ಚುನಾವಣೆ ವೇಳೆಗೆ ಕಾಂಗ್ರೆಸ್ಸನ್ನು ಬದಿಗಿರಿಸಿದ್ದ ಯುಪಿಎಯ ಹಳೆಯ ಮಿತ್ರರೆಲ್ಲ ಮೂಲೆಗೆ ಸರಿಯುತ್ತಿದ್ದರೆ, ಇತ್ತ ಚುನಾವಣೆ ವೇಳೆಗೆ ಜತೆಗಿದ್ದವರಿಗೆ ಪಕ್ಷವು ಭಾರೀ ಮನ್ನಣೆ ನೀಡುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಅವರಿಗೆ ಕೋಲ್ಕತಾದಿಂದ ದೆಹಲಿಗೆ ಹಾರಿ ಬರಲು ಕಾಂಗ್ರೆಸ್ ವಿಶೇಷ ವಿಮಾನ ಒಂದನ್ನು ಗೊತ್ತು ಮಾಡಿದೆ.
ಮಮತಾ ಬ್ಯಾನರ್ಜಿ ಗುರುವಾರ ಬೆಳಿಗ್ಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಯುಪಿಎ ಸರ್ಕಾರದಲ್ಲಿ ಪಾಲ್ಗೊಳ್ಳುವ ಕುರಿತು ಚರ್ಚೆ ನಡೆಸಬೇಕಾಗಿದೆ. 19 ಸ್ಥಾನಗಳನ್ನು ಗೆದ್ದಿರುವ ತೃಣಮೂಲ ಕಾಂಗ್ರೆಸ್ ಕಾಂಗ್ರೆಸ್‌ನ ದೊಡ್ಡ ಮಿತ್ರಪಕ್ಷವಾಗಿದ್ದು ಕಳೆದ 30 ವರ್ಷಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಮಸುಕಾಗುವಂತೆ ಮಾಡಿದ್ದು, ಯುಪಿಎಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಮಮತಾ ಅವರು ಕೋಲ್ಕತಾದಲ್ಲಿ ಪ್ರಮುಖ ಸಭೆಯಲ್ಲಿ ಭಾಗವಹಿಸಲಿರುವ ಕಾರಣ ಕೋಲ್ಕತಾದಿಂದ ಹೊರಡುವ ವಿಮಾನದಲ್ಲಿ ಅವರಿಗೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಈ ವ್ಯವಸ್ಥೆ ಮಾಡಿದೆ.
ವಾಯುಸಾರಿಗೆ ನಿಯಂತ್ರಣ ಮೂಲಗಳ ಪ್ರಕಾರ 20 ಸೀಟುಗಳ ಸಿ-850 ವಿಮಾನವು ಸಾಯಂಕಾಲ ಕೋಲ್ಕತಾ ವಿಮಾನ ನಿಲ್ದಾಣದ ಕಾರ್ಗೋ ಪ್ರದೇಶದಲ್ಲಿ ಕಾಯುತ್ತಿರುತ್ತದೆ. ಬ್ಯಾನರ್ಜಿ ಅವರು ಟರ್ಮಿನಲ್‌ನ ವಿಐಪಿ ಗೇಟ್ ಏಳರ ಮೂಲಕ ವಿಮಾನ ಪ್ರವೇಶಿಸಲಿದ್ದಾರೆ.