ನಾಗೇಂದ್ರ ತ್ರಾಸಿ ಕರ್ನಾಟಕ ರಾಜ್ಯ ರಾಜಕಾರಣ ಜೆಡಿಎಸ್ ವರಿಷ್ಠ ಹರದನಹಳ್ಳಿ ದೇವೇಗೌಡರ ಅಧಿಕಾರ ಲಾಲಸೆ ಮತ್ತು ಕುಟುಂಬ ರಾಜಕೀಯಕ್ಕೆ ಬಲಿಯಾಗಿರುವುದು ಸ್ಪಷ್ಟವಾಗಿದೆ.
ಈ ಮೊದಲು ಕಾಂಗ್ರೆಸ್ ಸಖ್ಯ ತೊರೆದು ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಷರತ್ತುಗಳನ್ನು ವಿಧಿಸಿಕೊಂಡು ಸರಕಾರ ರಚಿಸಿದ್ದು, ಬಿಜೆಪಿಗೆ ಅಧಿಕಾರ ಹಸ್ತಾಂತರವಾಗುವ ಮುನ್ನ ದೇವೇಗೌಡರು ಷರತ್ತುಗಳ ಸರಮಾಲೆಯೊಂದಿಗೆ ಕಸರತ್ತು ಆರಂಭಿಸಿಬಿಟ್ಟಿದ್ದರು. ಅವರು ವಿಧಿಸಿರುವ ಷರತ್ತುಗಳನ್ನು ಗಮನಿಸಿದರೆ, ಇದು ಸ್ವಾರ್ಥ ಮತ್ತು ಕುಟುಂಬ ರಾಜಕಾರಣದ ದಾಹ ಎನ್ನುವುದು ನಿಚ್ಚಳವಾಗುತ್ತದೆ.
ಉಪಮುಖ್ಯಮಂತ್ರಿ ಹುದ್ದೆ ಕುಮಾರಸ್ವಾಮಿಗೆ, ಖಾತೆ ಹಂಚಿಕೆ ಮಾಡುವಾಗ ಎರಡೂ ಪಕ್ಷಗಳೂ ಕೂಡಿಯೇ ನಿರ್ಧಾರ ಕೈಗೊಳ್ಳಬೇಕು, ಗಣಿ ಮತ್ತು ಭೂವಿಜ್ಞಾನ ಹಾಗೂ ನಗರಾಭಿವೃದ್ಧಿ ಖಾತೆ ಜೆಡಿಎಸ್‌ಗೆ, ವಿಧಾನಸಭಾ ಸ್ಪೀಕರ್ ಹುದ್ದೆ ಜೆಡಿಎಸ್‌ಗೆ ಹೀಗೆ 21 ಷರತ್ತುಗಳಲ್ಲಿ ದೇವೇಗೌಡರ ಚಾಣಾಕ್ಷ ತಂತ್ರಗಳು ನಿಚ್ಚಳವಾಗಿ ಗೋಚರಿಸುತ್ತವೆ.
ಕುಟುಂಬ ರಾಜಕಾರಣದ ಕುರಿತು ಇಂದಿರಾಗಾಂಧಿ, ಕಾಂಗ್ರೆಸ್ ಪಕ್ಷವನ್ನು ಹಳಿಯುತ್ತಿದ್ದ ಘಟಾನುಘಟಿಗಳೆಲ್ಲ ಯಾವ ಸಿದ್ಧಾಂತ, ರಾಜಕಾರಣಕ್ಕೆ ಜೋತು ಬಿದ್ದಿದ್ದಾರೆಂದು ಗಮನಿಸಿದರೆ, ಕರ್ನಾಟಕದ ರಾಜ್ಯ ರಾಜಕಾರಣದಲ್ಲೂ ವಂಶರಾಜಕೀಯಕ್ಕೆ ಮಹತ್ವ ನೀಡಿರುವುದು ಗೋಚರಿಸುತ್ತದೆ. ರಾಜ್ಯ ರಾಜಕೀಯದಲ್ಲಿ ಜಾತಿ, ಹಣ, ವಂಶಗಳ ಅಂಶವೇ ಹೆಚ್ಚು ಮಹತ್ವ ಪಡೆದಿದೆ ಎನ್ನುವುದಕ್ಕೆ ಇತ್ತೀಚೆಗೆ ನಡೆಯುತ್ತಿರುವ ರಾಜಕಾರಣವೇ ಸಾಕ್ಷಿಯಾಗಿದೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲಿಂಗಾಯಿತ ರಾಜಕಾರಣವನ್ನು ಬೆಳೆಸಿದ್ದರೆ, ಮಣ್ಣಿನ ಮಗ ದೇವೇಗೌಡರು ಹೆಸರಿಗಷ್ಟೇ ಕುರುಬ ಜನಾಂಗ, ಅಲ್ಪಸಂಖ್ಯಾತರನ್ನು ಓಲೈಸುವ ತಂತ್ರಗಾರಿಕೆ ಉಪಯೋಗಿಸಿದ್ದರು. ಕೊನೆಗೂ ಪುತ್ರ ವ್ಯಾಮೋಹಕ್ಕೆ ಬಲಿಬಿದ್ದ ಗೌಡರು ಸಿದ್ದರಾಮಯ್ಯರಂತಹ ನಾಯಕನನ್ನು ದೂರ ಇಡುವಲ್ಲಿ ಯಶಸ್ವಿಯಾಗಿದ್ದರು.
ಕಾಂಗ್ರೆಸ್ ವಂಶರಾಜಕಾರಣವನ್ನು ಹೀಗಳೆಯುತ್ತಿದ್ದ ದೇವೇಗೌಡರು ಪುತ್ರ ಕುಮಾರಸ್ವಾಮಿಯನ್ನು ಕನಕಪುರ ಕ್ಷೇತ್ರದಿಂದ ಅಧಿಕಾರದ ಗದ್ದುಗೆ ಏರುವಂತೆ ಮಾಡಿದರು. ಹಾಗೇ ಮತ್ತೊಬ್ಬ ಮಗ ರೇವಣ್ಣನನ್ನು ಮಂತ್ರಿಗಿರಿಗೆ ತಂದು ಕೂರಿಸಿದರು. ಹಾಸನದಲ್ಲಿ ಬಂಧು-ಬಳಗದವರಿಗೆಲ್ಲ ವಿವಿಧ ಸ್ಥಾನಮಾನಗಳನ್ನು ನೀಡಿದರು.
ಅದೇ ತೆರನಾಗಿ ಮಾಜಿ ಮುಖ್ಯಮಂತ್ರಿ ದಿ.ಎಸ್. ಆರ್. ಬೊಮ್ಮಾಯಿ ಕೂಡ ಮಗ ಬಸವರಾಜನನ್ನು ಎಂಎಲ್‌ಸಿ ಮಾಡಿದ್ದರು, ಬಂಗಾರಪ್ಪ ಕುಮಾರ್ ಬಂಗಾರಪ್ಪರನ್ನು, ತಂದೆ ಮಗನ ಕಿತ್ತಾಟದ ನಂತರ ಇದೀಗ ಎರಡನೇ ಮಗ ಮಧು ಬಂಗಾರಪ್ಪನನ್ನು ರಾಜಕೀಯ ಅಖಾಡಕ್ಕೆ ತಂದಿದ್ದಾರೆ. ವೀರೇಂದ್ರ ಪಾಟೀಲ್ ಮಗ ಕೈಲಾಸ್ ಪಾಟೀಲ್, ದೇವರಾಜ್ ಅರಸು ಮಗಳು ಚಂದ್ರಪ್ರಭಾ ಅರಸು, ನಿಜಲಿಂಗಪ್ಪ ಅಳಿಯ ಎಂ.ವಿ.ರಾಜಶೇಖರನ್, ಜೆ.ಎಚ್. ಪಟೇಲರ ಮಗ ಮಹಿಮಾ ಪಟೇಲ್, ಕೆ.ಎಚ್. ಪಾಟೀಲ್ ಮಗ ಎಚ್.ಕೆ. ಪಾಟೀಲ್ ಹೀಗೆ ಅವರೆಲ್ಲ ತಮ್ಮ, ತಮ್ಮ ವಂಶದ ಕುಡಿಗಳನ್ನು ರಾಜಕಾರಣದ ವಾರಿಸುದಾರರನ್ನಾಗಿಸುವಲ್ಲಿ ಮುತುವರ್ಜಿ ವಹಿಸಿದ್ದರು.
ಆದರೆ ರಾಜ್ಯ ರಾಜಕೀಯದಲ್ಲಿ ಶೇ. 15ರಷ್ಟಿರುವ ಒಕ್ಕಲಿಗರಲ್ಲಿ ಐದು ಮಂದಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರೆ, ಶೇ.18ರಷ್ಟಿರುವ ಲಿಂಗಾಯತ ಜನಾಂಗದ ಆರು ಮಂದಿ ಸಿಎಂ ಆಗಿದ್ದರು. ಶೇ. 3ರಷ್ಟಿರುವ ಬ್ರಾಹ್ಮಣ ಜನಾಂಗದ ರಾಮಕೃಷ್ಣ ಹೆಗಡೆ, ಗುಂಡೂರಾವ್, ಶೇ.23ರಷ್ಟಿರುವ ಹಿಂದುಳಿದ ಜಾತಿಯಲ್ಲಿ ಬಂಗಾರಪ್ಪ, ವೀರಪ್ಪ ಮೊಯ್ಲಿ ಅಧಿಕಾರದ ಗದ್ದುಗೆ ಏರಿದ್ದರು. ಆದರೆ ಕುಟುಂಬ ಮತ್ತು ಜಾತಿ ರಾಜಕಾರಣದಿಂದಾಗಿ ಶೇ.22ರಷ್ಟಿರುವ ಕುರುಬ ಜನಾಂಗ, ಶೇ.10ರಷ್ಟಿರುವ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳಿಗೆ ಈವರೆಗೂ ಮುಖ್ಯಮಂತ್ರಿ ಗದ್ದುಗೆ ಏರಲು ಸಾಧ್ಯವಾಗಿಲ್ಲ.
|