ಅನ್ನಾ 18 ವರ್ಷ ವಯಸ್ಸಿನ ವಿಕಲಾಂಗ ಯುವತಿ. ಅವಳಿಗೆ ನಡೆಯಲು ಅಸಮರ್ಥಳು. ಸ್ವತಃ ಯಾವ ಕೆಲಸವನ್ನು ಮಾಡಲೂ ಸಾಧ್ಯವಿಲ್ಲ. ಆಕೆ ವಾಸ ನಾಲ್ಕನೇ ಮಹಡಿಯಲ್ಲಿ. ಮಹಡಿಗೆ ಎಲಿವೇಟರ್ ಕೂಡ ಇಲ್ಲ. ಅವಳು ಪೋಷಕರ ಸಹಾಯದಿಂದ ಮಹಡಿಯಿಂದ ಕೆಳಗೆ ಹೋಗುತ್ತಾಳೆ. ಮನೆಯಲ್ಲೇ ಶಿಕ್ಷಣ ಪಡೆದ ಅವಳು ಪ್ರತಿಭಾವಂತ ವಿದ್ಯಾರ್ಥಿನಿ ಎಂದು ಶಿಕ್ಷಕಿಯರು ಹೇಳುತ್ತಾರೆ.
ಅನ್ನಾ ಕಳೆದ ವರ್ಷ ಪದವಿ ಪಡೆದರೂ ವಿಶ್ವವಿದ್ಯಾಲಯಕ್ಕೆ ಸೇರಲಿಲ್ಲ. ಏಕೆಂದರೆ ವಿವಿಯಲ್ಲಿ ವಿಕಲಾಂಗ ವ್ಯಕ್ತಿಗಳಿಗೆ ವೀಲ್‌ಚೇರ್ ಸೌಲಭ್ಯವಿಲ್ಲ. .ಯಾವುದೇ ಮಾಲೀಕರು ವಿಕಲಾಂಗ ವ್ಯಕ್ತಿಯ ಜವಾಬ್ದಾರಿ ಹೊರಲು ಸಿದ್ಧರಿಲ್ಲದ ಕಾರಣ ಅವಳಿಗೆ ಕೆಲಸ ಹುಡುಕಲು ಕೂಡ ಸಾಧ್ಯವಾಗಿಲ್ಲ. ತನ್ನ ಜೀವನವೇ ಅರ್ಥಹೀನ ಎಂಬ ಭಾವನೆ ಅನ್ನಾಳಲ್ಲಿ ಮೂಡಿದೆ.
ವಿಕಲಾಂಗೆಯಾಗಿ ಹುಟ್ಟಿದ ತನ್ನ ಅದೃಷ್ಟವನ್ನು ಹಳಿದುಕೊಳ್ಳುತ್ತಾಳೆ. ತಾನೇನು ಪಾಪ ಮಾಡಿದ್ದೇನೆಂದು ಪಶ್ಚಾತ್ತಾಪ ಪಡುತ್ತಾಳೆ. ಡಿಸೆಂಬರ್ ಮೂರು ಅಂತಾರಾಷ್ಟ್ರೀಯ ವಿಕಲಾಂಗರ ದಿನ. ನಮ್ಮೊಳಗೆ ವಿಕಲಾಂಗ ಜೀವಿಗಳು ಬದುಕಿದ್ದಾರೆಂದು ಸಮಾಜಕ್ಕೆ ನೆನಪಿಸುವ ದಿನ. ವಿಕಲಾಂಗರ ಬದುಕಿಗೆ ಬೆಳಕು ಮೂಡಿಸಬೇಕಾದ ದಿನ. ಆದರೆ ವಿಕಲಾಂಗರೂ ಸಮಾಜದಲ್ಲಿ ತಲೆಎತ್ತಿನಿಲ್ಲಲು ಎಷ್ಟುಮಂದಿ ಕಂಕಣಬದ್ಧರಾಗಿದ್ದಾರೆನ್ನುವುದು ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಜಗತ್ತಿನಲ್ಲಿ ವಾಸಿಸುವ ಲಕ್ಷಾಂತರ ವಿಕಲಾಂಗರಲ್ಲಿ ಅನ್ನಾ ಕೂಡ ಒಬ್ಬಳು.ಕೆಲವು ಕೆಲವರು ವೃತ್ತಿಜೀವನದ ಬದುಕಿನಲ್ಲಿ ಸ್ವಲ್ಪಮಟ್ಟಿನ ಯಶಸ್ಸು ಗಳಿಸುತ್ತಾರೆ. ಆದರೆ ಅನೇಕ ಮಂದಿ ವಿಕಲಾಂಗ ವ್ಯಕ್ತಿಗಳಿಗೆ ಭವಿಷ್ಯದ ಕನಸುಗಳು ಕಮರಿಹೋಗಿರುತ್ತದೆ. ನಾಳಿನ ಬದುಕಿನ ಬಗ್ಗೆ ಆಸಕ್ತಿ ಇಂಗಿಹೋಗಿರುತ್ತದೆ. ಸಮಾಜದ ವರ್ತನೆ ವಿರುದ್ಧ ಅವರ ಧ್ವನಿ ಉಡುಗಿಹೋಗಿರುತ್ತದೆ.
ಇದು ವಿಕಲಾಂಗ ವ್ಯಕ್ತಿಗಳ ಸಮಸ್ಯೆ ಎಂದು ನಾವು ಅಷ್ಟಕ್ಕೇ ಸುಮ್ಮನಾಗುವುದು ಸರಿಯಲ್ಲ. ಅಂತಹ ವ್ಯಕ್ತಿಗಳಲ್ಲಿ ಕೆಲವರಿಗೆ ಜನ್ಮದತ್ತವಾದ ವೈಕಲ್ಯವಲ್ಲ. ಆಕಸ್ಮಿಕ ಕಾಯಿಲೆ, ಅಪಘಾತದಿಂದ ವಿಕಲಾಂಗಕ್ಕೆ ತುತ್ತಾದವರೂ ಇದ್ದಾರೆ. ನಾಳೆ ನಮಗೂ ಅಂತಹ ಸ್ಥಿತಿ ಬರುವ ಸಾಧ್ಯತೆಯೂ ಇಲ್ಲದಿಲ್ಲ. ವಿಕಲಾಂಗ ವ್ಯಕ್ತಿಯ ಸಮಸ್ಯೆಗಳಿಗೆ ಅಲಕ್ಷ್ಯ ತೋರಿದರೆ ಉಳಿದ ಜನರ ಅಗತ್ಯಗಳಿಗೂ ನಾವು ಕಠೋರ ಹೃದಯಿಯಾಗುವ ಸಂಭವವಿದೆ. ಆ ರೀತಿಯಾಗಿ ಕ್ರೂರ, ಸ್ವಾರ್ಥ ಜನರ ನಡುವೆ, ಸ್ವಾರ್ಥ ಸಮಾಜದಲ್ಲಿ ಕಾಡಿನ ಪ್ರಾಣಿಗಳ ರೀತಿಯಲ್ಲಿ ಬದುಕು ನಡೆಸಿದಂತಾಗುತ್ತದೆ.
ಇಂತಹ ವ್ಯಕ್ತಿಗಳ ಸಮಸ್ಯೆ ನಿವಾರಿಸಿ ಅವರು ಸಮಾಜದಲ್ಲಿ ಒಂದಾಗಿ ಬೆರೆಯುವಂತೆ ಮಾಡಲು ಮೂರು ವಿಷಯಗಳಿಗೆ ಗಮನಹರಿಸಬೇಕಾಗಿದೆ. ಅದು ಅವಕಾಶ, ನಡವಳಿಕೆ ಮತ್ತು ಜಾಗೃತಿ. ಅನೇಕ ವಿಕಲಾಂಗ ವ್ಯಕ್ತಿಗಳ ದೈಹಿಕ ಸಾಮರ್ಥ್ಯ ಸೀಮಿತವಾಗಿರುತ್ತದೆ. ಕಟ್ಟಡಗಳಲ್ಲಿ ಅವರ ಹತ್ತಲು ಇಳಿಯಲು, ಬೀದಿಗಳಲ್ಲಿ ಸಂಚರಿಸಲು ಮತ್ತು ಸಾರಿಗೆ ಸೌಲಭ್ಯ ಇಲ್ಲದಿದ್ದರೆ ಅವರ ಬದುಕು ಕಷ್ಟಕರ. ಸರ್ಕಾರ ಅಂತಹ ವ್ಯಕ್ತಿಗಳಿಗೆ ಪಿಂಚಣಿ, ಸಾಮಾಜಿಕ ಭದ್ರತೆ ನೀಡುವುದು ಮಾತ್ರವಲ್ಲದೇ ಅವರ ಭವ್ಯ ಭವಿಷ್ಯವನ್ನು ಬೆಳಗಬೇಕಾಗಿದೆ.
ಅವರಲ್ಲಿ ಆತ್ಮಗೌರವ, ಸ್ವಾಭಿಮಾನ ಬೆಳೆಸಿ ತಾವು ಸಮಾಜದ ಅಂಗ ಎಂಬ ಭಾವನೆಯನ್ನು ಅವರಲ್ಲಿ ಬೆಳೆಸಬೇಕಾಗಿದೆ. ಇನ್ನೊಂದು ಮಹತ್ವದ ವಿಷಯ ವಿಕಲಾಂಗರ ಕ್ರೀಡೆ. ದೈಹಿಕ ದುರ್ಬಲತೆಯ ವ್ಯಕ್ತಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದರಿಂದ ಅವರು ಚೈತನ್ಯಶೀಲರಾಗಿ ಸೂಕ್ತ ನಡವಳಿಕೆ ಬೆಳೆಯುತ್ತದೆ.
ವಿಕಲಾಂಗ ವ್ಯಕ್ತಿಯಲ್ಲಿ ತಾನು ಜಗತ್ತಿನ ದುರ್ಬಲ ವ್ಯಕ್ತಿ ಎಂಬ ಭಾವನೆ ಮೊಳೆತರೆ, ಆರೋಗ್ಯಯುಕ್ತ ಸಮಾಜದಲ್ಲಿ ತಾನು ಹೊರಗಿನವ ಎಂಬ ಭಾವನೆ ಮೂಡಿದರೆ, ತನ್ನ ಮನೆಯಿಂದ ಹೊರಗೆ ರಸ್ತೆಯಲ್ಲಿ ನಡೆದಾಡಲೂ ಹಿಂಜರಿದರೆ ಆಗ ಪ್ರಸಕ್ತ ಪರಿಸ್ಥಿತಿಯಲ್ಲಿ ಯಾವ ಸಾಧನೆಯನ್ನೂ ಮಾಡುವುದು ಅಸಾಧ್ಯ.
ಸಕಾರಾತ್ಮಕ ಮನೋಭಾವಕ್ಕೆ ವಿಕಲಾಂಗರಿಂದಲೇ ಅವರು ಸ್ಫೂರ್ತಿ ಪಡೆಯಬಹುದು. ಯಶಸ್ಸಿನ ಉತ್ತುಂಗಕ್ಕೆ ಏರಿದ ವಿಕಲಾಂಗ ಕ್ರೀಡಾಪಟುಗಳು, ವಿಜ್ಞಾನಿಗಳ, ನಟರ ಜೀವಂತ ಉದಾಹರಣೆಗಳಿಂದ ವಿಕಲಾಂಗರಲ್ಲಿ ಸ್ಫೂರ್ತಿ ತುಂಬಬಹುದು..
ವಿಕಲಾಂಗರು ಸಮಾಜಕ್ಕೆ ಹೊರೆ, ಅಸಹಾಯಕರು, ಸದಾ ಸಹಾಯ ಬೇಡುವವರು ಎನ್ನುವುದು ಅನೇಕ ಮಂದಿ ಭಾವನೆಯಾಗಿದೆ. ಸಮಾಜದ ಧೋರಣೆಯನ್ನು ಬದಲಿಸಲು ದೀರ್ಘ ಕಾಲ ಹಿಡಿಯುವುದಂತೂ ನಿಜ. ವಿಕಲಾಂಗರಲ್ಲಿ ಸಮಾಜದೊಳಗೆ ಸೇರ್ಪಡೆಯ ತತ್ವವನ್ನು ಬಿತ್ತುವ ಮೂಲಕ ನಾವು ಹೆಚ್ಚು ಸ್ನೇಹಿ ಮತ್ತು ಏಕೀಕೃತ ಸಮಾಜವನ್ನು ಬೆಳೆಸಲು ಸಾಧ್ಯ, ಇದರಿಂದ ವಿಕಲಾಂಗರಲ್ಲದೇ ಪ್ರತಿಯೊಬ್ಬರಿಗೂ ಪ್ರಯೋಜನಕಾರಿ.
ವಿಕಲಾಂಗರ ದಿನವಾದ ಇಂದು ನಾವೆಲ್ಲ ಶಪಥ ಮಾಡಬೇಕಾದ್ದೇನೆಂದರೆ ರಸ್ತೆಯಲ್ಲಿ ಹೋಗುವ ವಿಕಲಾಂಗರು ಸಹಾಯ ಯಾಚಿಸಿದಾಗ ಕೈಲಾದ ನೆರವು ನೀಡುವುದು, ನಮ್ಮ ನಡುವೆ ಇರುವ ವಿಕಲಾಂಗರನ್ನು ಕೀಳಾಗಿ ಕಾಣದೇ ಅವರ ಬದುಕು ಹಸನಾಗಿಸಲು ಅಳಿಲು ಸೇವೆ ನೀಡುವುದು. ಆಗ ನಮ್ಮ ಬದುಕಲ್ಲೂ ಒಂದು ಸಾರ್ಥಕತೆಯ ಬಾವ ಮೂಡುತ್ತದೆ. ವಿಕಲಾಂಗರಿಗಾದರೂ ನೆರವು ನೀಡಿದ ಸಂತೃಪ್ತಿ ಮೂಡುತ್ತದೆ.
|