ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಬಿಎಸ್ಪಿಯನ್ನು ಶುಚಿಗೊಳಿಸಲು ಆರಂಭಿಸಿದ ಮಯಾ
ಮತಸಮರ
ಇದೀಗ ಮುಗಿದ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷವು ಅತ್ಯಂತ ಕಳಪೆ ಪ್ರದರ್ಶನ ತೋರಿರುವ ಕಾರಣ ಸಿಟ್ಟಿಗೆದ್ದಿರುವ ಪಕ್ಷದ ವರಿಷ್ಠೆ ಮಾಯಾವತಿ ಅವರು, ಪಕ್ಷದ ಹಲವು ಹಿರಿಯ ನಾಯಕರನ್ನು ಎಗಾದಿಗಾ ಉಚ್ಚಾಟನೆಗೊಳಿಸಿದ್ದಾರೆ. ಉಚ್ಚಾಟನೆಗೊಂಡವರಲ್ಲಿ ಮಾಜಿ ಶಾಸಕರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು ಸೇರಿದ್ದಾರೆ. ಇವರನ್ನೆಲ್ಲ ಶಿಸ್ತುಕ್ರಮದಂಗವಾಗಿ ಉಚ್ಚಾಟಿಸಲಾಗಿದೆ.

ಮಾಜಿ ಶಾಸಕರಾದ, ಮಲಿಕ್ ಮಸೂದ್, ಮಾಯಾ ಪ್ರಸಾದ್, ಶಿವಕಾಂತ್ ಓಜಾ, ಬುನಿಯಾದ್ ಅನ್ಸಾರಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಹೀರಾ ಠಾಕೂರ್ ಸೇರಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಹೀರಾ ಠಾಕೂರ್ ಅವರನ್ನು ಎರಡುಬಾರಿ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಗೊಳಿಸಲಾಗಿತ್ತು. ಅಚ್ಚರಿ ಎಂದರೆ ಇವರು ಮಾಯವತಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಇವರನ್ನು ಬುಧವಾರ ಪಕ್ಷದಿಂದ ಹೊರದಬ್ಬಲಾಗಿದೆ.

ಕಳೆದ ಚುನಾವಣೆಯಲ್ಲಿ ಕ್ಷೌರಿಕ(ನಾಯ್) ಸಮುದಾಯವನ್ನು ಪಕ್ಷದ ಪರವಾಗಿ ಒಲಿಸಿಕೊಳ್ಳುವ ಜವಾಬ್ದಾರಿಯನ್ನು ಠಾಕೂರ್ ಅವರಿಗೆ ನೀಡಲಾಗಿದ್ದು, ಇದರಲ್ಲಿ ಅವರು ಯಶಸ್ವಿಯಾಗದ ಕಾರಣ ಅವರಿಗೆ ಉಚ್ಚಾಟನೆಯ ಶಿಕ್ಷೆ ನೀಡಲಾಗಿದೆ.

ಮಾಜಿಶಾಸಕ ಮರಿಕ್ ಮಸೂದ್ ಅವರು ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರೆಂಬ ಕಾರಣಕ್ಕೆ ಅವರನ್ನು ಹೊರದಬ್ಬಲಾಗಿದೆ. ಇವರನ್ನು ಅಜಂಗಢ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ಇವರು ತಮ್ಮ ಅಭ್ಯರ್ಥಿತನವನ್ನು ಹಿಂತೆಗೆದುಕೊಂಡ ಕಾರಣ ಹಾಲಿ ಸಂಸದ ಅಕ್ಬರ್ ಅಹ್ಮದ್ ಡಂಪಿ ಅವರನ್ನು ಬಿಎಸ್ಪಿ ವತಿಯಿಂದ ಕಣಕ್ಕಿಳಿಸಲಾಗಿತ್ತು.

ಉಚ್ಚಾಟನೆಗೊಂಡವರಲ್ಲಿ ಹೆಚ್ಚಿನವರ ಮೇಲಿನ ಆಪಾದನೆ ಪಕ್ಷವಿರೋಧಿ ಚಟುವಟಿಕೆ. ಶಿವಕಾಂತ್ ಓಜಾ ಅವರು ಕೆಲವು ತಿಂಗಳ ಹಿಂದಷ್ಟೆ ತನ್ನ ಮಾತೃಪಕ್ಷ ಬಿಜೆಪಿ ತೊರೆದು ಬಿಎಸ್ಪಿ ಸೇರಿದ್ದರು.

ಕೆಲವೇ ದಿನಗಳೊಳಗೆ ಇನ್ನೂ ಕೆಲವು ತಲೆಗಳು ಉರುಳಲಿವೆ. ಇದಲ್ಲದೆ ಅಪರಾಧಿ ಹಿನ್ನೆಲೆ ಅಥವಾ ಕಳಂಕಿತರನ್ನು ಪಕ್ಷದಿಂದ ತೊಡೆದು ಹಾಕಲು ಮಾಯಾವತಿ ನಿರ್ದೇಶನ ನೀಡಿದ್ದಾರೆ. ಪ್ರಾಂತೀಯ ಸಂಯೋಜಕರ ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿದೆ.

ಹನ್ನೊಂದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕೆಲವು ಸಚಿವರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗಿದೆ.