ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ವರುಣ್‌‌ಗೆ ಮೆತ್ತಿಕೊಂಡ ಮತ್ತೊಂದು ವಿವಾದ
ಮತಸಮರ
ಭಾರತೀಯ ಜನತಾಪಕ್ಷದ ಪೋಸ್ಟರ್ ಬಾಯ್ ವರುಣ್ ಗಾಂಧಿಗೂ ವಿವಾದಗಳಿಗೂ ಅದ್ಯಾಕೋ ಸಮೀಪದ ನಂಟು. ಮುಸ್ಲಿಮ್ ವಿರೋಧಿ ಭಾಷಣ ಮಾಡಿ ರಾಷ್ಟ್ರಾದ್ಯಂತ 'ಮಿಂಚಿದ' ವರುಣ್ ಇದೀಗ ಪತ್ರಕರ್ತರೊಂದಿಗೆ ರಾದ್ಧಾಂತ ಮಾಡಿಕೊಂಡಿರುವ ಕುರಿತು ವರದಿ ಇದೆ.

ವರುಣ್ ಗಾಂಧಿ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿರುವ ಉತ್ತರಪ್ರದೇಶದ ಪತ್ರಕರ್ತರ ತಂಡ ಒಂದು, ಆತ ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸೂಕ್ತ ಭದ್ರತೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದೆ.

ವಿವಿಧ ಮಾಧ್ಯಮಗಳಿಗೆ ಸೇರಿದ ಸುಮಾರು 30 ಪತ್ರಕರ್ತರ ತಂಡವು ಜಿಲ್ಲಾಧಿಕಾರಿಗಳಿಗೆ ಈ ದೂರು ನೀಡಿದೆ.
"ವರುಣ್ ಗಾಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವೇಳೆ ತಮಗೆ ಸೂಕ್ತ ಭದ್ರತೆ ಒದಗಿಸಬೇಕು ಎಂಬುದಾಗಿ ನಾವು ಜಿಲ್ಲಾಡಳಿತವನ್ನು ಕೋರಿದ್ದೇವೆ" ಎಂದು ಪಿಲಿಭಿತ್ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಮೇ 19ರಂದು ಕೆಲವು ಪತ್ರಕರ್ತರು ವರುಣ್ ಗಾಂಧಿ ಅವರೊಂದಿಗೆ ರಾಜ್ಯದಲ್ಲಿ ಬಿಜೆಪಿಯ ಕಳಪೆ ಪ್ರದರ್ಶನದ ಕುರಿತು ಅಭಿಪ್ರಾಯ ಯಾಚಿಸಿದ ವೇಳೆ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ದೂರಿನಲ್ಲಿ ಹೇಳಲಾಗಿದೆ.

ಪತ್ರಕರ್ತರ ಮೇಲೆ ಸಿಟ್ಟಿಗೆದ್ದ ವರುಣ್, ತನ್ನ ಭದ್ರತಾ ಸಿಬ್ಬಂದಿಗಳೊಂದಿಗೆ ಕೆಲವು ಟಿವಿ ವಾಹನಿಯ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರಲ್ಲದೆ, ಅವರ ಕ್ಯಾಮರಾವನ್ನು ಹಾನಿಗೊಳಿಸಿದರು ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಜಯ್ ಚೌವಾಣ್ ಅವರು ತಾನು ಮನವಿಯನ್ನು ಇನ್ನಷ್ಟೆ ಪಡೆಯಬೇಕಾಗಿದೆ ಎಂದು ನುಡಿದರು. ವರುಣ್ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವಿಚಾರವನ್ನು ತಾನು ಸ್ಥಳೀಯ ಪತ್ರಿಕೆಗಳ ಮುಖಾಂತರ ತನ್ನ ಅರಿವಿಗೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಜಯ್ ನುಡಿದರು.