ಚುನಾವಣೆ ಎದುರಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಜತೆಗೆ ಇದ್ದ ಮಿತ್ರ ಪಕ್ಷಗಳು ಮಾತ್ರ ನೂತನ ಸರ್ಕಾರದಲ್ಲಿ ಸ್ಥಾನ ಪಡೆಯಲಿವೆ ಎಂಬ ಸುಳಿವನ್ನು ಕಾಂಗ್ರೆಸ್ ಹೊರಗೆಡಹಿದ್ದು, ಇದರಿಂದಾಗಿ ಮತ್ತೊಮ್ಮೆ ಸಚಿವರಾಗಲು ಸಿದ್ಧತೆ ನಡೆಸಿದ್ದ ಲಾಲೂ ಪ್ರಸಾದ್ ಯಾದವ್ ಹಾಗೂ ಇತರ ಕೆಲವು ನಾಯಕರ ಕನಸು ಭಗ್ನಗೊಳ್ಳುವ ಸಾಧ್ಯತೆ ಇದೆ. ಇದಲ್ಲದೆ, ಒಂದು ಕೈ ನೋಡಲು ಮುಂದಾಗಿದ್ದ ಆರ್‌ಜೆಡಿ, ಎಸ್ಪಿ, ಜೆಡಿಎಸ್ ಸಹಿತ ಹಲವು ಪಕ್ಷಗಳೂ ಸಹ ನಿರಾಸೆ ಅನುಭವಿಸಬೇಕಾಗಿದೆ.
ಯುಪಿಎ ಸರ್ಕಾರದಲ್ಲಿ ಕೈಜೋಡಿಸಲು ಸಿದ್ಧ ಎಂದು ಸಮಾಜವಾದಿ ಪಕ್ಷದ ಕಾರ್ಯದರ್ಶಿ ಅಮರ್ ಸಿಂಗ್, ಜೆಡಿಎಸ್ ನಾಯಕ ಡ್ಯಾನಿಷ್ ಅಲಿ ಮತ್ತು ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಅವರು ಇಂಗಿತ ವ್ಯಕ್ತ ಪಡಿಸಿದ ಬೆನ್ನಲ್ಲೇ ಭಾನುವಾರ ಸಂಜೆ ನಡೆದ ಸಿಡಬ್ಲ್ಯು ಸಿ ಸಭೆಯಲ್ಲಿ, ಚುನಾವಣೆ ವೇಳೆ ಜತೆಗಿದ್ದವರನ್ನು ಮಾತ್ರ ಸರ್ಕಾರದಲ್ಲಿ ಸೇರಿಸಿಕೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಯುಪಿಎ ಮೈತ್ರಿ ಕೂಟವು 262 ಸ್ಥಾನಗಳನ್ನು ಗಳಿಸಿದ್ದು, ಇನ್ನು ಅದಕ್ಕೆ ಬೇಕಿರುವುದು ಕೇವಲ 10 ಸ್ಥಾನಗಳು ಮಾತ್ರ.
ಈ ಮಧ್ಯೆ ಮೊದಲಿನಿಂದಲೂ ಕಾಂಗ್ರೆಸ್ ಜತೆಗೇ ಇದ್ದ ಡಿಎಂಕೆ, ತನಗೆ ಸಂಪುಟದಲ್ಲಿ ಕನಿಷ್ಠ ಏಳು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಪಟ್ಟು ಹಿಡಿದಿದೆ ಎನ್ನಲಾಗುತ್ತಿದೆ.
ಕರುಣಾನಿಧಿ ಪುತ್ರಿ ಕನಿಮೋಳಿ, ಪುತ್ರ ಅಳಗಿರಿ ಹಾಗೂ ದಯಾನಿಧಿ ಮಾರನ್ ಅವರಿಗೆ ಸಂಪುಟ ಸ್ಥಾನ ನೀಡಲೇ ಬೇಕು ಎಂದು ಡಿಎಂಕೆ ನಾಯಕರು ಒತ್ತಾಯಿಸುತ್ತಿದ್ದು, ಅವರು ಸೋಮವಾರ ಸೋನಿಯಾರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.