ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಯುಪಿಎ ಬೆಂಬಲಕ್ಕೆ ನಾಮುಂದು ತಾಮುಂದು!
ಮತಸಮರ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಇದೀಗ ಉತ್ತರ ಪ್ರದೇಶದ ಬದ್ಧ ವಿರೋಧಿ ಪಕ್ಷಗಳೆರಡೂ ನಾಮುಂದು-ತಾಮುಂದು ಎಂದು ಎಡತಾಕತೊಡಗಿವೆ. ಬಿಎಸ್ಪಿಯ 21 ಸಂಸದರ ಬಲವುಳ್ಳ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಹಾಗೂ ಮಾಜಿ ಮುಖ್ಯಮಂತ್ರಿ, 23 ಸಂಸದರ ಬಲವುಳ್ಳ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ನಾವು ಬೆಂಬಲ ನೀಡುತ್ತೇವೆ ಎಂದು ಘೋಷಿಸಿದ್ದಾರೆ.

ಮತ್ತೊಂದೆಡೆಯಿಂದ ನಾವೂ ಬೆಂಬಲ ನೀಡುವುದಾಗಿ ರಾಷ್ಟ್ರೀಯ ಜನತಾ ದಳ (4 ಸ್ಥಾನ) ಹಾಗೂ ಜನತಾ ದಳ (ಎಸ್) (3 ಸ್ಥಾನ)ಗಳು ಮುಂದಾಗಿದ್ದು, ತೃತೀಯ ಮತ್ತು ಚತುರ್ಥ ರಂಗಗಳಿಗೆ ಬಹುತೇಕ ಎಳ್ಳು ನೀರು ಬಿಟ್ಟಂತಾಗಿದೆ.

ಆಯಾ ರಾಜ್ಯಗಳಿಗೆ ತನ್ನ ಬದ್ಧ ವೈರಿ ಪಕ್ಷಗಳಾಗಿರುವ ಈ ರಾಜಕೀಯ ಪಕ್ಷಗಳ ಬೆಂಬಲ ತೆಗೆದುಕೊಳ್ಳುವ ಕುರಿತಾಗಿ ಯುಪಿಎಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

543 ಸದಸ್ಯ ಬಲವಿರುವ ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ 272ರನ್ನು ತಲುಪಲು ಯುಪಿಎಗೆ ಇನ್ನೂ 10 ಸ್ಥಾನಗಳ ಅಗತ್ಯವಿದೆ.

ಬಿಎಸ್ಪಿ ನಿರ್ಧಾರ: ಪಕ್ಷದ ನಾಯಕರ ಸಭೆಯಲ್ಲಿ ಈ ಕುರಿತು ಬಿಎಸ್ಪಿ ನಿರ್ಧಾರ ಕೈಗೊಂಡಿದೆ. ಚುನಾವಣಾ ಫಲಿತಾಂಶಗಳು ಹೊರ ಬಿದ್ದ ದಿವಸ ತಾನು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರುಗಳನ್ನು ಅಭಿನಂದಿಸಿರುವುದಾಗಿ ಮಾಯಾವತಿ ತಿಳಿಸಿದ್ದಾರೆ.

ಭಾನುವಾರ ಸಂಜೆ ತನ್ನನ್ನು ಸಂಪರ್ಕಿಸಿರುವ ಪ್ರಧಾನಿಯವರು ಜಾತ್ಯತೀತ ಶಕ್ತಿಗಳನ್ನು ಬಲಪಡಿಸಲು ಸಕಾರಾತ್ಮಕ ಮನೋಭಾವ ಹೊಂದಬೇಕೆಂದು ನುಡಿದರೆಂದು ಅವರು ಹೇಳಿದ್ದಾರೆ.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ಮಂಗಳವಾರ ಮುಂಜಾನೆ ಸಭೆ ಸೇರಿದ್ದು ಚರ್ಚಿಸಿದ ಬಳಿಕ ನೂತನ ಸರ್ಕಾರಕ್ಕೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು.

ಸಮಾಜವಾದಿಗಳಿಂದಲೂ ಬೆಂಬಲ
ಈ ಮಧ್ಯೆ ಯುಪಿಎ ಸರ್ಕಾರ ಸೇರುವ ಇಂಗಿತ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷವು ತನ್ನ ಬೆಂಬಲವನ್ನು ಘೋಷಿಸಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಿ ಸರ್ಕಾರಕ್ಕೆ ಲಿಖಿತ ಬೆಂಬಲ ಘೋಷಿಸುವುದಾಗಿ ಪಕ್ಷದ ನಾಯಕ ಅಮರ್ ಸಿಂಗ್ ಹೇಳಿದ್ದಾರೆ.

ಮಾಯಾವತಿಯವರ ಬಿಎಸ್ಪಿಗೆ ಅವಕಾಶವಾದಿ ರಾಜಕಾರಣದ ತಪ್ಪು ಭಾವನೆ ಉಂಟಾಗಿದೆ. ಹೀಗಾಗಿ ಅದು ಯುಪಿಎ ಬೆಂಬಲಿಸಲು ಮುಂದಾಗಿದೆ ಎಂಬುದು ಕಾಂಗ್ರೆಸ್ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಿದ್ದ ಎಸ್ಪಿ ಮುಖಂಡ ಅಮರ್ ಸಿಂಗ್ ಹೇಳಿಕೆ.

ಉತ್ತರ ಪ್ರದೇಶದಲ್ಲಿ ಹಲವಾರು ಹಗರಣಗಳಿಗಾಗಿ ಸಿಬಿಐ ಕರಿಛಾಯೆಯಡಿ ನಲುಗುತ್ತಿರುವ ಈ ಎರಡೂ ಪಕ್ಷಗಳು, ಕೇಂದ್ರ ಸರಕಾರದಲ್ಲಿ ಪ್ರತಿಸ್ಪರ್ಧಿ ಪಕ್ಷ ಮಾತ್ರವೇ ಮೇಲುಗೈ ಸಾಧಿಸದಂತೆ, ಆ ಮೂಲಕ ತಾನು ರಾಜಕೀಯ ದ್ವೇಷದ 'ಬೇಟೆ'ಗೆ ಈಡಾಗದಂತಾಗಲು ಈ ನಿರ್ಣಯ ಕೈಗೊಂಡಿವೆ ಎಂದು ಹೇಳಲಾಗುತ್ತಿದೆ.