ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಕಾಂಗ್ರೆಸ್‌‌ಗೆ ನೆರವಾಗದ 'ಜೆಡಿಎಸ್ ಸಾಥ್'
ಮತಸಮರ
15ನೇ ಲೋಕಸಭಾ ಚುನಾವಣೆಯ ಹಣಾಹಣಿಯ ಸಂದರ್ಭದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರ ಇಡುವ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯದಲ್ಲಿ ಕಾಂಗ್ರೆಸ್ ಜತೆ ರಹಸ್ಯ ಒಪ್ಪಂದ ಮಾಡಿಕೊಳ್ಳುವ ಮೂಲಕ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಪರೋಕ್ಷವಾಗಿ ಬೆಂಬಲ ನೀಡಿತ್ತು. ಆದರೂ ಮತದಾರ ಪ್ರಭು ಮಾತ್ರ ಬಿಜೆಪಿ ಕೈ ಹಿಡಿದಿರುವುದು ಫಲಿತಾಂಶದ ಬಳಿಕ ಸ್ಪಷ್ಟವಾಯಿತು.

28ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಕಾಂಗ್ರೆಸ್‌ಗೆ ಅನುಕೂಲವಾಗಲು ವೇದಿಕೆ ನಿರ್ಮಾಣ ಮಾಡಿಕೊಟ್ಟಿತ್ತು. ಆದರೆ ಗೌಡರ ಲೆಕ್ಕಚಾರ ತಲೆಕೆಳಗಾಗಿದ್ದು, ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗು ಬೀರಿತ್ತು.

ರಾಜ್ಯದ ಪ್ರಮುಖ ಕ್ಷೇತ್ರಗಳಾದ ಬಳ್ಳಾರಿ, ಶಿವಮೊಗ್ಗ, ಚಿಕ್ಕೋಡಿ, ಧಾರವಾಡ, ಬಾಗಲಕೋಟೆ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸದೆ ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು.

ಜೆಡಿಎಸ್ ಆ ಮಟ್ಟಿಗೆ ಸಾಥ್ ನೀಡಿದರೂ ಕೂಡ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಆದರೆ ಬಳ್ಳಾರಿ ಮತ್ತು ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಲ್ಪ ಪ್ರಮಾಣದ ಅಂತರದಿಂದ ಸೋಲನ್ನನುಭವಿಸಿದ್ದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರು ಕಾಂಗ್ರೆಸ್‌ನ ಎನ್.ವೈ.ಹನುಮಂತಪ್ಪ ಅವರನ್ನು ಕೇವಲ 2,243ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರು ಕಾಂಗ್ರೆಸ್‌ನ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು 2,043ಮತಗಳ ಅಂತರದಿಂದ ಸೋಲಿಸುವ ಮೂಲಕ ಜಯ ಪಡೆದರು.

ಅದೇ ರೀತಿ ಜನತಾದಳ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಚಿತ್ರದುರ್ಗ, ಕೊಪ್ಪಳ, ತುಮಕೂರು ಹಾಗೂ ಉತ್ತರ ಕನ್ನಡ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲವಾಗಿತ್ತು. ಇಷ್ಟೆಲ್ಲಾ ಕಸರತ್ತು ನಡೆಸಿದರೂ ಕೂಡ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಕೇವಲ ಆರು ಸ್ಥಾನ, ಜೆಡಿಎಸ್ 3ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.