ತೃತೀಯ ರಂಗದ ಭಾಗವಾಗಿದ್ದುಕೊಂಡು ಫಲಿತಾಂಶ ಮುನ್ನಾದಿನ ರಾತೋರಾತ್ರಿ ಮುಖಮುಚ್ಚಿಕೊಂಡು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಕುತೂಹಲ ಕೆರಳಿಸಿದ್ದ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ತಮ್ಮ ಭೇಟಿಯ ಹಿನ್ನೆಲೆಯೇನಿತ್ತೆಂಬುದನ್ನು ಹೊರಗೆಡಹಿದ್ದಾರೆ. ಯುಪಿಎ ಏನಾದರೂ ಬೆಂಬಲ ಕೇಳಿದರೆ ನೀಡಲು 'ಮುಕ್ತ ಮನಸ್ಸು' ಹೊಂದಿದ್ದೇವೆ ಎಂದು ಹೇಳುವ ಮೂಲಕ ತೃತೀಯ ರಂಗದ ಭವಿಷ್ಯವೇನು ಎಂಬುದನ್ನೂ ಶನಿವಾರ ಸ್ಪಷ್ಟಪಡಿಸಿದರು.
ಇದುವರೆಗೆ ನಾವು ಏನನ್ನೂ ನಿರ್ಧರಿಸಿಲ್ಲ. ಯುಪಿಎ ನಮ್ಮ ಬೆಂಬಲ ಯಾಚಿಸಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ತೇಜಸ್ವಿನಿ ಶ್ರೀರಮೇಶ್ ಅವರನ್ನು ಸೋಲಿಸಿ ಮೊದಲ ಬಾರಿ ಸಂಸತ್ತು ಪ್ರವೇಶಿಸುತ್ತಿರುವ ಕುಮಾರಸ್ವಾಮಿ ಹೇಳಿದ್ದಾರೆ.
ಸೋನಿಯಾ ಗಾಂಧಿ ಜೊತೆ ಅಂದು ರಾತ್ರಿ ಏನೇನು ಚರ್ಚೆ ನಡೆಯಿತು ಎಂದು ಕೇಳಿದಾಗ, ಈಗಿನ ಪರಿಸ್ಥಿತಿಯಲ್ಲಿ ಅದು ಅಪ್ರಸ್ತುತ ಎಂದು ಹೇಳಿ ಕುಮಾರಸ್ವಾಮಿ ನುಣುಚಿಕೊಂಡರು. ನಮ್ಮ ಮೊದಲ ಶತ್ರು ಬಿಜೆಪಿ. ಬಿಜೆಪಿ ಬೆಳವಣಿಗೆ ತಡೆಯಲು ಯುಪಿಎ ನೆರವು ಕೇಳಿದರೆ, ಸಹಕಾರ ನೀಡಲು ಸಿದ್ಧ ಎಂದ ಅವರು, ರಾಜ್ಯದಲ್ಲಿ ಮೂಡಿಬಂದ ಫಲಿತಾಂಶದ ಬಗ್ಗೆ "ಅದು ನಮ್ಮ ನಿರೀಕ್ಷೆಗಿಂತ ಕಡಿಮೆಯಾಗಿದ್ದರೂ" ಪಕ್ಷಕ್ಕೆ ಸಂತೋಷವಿದೆ ಎಂದು ಹೇಳಿದರು. ಜೆಡಿಎಸ್ ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚು ಗೆದ್ದುಕೊಂಡು ತನ್ನ ಗಳಿಕೆಯನ್ನು ಮೂರಕ್ಕೇರಿಸಿಕೊಂಡಿದೆ
ಕನಿಷ್ಠ ಆರಾದರೂ ಸೀಟು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಕಾಂಗ್ರೆಸಿನೊಳಗಿರುವ ಜನತಾ ಪರಿವಾರ ಮುಖಂಡರು ಹಾಗೂ ಬಿಜೆಪಿ ನಡುವಣ ರಹಸ್ಯ ಒಪ್ಪಂದದಿಂದಾಗಿ ನಮಗೆ ಮೂರು ಸ್ಥಾನವಷ್ಟೇ ದೊರೆಯಿತು ಎಂದ ಅವರು, ಬಿಜೆಪಿಯು ಅಧಿಕಾರಯಂತ್ರದ ದುರುಪಯೋಗ ಮತ್ತು ಹಣ ಬಲದಿಂದಾಗಿಯೇ 19 ಸ್ಥಾನ ಗೆದ್ದುಕೊಂಡಿತು ಎಂದು ಆರೋಪಿಸಿದರು.