ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಕಾಮ್ರೇಡ್‌‌ಗಳಿಗೆ ಮುಖಭಂಗ - 'ಕೆಂಪುಕೋಟೆ' ಛಿದ್ರ...
ಮತಸಮರ
PTI
ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಸರ್ಕಾರ ರಚಿಸುವುದೇ ತಮ್ಮ ಗುರಿ ಎಂದು ಕಾಮ್ರೇಡ್ ಕಾರಟ್ ತೃತೀಯರಂಗದೊಂದಿಗೆ ಅಖಾಡಕ್ಕೆ ಇಳಿದಿರುವುದು ಎಷ್ಟು ತಮಾಷೆಯಾಗಿತ್ತೋ, 15ನೇ ಲೋಕಸಭಾ ಮಹಾಸಮರದಲ್ಲಿ ಮತದಾರ ಪ್ರಭು ನೀಡಿದ ಜನಾದೇಶದಲ್ಲಿ 'ಕೆಂಪುಕೋಟೆ'ಛಿದ್ರವಾಗುವ ಮೂಲಕ ಎಡರಂಗಕ್ಕೆ ತಕ್ಕ ಪಾಠ ಕಲಿಸಿದ್ದಾರೆ.

ಪಶ್ಚಿಮಬಂಗಾಳ: 1977ರಿಂದ ಪಶ್ಚಿಮಬಂಗಾಳದಲ್ಲಿ ಎಡಪಕ್ಷಗಳ ಭದ್ರಕೋಟೆಯಾಗಿತ್ತು, ಸತತ ಮೂರು ದಶಕಗಳ ಕಾಲದ ಕೋಟೆಯನ್ನು ಎಡಪಕ್ಷಗಳ ಎಡಬಿಡಂಗಿತನದಿಂದಾ ಗಿಯೇ ಮತದಾರರ 15ನೇ ಲೋಕಸಭಾ ಚುನಾವಣೆಯಲ್ಲಿ ಸಾರಸಗಟಾಗಿ ತಿರಸ್ಕರಿಸುವ ಮೂಲಕ ಅಚ್ಚರಿಯ ಶಾಕ್ ನೀಡಿದ್ದಾನೆ.

ಪಶ್ಚಿಮಬಂಗಾಳದಲ್ಲಿ ತೃಣಮೂಲ-ಕಾಂಗ್ರೆಸ್ ಮೈತ್ರಿ ಜಯಭೇರಿ ಬಾರಿಸಿರುವುದಕ್ಕೆ ಸಂತಸದ ಅಲೆಯಲ್ಲಿ ತೇಲುತ್ತಿರುವ ಮಮತಾ ಬ್ಯಾನರ್ಜಿ, ಸಿಪಿಎಂ ನೇತೃತ್ವದ ಆಡಳಿತರಂಗ ಜನರ ವಿಶ್ವಾಸ ಕಳೆದುಕೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ನುಡಿದಿರುವ ಮಾತು ಅಕ್ಷರಶಃ ಸತ್ಯ.

PTI
2004ರ ಚುನಾವಣೆಯಲ್ಲಿ ಆಡಳಿತಾರೂಢ ಸಿಪಿಎಂ 35ಸೀಟುಗಳನ್ನು ಕಬಳಿಸುವ ಮೂಲಕ ಭರ್ಜರಿ ಶಕ್ತಿಯಾಗಿ ಹೊರಹೊಮ್ಮಿತ್ತು. ಆದರೆ ಈ ಬಾರಿ ಸಿಪಿಎಂ ಪಡೆದಿರುವುದು ಕೇವಲ 14ಸೀಟು! ಈ ಹಿಂದಿನ ಚುನಾವಣೆಗಳಲ್ಲಿ ಕೂಡ ಸಿಪಿಎಂ ಜನರಿಗೆ ಮತ ಚಲಾಯಿಸದಂತೆ ಬೆದರಿಕೆ ಹಾಕುತ್ತಿತ್ತು. ಆದರೆ ಈ ಬಾರಿ ತಪ್ಪದೆ ಮತದಾರರು ಹಕ್ಕು ಚಲಾಯಿಸುವಂತೆ ತೃಣಮೂಲ ಜನರಲ್ಲಿ ಮನವಿ ಮಾಡಿತ್ತು.

ಸಿಂಗೂರ್, ನಂದಿಗ್ರಾಮ ಘಟನೆಗಳು ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಸಾಕಷ್ಟು ಪರಿಣಾಮ ಬೀರಿದೆ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ. ರೈತಪರ, ಅಭಿವೃದ್ಧಿಪರ ಎಂದೇ ಬೊಬ್ಬಿರಿಯುತ್ತಿದ್ದ ಕಾಮ್ರೇಡ್‌ಗಳಿಗೆ ಒದಗಿದ ಈ ಮುಖಭಂಗದ ಬಗ್ಗೆ ವಿಶ್ಲೇಷಣೆ ಮಾಡಿಕೊಳ್ಳಲು ಇದು ಸಕಾಲ.

ಕೇರಳ: ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟವನ್ನು ಜನತೆ ಸಾರಸಗಟಾಗಿ ತಿರಸ್ಕರಿಸುವ ಮೂಲಕ ಸೋಮವಾರ ಮೂರನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಕೇರಳ ಸರ್ಕಾರಕ್ಕೆ ರಾಜ್ಯದ ಮತದಾರ ಒಳ್ಳೆಯ ಹುಟ್ಟುಹಬ್ಬದ ಕೊಡುಗೆಯನ್ನೇ ನೀಡಿದ್ದಾನೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

20ಲೋಕಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ 16ಸೀಟಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಆಡಳಿತಾರೂಢ ಎಲ್‌ಡಿಎಫ್ ಕೇವಲ 4ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. 2004ರ ಚುನಾವಣೆಯಲ್ಲಿ 19ಕಡೆ ಎಲ್‌ಡಿಎಫ್ ಜಯಭೇರಿ ಬಾರಿಸಿತ್ತು, ಯುಡಿಎಫ್ ಒಂದು ಕಡೆ ಮಾತ್ರ ವಿಜಯ ಸಾಧಿಸಿತ್ತು.! ಅಲ್ಲದೇ ಈ ಬಾರಿ ಸಿಪಿಎಂನ ಭದ್ರಕೋಟೆಗಳಾದ ಕಣ್ಣೂರು ಮತ್ತು ವಡಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ಸ್ವತಃ ಕಾಮ್ರೇಡ್‌ಗಳನ್ನು ಚಿಂತೆಯ ಮಡಿಲಿಗೆ ದೂಡಿದೆ.!

PTI
ಕಲ್ಯಾಣ್ ಸಿಂಗ್‌ ಸಖ್ಯಕ್ಕೆ ಬೆಲೆ ತೆತ್ತ ಮುಲಾಯಂ: ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಫಲಶ್ರುತಿಯನ್ನು ಅರಗಿಸಿಕೊಳ್ಳುವುದು ಎಸ್‌ಪಿಯ ನೇತಾಜಿ ಮುಲಾಯಂ ಸಿಂಗ್‌ರಿಗೆ ಕಷ್ಟವಾಗುತ್ತದೆ ಎಂಬ ಮಾತುಗಳು ಇದೀಗ ನಿಜವಾಗಿ ಪರಿಣಮಿಸಿದೆ. ದೇಶದ ಪ್ರಧಾನಿಗಳನ್ನು ರೂಪಿಸುವ ರಂಗಸ್ಥಳ ಎಂದೇ ಹೆಸರಾದ ಉತ್ತರ ಪ್ರದೇಶದಲ್ಲಿ ಬಿಎಸ್ಪಿಯ ಪ್ರಭಾವ ತಗ್ಗಿಸುವ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ತಮ್ಮೆಡೆಗೆ ಸೆಳೆಯುವ ಉದ್ದೇಶದಿಂದ ಮುಲಾಯಂ ಸಿಂಗ್ ಅವರು ಕಲ್ಯಾಣ್ ಅವರನ್ನು ತಮ್ಮತ್ತ ಸೆಳೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು. ಆದರೆ ಬಾಬ್ರಿ ಮಸೀದಿ ಧ್ವಂಸ ಕಳಂಕ ಹೊತ್ತ ಕಲ್ಯಾಣ್‌ರನ್ನು ಅಪ್ಪಿಕೊಳ್ಳುವ ಭರದಲ್ಲಿ ತಮ್ಮದೇ ಪಕ್ಷದ ಮುಖಂಡರಾದ ಅಜಂಖಾನ್ ಅವರ ಬಂಡಾಯವನ್ನು ಎದುರು ಹಾಕಿಕೊಂಡರು. ಅದರ ಪರಿಣಾಮ ಪಕ್ಷ ಕಳೆದ ಬಾರಿಗಿಂತ ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂಬುದು ರಾಜಕೀಯ ಪರಿಣತರ ಲೆಕ್ಕಾಚಾರ.