನಾವೇನೂ ಅವರ ಮೈತ್ರಿ ಮುರಿದುಕೊಂಡಿಲ್ಲ, ಅವರೇ ನಮ್ಮಿಂದ ದೂರವಾಗಿದ್ದು ಎಂದವರು ಹೇಳಿದರು.
ಆರಂಭಿಕ ಮುನ್ನಡೆಯ ವರದಿಗಳಿಂದ ರೋಮಾಂಚನಗೊಂಡಿರುವ ಕಾಂಗ್ರೆಸ್, ಯುಪಿಎಗೆ ಸ್ಪಷ್ಟ ಮುನ್ನಡೆ ಖಚಿತವಾಗುತ್ತಿರುವಂತೆಯೇ ಉತ್ಸಾಹದಿಂದ ಪುಟಿದೆದ್ದಿದ್ದು, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಮುಂದಿನ ಸರಕಾರ ರಚನೆಗೆ ತಮ್ಮನ್ನೇ ಆಹ್ವಾನಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದಿದೆ.
ಯುಪಿಎ ಏಕೈಕ ಅತಿದೊಡ್ಡ ಮಿತ್ರಕೂಟವಾಗಿ ಹೊರಹೊಮ್ಮಲಿದ್ದು, ಬಹುಮತ ಗಳಿಸಿಕೊಳ್ಳಲು ಯಶಸ್ವಿಯಾಗುತ್ತದೆ. ನಾವು ಸರಕಾರ ರಚಿಸುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.