ಹದಿನೈದು ವರ್ಷಗಳ ಹಿಂದೆ ಜೋಡಿ ಶ್ವಾನಗಳನ್ನು ಕೊಂದ ಪಾಪ ಪರಿಹಾರಕ್ಕಾಗಿ 33 ವರ್ಷದ ಯುವಕನೊಬ್ಬ ನಾಯಿಯನ್ನೇ ಮದುವೆಯಾದ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದಿದೆ.
ಮಧುರೈನಿಂದ 50 ಕಿ.ಮೀ. ದೂರದಲ್ಲಿರುವ ಮನಮಧುರೈನ ಗಣೇಶ ದೇವಸ್ಥಾನದಲ್ಲಿ "ಸೆಲ್ವಿ" ಎಂಬ ಹೆಸರಿನ ನಾಯಿ (ಮದುಮಗಳು)ಗೆ 33 ವರ್ಷದ ಸೆಲ್ವಕುಮಾರ್ ಮಂಗಳಸೂತ್ರವನ್ನು ಕಟ್ಟಿದರು.
ಸೀರೆಯಿಂದ ಅಲಂಕೃತಗೊಂಡ ಹತ್ತು ವರ್ಷ ಪ್ರಾಯದ ಮದುವಣಗಿತ್ತಿ ಸೆಲ್ವಿಯನ್ನು ಬಹಳ ಅದ್ದೂರಿಯಿಂದ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಮದುಮಗಳಿಗೆ "ಬ್ರೆಡ್" ನ ಔತಣವನ್ನು ಕೂಡ ನೀಡಲಾಯಿತು.
ಹದಿನೈದು ವರ್ಷಗಳ ಹಿಂದೆ ಜೋಡಿ ಶ್ವಾನಗಳನ್ನು ಕೊಂದ ನಂತರ ತನಗೆ ಪಾರ್ಶ್ವವಾಯು ಬಡಿದಿತ್ತು. ಇದರಿಂದಾಗಿ ನನಗೆ ನಡೆಯಲು ಕೂಡ ಸಾಧ್ಯವಾಗಿರಲಿಲ್ಲ. ಜ್ಯೋತಿಷಿಯೊಬ್ಬರು ಇದು "ಶ್ವಾನಹತ್ಯಾ ದೋಷ" ಎಂದು ಹೇಳಿದ್ದು ಈ ಪಾಪದ ಪರಿಹಾರವಾಗಿ ಪ್ರಾಣಿಯನ್ನು ಮದುವೆಯಾಗುವಂತೆ ಸಲಹೆ ನೀಡಿದ್ದರು. ಈ ಕಾರಣದಿಂದಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದ ಮದುಮಗ ಸೆಲ್ವಕುಮಾರ್, ಸೆಲ್ವಿಯನ್ನು ಕೊನೆಯವರೆಗೂ ಕಾಪಾಡುವುದಾಗಿ ಪ್ರತಿಜ್ಞೆ ಮಾಡಿದರು.
ನಾಯಿಯನ್ನು ಮದುವೆಯಾಗುವ ಮೂಲಕ ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡ ಕಾರಣ ಇನ್ನು ಮುಂದೆ ಒಳ್ಳೆಯದಾಗಲಿದೆ ಎಂದು ಜ್ಯೋತಿಷ್ಯರು ಸಲಹೆ ಮಾಡಿದ್ದಾಗಿ ಕುಮಾರ್ ಹೇಳಿದರು.
|