ಲೋಕಸಭಾ ಚುನಾವಣೆಯ ಪ್ರಜಾ ತೀರ್ಪು ಹೊರಬಿದ್ದಿದೆ, ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮುಖದಲ್ಲಿ ಗೆಲುವಿನ ನಗು ಮೂಡಿಸಿದೆ. ಆದರೆ ಕಾಂಗ್ರೆಸ್‌ನಲ್ಲಿ ಘಟಾನುಘಟಿಗಳೇ ಸೋಲಿನ ದವಡೆಗೆ ಸಿಲುಕುವ ಮೂಲಕ ತೀವ್ರ ಮುಖಭಂಗಕ್ಕೆ ಈಡಾಗಿದೆ. ಪ್ರಸಕ್ತ ಸಾಲಿನ ಮಹಾಸಮರದ ಹಣಾಹಣಿಯಲ್ಲಿ ಸೋತ ಪ್ರಮುಖರಲ್ಲಿ ಒಬ್ಬರಾದ ವರ್ಣರಂಜಿತ ರಾಜಕಾರಣಿ, ಸೋಲಿಲ್ಲದ ಸರದಾರ ಎಂಬ ಬಿರುದಾಂಕಿತ ಸಾರೆಕೊಪ್ಪ ಬಂಗಾರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಅಭ್ಯರ್ಥಿ ಯುವ ನೇತಾರ, ಉದ್ಯಮಿ, ರಾಘವೇಂದ್ರ ವಿರುದ್ಧ ಸೋಲನ್ನನುಭಿಸುವ ಮೂಲಕ ಸೋಲಿಲ್ಲದ ಸರದಾರನಿಗೆ ಮುಖಭಂಗ ಅನುಭವಿಸುವಂತಾಗಿದೆ.
76ರ ಹರೆಯದ ಬಂಗಾರಪ್ಪ ಹಾಗೂ 28ರ ಹರೆಯದ ರಾಘವೇಂದ್ರ ನಡುವೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ನಡೆದಿತ್ತು. ಹಲವು ಬಾರಿ ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಅನುಭವ ಹೊಂದಿರುವ ಅವರು 'ಪಕ್ಷದಿಂದ ಪಕ್ಷಕ್ಕೆ ವಲಸೆ' ಹೋದಾಗಲೂ ಕೂಡ ಮತದಾರರು ಬಂಗಾರಪ್ಪನ ವೈಯಕ್ತಿಕ ವರ್ಚಸ್ಸಿಗೆ ಆಶೀರ್ವಾದ ನೀಡಿದ್ದರು. ಆದರೆ ಇದೀಗ ಸಮಾಜವಾದಿ ಬಂಗಾರಪ್ಪ 'ಅವಕಾಶವಾದಿ ರಾಜಕಾರಣಿ' ಎಂಬುದನ್ನು ಸಾಬೀತುಪಡಿಸಿದ್ದರು. ಕಾಂಗ್ರೆಸ್‌ಗೆ ಬೈಯುತ್ತಲೇ ಬೇರೆ, ಬೇರೆ ಪಕ್ಷ ಕಟ್ಟಿದ್ದರು, ಸಮಾಜವಾದಿ ಪೋಸ್ ನೀಡುವ ಮೂಲಕ ಬಿಜೆಪಿ ವಿರುದ್ಧ ಕೆಂಡಕಾರುತ್ತಿದ್ದವರು ಕೊನೆಗೆ ಬಿಜೆಪಿ ಪಡಸಾಲೆ ಸೇರಿ ಅಲ್ಲಿಂದಲೂ ಹೊರಬಂದಿದ್ದರು. ಹೀಗೆ ಕಿರಿಯ ವಯಸ್ಸಿನ ಅಭ್ಯರ್ಥಿ ಎದುರು 'ವರ್ಣರಂಜಿತ' , ಪ್ರಭಾವಿ , ಉಡಾಫೆ ರಾಜಕಾರಣಿ ಎನ್ನಿಸಿಕೊಂಡ ಬಂಗಾರಪ್ಪನವರು ಪರಾಭವಗೊಳ್ಳುವ ಮೂಲಕ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.
NRB
ಅದೇ ರೀತಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕೂಡ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಕಾಂಗ್ರೆಸ್‌ನಿಂದ ತೇಜಸ್ವಿನಿ ರಮೇಶ್ ಹಾಗೂ ಭಾರತೀಯ ಜನತಾಪಕ್ಷದಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದ್ದರು. ಆದರೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯವರು ಜಯಭೇರಿ ಬಾರಿಸುವ ಮೂಲಕ ತೇಜಸ್ವಿನಿ ಹೀನಾಯ ಸೋಲನ್ನನುಭವಿಸಿದ್ದಾರೆ.
ಹಾಲಿ ಸಂಸದೆ ತೇಜಸ್ವಿನಿ ಎರಡನೇ ಬಾರಿಗೆ ಸಂಸತ್ ಪ್ರವೇಶಿಸುವ ಹುಮ್ಮಸ್ಸಿನ ಕನಸು ನನಸಾಗಿಲ್ಲ. ಅವೆಲ್ಲ ಲೆಕ್ಕಚಾರಕ್ಕಿಂತ ಹೆಚ್ಚಾಗಿ ಕುಮಾರಸ್ವಾಮಿಯವರು ತಂದೆ ಎಚ್.ಡಿ.ದೇವೇಗೌಡರನ್ನು ಸೋಲಿಸಿದ ಸೇಡನ್ನು ತೇಜಸ್ವಿನಿ ವಿರುದ್ಧ ತೀರಿಸಿಕೊಂಡಂತಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಕೈ ಕೊಟ್ಟ ಚನ್ನಪಟ್ಟಣ ಶಾಸಕ, ನಟ ಸಿ.ಪಿ.ಯೋಗೇಶ್ವರ್ ಭಾಜಪ ಅಭ್ಯರ್ಥಿಯಾಗಿ ಪರಾಭವಗೊಳ್ಳುವ ಮೂಲಕ ಹ್ಯಾಪುಮೋರೆ ಹಾಕಿಕೊಳ್ಳುವಂತಾಗಿದೆ.
NRB
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎನ್ನಿಸಿಕೊಂಡಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಕೂಡ ಬಿಜೆಪಿಯ ಯುವ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಪರಾಭವಗೊಂಡಿದ್ದಾರೆ. ಇದರೊಂದಿಗೆ ಸತತವಾಗಿ 5ಬಾರಿ ಸೋಲನ್ನು ಅನುಭವಿಸುವ ಮುಖೇನ ಪೂಜಾರಿ ಅವರ ಸಂಸತ್ ಪ್ರವೇಶದ ಕನಸು ಈಡೇರದಂತಾಗಿದೆ. ಅಲ್ಲದೇ ಈ ಬಾರಿ ಪೂಜಾರಿ ಅವರ ಗೆಲುವು ನಿಶ್ಚಿತ ಎಂದೇ ನಿರೀಕ್ಷಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಭದ್ರಕೋಟೆಯಾಗಿ ಬೆಳೆದಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ಹೊಸಮುಖ ಕಟೀಲ್‌ಗೆ ಆಶೀರ್ವಾದ ಮಾಡುವ ಮೂಲಕ ಪೂಜಾರಿಯನ್ನು ಮತ್ತೊಮ್ಮೆ ಮತದಾರರು ತಿರಸ್ಕರಿಸಿದ್ದಾರೆ.
ಜಿದ್ದಾಜಿದ್ದಿನ ಹೋರಾಟ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಜೆಡಿಎಸ್‌ನ ಚಲುವರಾಯಸ್ವಾಮಿ ವಿರುದ್ಧ ಪರಾಭವ ಹೊಂದಿದ್ದಾರೆ. ಸತತ ಮೂರು ಬಾರಿ ಗೆಲುವು ಸಾಧಿಸಿದ್ದ ಅಂಬರೀಶ್ ಅವರನ್ನು ಮತದಾರ ವಿರುದ್ಧ ತೀರ್ಪು ನೀಡುವ ಮೂಲಕ ಸಂಸತ್ ಪ್ರವೇಶಕ್ಕೆ ತಡೆಯೊಡ್ಡಿದ್ದಾರೆ.
ಸಮಾಜವಾದಿ ಚಳವಳಿ ಹೋರಾಟದಲ್ಲಿ ಬೆಳೆದ, ಕಟ್ಟಾ ಕಾಂಗ್ರೆಸ್ಸಿಗನಾಗಿದ್ದ ಡಿ.ಬಿ.ಚಂದ್ರೇಗೌಡ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ನೀಡಿಲ್ಲ ಎಂಬ ಮುನಿಸಿನಿಂದ, ಭಾರತೀಯ ಜನಾತಪಕ್ಷ ಸೇರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಬಿ. ಕಾಂಗ್ರೆಸ್ಸಿನ ಹಳೇ ಹುಲಿ ಸಿ.ಕೆ.ಜಾಫರ್ ಶರೀಫ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಚಿರಪರಿಚಿತರಾಗಿದ್ದ ಜಾಫರ್ ಶರೀಫ್ ಅಪರಿಚಿತರಾಗಿದ್ದ ಡಿ.ಬಿ. ಎದುರು ಪರಾಜಯಗೊಳ್ಳುವ ಮೂಲಕ ಮತದಾರರು ಅವರ ರಾಜಕೀಯ ಜೀವನಕ್ಕೆ ಬ್ರೇಕ್ ಹಾಕಿದಂತಾಗಿದೆ.
NRB
ತನ್ನ ಪುತ್ರನಿಗೆ ಟಿಕೆಟ್ ನೀಡಿಲ್ಲ ಎಂಬ ಅಸಮಾಧಾನದಿಂದ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದ 'ಮ್ಯಾಗಿ' (ಮಾರ್ಗರೇಟ್ ಆಳ್ವ) ಮೇಡಂ ಕಾರವಾರ ಲೋಕಸಭಾ ಕ್ಷೇತ್ರದಲ್ಲಿ ಸೋನಿಯಾ ಕೃಪಾಕಟಾಕ್ಷದಿಂದ ಅಖಾಡಕ್ಕಿಳಿದಿದ್ದ ಅವರು ಬಿಜೆಪಿಯ ಅನಂತ್ ಕುಮಾರ್ ಹೆಗಡೆ ವಿರುದ್ಧ ಸೋಲನ್ನನುಭವಿಸಿದ್ದಾರೆ. ಈ ಮೂಲಕ ಹೆಗಡೆ ಸತತವಾಗಿ ಮೂರನೇ ಬಾರಿ ಸಂಸತ್ ಪ್ರವೇಶಿಸಿದಂತಾಗಿದೆ.
ಗೆದ್ದ ಪ್ರಮುಖ ಹುರಿಯಾಳುಗಳು:
NRB
ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್‌ನ ಬಿ.ಶಿವರಾಂ ಅವರಿಗಿಂತ 2.91ಲಕ್ಷಗಳ ಭರ್ಜರಿ ಬಹುಮತದೊಂದಿಗೆ ಜಯಭೇರಿ ಬಾರಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ನ ತೇಜಸ್ವಿನಿ ಅವರನ್ನು 1ಲಕ್ಷಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸುವ ಮೂಲಕ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗ ಅನುಭವಿಸಿವಂತೆ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಹೋರಾಟದ ನಡುವೆಯೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅನಂತ್ ಕುಮಾರ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೃಷ್ಣಬೈರೇಗೌಡರನ್ನು ಸೋಲಿಸುವ ಮೂಲಕ ಸತತ ಆರನೇ ಬಾರಿ ಸಂಸತ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಲಿಲ್ಲದ ಸರದಾರ ಎನ್ನಿಸಿಕೊಂಡು, ಒಲ್ಲದ ಮನಸ್ಸಿನಿಂದ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿಯ ರೇವೂ ನಾಯಕ್ ಬೆಳಮಗಿ ಎದುರು ಗೆಲುವಿನ ನಗು ಬೀರುವ ಮೂಲಕ ಪ್ರಥಮ ಬಾರಿಗೆ ರಾಜ್ಯ ರಾಜಕಾರಣದಿಂದ ಸಂಸತ್ ಪ್ರವೇಶಿಸಿದ್ದಾರೆ.
NRB
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರು ಕ್ಷೇತ್ರದಿಂದ ಸಂಸತ್ ಪ್ರವೇಶಿಸುವ ಅದೃಷ್ಟ ಕೈಕೊಟ್ಟ ನಂತರ, ಚಿಕ್ಕಮಗಳೂರು ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿಗೆ ವಿಜಯಲಕ್ಷ್ಮಿ ಒಲಿಯುವ ಮೂಲಕ ಪ್ರಥಮ ಬಾರಿಗೆ ಸಂಸತ್‌ಗೆ ಪ್ರವೇಶ ಕಂಡಿದ್ದಾರೆ.
NRB
ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ಜಯಪ್ರಕಾಶ್ ಹೆಗ್ಡೆ ವಿರುದ್ಧ ಜಯ ಸಾಧಿಸಿದ್ದು, ಎರಡನೇ ಬಾರಿ ಲೋಕಸಭೆಗೆ ಕಾಲಿಟ್ಟಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ಕ್ಷೇತ್ರದ ಮತದಾರರ ಮತ್ತೆ ಆಶೀರ್ವಾದ ಮಾಡುವ ಮುಖೇನ ಸತತ ಆರನೇ ಬಾರಿಗೆ ಸಂಸತ್‌ಗೆ ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಅವರು ಸತತ ಎಂಟು ಬಾರಿ ಗೆಲುವಿನ ರುಚಿ ಕಂಡು, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದರು. ಈ ಬಾರಿ ಬೀದರ್ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದ ಸಿಂಗ್ ಬಿಜೆಪಿಯ ನಾಗಮಾರಪಳ್ಳಿ ಎದುರು ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.