25 ವರ್ಷಗಳ ಬಳಿಕ ರಾಜಸ್ಥಾನದ ಮೇಲೆ ಹಿಡಿತ ಸಾಧಿಸಿರುವ ಕಾಂಗ್ರೆಸ್, 24 ಲೋಕಸಭಾ ಕ್ಷೇತ್ರಗಳಲ್ಲಿ 19ನ್ನು ಬಗಲಿಗೆ ಹಾಕಿಕೊಂಡಿದ್ದರೆ, ಪ್ರಧಾನ ಪ್ರತಿಪಕ್ಷ ಬಿಜೆಪಿ 2004ರಲ್ಲಿ ಗೆದ್ದುಕೊಂಡಿದ್ದ 21 ಕ್ಷೇತ್ರಗಳಲ್ಲಿ ನಾಲ್ಕನ್ನು ಮಾತ್ರವೇ ಉಳಿಸಿಕೊಳ್ಳುವಲ್ಲಿ ಶಕ್ತವಾಗಿದೆ. ಇದು ಬಿಜೆಪಿಯ ರಾಷ್ಟ್ರ ಮಟ್ಟದ ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.
ನಾಲ್ಕು ತಿಂಗಳ ಹಿಂದೆ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಿಜೆಪಿ ವಶದಲ್ಲಿದ್ದ 17 ಸ್ಥಾನಗಳನ್ನು ಕಸಿದುಕೊಳ್ಳುವಲ್ಲಿ ಸಫಲವಾಗಿದೆ. ಆದರೆ ಮಾಜಿ ಕೇಂದ್ರ ಸಚಿವ, ಸ್ವತಂತ್ರವಾಗಿ ಸ್ಪರ್ಧಿಸಿದ್ದ ಬೂಟಾ ಸಿಂಗ್ ಅವರು ತಮ್ಮ ಭದ್ರಕೋಟೆಯಾದ ಜಲಾರ್‌ನಲ್ಲಿ ಬಿಜೆಪಿಯೆದುರು ಸೋಲನ್ನಪ್ಪಿದ್ದಾರೆ. ಮಾತ್ರವಲ್ಲದೆ, ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಪುತ್ರ ಮಾನವೇಂದ್ರ ಸಿಂಹ್ ಅವರು ಬಾರಮೇರ್ ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದಾರೆ.