ಮಂಜುನಾಥ ಬಂಡಿ
ಹಾಗೇ ಸುಮ್ಮನೆ ಕರ್ನಾಟಕದ ರಾಜಕಾರಣದತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿ, ಅಧಿಕಾರದ ಗದ್ದುಗೆಗಾಗಿ ಎರಡು ಪಕ್ಷಗಳು ಹೇಗೆ ಕಾದಾಡುತ್ತಿವೆ ಎಂಬುದನ್ನ. ಜೊತೆಗೆ 'ಇಬ್ಬರ ನ್ಯಾಯ ಮೂರನೇಯವನಿಗೆ ಆಯ' ಎಂದಾಗಬಹುದೆಂಬ ನಿರೀಕ್ಷೆಯಲ್ಲಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ಇನ್ನೊಂದು ಪಕ್ಷ, ಕೊನೆಗೆ ಹರಕೆಯ ಕುರಿಯಾಗಲಿರುವ ಯಡಿಯೂರಪ್ಪನವರ ಪರಿಸ್ಥಿತಿ 'ಎಮ್ಮೆಗೊಂದು ಚಿಂತೆಯಾದರೆ ಸಮಗಾರಗೊಂದು ಚಿಂತೆ' ಎನ್ನುವಂತಾಗಿದೆ.
ಕರ್ನಾಟಕದ ಪ್ರಜೆಗಳು ಅತಂತ್ರ ಸರಕಾರ ಬರುವಂತೆ ಮತ ಚಲಾಯಿಸಿದ್ದರಿಂದ, ರಾಜ್ಯವನ್ನಾಳುವ ರಾಜಕಾರಣಿಗಳು ಅಭಿವೃದ್ಧಿ ಪರ ಚಿಂತನೆಗಳನ್ನು ಬಿಟ್ಟು, ಸ್ವಾರ್ಥ ಲಾಲಸೆಯಿಂದ ಕಾದಾಡುತ್ತಿರುವುದು ರಾಜ್ಯದ ಮತ್ತು ರಾಷ್ಟ್ರದ ಜನತೆಯನ್ನು ನಗೆಪಾಟಲಿಗೀಡು ಮಾಡಿದೆ.
ಅವಕಾಶವಾದಿ ಅಪ್ಪ ಮಕ್ಕಳ ಪಕ್ಷ ಎಂದೇ ಖ್ಯಾತಿಯಾಗಿರುವ ಜೆಡಿಎಸ್, ಉಳಿದೆರಡು ರಾಷ್ಟ್ರೀಯ ಪಕ್ಷಗಳಿಗಿಂತ ಕಡಿಮೆ ಸ್ಥಾನ ಪಡೆದಿದ್ದರೂ ನಡೆಸುತ್ತಿರುವ ರಾಜಕೀಯ ನೋಡಿದರೆ ರಾಜ್ಯದ ಎಲ್ಲಾ ರಾಜಕೀಯ ವಿದ್ಯಮಾನದ ಮೂಲ ಎಲ್ಲಿ ಎಂಬುದು ಅರಿವಾಗುತ್ತದೆ.
ಜೆಡಿಎಸ್ ಪಕ್ಷ ಒಪ್ಪಂದದಂತೆ 20 ತಿಂಗಳುಗಳ ಕಾಲ ಉತ್ತಮ ಆಡಳಿತ (?) ನೀಡಿ, ಸರಕಾರದ ಪಾಲುದಾರ ಪಕ್ಷವಾದ ಬಿಜೆಪಿಗೆ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ತಗಾದೆ ತೆಗೆಯುವ ಮೂಲಕ, ತಂಟೆಕೋರ ಪಕ್ಷ ಎಂಬ ಹಣೆಪಟ್ಟೆಯನ್ನು ಹೊತ್ತುಕೊಂಡಿತು. ಪರಿಣಾಮ ರಾಷ್ಟ್ರಪತಿ ಆಡಳಿತ.
ಒಂದು ತಿಂಗಳ ಕಾಲ ರಾಮೇಶ್ವರ್ ಠಾಕೂರ್, ಅಕ್ಷರಶಃ ರಾಜ್ಯಪಾಲನೆ ಮಾಡಿದರು. ನಂತರ ಜೆಡಿಎಸ್‌ನ ಬುದ್ಧಿಜೀವಿ ಎಂ.ಪಿ.ಪ್ರಕಾಶ್ ಬಂಡಾಯವೆದ್ದಾಗ ಜೊತೆಗೆ, ರಾಜ್ಯದ ಜನರು ಜೆಡಿಎಸ್ ವಿರುದ್ಧ ಹಿಡಿಶಾಪ ಹಾಕತೊಡಗಿದಾಗ ಮುಂದಿನ ಚುನಾವಣೆ ಮತ್ತು ಪಕ್ಷದ ಹಿತದೃಷ್ಟಿಯಿಂದಾಗಿ ನಾವು ಬಿಜೆಪಿಗೆ ಅಧಿಕಾರ ನೀಡುತ್ತೇವೆ ಎಂದು 'ಸಂತೆಯಲ್ಲಿ ಹೋದ ಮಾನ ಕಂತೆಯಲ್ಲಿ ತಂದರು' ಎನ್ನುವಂತೆ ಹಳೆಯ ಗಂಡನ ಪಾದವೇ ಗತಿ ಎಂದು ಬಿಜೆಪಿಗೆ ಸಹಕರಿಸಿ ನವೆಂಬರ್ 12ರಂದು ಬಿಜೆಪಿ ನಾಯಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗಾದಿಗೆ ಏರಿಸಿತು.
ಬಹುಮತ ಸಾಬೀತು ಪಡಿಸುವ ಪ್ರಸಕ್ತ ಸಂದರ್ಭದಲ್ಲಿ ಬಿಜೆಪಿ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿರುವ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲುವನ್ನು ಹಣಿಯಲು ಜೆಡಿಎಸ್ ಪಕ್ಷ ಗಣಿ ಖಾತೆ ಮತ್ತು ನಗರಾಭಿವೃದ್ಧಿ ಖಾತೆಗಾಗಿ ಪಟ್ಟುಹಿಡಿದು, ಷರತ್ತುಗಳಿಗೆ ಒಪ್ಪಿದರೆ ಮಾತ್ರ ಬೆಂಬಲ ನೀಡುತ್ತೇವೆ ಇಲ್ಲದಿದ್ದರೆ, ಬೇಷರತ್ ಬೆಂಬಲ ಹಿಂತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಬಿಜೆಪಿಗೆ ಮತ್ತೊಮ್ಮೆ ಚಳ್ಳೆಹಣ್ಣು ತಿನ್ನಿಸಹತ್ತಿದೆ.
ಎಮ್ಮೆಗೊಂದು ಚಿಂತೆ...ಸಮಗಾರಗೊಂದು ಚಿಂತೆ (ಎಮ್ಮೆಗೆ ಬದುಕುವ ಚಿಂತೆಯಾದರೆ, ಸಮಗಾರನಿಗೆ ಎಮ್ಮೆ ಯಾವಾಗ ಸಾಯುತ್ತದೆ, ಅದರ ಚರ್ಮ, ಮಾಂಸ ಖಂಡಗಳನ್ನು ಯಾವಾಗ ಮಾರಬೇಕೆನ್ನುವ ಚಿಂತೆ ಎನ್ನುವ ಪ್ರಸಿದ್ಧ ನುಡಿಯಂತೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಸರಕಾರ ರಚಿಸಿರುವ ಬಿಜೆಪಿ ಪಕ್ಷ, ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು, ರೈತರ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಜನಪರ ಆಡಳಿತ ನೀಡಲು ತಂತ್ರಗಳನ್ನು ಹೆಣೆಯುತ್ತಾ ಮುಖ್ಯಮಂತ್ರಿ ತಮಗೊಂದು ಚಿಂತೆ ಎನ್ನುವಂತಾದರೆ, ಅತ್ತ ಜೆಡಿಎಸ್‌ಗೆ ಯಾವಾಗ ಬಿಜೆಪಿಯ ಕಾಲೆಳೆದು ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳನ್ನು ತನ್ನತ್ತ ವಾಲಿಸಬೇಕು ಎನ್ನುವುದೇ ಚಿಂತೆ..!, ಇಂತಹ ನಾಯಕರನ್ನು ಸೃಷ್ಟಿಸಿದ ನಾವುಗಳು, ಅದ್ಯಾವ ಮೂಲೆಯಿಂದ ಅಭಿವೃದ್ಧಿಯ ಕನಸನ್ನು ನಿರೀಕ್ಷಿಸೋಣ..?, ಊಹೂಂ ಸದ್ಯಕ್ಕಂತೂ ಅದು ಅಸಾಧ್ಯದ ಮಾತೇ ಬಿಡಿ.
|