ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಥ ಯಾತ್ರಿ - ಈಗ ಬಿಜೆಪಿಯ ಮಹಾರಥಿ
ಪ್ರಧಾನಿ ಪದವಿ ಅಭ್ಯರ್ಥಿಯಾಗಿ ಆಡ್ವಾಣಿ ಹೆಸರಿಗೆ ಅಧಿಕೃತ ಮುದ್ರೆ
ND
ಕೊನೆಗೂ ಬಿಜೆಪಿ ಗಟ್ಟಿ ನಿರ್ಧಾರ ಮಾಡಿಬಿಟ್ಟಿದೆ. ಅಟಲ್ ಬಿಹಾರಿ ವಾಜಪೇಯಿಯವರು ಅನಾರೋಗ್ಯದಿಂದಾಗಿ ಪ್ರಧಾನಮಂತ್ರಿ ಅಭ್ಯರ್ಥಿತನದಿಂದ ದೂರ ಸರಿದಿದ್ದು, ರಥಯಾತ್ರೆಯ ಮಹಾರಥಿ ಲಾಲ್ ಕೃಷ್ಣ ಆಡ್ವಾಣಿ ಅವರು ಪ್ರಧಾನಿ ಪದವಿಯ ಅಧಿಕೃತ ಉಮೇದುವಾರರಾಗಿ ನೇಮಕಗೊಂಡಿದ್ದಾರೆ. ಬಿಜೆಪಿಯ ಒಂದು ವರ್ಗದ ಆಶಾವಾದವೂ ಇಮ್ಮಡಿಯಾಗಿಬಿಟ್ಟಿದೆ.

1929ರ ನವೆಂಬರ್ 8ರಂದು ಅವಿಭಜಿತ ಭಾರತದ ಕರಾಚಿಯಲ್ಲಿ ಜನಿಸಿದ್ದ ಆಡ್ವಾಣಿಯವರ ಪೂರ್ಣ ಹೆಸರು ಲಾಲ್‌ಕಿಶನ್‌ಚಂದ್ ಆಡ್ವಾಣಿ. ಪಕ್ಷದಲ್ಲಿ ಅವರು ಲಾಲ್‌ಜೀ ಎಂದೇ ಪ್ರೀತಿಯಿಂದ, ಗೌರವದಿಂದ ಕರೆಸಿಕೊಳ್ಳುತ್ತಾರೆ.

ಕರಾಚಿಯ ಸೈಂಟ್ ಪ್ಯಾಟ್ರಿಕ್ಸ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದ ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದವರು. ಯಾವತ್ತೂ ವಕಾಲತ್ತು ಮಾಡದಿದ್ದರೂ ರಾಷ್ಟ್ರೀಯ ವಾದದ ವಕಾಲತ್ತು ಮಾಡುತ್ತಲೇ ಬಂದವರು.

ಒಂದು ಕಾಲದಲ್ಲಿ ಚಿತ್ರ ಸಮೀಕ್ಷೆ ಬರೆಯುತ್ತಿದ್ದ ಬಿಜೆಪಿಯ ಈ ನಾಯಕ, ಚಿತ್ರಗಳ ಜೊತೆಗೆ ಪುಸ್ತಕ ಓದುವುದು, ಅವುಗಳನ್ನು ಸಂಗ್ರಹಿಸುವುದು ಹವ್ಯಾಸವುಳ್ಳವರು.

ಬ್ರಿಟಿಷರೇ, ದೇಶ ಬಿಟ್ಟು ತೊಲಗಿ ಎಂದು ಗಾಂಧೀಜಿ ಅವರು ಕರೆ ನೀಡಿದ ವರ್ಷದಲ್ಲಿ ಅಂದರೆ 1942ರಲ್ಲಿ ಆಡ್ವಾಣಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದರು. ಆ ಸಮಯ ಅವರು ಕರಾಚಿಯಲ್ಲಿ ಆರೆಸ್ಸೆಸ್ ಶಾಖೆಯ ಮುಖ್ಯಸ್ಥರಾಗಿದ್ದರು.

1951ರಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರಿಂದ ಸಂಸ್ಥಾಪಿತವಾದ ಜನಸಂಘದ ಮೂಲಕ ರಾಜಕೀಯಕ್ಕೆ ಸಕ್ರಿಯವಾಗಿ ಇಳಿದ ಆಡ್ವಾಣಿ, 1986ರಲ್ಲಿ ಜನಸಂಘದ ಸುಧಾರಿತ ರೂಪವಾದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದರು. ಆ ಬಳಿಕ ರಾಮ ಮಂದಿರ ಚಳವಳಿ ಮತ್ತು ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಅವರ 'ಮಂಡಲ' ಧೋರಣೆಯ ವಿರುದ್ಧ ರಥ ಯಾತ್ರೆ ಕೈಗೊಂಡು ದೇಶದ ಉದ್ದಗಲಗಳಲ್ಲಿ ಹೆಸರು ಮಾಡಿದರು.

70ರ ದಶಕದಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಆಡ್ವಾಣಿ ಅವರು 1977ರ ಜನತಾ ಸರಕಾರದಲ್ಲಿ ಮಾಹಿತಿ ಪ್ರಸಾರ ಖಾತೆ ಸಚಿವರಾಗಿದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಹಾಕಲಾಗಿದ್ದ ಕಡಿವಾಣವನ್ನು ಕಿತ್ತೊಗೆದರು. ತುರ್ತು ಪರಿಸ್ಥಿತಿ ಸಂದರ್ಭ ಅವರು ಬೆಂಗಳೂರು ಜೈಲಿನಲ್ಲಿ ಕಾಲಯಾಪನೆ ಮಾಡಬೇಕಾಗಿತ್ತು. ಅವರು ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದು 1989ರಲ್ಲಿ.

ರಾಜಸ್ತಾನದಲ್ಲಿ ಸಂಘದ ಕಾರ್ಯಚಟುವಟಿಕೆಗಳ ಉಸ್ತುವಾರಿ ವಹಿಸಿಕೊಂಡ ಬಳಿಕ, 1957ರಲ್ಲಿ ದೆಹಲಿಗೆ ಆಗಮಿಸಿದ ಆಡ್ವಾಣಿ, 1973ರಿಂದ 1977ರವರೆಗೆ ಜನಸಂಘದ ಅಧ್ಯಕ್ಷ ಹುದ್ದೆ ನಿಭಾಯಿಸಿದರು. 1980ರಲ್ಲಿ ಭಾರತೀಯ ಜನತಾ ಪಕ್ಷ ಜನ್ಮ ತಾಳಿದಾಗ ಅವರು ಅದರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು ಮತ್ತು 1986ರಲ್ಲಿ ಅದರ ಅಧ್ಯಕ್ಷರೂ ಆದರು. ಇದಕ್ಕೆ ಮೊದಲು, ಅಂದರೆ 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ, ಅನುಕಂಪದ ಅಲೆಯಿಂದಾಗಿ ಬಿಜೆಪಿಯ ಲೋಕಸಭೆಯ ಸಂಖ್ಯಾಬಲ 2ಕ್ಕೆ ಇಳಿದಿತ್ತು. ಆ ಸಂದರ್ಭದಲ್ಲಿ ದಿಗ್ಗಜರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಕೂಡ ಚುನಾವಣೆ ಸೋತಿದ್ದರು.

ಕೊನೆಯ ಬಾರಿಗೆ ಅವರು ಬಿಜೆಪಿ ಹುದ್ದೆ ಅಲಂಕರಿಸಿದ್ದಾಗ, ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿದ್ದವು. ಪಾಕಿಸ್ತಾನ ಯಾತ್ರೆಗೆ ತೆರಳಿದ ಸಂದರ್ಭ ಆಡ್ವಾಣಿ ಅವರು ಮೊಹಮದಾಲಿ ಜಿನ್ನಾ ಕುರಿತು ನೀಡಿದ ಹೇಳಿಕೆ ಹಿಂದೂವಾದಿ ಸಂಘಟನೆಗಳನ್ನು ಕೆರಳಿಸಿತ್ತು. 2005ರ ಸೆಪ್ಟೆಂಬರ್ 18ರಂದು ಅವರು ಬಿಜೆಪಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಬೇಕಾಗಿ ಬಂದು, ಆಗ ರಾಜನಾಥ್ ಸಿಂಗ್ ಅವರು ಪಕ್ಷಾಧ್ಯಕ್ಷ ಹುದ್ದೆಗೇರಿದರು. ಇದಕ್ಕೆ ಮೊದಲೇ, ಸನ್ಯಾಸಿನಿ ಉಮಾಭಾರತಿ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರು ಆಡ್ವಾಣಿ ವಿರುದ್ಧ ಬಂಡಾಯವೆದ್ದಿದ್ದರು.

ದೇಶದ ಪ್ರಧಾನಿಯಾಗುವ ಬಯಕೆಯನ್ನು ಆಡ್ವಾಣಿ ಅವರು 2006ರ ಡಿಸೆಂಬರ್ ತಿಂಗಳಲ್ಲೇ ಹೊರಗೆಡಹಿದ್ದರು. ಆ ಸಂದರ್ಭದಲ್ಲೂ ಪಕ್ಷದೊಳಗೆ ಅಪಸ್ವರ ಕೇಳಿಬಂದಿತ್ತು. ಮುರಳಿ ಮನೋಹರ ಜೋಷಿಯಂತಹ ಹಿರಿಯ ಮುಖಂಡರು ಕೂಡ ಈ ಅಂತರ್ ಕಲಹದಲ್ಲಿ ತೊಡಗಿದ್ದರು.

ಪ್ರತಿಪಕ್ಷ ಮುಖಂಡನು ಸ್ವಾಭಾವಿಕವಾಗಿ ಪ್ರಧಾನಿ ಪದವಿಯ ಉಮೇದುವಾರನಾಗಿರುತ್ತಾನೆ ಎಂದು ಕೂಡ ಆಡ್ವಾಣಿ ಅವರು ಟೆಲಿವಿಷನ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ಬ್ರಿಟಿಷ್ ಸಂಸದೀಯ ಕಾನೂನನ್ನು ಉಲ್ಲೇಖಿಸಿ ಹೇಳಿದ್ದರು. ಅಂದಿನಿಂದ ಬಿಜೆಪಿಯಲ್ಲಿ ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಚಿಂತನ-ಮಂಥನ ನಡೆಯುತ್ತಲೇ ಇತ್ತು. ಇದೀಗ ಸೋಮವಾರ ಈ ಕುರಿತ ಚರ್ಚೆಗಳಿಗೆ ತೆರೆ ಬಿದ್ದಿದ್ದು, ಆಡ್ವಾಣಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿಯು ಸಂಕಲ್ಪ ಕೈಗೊಂಡಿದೆ.

ಎರಡು ಇದ್ದ ಪಕ್ಷದ ಸಂಸದೀಯ ಬಲವನ್ನು ಅಧಿಕಾರದ ಚುಕ್ಕಾಣಿಗೆ ಏರಿಸುವ ಸಂಖ್ಯೆಗೆ ತಲುಪಿಸುವ ತಾಕತ್ತು ಆಡ್ವಾಣಿಗೆ ಇದೆಯೇ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು. ಹಾಗಂತ ಆಡ್ವಾಣಿಯ ಅಭಿಮಾನಿ ಕಾರ್ಯಕರ್ತರು ಆಶಾವಾದದಲ್ಲಿದ್ದಾರೆ.
ಮತ್ತಷ್ಟು
ವಿಕಲಾಂಗರ ಬದುಕಲ್ಲಿ ಚೈತನ್ಯ ಸಾಧ್ಯವೇ?
ಮಹಿಳೆಯರ ವಿವಿಯಲ್ಲಿ ಪುರುಷರದ್ದೇ ಕಾರುಬಾರು
ಕರ್ನಾಟಕದಲ್ಲಿ ವಂಶ ರಾಜಕಾರಣ
ಲಜ್ಜೆಗೆಟ್ಟ ರಾಜಕೀಯ: ಕರ್ನಾಟಕದ ಮತ್ತೊಂದು ನಾಟಕ ಅಂತ್ಯ
ಎಮ್ಮೆಗೊಂದು ಚಿಂತೆ..ಸಮಗಾರಗೊಂದು ಚಿಂತೆ..!
ನಿಮ್ಮ ಭಾಷೆ ಎಂದೆಂದಿಗೂ ಉಸಿರಾಗಿರಲಿ