ಲೋಕಸಭಾ ಮತಸಮರದ ಜನಾದೇಶ ಹೊರಬೀಳುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ. ಕರ್ನಾಟಕದಲ್ಲಿ ಮತದಾರರು ಬಿಜೆಪಿ-19, ಕಾಂಗ್ರೆಸ್-06, ಹಾಗೂ ಜೆಡಿಎಸ್-03 ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಗೆ ಆಶೀರ್ವಾದ ಮಾಡಿದ್ದರೆ, ಕಾಂಗ್ರೆಸ್ ಕಳೆದ ಬಾರಿಗಿಂತ ಎರಡು ಸ್ಥಾನ ಕಡಿಮೆ ಗಳಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.
ರಾಜ್ಯದ 28ಲೋಕಸಭಾ ಕ್ಷೇತ್ರದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೀದರ್, ಗುಲ್ಬರ್ಗಾ ಕ್ಷೇತ್ರಗಳು ಅತಿ ಕುತೂಹಲವನ್ನು ಕೆರಳಿಸಿದ್ದವು. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಘಟಾನುಘಟಿಗಳಾದ ಮಾಜಿ ಮುಖ್ಯಮಂತ್ರಿ ಶಿವಮೊಗ್ಗ ಕ್ಷೇತ್ರದ ಎಸ್.ಬಂಗಾರಪ್ಪ, ಮಂಗಳೂರು ಲೋಕಸಭಾ ಕ್ಷೇತ್ರದ ಜನಾರ್ದನ ಪೂಜಾರಿ, ಬೆಂಗಳೂರು ಗ್ರಾಮಾಂತರದ ತೇಜಸ್ವಿನಿ, ಮಂಡ್ಯದ ರೆಬೆಲ್ ಸ್ಟಾರ್ ಅಂಬರೀಷ್, ಬೆಂಗಳೂರು ಉತ್ತರದ ಜಾಫರ್ ಷರೀಫ್, ಉತ್ತರ ಕನ್ನಡದಲ್ಲಿ ಮಾರ್ಗರೇಟ್ ಆಳ್ವ ಸೋಲನ್ನನುಭವಿಸಿದ್ದಾರೆ.
NRB
ಆದರೆ ಸೋಲಿಲ್ಲದ ಸರದಾರ ಎನ್ನಿಸಿಕೊಂಡ ಗುಲ್ಬರ್ಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ, ಬೀದರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಧರಂಸಿಂಗ್, ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಕ್ಷೇತ್ರದ ಎಂ.ವೀರಪ್ಪ ಮೊಯ್ಲಿ ಜಯಭೇರಿ ಬಾರಿಸಿದ್ದಾರೆ.
ಜೆಡಿಎಸ್‌ನ ಪ್ರಮುಖ ಹುರಿಯಾಳು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಂಡ್ಯದಲ್ಲಿ ಜೆಡಿಎಸ್‌ನ ಚಲುವರಾಯ ಸ್ವಾಮಿ ಗೆಲುವಿನ ನಗು ಬೀರಿದ್ದಾರೆ. ಅಲ್ಲದೇ ಕಾಂಗ್ರೆಸ್‌ನ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅವರು ಬಿಜೆಪಿಗೆ ಸೇರ್ಪಡೆಗೊಂಡು ತೆರವುಗೊಂಡ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್‌ನ ರಹೀಂಖಾನ್ ಜಯಭೇರಿ ಸಾಧಿಸಿದ್ದಾರೆ.