ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟು, ಏನಾಯ್ತು?
ಮತಸಮರ
WD
ಕಾಂಗ್ರೆಸ್ ಹಾಗೂ ಯುಪಿಎ ಗೆಲುವು, ಎಡಪಕ್ಷಗಳಿಗೆ ಮರ್ಮಾಘಾತ, ಎನ್‌ಡಿಎ ವಿಶ್ವಾಸಕ್ಕೆ ಹೊಡೆತ ನೀಡಿದ 2009ರ ಮತ ಮಹಾಸಮರದಲ್ಲಿ ಯಾವ ಯಾವ ರಾಜ್ಯಗಳಲ್ಲಿ ಯಾವ ಪರಿಸ್ಥಿತಿಗಳು ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶಕ್ಕೆ ಕಾರಣವಾದವು ಎಂಬ ಕುರಿತು ಒಂದಷ್ಟು ಬೆಳಕು.

ತಮಿಳುನಾಡು: 'ಅಮ್ಮ'ನ ದೋಣಿ ಮುಳುಗಿಸಿದ ವಿಜಯಕಾಂತ್
ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಮಿತ್ರಕೂಟವೇ ಈ ಬಾರಿ ರಾಜ್ಯದಲ್ಲಿ ಆಡಳಿತದಲ್ಲಿರುವ ಡಿಎಂಕೆ-ಕಾಂಗ್ರೆಸ್ ಮಿತ್ರಕೂಟಕ್ಕೆ ಆಘಾತ ನೀಡುತ್ತದೆ ಎಂದೇ ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಆದರೆ ಇಲ್ಲಿ ನಟ, ಕ್ಯಾಪ್ಟನ್ ವಿಜಯಕಾಂತ್ ಹುಟ್ಟುಹಾಕಿದ್ದ ಡಿಎಂಡಿಕೆ ಎಂಬ ಪಕ್ಷವು ಯಾವುದೇ ಸೀಟು ಗೆಲ್ಲದಿದ್ದರೂ ಡಿಎಂಕೆ ಗೆಲುವಿಗೆ ಮತ್ತು ಎಐಎಡಿಎಂಕೆ ಸೋಲಿಗೆ ಪ್ರಧಾನ ಪಾತ್ರ ವಹಿಸಿತ್ತು. ಕಾರಣವೆಂದರೆ, ಡಿಎಂಕೆ-ಎಐಎಡಿಎಂಕೆ ಅಭ್ಯರ್ಥಿಗಳ ಗೆಲುವು-ಸೋಲಿನ ಅಂತರಕ್ಕಿಂತ ಹೆಚ್ಚು ಮತಗಳು ಈ ಡಿಎಂಡಿಕೆ ಅಭ್ಯರ್ಥಿಗೆ ಬಿದ್ದಿರುವುದು!

ದೇಸೀಯ ಮುರ್ಪೋಕ್ಕು ದ್ರಾವಿಡರ್ ಕಳಗಂ (ಡಿಎಂಡಿಕೆ) ನಾಯಕ ವಿಜಯಕಾಂತ್ ಹೋದಲ್ಲೆಲ್ಲಾ ಒಟ್ಟುಸೇರಿದ್ದ ಭಾರೀ ಜನಪ್ರವಾಹವು ಮತಗಳಾಗಿ ಪರಿವರ್ತನೆಯಾಗಿಲ್ಲ. ಎಲ್ಲರಿಗಿಂತ ಮುಂದಾಗಿ ಅಭ್ಯರ್ಥಿಗಳನ್ನು ಪ್ರಕಟಿಸಿ, ರ‌್ಯಾಲಿಗಳನ್ನು ನಡೆಸುತ್ತಾ ಚುನಾವಣಾ ಸಮರಕ್ಕಿಳಿದಿದ್ದ ಡಿಎಂಡಿಕೆ, ಸ್ಪರ್ಧಿಸಿದ್ದ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಠೇವಣಿ ಕಳೆದುಕೊಂಡಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ದ ಆ ಪಕ್ಷದ ಅಭ್ಯರ್ಥಿಗಳು ಹೆಚ್ಚಿ ಮತಗಳನ್ನು ಗಳಿಸಿರುವುದು ಆಡಳಿತ-ವಿರೋಧಿ ಅಲೆಗೆ ಸಿಲುಕಿದ್ದ ಮುಖ್ಯಮಂತ್ರಿ ಕರುಣಾನಿಧಿ ನೇತೃತ್ವದ ಡಿಎಂಕೆಗೆ ವರದಾನವಾಯಿತಷ್ಟೆ.

ಕಳೆದ ಬಾರಿ ಡಿಎಂಕೆ-ಕಾಂಗ್ರೆಸ್ ಮಿತ್ರಕೂಟದಲ್ಲಿದ್ದ ಪಿಎಂಕೆ, ಎಂಡಿಎಂಕೆ, ಸಿಪಿಐ, ಸಿಪಿಎಂಗಳೆಲ್ಲವೂ ಜಯಾ ಬಣಕ್ಕೆ ಹೋಗಿದ್ದು, ಡಿಎಂಕೆ ಕೂಟಕ್ಕೆ ಹೆಚ್ಚೇನೂ ಹಾನಿ ಮಾಡಲಿಲ್ಲ. ಇಲ್ಲಿ ತಮಿಳು ಈಳಂ ಕೂಡ ಚುನಾವಣೆಗಳ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.

ಒಟ್ಟು 40 ಕ್ಷೇತ್ರಗಳಲ್ಲಿ ಅಂತಿಮ ಬಲಾಬಲ ಈ ರೀತಿ ಇದೆ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಡಿಎಂಕೆ 18 (16)
ಕಾಂಗ್ರೆಸ್ 9 (10)
ಎಐಎಡಿಎಂಕೆ 9 (0)
ಎಂಡಿಎಂಕೆ 1 (4)
ಸಿಪಿಐ 1 (2)
ಸಿಪಿಎಂ 1 (2)
ವಿಸಿಕೆ 1 (0)
ಪಿಎಂಕೆ 0 (5)

ಒರಿಸ್ಸಾ: ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಜು ಜನತಾ ದಳಕ್ಕೆ ಜನಮನ್ನಣೆ
ಕಳೆದ ಬಾರಿ ರಾಜ್ಯದ 21 ಸ್ಥಾನಗಳಲ್ಲಿ ಬಿಜೆಪಿ-ಬಿಜೆಡಿ ಮಿತ್ರಕೂಟ 18 ಸ್ಥಾನ ಗೆದ್ದುಕೊಂಡಿತ್ತು. ಈ ಬಾರಿ 11 ವರ್ಷಗಳ ಬಿಜೆಪಿ ಮೈತ್ರಿ ಕಡಿದುಕೊಂಡಿದ್ದ ನವೀನ್ ಪಟ್ನಾಯಕ್ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೆರಡರಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವ ರಿಸ್ಕ್ ತೆಗೆದುಕೊಂಡಿದ್ದರು. ವಿಜಯವನ್ನೂ ಗಳಿಸಿದರು.
ಒಟ್ಟು 21 ಸ್ಥಾನಗಳಲ್ಲಿ ಪಕ್ಷಗಳ ಬಲಾಬಲ:
ಬಿಜೆಡಿ 14 (11)
ಬಿಜೆಪಿ 0 (7)
ಕಾಂಗ್ರೆಸ್ 6 (2)
ಜೆಎಂಎಂ 0 (1)
ಸಿಪಿಐ 1(0)

ರಾಜಸ್ಥಾನ: 25 ವರ್ಷಗಳ ಬಳಿಕ ಕಾಂಗ್ರೆಸ್ ಪ್ರಾಬಲ್ಯ
ಕಳೆದ ಬಾರಿ 21 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಇಲ್ಲಿ ಮರ್ಮಾಘಾತ. ಈ ಬಾರಿ ಅದು ಗೆದ್ದದ್ದು ಕೇವಲ 4. ಕಾಂಗ್ರೆಸ್ ಪಕ್ಷವು 25 ವರ್ಷಗಳ ಬಳಿಕ ಭರ್ಜರಿ ವಿಜಯ ದಾಖಲಿಸಿತು. ಇದು ಅನಿರೀಕ್ಷಿತವೂ ಆಗಿದೆ. ಇತ್ತೀಚೆಗಷ್ಟೇ ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರವನ್ನು ಕಾಂಗ್ರೆಸಿಗೆ ಬಿಟ್ಟುಕೊಟ್ಟಿತ್ತು.
ಒಟ್ಟು 25 ಕ್ಷೇತ್ರಗಳಲ್ಲಿ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಬಿಜೆಪಿ 4 (21)
ಕಾಂಗ್ರೆಸ್ 20 (4)
ಇತರರು 1 (0)

ಉತ್ತರ ಪ್ರದೇಶ: ಮಾಯಾ ಪ್ರಧಾನಿ ಕನಸು ಠುಸ್, ಮುಲಾಯಂ ಪ್ರಾಬಲ್ಯ ಕ್ಷೀಣ
1984ರ ಅವಧಿಯಲ್ಲಿ ನೆಲೆ ಕಳೆದುಕೊಂಡ ಬಳಿಕ ಇಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲಾರಂಭಿಸಿದಂತೆ ತೋರುತ್ತಿದೆ. ಭಾರಿ ನಷ್ಟವಾಗಿದ್ದು ಮುಲಾಯಂ ಸಿಂಗ್ ಅವರ ಎಸ್ಪಿಗೆ ಆದರೂ, ಅದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ, ಬಿಎಸ್ಪಿ ನಾಯಕಿಯ ದಿಲ್ಲಿ ದರ್ಬಾರು ನಡೆಸುವ ಆಕಾಂಕ್ಷೆಯ ಗುಳ್ಳೆ ಪುಡಿಯಾಗಿ ಹೋಗಿದೆ. ದೇಶದ ಅತಿದೊಡ್ಡ ರಾಜ್ಯದಲ್ಲಿ ಮೊದಲ ಬಾರಿಗೆ ಯಾವುದೇ ಪಕ್ಷವೂ 25 ಕ್ಷೇತ್ರಗಳನ್ನು ಬಗಲಿಗೆ ಹಾಕಿಕೊಳ್ಳಲು ವಿಫಲವಾಗಿದೆ.
ಒಟ್ಟು 80 ಕ್ಷೇತ್ರಗಳಲ್ಲಿ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಸಮಾಜವಾದಿ ಪಕ್ಷ 23 (35)
ಬಹುಜನ ಸಮಾಜ ಪಕ್ಷ 19 (19)
ಬಿಜೆಪಿ 11 (10)
ಕಾಂಗ್ರೆಸ್ 22 (9)
ಆರ್ಎಲ್‌ಡಿ 5 (3)
ಜೆಡಿಯು 0 (1)
ಇತರರು 1 (3)

ಬಿಹಾರ: ಲಾಲು ಪ್ರಾಬಲ್ಯ ನಿರ್ನಾಮ, ನಿತೀಶ್ ಕೆಲಸಕ್ಕೆ ಜನ ಮನ್ನಣೆ
ಒಂದು ಕಾಲದಲ್ಲಿ ಬಿಹಾರದ ಮುಖ ಎಂದೇ ಗುರುತಿಸಿಕೊಂಡಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮರ್ಮಾಘಾತ ಅನುಭವಿಸಿದ್ದಾರೆ. ಇಡೀ ಚಿತ್ರಣವನ್ನು ಜೆಡಿಯು ಮುಖಂಡ, ಮುಖ್ಯಮಂತ್ರಿ ನಿತೀಶ್ ಕುಮಾರ್ ಬದಲಿಸಿದ್ದಾರೆ. ಲೋಕಜನ ಶಕ್ತಿ (ಎಲ್‌ಜೆಪಿ) ನಾಯಕ ರಾಮವಿಲಾಸ್ ಪಾಸ್ವಾನ್ ಗುಡಿಸಿಹೋಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್-ಎನ್‌ಸಿಪಿ-ಆರ್‌ಜೆಡಿ ಮೈತ್ರಿಕೂಟವು 29 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಈ ಬಾರಿ ಜೆಡಿಯು-ಬಿಜೆಪಿ ಕೂಟ ಅದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಸೆಳೆದುಕೊಂಡಿದೆ.

ಒಟ್ಟು 40 ಕ್ಷೇತ್ರಗಳಲ್ಲಿ ಪಕ್ಷಗಳ ಬಲಾ ಬಲ ಇಂತಿದೆ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಆರ್‌ಜೆಡಿ 4 (22)
ಜೆಡಿಯು 20 (6)
ಬಿಜೆಪಿ 13 (5)
ಎಲ್‌ಜೆಪಿ 0 (4)
ಕಾಂಗ್ರೆಸ್ 2 (3)
ಇತರರು 1(0)

ಕೇರಳ: ಎಡರಂಗದ ಕೋಟೆ ಪುಡಿಗೈದ ಕಾಂಗ್ರೆಸ್ ಕೂಟ
2004ರಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್ ಮತ್ತು 1 ಸ್ಥಾನವನ್ನಷ್ಟೇ ಗೆದ್ದುಕೊಂಡಿದ್ದ ಅದರ ಮಿತ್ರ ಮುಸ್ಲಿಂ ಲೀಗ್ ಈ ಬಾರಿ ಚಿಗಿತುಕೊಂಡಿದೆ. ಈ ಬಾರಿ ಎಡರಂಗಕ್ಕೆ ಅವುಗಳು ಉಳಿಸಿದ್ದು ಕೇವಲ 5 ಸೀಟುಗಳನ್ನು ಮಾತ್ರ.

20 ಕ್ಷೇತ್ರಗಳ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಸಿಪಿಎಂ 4 (12)
ಸಿಪಿಐ 0 (3)
ಕಾಂಗ್ರೆಸ್ 13 (0)
ಇತರರು 3 (4)
ಸ್ವತಂತ್ರ 0 (1)

ಬಂಗಾಳ: ಮಮತಾ-ಕಾಂಗ್ರೆಸ್ ಅಲೆಯಲ್ಲಿ ಕೊಚ್ಚಿ ಹೋದ ಎಡರಂಗ
ಎಡಪಕ್ಷಗಳಿಗೆ ಮತ್ತೊಂದು ಮರ್ಮಾಘಾತವಾಗಿದ್ದು ಕೆಂಪು ಕೋಟೆ ಎಂದೇ ಕರೆಯಲಾಗುತ್ತಿದ್ದ ಪಶ್ಚಿಮ ಬಂಗಾಳದಲ್ಲಿ. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದಾಗ 1977ರ ಬಳಿಕ ಎಡರಂಗವು ಇಲ್ಲಿ ಮೊದಲ ಬಾರಿ ನೆಲ ಕಚ್ಚಿತ್ತು. ಆದರೆ ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ತನ್ನ 'ಮಾತೃಪಕ್ಷ' ಕಾಂಗ್ರೆಸ್ ಜೊತೆ ಸೇರಿಕೊಂಡು ಎಡರಂಗವನ್ನು ನೆಲಕಚ್ಚಿಸಿದೆ.

ರಾಜ್ಯದ 42 ಕ್ಷೇತ್ರಗಳಲ್ಲಿ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಸಿಪಿಎಂ 9 (26)
ಇತರ ಎಡರಂಗ 6 (9)
ಕಾಂಗ್ರೆಸ್ 6 (6)
ತೃಣಮೂಲ 19 (1)
ಬಿಜೆಪಿ 1 (1)
ಸ್ವತಂತ್ರ 1 (1)

ಕಾಂಗ್ರೆಸ್‌ಗೆ ಅಚ್ಚರಿಯ ಬಲ ನೀಡಿದ ಆಂಧ್ರಪ್ರದೇಶ
42 ಸ್ಥಾನಗಳಲ್ಲಿ 33ನ್ನು ಕಾಂಗ್ರೆಸ್‌ಗೆ ಕೊಟ್ಟಿರುವ ಆಂಧ್ರಪ್ರದೇಶವು ಕೇಂದ್ರದ ಯುಪಿಎ ಸರಕಾರಕ್ಕೆ ಬಲ ತುಂಬಿದೆ. ಕಳೆದ ಬಾರಿಗಿಂತ ಕಾಂಗ್ರೆಸ್ 4 ಸ್ಥಾನ ಹೆಚ್ಚಿಸಿಕೊಂಡಿದೆ.
42 ಕ್ಷೇತ್ರಗಳಲ್ಲಿ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಟಿಡಿಪಿ 6 (5)
ಎಂಐಎಂ 1(1)
ಕಾಂಗ್ರೆಸ್ 33 (29)
ಟಿಆರ್ಎಸ್ 2(7)

ಗುಜರಾತ್: ಮೋದಿ ಆಯ್ದ ಅಭ್ಯರ್ಥಿಗಳಿಗೆ ಸೋಲು
2004ಕ್ಕಿಂತ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಇಲ್ಲಿ ಒಂದು ಸ್ಥಾನ ಹೆಚ್ಚಿಸಿಕೊಂಡರೂ, ಮೋದಿ ತಾನಾಗಿಯೇ ಆಯ್ಕೆ ಮಾಡಿದ ಅಭ್ಯರ್ಥಿಗಳು ಕಾಂಗ್ರೆಸ್ ಕೈಯಲ್ಲಿ ದಯನೀಯ ಸೋಲು ಅನುಭವಿಸಿದ್ದು ವಿಶೇಷ. ದ್ವಿಪಕ್ಷೀಯ ಹೋರಾಟದಲ್ಲಿ ಒಂದು ಸ್ಥಾನವನ್ನು ಬಿಜೆಪಿಯು ಕಾಂಗ್ರೆಸಿನಿಂದ ಈ ಬಾರಿ ಕಿತ್ತುಕೊಂಡಿದೆ.
26 ಕ್ಷೇತ್ರಗಳ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಬಿಜೆಪಿ 15 (14)
ಕಾಂಗ್ರೆಸ್ 11 (12)

ಮಹಾರಾಷ್ಟ್ರ: ಕಾಂಗ್ರೆಸ್-ಎನ್‌ಸಿಪಿಗೆ ಸಹಾಯ ಮಾಡಿದ ಎಂಎನ್ಎಸ್
ಮರಾಠಿಯೇ ಪ್ರಧಾನಿಯಾಗಬೇಕು ಎಂಬುದಕ್ಕೆ ಬೆಂಬಲ ನೀಡುತ್ತಿದ್ದ ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ರಾಜ್ ಠಾಕ್ರೆ (ಶಿವಸೇನೆಯಿಂದ ಸಿಡಿದ ನಾಯಕ), ಬಿಜೆಪಿ-ಶಿವಸೇನೆ ಕೂಟಕ್ಕೆ ಸೋಲುಣಿಸಲು ಕಾರಣರಾದರು. ತತ್ಫಲವಾಗಿ ಕಾಂಗ್ರೆಸ್-ಎನ್‌ಸಿಪಿ ಕಳೆದ ಬಾರಿಯ 13ಕ್ಕಿಂತ 4 ಸ್ಥಾನಗಳನ್ನು ಹೆಚ್ಚಿಸಿಕೊಂಡಿತು. ಎನ್‌ಸಿಪಿ ಬಲ ಕುಗ್ಗಿದ್ದರಿಂದಾಗಿ ಶರದ್ ಪವಾರ್ ಪ್ರಧಾನಿಯಾಗುವ ಹಂಬಲವನ್ನು ಕೈಬಿಟ್ಟು. ಮನಮೋಹನ ಸಿಂಗ್ ಅವರೇ ಪ್ರಧಾನಿಯಾಗಬೇಕು ಎಂದು ಹೇಳಲಾರಂಭಿಸಿದರು.
48 ಕ್ಷೇತ್ರಗಳ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಬಿಜೆಪಿ 9 (13)
ಶಿವಸೇನೆ 11 (12)
ಕಾಂಗ್ರೆಸ್ 17 (13)
ಎನ್‌ಸಿಪಿ 8 (9)
ಇತರರು 3 (1)

ಪಂಜಾಬ್: ಕಾಂಗ್ರೆಸ್‌ಗೆ ಅಚ್ಚರಿಯ ಪುನಶ್ಚೇತನ
2004ರಲ್ಲಿ ತೀರಾ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಇಲ್ಲಿ ಈ ಬಾರಿ ಚಿಗಿತುಕೊಂಡಿದೆ. ಶಿರೋಮಣಿ ಅಕಾಲಿದಳ, ಬಿಜೆಪಿ ಇರುವ ಎನ್‌ಡಿಎ ಹಿನ್ನಡೆ ಅನುಭವಿಸಿದೆ.
13 ಕ್ಷೇತ್ರಗಳಲ್ಲಿ ಪಕ್ಷಗಳ ಅಂತಿಮ ಬಲಾಬಲ(ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಶಿರೋಮಣಿ ಅಕಾಲಿ ದಳ 4 (8)
ಬಿಜೆಪಿ 1 (3)
ಕಾಂಗ್ರೆಸ್ 8 (2)

ಕಾಶ್ಮೀರ: ಬಾಚಿಕೊಂಡ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್
ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮಿತ್ರಕೂಟವು 7 ಕ್ಷೇತ್ರಗಳಲ್ಲಿ 6ನ್ನೂ ಗೆದ್ದುಕೊಂಡಿದ್ದರೆ, 1 ಸ್ಥಾನವು ಬಂಡಾಯ ಅಭ್ಯರ್ಥಿ ಪಾಲಾಗಿದೆ. ಇಲ್ಲಿ ಪ್ರತ್ಯೇಕತಾವಾದಿ ಮುಖಂಡ ಸಜ್ಜಾದ್ ಲೋನೆ ಕೂಡ ಸೋತಿದ್ದಾರೆ.
7 ಕ್ಷೇತ್ರಗಳಲ್ಲಿ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಕಾಂಗ್ರೆಸ್ 2 (2)
ನ್ಯಾ.ಕಾನ್ಫರೆನ್ಸ್ 4 (2)
ಪಿಡಿಪಿ 0 (1)
ಬಿಜೆಪಿ 0 (1)
ಸ್ವತಂತ್ರ 1 (0)

ಛತ್ತೀಸಗಢದಲ್ಲಿ ಒಳಜಗಳಕ್ಕೆ ಕಾಂಗ್ರೆಸ್ ಬಲಿ
ಪಕ್ಷದೊಳಗಿನ ಆಂತರಿಕ ಕಚ್ಚಾಟವು ಛತ್ತೀಸಗಢದಲ್ಲಿ ಮುಳುವಾಗಿದೆ. ಅಂದರೆ 2004ಕ್ಕಿಂತ ಯಾವುದೇ ರೀತಿಯ ಪುನಶ್ಚೇತನ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
11 ಕ್ಷೇತ್ರಗಳ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಬಿಜೆಪಿ 10 (10)
ಕಾಂಗ್ರೆಸ್ 1 (1)

ಜಾರ್ಖಂಡ್‌ನಲ್ಲಿ ಬಲ ಸ್ಥಾಪಿಸಿದ ಬಿಜೆಪಿ
ಯುಪಿಎಯೊಳಗಿನ ಆಂತರಿಕ ಕಚ್ಚಾಟವು ಇಲ್ಲಿ ಬಿಜೆಪಿಗೆ ಹೆಚ್ಚಿನ ಬಲ ತುಂಬಿತು. ಇತ್ತೀಚೆಗೆ ವಿಧಾನಸಭೆ ಚುನಾವಣೆಗಳಲ್ಲಿ ಸೋತು ನಾಲ್ಕು ತಿಂಗಳು ಮುಖ ಮರೆಸಿಕೊಂಡಿದ್ದ ಜೆಎಂಎಂ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಶಿಬು ಸೋರೆನ್ ಇಲ್ಲಿ ಲೋಕಸಭೆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಮಾತ್ರವಲ್ಲ, ಜಮ್ತಾರಾ ಕ್ಷೇತ್ರದ ವಿಧಾನಸಭೆ ಉಪಚುನಾವಣೆಯಲ್ಲಿಯೂ ಅಚ್ಚರಿಯ ವಿಜಯ ಗಳಿಸಿದ್ದಾರೆ. ಬಿಜೆಪಿ ಭರ್ಜರಿ 8 ಕ್ಷೇತ್ರಗಳನ್ನು ಕಬಳಿಸಿದೆ.
14 ಕ್ಷೇತ್ರಗಳಲ್ಲಿ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಜೆಎಂಎಂ 2 (4)
ಬಿಜೆಪಿ 8 (0)
ಕಾಂಗ್ರೆಸ್ 1 (6)
ಆರ್‌ಜೆಡಿ 0 (2)
ಇತರರು 2 (1)

ದೆಹಲಿಯಲ್ಲಿ ಗುಡಿಸಿಹಾಕಿದ ಕಾಂಗ್ರೆಸ್ -7, ಬಿಜೆಪಿ ಶೂನ್ಯ
ದೆಹಲಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಬೆಲೆ ಏರಿಕೆ ವಿಷಯ ಇಲ್ಲಿನ ಮಧ್ಯಮವರ್ಗದ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.
7 ಕ್ಷೇತ್ರಗಳ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಕಾಂಗ್ರೆಸ್ 7 (6)
ಬಿಜೆಪಿ 0 (1)

ಹರ್ಯಾಣ: ಗುಡಿಸುವಿಕೆ ಪುನರಾವರ್ತಿಸಿದ ಕಾಂಗ್ರೆಸ್
ಹರ್ಯಾಣದಲ್ಲಿ ಕಮಲ ಅರಳುವುದಕ್ಕೆ ಕಾಂಗ್ರೆಸ್ ಈ ಬಾರಿ ಬಿಟ್ಟಿಲ್ಲ. ಕಾಂಗ್ರೆಸ್ ಆಡಳಿತವಿರುವ ಇಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.
10 ಸ್ಥಾನಗಳ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಬಿಜೆಪಿ 0 (1)
ಕಾಂಗ್ರೆಸ್ 9 (9)
ಇತರರು 1 (0)

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮೇಲುಗೈ
ಬಿಜೆಪಿ ಸರಕಾರವಿರುವ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 2 ಸ್ಥಾನ ನಷ್ಟ ಮಾಡಿಕೊಂಡಿದೆ. ಬಿಜೆಪಿ ಅದನ್ನು ಸೆಳೆದುಕೊಂಡಿದೆ.
4 ಕ್ಷೇತ್ರಗಳುಳ್ಳ ಇಲ್ಲಿ ಅಂತಿಮ ಬಲಾಬಲ (ಆವರಣದಲ್ಲಿರುವುದು 2004ರಲ್ಲಿ ಗೆದ್ದ ಸ್ಥಾನಗಳು):
ಬಿದೆಪಿ 3 (1)
ಕಾಂಗ್ರೆಸ್ 1 (3)