ಲೋಕಸಭೆಗೆ ರಾಜ್ಯದಲ್ಲಿ ಅತಿ ಹೆಚ್ಚು ಮತಗಳ (2.91ಲಕ್ಷ) ಅಂತರದಿಂದ ವಿಜಯಿಯಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಅದೇಕೋ ಏನೋ ನೀರಸ ಮೌನ ಮಡುಗಟ್ಟಿತ್ತು.
ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಿರುವ ವಿಷಯ ತಿಳಿದು ಪಕ್ಷದ ಕಾರ್ಯಕರ್ತರು, ಜನರು ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಹೋದರೆ ಮಾಜಿ ಪ್ರಧಾನಿ ಮಾತ್ರ ಅನಾರೋಗ್ಯದ ಕಾರಣ ಹೇಳಿ ಯಾರಿಗೂ ಸಿಗಲಿಲ್ಲ. ಮನೆಯಿಂದ ಹೊರ ಬರಲೂ ಇಲ್ಲ. ಅವರಿಗೆ ಹುಷಾರಿಲ್ಲ. ಯಾರ ಭೇಟಿಗೂ ಸಿಗುತ್ತಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಕಾರ್ಯಕರ್ತರು ಅಲ್ಲಿಂದ ವಾಪಸಾಗಿದ್ದರು.
ತುಮಕೂರಿನ ದಾಬಸ್‌ಪೇಟೆಯಲ್ಲಿ ತೃತೀಯ ರಂಗಕ್ಕೆ ಚಾಲನೆ ನೀಡಿದ್ದ ಗೌಡರು, ತಮ್ಮ ಸಹಾಯವಿಲ್ಲದೆ ಕೇಂದ್ರದಲ್ಲಿ ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದರು. ಆದರೆ ಲೋಕಸಭೆ ಚುನಾವಣೆ ಫಲಿತಾಂಶ ಅವರ ಉಮೇದಿಗೆ ತಣ್ಣೀರು ಎರಚಿದೆ. ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿರುವ ಯುಪಿಎ ಸರಳ ಬಹುಮತದತ್ತ ದಾಪುಗಾಲು ಹಾಕಿರುವುದೇ ಗೌಡರ ಮೌನಕ್ಕೆ ಕಾರಣ.
ಯುಪಿಎ ಕಡಿಮೆ ಸ್ಥಾನ ಗಳಿಸಿದರೆ ರಾಜಕೀಯ ಮಾಡಬಹುದೆಂಬ ಗೌಡರ ಲೆಕ್ಕಾಚಾರ ತಲೆ ಕೆಳಗಾಗಿರುವುದು ಗೌಡರಿಗೆ ಬೇಸರ ತಂದಿದೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು.