ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
 
ಗ್ರಾಮ ವಾಸ್ತವ್ಯ ಮುಂದುವರಿಕೆ, ಗ್ರಾಮ ದರ್ಶನಕ್ಕೆ ಸೂಚನೆ
ಸಂದರ್ಶನದಲ್ಲಿ ನೂತನ ಮುಖ್ಯಮಂತ್ರಿ ಯಡಿಯೂರಪ್ಪ
NRB
ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸುತ್ತಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ತಿಳಿಸಿರುವ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿ 15 ದಿನಕ್ಕೊಮ್ಮೆ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿಗಳ ಮೂಲಕ ಗ್ರಾಮ ದರ್ಶನ ಕಾರ್ಯಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಹೊಸ ಸರ್ಕಾರದ ಬಗ್ಗೆ ಯಾವುದೇ ಆತಂಕ ಬೇಡ, ಆರಂಭದಲ್ಲಿ ಕೆಲವು ಗೊಂದಲಗಳಿರುವುದು ಸಹಜ, ಯಾರೋ ಕೆಲವು ಶಾಸಕರು ತಮಗೆ ಪ್ರಾತಿನಿಧ್ಯ ದೊರೆತಿಲ್ಲ ಎಂದಾಕ್ಷಣ ಅದಕ್ಕೆ ಕಪೋಲ ಕಲ್ಪಿತ ಕಥೆ ಕಟ್ಟುವ ಅವಶ್ಯಕತೆಯಿಲ್ಲ. ಅವರೂ ನಮ್ಮ ಮಿತ್ರರೇ. ಸರ್ಕಾರದ ಕ್ಷಣಗಳು ಈಗಿನ್ನೂ ಪ್ರಾರಂಭವಾಗಿವೆ. ನಮ್ಮ ಮುಂದೆ ಇನ್ನೂ ಹತ್ತು ಹಲವಾರು ಯೋಜನೆಗಳಿವೆ. ಇವತ್ತು ಒಬ್ಬ ಗ್ರಾಮೀಣ ವ್ಯಕ್ತಿ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ನೂರಾರು ಕಿ.ಮೀ. ದೂರದಿಂದ ಬರಬೇಕಾಗಿದೆ ಆ ಪರಿಸ್ಥಿತಿಯನ್ನು ನಾವು ತಕ್ಷಣ ಸುಧಾರಿಸುವ ಅವಶ್ಯಕತೆಯಿದೆ. ಹಾಗಾಗಿ ನಾವು ಈ ಹಿಂದೆ ಹಮ್ಮಿ ಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು ಮುಂದುವರಿಯುತ್ತವೆ ಎಂದು ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ ಅವರು ತಿಳಿಸಿದರು.

ರಾಜ್ಯದ ಎಲ್ಲಾ ಜನರ ಸಮಸ್ಯೆಗಳನ್ನು ಮುಖ್ಯಮಂತ್ರಿಯೊಬ್ಬನೇ ಹೊರುವುದಕ್ಕಾಗುವುದಿಲ್ಲ. ಅದಕ್ಕೆ ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸಹ ನೇರ ಹೊಣೆಯಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ 15 ದಿನಕ್ಕೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಗಳಿಂದಾಗಲೀ ಗ್ರಾಮದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಸಂಪುಟ ಸಭೆಯಲ್ಲಿ ತೆಗೆದುಕೊಂಡ ತುರ್ತು ನಿರ್ಣಯದಂತೆ ತಕ್ಷಣದಿಂದ ಜಾರಿಗೆ ಬರುವಂತೆ 12 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು ತಿಳಿದು ಬಂದಿದೆ.

ದೇವೇಗೌಡರ ನಿಬಂಧನೆಗಳು ಸುಖ ಸರ್ಕಾರಕ್ಕೆ 12 ಸೂತ್ರಗಳಾಗಿವೆಯೇ ಹೊರತು ಬೇರೆ ಯಾವ ಬಣ್ಣಗಳನ್ನೂ ಅದಕ್ಕೆ ಹಚ್ಚುವ ಅವಶ್ಯಕತೆಯಿಲ್ಲ. 12 ಷರತ್ತುಗಳ ಬಗ್ಗೆ ಸಾರ್ವಜನಿಕ ಚರ್ಚೆ ಬೇಡ. ಅದೇನಿದ್ದರು ನಾಲ್ಕು ಗೋಡೆಗಳ ನಡುವೆ ನಮ್ಮ ಮಿತ್ರರ ನಡುವೆ ನಡೆಯುವಂತದ್ದು ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದ ಅವರು, ತಮ್ಮ ಸರ್ಕಾರ ರಚನೆಯಲ್ಲಿ ಯಾವುದೇ ಅನಧಿಕೃತ ಸೂತ್ರಗಳಿರುವುದರ ಬಗ್ಗೆ ಚರ್ಚಿಸಲು ಸ್ಪಷ್ಟವಾಗಿ ನಿರಾಕರಿಸಿದರು.

ಶ್ರೀರಾಮುಲು, ಜನಾರ್ದನ ರೆಡ್ಡಿ, ಅಶೋಕ ಖೇಣಿ ವಿರುದ್ಧ ತನಿಖೆಯ ಸ್ವರೂಪದ ಬಗ್ಗೆ ಯಾವುದೇ ಉತ್ತರ ನೀಡಲು ನಿರಾಕರಿಸಿದ ಮುಖ್ಯಮಂತ್ರಿ, ಕೆಲವೊಂದು ಕಾನೂನು ಸ್ವರೂಪಕ್ಕೆ ಹೊಂದಿದ್ದಾದರೆ ಮತ್ತೆ ಕೆಲವು ನಾಲ್ಕು ಗೋಡೆಗಳ ಮಧ್ಯದಲ್ಲಷ್ಟೇ ಚರ್ಚಿಸಲು ಸೀಮಿತ ಎಂದಿದ್ದಾರೆ.

ಇದು ಒಂದು ಪಕ್ಷದ ಸ್ವಂತ ಬಲದಿಂದ ಆರಿಸಲ್ಪಟ್ಟ ಸರ್ಕಾರವಲ್ಲ. ಸದ್ಯಕ್ಕೆ ಯಾವುದೇ ಹೊಸ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿಲ್ಲ, ಹಿಂದಿನ ಆಯವ್ಯಯ ಪತ್ರದಲ್ಲಿ ಹೇಳಲಾಗಿರುವ ಯೋಜನೆಗಳ ಪೂರ್ಣಪ್ರಮಾಣದ ಅನುಷ್ಠಾನಕ್ಕೆ ತಮ್ಮ ಮೊದಲ ಆದ್ಯತೆ. ಮುಂದಿನ 15 ರಿಂದ 20 ದಿನಗಳಲ್ಲಿ ಸುಮಾರು ಒಂದೂವರೆ ಲಕ್ಷ ಫಲಾನುಭವಿಗಳಿಗೆ ಸೈಕಲ್ ವಿತರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ನುಡಿದರು.

ಕಳಸಾ ಬಂಡೂರಿ ಯೋಜನೆಯಿಂದಾಗುವ ಹಾನಿ ಪ್ರಮಾಣದ ಬಗ್ಗೆ, ನೆರೆ ಪರಿಹಾರ ನೀಡುವ ಬಗ್ಗೆ ಕೇಂದ್ರದ ಯುಪಿಎ ಸರ್ಕಾರದ ಮಲತಾಯಿ ಧೋರಣೆಯ ಬಗ್ಗೆ ಸದ್ಯದಲ್ಲೇ ದೆಹಲಿಗೆ ಹೋಗಿ ಪ್ರಧಾನಿಯನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ ಅವರು, ಬಾಗಲಕೋಟೆಯ ಬರ ಪರಿಹಾರಕ್ಕೆ 50 ಕೋಟಿ ಮಂಜೂರು ಮಾಡಿರುವುದನ್ನು ಸಮರ್ಥಿಸಿಕೊಂಡರು. ಹಿಂದಿನ ಆಯವ್ಯಯದಲ್ಲಿ ಈಗಾಗಲೇ ಸೂಚಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಹೊಸ ಘೋಷಣೆಗಳ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಬೆಂಗಳೂರಿನ ಸದ್ಯದ ದುಸ್ಥಿತಿಯ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ನಗರದ ವಾಹನ ಸಂದಣಿ, ಜನಸಂದಣಿಯ ನಿಯಂತ್ರಣಕ್ಕೆ ತುರ್ತುಕ್ರಮ ಕೈಗೊಳ್ಳುವ ಬಗ್ಗೆ ಸೂಚನೆಯನ್ನು ನೀಡಿದರು. ಈ ನಿಟ್ಟಿನಲ್ಲಿ ಬೆಂಗಳೂರಿಗಾಗಮಿಸುವ ವಿಐಪಿಗಳ ಸುಗಮ ಸಂಚಾರಕ್ಕೆ ನೆರವಾಗುವಂತೆ ಹೊರವಲಯದಲ್ಲಿ ಹೆಲಿಪ್ಯಾಡ್‌ಗಳ ನಿರ್ಮಾಣವನ್ನು ತ್ವರಿತಗತಿಯಲ್ಲಿ ಮಾಡುವ ವಿಚಾರ ಸದ್ಯಕ್ಕೆ ಸರ್ಕಾರದ ಮುಂದಿದೆ ಎಂದಿದ್ದಾರೆ.
ಮತ್ತಷ್ಟು
ಬೂಕನಕೆರೆ ಹುಡುಗ ಮುಖ್ಯಮಂತ್ರಿ ಗದ್ದುಗೆಯೆಡೆಗೆ ನಡಿಗೆ