ನಿನ್ನೆಯ ತನಕ ಇನ್ನೊಬ್ಬ ರಾಜಕೀಯ ಕುಡಿಯಾಗಿದ್ದ ರಾಹುಲ್ ಗಾಂಧಿ ಚುನಾವಣಾ ಫಲಿತಾಂಶ ಹೊರಬಿದ್ದ ಶನಿವಾರದಂದು ಹೊತ್ತು ಮಧ್ಯಾಹ್ನವಾಗುತ್ತಲೇ ಒಬ್ಬ ಪರಿಪೂರ್ಣ ನಾಯಕನಾಗಿ ಬೆಳೆದು ನಿಂತಿದ್ದಾರೆ. ಚುನಾವಣೆ ಘೋಷಣೆಯಾಗುತ್ತಲೇ ಬಿಡುವಿಲ್ಲದಂತೆ ರಾಷ್ಟ್ರಾದ್ಯಂತ ಓಡಾಡಿ ಚುನಾವಣಾ ಪ್ರಚಾರ ಮಾಡಿದ್ದ ತರುಣ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ವೈಯಕ್ತಿವಾಗಿ ಮತ್ತು ಒಟ್ಟಾರೆಯಾಗಿ ಯುಪಿಎ ಉತ್ತಮ ಮೊತ್ತ ಗಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆಂಬುದು ಅವರ ಮೇಲೆ ಪಕ್ಷದ ಪ್ರೀತಿ ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ತನ್ನ ತಂದೆ ರಾಜೀವ್ ಗಾಂಧಿ ವರ್ಚಸ್ಸನ್ನು ಮೈಗೂಡಿಸಿಕೊಂಡಿರುವ ಸರಳ ನಡೆನುಡಿಯ ರಾಹುಲ್ ಗಾಂಧಿ ಯುವಜನತೆಯನ್ನು ರಾಜಕೀಯದತ್ತ ಸೆಳೆಯುವ ಪಣ ತೊಟ್ಟವರು. ತನ್ನ ಪ್ರಚಾರದುದ್ದಕ್ಕೂ ಎಲ್ಲೂ ತಪ್ಪಿ ಮಾಡನಾಡಲಿಲ್ಲ, ವಿವಾದಕ್ಕೆ ಸಿಲುಕಿಕೊಳ್ಳಲಿಲ್ಲ. ಅತ್ಯಂತ ಚಾಕಚಕ್ಯತೆಯ ವ್ಯೂಹ ರಚಿಸಿದ್ದರು. ತನ್ನದೇ ವೆಬ್‌ಸೈಟ್ ಆರಂಭಿಸಿ ಸುದ್ದಿಗಳು ಕ್ಷಣಕ್ಷಣಕ್ಕೆ ಅಪ್‌ಡೇಟ್ ಆಗುವಂತೆ ನೋಡಿಕೊಂಡಿದ್ದರು.
ಉತ್ತರ ಪ್ರದೇಶದಲ್ಲಿ ಹೇಗಾದರೂ 20ರ ಗಡಿಯನ್ನು ದಾಟಬೇಕೆಂಬ ಅವರ ಹಠ ಗೆದ್ದಿದೆ. 21 ಸ್ಥಾನಗಳನ್ನು ಕಾಂಗ್ರೆಸ್ ಮಡಿಲಿಗೆ ಹಾಕಿಕೊಳ್ಳುವತ್ತ ದಾಪುಗಾಲಿಕ್ಕಿದೆ. ಇಲ್ಲಿ ಅದು 11 ಸ್ಥಾನಗಳ ಲಾಭ ಪಡೆದಿದೆ.
ಕಾಂಗ್ರೆಸ್‌ನ ಅದ್ಭುತ ಅನಿರೀಕ್ಷಿತ ಗೆಲುವಿನಲ್ಲಿ ರಾಹುಲ್ ಕೊಡುಗೆಯ ಕುರಿತು ಎರಡು ಮಾತಿಲ್ಲ. ಜನರನ್ನು ಸೆಳೆಯುವ ಚುಂಬಕ ಶಕ್ತಿಇದ್ದ ತಾರಾ ವರ್ಚಸ್ಸುಳ್ಳ ನಾಯಕ, 35 ದಿನಗಳಲ್ಲಿ 122 ಸಮಾವೇಶಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ತಾವು ಭಾಷಣ ಮಾಡಿದ್ದಲೆಲ್ಲ ರಾಜಕೀಯದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆಯ ಮಹತ್ವನ್ನು ಒತ್ತಿ ಹೇಳಿದ್ದರು.
ಅವರು ಪಕ್ಷದಲ್ಲಿ ಉತ್ಸಾಹ ತುಂಬಿದ್ದರು. ಹಿರಿಯರ ಶಕ್ತಿಯೊಂದಿಗೆ ಕಿರಿಯರು ಬೆಳೆಯಬೇಕು ಎಂಬುದು ಮರಿ ಗಾಂಧಿಯ ಇರಾದೆ. ರಾಹುಲ್ ಅವರು ಜನರನ್ನುದ್ದೇಶಿಸಿ ಮಾತನಾಡಿದಲ್ಲೆಲ್ಲ ಮಿಂಚು ಹರಿಸಿದ್ದರು ಎಂಬುದಾಗಿ ಇನ್ನೋರ್ವ ತರುಣ ನಾಯಕ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳುತ್ತಾರೆ.
ರಾಹುಲ್ ಅವರು ಹೋದಲೆಲ್ಲ ತಾನು ತನ್ನ ತಂದೆಯ ಕನಸುಗಳನ್ನು ಸಾಕಾರಗೊಳಿಸಬೇಕಾಗಿದೆ ಎಂದು ಹೇಳುತ್ತಾ ಬಂದಿದ್ದಾರೆ. ನನ್ನ ತಂದೆ ಆರಂಭಿಸಿದ ಕಾರ್ಯವಿದೆ. ಅವರು ಕಂಡ ಕನಸಿದೆ. ಅವರ ಕನಸು ನನಸಾಗಲು ತನಗೊಂದು ಅವಕಾಶ ನೀಡಿ ಎಂಬುದಾಗಿ ಅಮೇಠಿಯಲ್ಲಿ ಅವರು ತಮ್ಮ ಪ್ರಚಾರ ಆರಂಭಿಸುತ್ತಾ ಹೇಳಿದ್ದರು.