ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಬಿಎಸ್ಪಿ-ಎಸ್ಪಿಎದ್ದುಬಿದ್ದು ಬೆಂಬಲ ನೀಡಲು ಕಾರಣವೇನು?
ಮತಸಮರ
ಇತ್ತೀಚೆಗೆ ಅಂತ್ಯಗೊಂಡ ಮಹಾ ಚುನಾವಣೆಯಲ್ಲಿ ಬಹುಮತ ಗಳಿಸಿ ಬೀಗುತ್ತಿರುವ ಯುಪಿಎಗೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಎದ್ದುಬಿದ್ದು ಓಡೋಡಿ ಬೆಂಬಲ ಘೋಷಿಸಲು ಮುಖ್ಯಕಾರಣ ಭಯ ಎನ್ನಲಾಗಿದೆ.

ರಾಜಕೀಯ ಪ್ರತ್ಯೇಕತೆಯ ಭಯ, ಪರಸ್ಪರರ ಮೇಲಿನ ಭಯ, ಬೆಂಬಲ ನೆಲೆಗಳನ್ನು ಕಳೆದುಕೊಳ್ಳುವ ಭಯ, ತಮ್ಮ ವಿರುದ್ಧವಿರುವ ಸಿಬಿಐ ಪ್ರಕರಣಗಳ ಭಯ - ಈ ಎಲ್ಲ ಭಯಗಳು ಯುಪಿಎ ಅಭಯಕ್ಕಾಗಿ ಈ ಎರಡು ಪಕ್ಷಗಳು ಧಾವಿಸಲು ಕಾರಣವೆನ್ನಲಾಗಿದೆ. ಅದಕ್ಕಾಗಿ ಕಾಂಗ್ರೆಸ್‌ನೊಂದಿಗೆ ತಮಗೆ ಭಿನ್ನಮತ ಇದೆ ಎಂದು ಈ ಪಕ್ಷಗಳು ಹೇಳುತ್ತಲೇ, 'ಸೀಟು ಸಿಕ್ಕದಿದ್ದರೂ ರೈಲು ಏರಲು' ಕಾರಣ.

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ಎರಡೂ ಪಕ್ಷಗಳು ಆತ್ಮವಿಶ್ವಾಸದಿಂದ ಬೀಗುತ್ತಿದ್ದವು. ಬಿಎಸ್ಪಿಯ ತೃತೀಯ ರಂಗ ಹಾಗೂ ಎಸ್ಪಿಯ ಚತುರ್ಥ ರಂಗಗಳು ತಾವು ಕಿಂಗ್ ಮೇಕರ್‌ಗಳು ಎಂದು ಹೇಳಿಕೊಂಡಿದ್ದವು. ಮತದಾರ ತೃತೀಯ ರಂಗವನ್ನು ಬದಿಗಿಟ್ಟಿದ್ದರೆ, ಚತುರ್ಥ ರಂಗ ರಾಜಕೀಯ ಬಿಸಿಯಲ್ಲಿ ಸಂಪೂರ್ಣ ಕರಗಿಯೇ ಹೋಗಿದೆ. ಹೀಗಾಗಿ ಉತ್ತರ ಪ್ರದೇಶದ ಈ ಎರಡು ಪಕ್ಷಗಳು ಇದೀಗ ಒಂಟಿಗಳಾಗಿ ಹೋಗಿವೆ. ಇವುಗಳು ಎನ್‌ಡಿಎಯತ್ತ ಸರಿಯುವಂತಿಲ್ಲ, ಇದು ಅವರ ಜಾತ್ಯತೀತ ಇಮೇಜಿಗೆ ಧಕ್ಕೆಯುಂಟು ಮಾಡುತ್ತದೆ. ಅಲ್ಲದೆ ಮುಸ್ಲಿಂ ಮತಬ್ಯಾಂಕನ್ನು ಮತ್ತಷ್ಟು ಒಡೆಯಬಹುದಾಗಿದೆ.

ಇದಲ್ಲದೆ ಎಸ್ಪಿ ಮತ್ತು ಬಿಎಸ್ಪಿಗಳಿಗಿರುವ ಅತಿದೊಡ್ಡ ಭಯ ಪರಸ್ಪರರದ್ದೇ ಆಗಿದೆ. ಮಾಯವತಿ ಬೆಂಬಲ ಘೋಷಿಸಿರುವ ಕಾರಣಕ್ಕೇ ಕಾಂಗ್ರೆಸ್‌ಗೆ ಇಷ್ಟವಿಲ್ಲದಿದ್ದರೂ ಎಸ್ಪಿ ಸಹ ಬೆಂಬಲ ಘೋಷಿಸಿದೆ. "ನಾವು ಯುಪಿಎಗೆ ಬೆಂಬಲ ನೀಡಿರದೇ ಇರುತ್ತಿದ್ದಲ್ಲಿ, ಉತ್ತರ ಪ್ರದೇಶದಲ್ಲಿ ನಮ್ಮನ್ನು ಮಾಯಾವತಿ ಹರಿದುಮುಕ್ಕುತ್ತಿದ್ದರು" ಎಂಬುದಾಗಿ ಹಿರಿಯ ಸಮಾಜವಾದಿ ನಾಯಕರು ಹೇಳುತ್ತಾರೆ.

ಬಿಎಸ್ಪಿಗೆ ತನ್ನ ಬದ್ಧ ವೈರಿ ಎಸ್ಪಿ ಯುಪಿಎಯಲ್ಲಿ ಇರುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಇಬ್ಬಿಬ್ಬರು (ಕಾಂಗ್ರೆಸ್ ಹಾಗೂ ಎಸ್ಪಿ) ವೈರಿಗಳನ್ನು ನಿಭಾಯಿಸುವ ಬದಲು ಒಬ್ಬ ವೈರಿ ಜತೆ ಸೇರಿಕೊಳ್ಳುವುದೇ ಮೇಲೆಂದು ಬಿಎಸ್ಪಿ ಭಾವಿಸಿದೆ. ಹಾಗಾಗಿ ಒಂದು ಹಂತದ ಮಟ್ಟಿಗೆ ಎಸ್ಪಿಯ ಬೆಂಬಲವನ್ನು ತಟಸ್ಥಗೊಳಿಸಲು ಅದಕ್ಕಿದ್ದ ಒಂದೇ ಆಯ್ಕೆ ಎಂದರೆ ಯುಪಿಎಗೆ ಬೆಂಬಲ ನೀಡುವುದು.

ಮೂರನೆಯ ಅಂಶವೆಂದರೆ, ಎಸ್ಪಿ ಮತ್ತು ಬಿಎಸ್ಪಿಗಳು ಇನ್ನಷ್ಟು ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವುದು. ಇದೀಗಾಗಲೇ ಈ ಎರಡು ಪಕ್ಷಗಳು ಮುಸ್ಲಿಮರ ವಿಶ್ವಾಸ ಕಳೆದುಕೊಂಡಿದ್ದು, ಆ ಮತಗಳೆಲ್ಲ ಕಾಂಗ್ರೆಸ್ ಪಾಲಾಗಿದೆ. ಇದು ಇನ್ನಷ್ಟು ಕುಸಿದರೆ ಅವುಗಳ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಯುಪಿಎ ಬಿಟ್ಟು ಎನ್‌ಡಿಎಯತ್ತ ಸಾಗಿದರೆ ಅವುಗಳ ಜಾತ್ಯತೀತ ಇಮೇಜ್ ಹಾಳಾಗಿ ಪಕ್ಷವು ಗಂಡಾಂತರಕ್ಕೆ ಸಿಲುಕುತ್ತದೆ.

ಎಸ್ಪಿ ಹಾಗೂ ಬಿಎಸ್ಪಿಗಳ ವರಿಷ್ಠರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಮಾಯವತಿ ಅವರಿಬ್ಬರುಗಳೂ ಸಿಬಿಐ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಪ್ರಕರಣಗಳನ್ನು ಎದುರಿಸುತ್ತಿರುವ ಕಾರಣ ಸಿಬಿಐ ತನ್ನ ಕುಣಿಕೆ ಬಿಗಿಗೊಳಿಸಿದರೆ, ಅದು ಈ ನಾಯಕರ ರಾಜಕೀಯ ಭವಿಷ್ಯಕ್ಕೆ ಆಪತ್ತುಂಟುಮಾಡುತ್ತದೆ. ಇದೀಗ ಬೆಂಬಲ ನೀಡಿದರೆ ತಮ್ಮನ್ನು ತಾವು ಬಚಾವ್ ಮಾಡಿಕೊಂಡು ಮತ್ತಷ್ಟು ಅವಮಾನ ಹಾಗೂ ಕಿರುಕುಳಗಳನ್ನು ತಪ್ಪಿಸಿಕೊಳ್ಳಬಹುದು ಎಂಬುದು ಅತಿದೊಡ್ಡ ಲೆಕ್ಕಾಚಾರವಾಗಿದೆ.

ಆದರೆ ಇವುಗಳ ಸಹವಾಸ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಮತ್ತು ಇದು ಅತಿಯಾದರೆ ಉತ್ತರ ಪ್ರದೇಶದಲ್ಲಿ ಗಳಿಸಿದ್ದನ್ನು ಕಳೆದುಕೊಳ್ಳಬೇಕಾದೀತು ಎಂಬ ಸ್ಪಷ್ಟ ಅರಿವು ಕಾಂಗ್ರೆಸ್‌ಗೆ ಇದ್ದು, ಈ ಎರಡೂ ಪಕ್ಷಗಳಿಂದಲೂ ಅದು ಅತ್ಯಂತ ಸುರಕ್ಷಿತವಾದ ಅಂತರವನ್ನು ಕಾಯ್ದುಕೊಂಡಿದೆ. ಈ ಎರಡು ಪಕ್ಷಗಳನ್ನು ಉತ್ತರಪ್ರದೇಶದಲ್ಲಿ ವಿರೋಧಿಸಿದರೆ ಮಾತ್ರ ಕಾಂಗ್ರೆಸ್ ಅಭ್ಯುದಯ ಸಾಧ್ಯ ಎಂಬುದು ನಮಗೆ ಗೊತ್ತಿದ್ದು, ನಾವು ಅದನ್ನೇ ಮೂಡುತ್ತಿದ್ದೇವೆ ಎಂಬುದಾಗಿ ಹಿರಿಯ ಎಐಸಿಸಿ ನಾಯಕ ಹೇಳುತ್ತಾರೆ.