ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > 15ನೇ ಲೋಕಸಭೆಯಲ್ಲಿ ನಾಲ್ವರು ಗಾಂಧಿಗಳು
ಮತಸಮರ
ನೆಹರೂ-ಗಾಂಧಿ ಮನೆತನದ ನಾಲ್ಕು ಮಂದಿ ರಾಜಕಾರಣಿಗಳು - ಇಬ್ಬರು ಆಡಳಿತ ಪಕ್ಷ ಸ್ಥಾನದಲ್ಲಿ, ಮತ್ತಿಬ್ಬರು ವಿರೋಧ ಪಕ್ಷ ಸ್ಥಾನದಲ್ಲಿ - ಕೂರುತ್ತಿರುವುದು 15ನೇ ಲೋಕಸಭೆಯ ವಿಶೇಷಗಳಲ್ಲೊಂದು.

ಬಿಜೆಪಿಯ 'ಬೆಂಕಿಚೆಂಡು' ನಾಯಕ ಎಂದೇ ಬಿಂಬಿತವಾಗಿರುವ ವರುಣ್ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ತಮ್ಮ ಅಮ್ಮ ಮನೇಕಾ ಗಾಂಧಿಯ ಫಿಲಿಬಿಟ್ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರೆ, ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಕೂಡ ತಮ್ಮ ತಂದೆಯ ಅಮೇಠಿ ಕ್ಷೇತ್ರದಿಂದ ಪುನರಾಯ್ಕೆಗೊಂಡಿದ್ದಾರೆ. ದೇಶದ ಪ್ರಥಮ ರಾಜಕೀಯ ಕುಟುಂಬದ ಇಬ್ಬರು ಅಮ್ಮ-ಮಗ ಜೋಡಿ ಹೊಸ ಸಂಸತ್ತಿನಲ್ಲಿರುತ್ತಾರೆ.

ರಾಹುಲ್-ಸೋನಿಯಾ ಆಡಳಿತಾರೂಢ ಕಾಂಗ್ರೆಸ್‌ನಲ್ಲಿದ್ದರೆ, ವರುಣ್-ಮನೇಕಾ ಪ್ರತಿಪಕ್ಷವಾದ ಬಿಜೆಪಿಯಲ್ಲಿದ್ದಾರೆ.

1952ರಿಂದ 1964ರವರೆಗೆ ಲೋಕಸಭೆಯಲ್ಲಿದ್ದ ಜವಾಹರಲಾಲ್ ನೆಹರೂ ಅವರಿಗೆ ಅಳಿಯ ಫಿರೋಜ್ ಗಾಂಧಿ 1952ರಿಂದ 1960ವರೆಗೆ ಲೋಕಸಭೆಯಲ್ಲಿ ಜೊತೆ ನೀಡಿದ್ದರು. ನೆಹರೂ ಪುತ್ರಿ ಇಂದಿರಾ ಗಾಂಧಿಯ ಪತಿ ಫಿರೋಜ್ ಉತ್ತರ ಪ್ರದೇಶದ ಪ್ರತಾಪಗಢ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಅಲ್ಪ ಕಾಲದ ಮಧ್ಯಂತರದ ಬಳಿಕ ನೆಹರೂ-ಗಾಂಧಿ ಕುಟುಂಬವು ಇಂದಿರಾ ಗಾಂಧಿ ಮೂಲಕ 1967ರಲ್ಲಿ ಪ್ರತಾಪಗಢದಿಂದ ಲೋಕಸಭೆ ಪ್ರವೇಶಿಸಿತು. ಪ್ರಥಮ ರಾಜಕೀಯ ಕುಟುಂಬದ ಮೂರನೇ ಪೀಳಿಗೆಯ ಸಂಜಯ್ ಗಾಂಧಿ 1977ರಲ್ಲಿ ಸಂಸತ್ ಪ್ರವೇಶಿಸಿದ್ದರು. ಭಾವೀ ಪ್ರಧಾನಿ ಎಂದೇ ಬಿಂಬಿಸಲ್ಪಟ್ಟಿದ್ದ ಇಂದಿರಾ ಪುತ್ರ ಸಂಜಯ್ 1980ರಲ್ಲಿ ವಿಮಾನಾಪಘಾತವೊಂದರಲ್ಲಿ ನಿಗೂಢ ಸಾವಿಗೆ ಈಡಾಗಿದ್ದರು.

ಸಂಜಯ್ ಸಾವಿನಿಂದಾಗಿ ಅವರ ಸಹೋದರ, ರಾಜಕೀಯಕ್ಕೆ ಇಳಿಯಲು ಹಿಂಜರಿಯುತ್ತಿದ್ದ ರಾಜೀವ್ ಗಾಂಧಿ ರಾಜಕೀಯಕ್ಕೆ ಇಳಿಯುವಂತಾಯಿತು. 1981ರಲ್ಲಿ ಉಪಚುನಾವಣೆ ಮೂಲಕ ಲೋಕಸಭೆ ಪ್ರವೇಶಿಸಿದ್ದ ರಾಜೀವ್ 1991ರವರೆಗೂ ಸಂಸತ್ ಸದಸ್ಯರಾಗಿದ್ದರು. ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ರಾಜೀವ್ ಎಲ್ಟಿಟಿಇ 1991ರಲ್ಲಿ ಹಂತಕರ ದಾಳಿಗೆ ಬಲಿಯಾದರು.

ಕುಟುಂಬದ ಪರಿತ್ಯಕ್ತ ಸೊಸೆ ಎಂದೇ ಕರೆಯಲಾಗುತ್ತಿರುವ ಮನೇಕಾ ಗಾಂಧಿ ಕೂಡ 1989ರಲ್ಲಿ ಫಿಲಿಬಿಟ್ ಕ್ಷೇತ್ರದಿಂದ ಜನತಾ ದಳದ ಮೂಲಕ ಸಂಸತ್ತಿಗೆ ಆಯ್ಕೆಯಾದರು.

ರಾಜೀವ್ ಗಾಂಧಿಯವರ ಇಟಲಿ ಸಂಜಾತೆ ಪತ್ನಿ, ಪತಿ ಹತ್ಯೆಗೀಡಾದ ಏಳು ವರ್ಷದವರೆಗೂ ರಾಜಕೀಯದಿಂದ ದೂರವುಳಿದು, ಕಾಂಗ್ರೆಸಿಗರ ಒತ್ತಡಕ್ಕೆ ಮಣಿದು 1999ರಲ್ಲಿ ನೆಹರೂ-ಗಾಂಧಿ ಮನೆತನದ ಏಳನೇ ಸದಸ್ಯೆಯಾಗಿ ಸಂಸತ್ ಪ್ರವೇಶಿಸಿದರು.

ಅವರ ಬಳಿಕ ರಾಹುಲ್ ಗಾಂಧಿ ಕೂಡ 2004ರಲ್ಲಿ ಮೊದಲ ಬಾರಿಗೆ ಅಮೇಠಿ ಮೂಲಕ ಸಂಸತ್ತಿಗೆ ಆಯ್ಕೆಯಾದರು. ಇದೀಗ ಮನೆತನದ ಅತ್ಯಂತ ಕಿರಿಯ ಮತ್ತು ವಿವಾದಾತ್ಮಕ ನಾಯಕನಾಗಿ ವರುಣ್ ಗಾಂಧಿ ಸಂಸತ್ತಿಗೆ ಪಾದಾರ್ಪಣೆ ಮಾಡಿದ್ದಾರೆ.