ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
 
ಬೂಕನಕೆರೆ ಹುಡುಗ ಮುಖ್ಯಮಂತ್ರಿ ಗದ್ದುಗೆಯೆಡೆಗೆ ನಡಿಗೆ
WD
ನಾಗೇಂದ್ರ ತ್ರಾಸಿ

ರಾಜ್ಯ ರಾಜಕಾರಣದ ಬಿಕ್ಕಟ್ಟು ಪರಿಹಾರವಾಗಿ ಇದೀಗ ಬಿಜೆಪಿ - ಜೆಡಿಎಸ್ ಮೈತ್ರಿಕೂಟ ಸರಕಾರದ ಮೂಲಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಬಿ.ಎಸ್.ಯಡ್ಯೂರಪ್ಪನವರು ಸಿದ್ಧತೆಯಲ್ಲಿದ್ದಾರೆ.

ಇದರೊಂದಿಗೆ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆ ಏರುವ ಹೆಗ್ಗಳಿಕೆ ಒಂದೆಡೆಯಾದರೆ, ಅದಕ್ಕೆ ಕಾರಣರಾದ ಬಿಜೆಪಿಯ ಮುಖಂಡ ಬಿ.ಎಸ್. ಅವರ ವರ್ಚಸ್ಸು ಕೂಡ ಪಕ್ಷದಲ್ಲಿ ವರ್ಧನೆಯಾಗಿದೆ. ಕೆಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಅನಂತ ಕುಮಾರ್ ಹಾಗೂ ಬಿ.ಎಸ್. ನಡುವೆ ಶೀತಲ ಸಮರ ನಡೆಯುತ್ತಿತ್ತಾದರೂ, ಅಂತಿಮವಾಗಿ ಆಂತರಿಕ ಬಿಕ್ಕಟ್ಟುಗಳನ್ನು ಬದಿಗೊತ್ತಿ ಯಡ್ಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೇರುವಂತಾಗಿರುವುದು ಬಿಜೆಪಿಗೆ ದೊರೆತ ಜಯವಾಗಿದೆ.

ಬಿ.ಎಸ್. ಹೋರಾಟದ ಬದುಕು: ಹೋರಾಟ ಮನೋಭಾವದ ಬಿ.ಎಸ್.ಯಡ್ಯೂರಪ್ಪನವರು ಮೂಲತಃ ಮಂಡ್ಯ ಜಿಲ್ಲೆಯ ಬೂಕನಕೆರೆಯವರು. 1943 ಫೆಬ್ರವರಿ 27ರಂದು ಸಿದ್ದಲಿಂಗಪ್ಪ ಹಾಗೂ ಪುಟ್ಟಮ್ಮ ದಂಪತಿಗಳ ನಾಲ್ಕನೆ ಪುತ್ರರಾಗಿ ಜನಿಸಿದ್ದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೂಕನಕೆರೆಯಲ್ಲಿ ಪೂರೈಸಿದ್ದ ಅವರು, ನಂತರದಲ್ಲಿ ಭೂ ಮಸೂದೆ ಕಾಯ್ದೆ ಜಾರಿಗೊಂಡಾಗ ಅವರ ಕುಟುಂಬದ ಮೂರುವರೆ ಎಕರೆ ಜಾಗ ಒಕ್ಕಲುಗಳಿಗೆ ಪಾಲಾಗಿ, ಇಡೀ ಕುಟುಂಬವೇ ಬೀದಿ ಪಾಲಾಗಿತ್ತು. ಅಲ್ಲದೇ ಬಿ.ಎಸ್. 5ನೇ ವಯಸ್ಸಿನಲ್ಲೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು.

ಹೀಗೆ ಬದುಕಿನಲ್ಲಿ ಕಷ್ಟಗಳನ್ನು ಕಂಡ ಯಡ್ಯೂರಪ್ಪ, ದೊಡ್ಡಪ್ಪನವರ ಆಶ್ರಯದಲ್ಲಿ ಬೆಳೆದಿದ್ದರು. ಬಳಿಕ ಅವರು ಪ್ರೌಢಶಿಕ್ಷಣ, ಹಾಗೇ ಬಿ.ಎ. ಪದವಿ ಶಿಕ್ಷಣ ಪೂರೈಸಿದ ನಂತರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲೇ ವಾಸ್ತವ್ಯ ಹೂಡಿದ್ದರು.

ನಂತರ ಅವರು ಸಂಘಪರಿವಾರದ ವಲಯಕ್ಕೆ ಸೇರ್ಪಡೆಗೊಂಡಿದ್ದರು. 1972ರಲ್ಲಿ ಪ್ರಥಮವಾಗಿ ಅವರು ಶಿಕಾರಿಪುರದ ತಾಲೂಕಿನ ಜನಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. 1977ರಲ್ಲಿ ಜನತಾಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ 45 ದಿನಗಳ ಕಾಲ ಜೈಲುವಾಸ. 1985ರಲ್ಲಿ ಕಾಂಗ್ರೆಸ್‌ನ ಮಾದೇಗೌಡರನ್ನು ಸೋಲಿಸಿ, ಪ್ರಥಮ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದರು.

ನಂತರದಲ್ಲಿ ಅನೇಕ ಏಳುಬೀಳುಗಳ ನಡುವೆ ಯಡ್ಯೂರಪ್ಪನವರು ಹಿಂದಿರುಗಿ ನೋಡಲಿಲ್ಲ. ರಾಜಕೀಯವಾಗಿ ಮುನ್ನುಗ್ಗಿದ ಅವರು ಶಾಸಕರಾಗಿ, ಉಪಮುಖ್ಯಮಂತ್ರಿಯಾಗಿ, ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೆಯನ್ನು ಏರುತ್ತಿದ್ದಾರೆ. ಇಬ್ಬರು ಪುತ್ರರು, ಮೂವರು ಪುತ್ರಿಯರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರ ಪತ್ನಿ ಮೈತ್ರಾದೇವಿ ಶಿಕಾರಿಪುರದಲ್ಲಿ ಮನೆಯಲ್ಲಿನ ನೀರಿನ ಟ್ಯಾಂಕಿನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು.

ಬೂಕನಕೆರೆ ಸಂಭ್ರಮ: ಬಾಲ್ಯದ ಗೆಳೆಯ, ನಮ್ಮೂರಿನ ಹುಡುಗ ಹೀಗೆ ಅಭಿಮಾನ ಹೊಂದಿರುವ ಯಡ್ಯೂರಪ್ಪನವರ ತವರು ಬೂಕನಕೆರೆಯಲ್ಲಿ ಸಂಭ್ರಮವೋ, ಸಂಭ್ರಮ. ಶಾಸಕರಾಗಿ ಜನಾನುರಾಗಿಯಾಗಿದ್ದ ಯಡ್ಯೂರಪ್ಪನವರ ಹೋರಾಟ, ಜನಪರ ಕಾಳಜಿ ಕುರಿತು ಅಭಿಮಾನ ವ್ಯಕ್ತಪಡಿಸುವ ಬೂಕನಕೆರೆಯ ಜನತೆಯಲ್ಲೀಗ ಸಂತೋಷ ತುಂಬಿದೆ.

ತವರಿನಲ್ಲಿರುವ ಯಡ್ಯೂರಪ್ಪ ಅವರ ದೊಡ್ಡಪ್ಪ, ದೊಡ್ಡಮ್ಮ, ಕುಟುಂಬಿಕರಿಗೆ ತಮ್ಮ ಮನೆ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ ಬಗ್ಗೆ ಅತೀವ ಸಂತೋಷ ತಂದಿದೆ.