ರಾಜ್ಯ ಸರ್ಕಾರವನ್ನು ಅತಂತ್ರಗೊಳಿಸುವುದು ಪ್ರತಿಪಕ್ಷಗಳ ಹಗಲುಕನಸು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.
ರಾಜ್ಯದ ಜನತೆ ಬಿಜೆಪಿಗೆ ಜನಾದೇಶ ನೀಡಿದ್ದಾರೆ. ಸರ್ಕಾರ ಸುಭದ್ರವಾಗಿದ್ದು, ಉತ್ತಮ ಕೆಲಸ ಮಾಡುತ್ತಿದೆ. ಸರ್ಕಾರದ ಕೈ ಬಲಪಡಿಸುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಆಶೀರ್ವದಿಸಿದ್ದಾರೆ. ಒಂದು ವೇಳೆ ಸರ್ಕಾರ ಅಸ್ಥಿರಗೊಳಿಸಲು ಪ್ರತಿಪಕ್ಷಗಳು ಮುಂದಾದರೆ, ಜನರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಈ ಹಿಂದೆ ಪಕ್ಷ ಹೇಳಿತ್ತು. ಕುಮಾರಸ್ವಾಮಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವುದನ್ನು ನೋಡಿದರೆ, ಈ ಒಳ ಒಪ್ಪಂದಕ್ಕೆ ವಿಶೇಷ ಅರ್ಥ ಬರುತ್ತದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ದಿ ವಿಚಾರದಲ್ಲಿ ತಾರತಮ್ಯ ಮಾಡಿದ್ದಕ್ಕೆ, ರಾಜ್ಯದಲ್ಲಿ ಕಾಂಗ್ರೆಸ್ ಎರಡು ಸೀಟು ಕಳೆದುಕೊಳ್ಳಬೇಕಾಯಿತು. ಮುಂದೆಯಾದರೂ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು. ಈ ಬಾರಿ ಕಾಂಗ್ರೆಸ್‌ನಿಂದ ಹಿರಿಯರು ಗೆದ್ದಿದ್ದು, ಅವರು ದೆಹಲಿಯಲ್ಲಿ ಹಿರಿತನಕ್ಕೆ ತಕ್ಕಂತೆ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು.
ಬೆಳಗಾವಿ, ಕಾವೇರಿ, ಹೊಗೇನಕಲ್ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯದ ಎಲ್ಲ ಸಂಸದರು ಒಟ್ಟಾಗಿಯೇ ಶ್ರಮಿಸಲಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರು ಈ ವಿಚಾರದಲ್ಲಿ ಸಹಕರಿಸುವ ವಿಶ್ವಾಸವಿದೆ ಎಂದರು.