ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ವಪ್ನ ನಗರಿ ದುಃಸ್ವಪ್ನವಾದಾಗ...
ಮುಂಬಯಿ: ಹೊಸವರ್ಷದ ನಶೆಯಲ್ಲಿ ಮಹಿಳೆಯರ ಮೇಲೆ ಅಮಾನುಷ ವರ್ತನೆ
ಹೊಸ ವರ್ಷದ ಸಂಭ್ರಮ ಅತಿಯಾದರೆ ಏನಾಗುತ್ತದೆ ಎಂಬುದಕ್ಕೆ ಜ್ವಲಂತ ಸಾಕ್ಷಿ ಸ್ವಪ್ನನಗರಿ ಮುಂಬಯಿ. ಕಳೆದ ವರ್ಷದಂತೆಯೇ ಅಲ್ಲಿ ಈ ಬಾರಿಯೂ ತರುಣಿಯರಿಗೆ ಕಾಮುಕರಕಾಟ ಎದುರಾಗಿದೆ.

ಸುಮಾರು 70 ಮಂದಿ "ಪೌರುಷವಂತರ" ಗುಂಪೊಂದು ಜುಹು ಬೀಚಿನಲ್ಲಿ ಅಸಹಾಯ ಮಹಿಳೆಯರ ಮೇಲೆ ಪ್ರಾಣಿಗಳಂತೆ ಎರಗಿ ಮನಬಂದಂತೆ ಕಪಿಚೇಷ್ಟೆ ಮಾಡಿದೆ. ಕಳೆದ ವರ್ಷ ಗೇಟ್ ವೇ ಆಫ್ ಇಂಡಿಯಾ ಬಳಿ ಹೊಸ ವರ್ಷಾಚರಣೆ ಸಂದರ್ಭ ಇಂಥದ್ದೇ ಪ್ರಕರಣ ನಡೆದು ದೇಶಾದ್ಯಂತ ಸುದ್ದಿ ಮಾಡಿತ್ತು. ಈ ವರ್ಷವೂ ಮತ್ತದೇ ಚಾಳಿ ಜುಹು ಬೀಚಿನಲ್ಲಿ.

ಎಲ್ಲಕ್ಕಿಂತ ಚಿಂತಾಜನಕ ಸ್ಥಿತಿಯೆಂದರೆ ಮುಂಬಯಿ ಪೊಲೀಸರ ಹೇಳಿಕೆ. ಮಾಧ್ಯಮಗಳಲ್ಲೆಲ್ಲಾ ಚಿತ್ರ ಸಹಿತ ಈ ಕುರಿತು ವರದಿ ಪ್ರಕಟವಾದರೂ, ಅವರು ನೀಡಿದ್ದು ಹೇಳಿಕೆ ಏನು ಗೊತ್ತೇ? "ಇಷ್ಟು ಚಿಕ್ಕ ವಿಷಯವನ್ನು ದೊಡ್ಡದೇಕೆ ಮಾಡುತ್ತೀರಿ?"!!

ಸ್ಥಳದಲ್ಲಿ ಹಾಜರಿದ್ದ ಮಾಧ್ಯಮದ ಛಾಯಾಗ್ರಾಹಕರೇ ಕ್ಯಾಲಿಫೋರ್ನಿಯಾದ ಆ ಅನಿವಾಸಿ ಭಾರತೀಯ ಮಹಿಳೆಯನ್ನು ರಕ್ಷಿಸಿದ್ದರು. ದೇಶದ ಅತ್ಯಂತ ಸುರಕ್ಷಿತ ನಗರ ಎಂಬ ಹಣೆಪಟ್ಟಿ ಹೊತ್ತಿದ್ದ ಮುಂಬಯಿ ಮೇಲೆ ಇದೊಂದು ಕಪ್ಪುಚುಕ್ಕೆ. ಇಬ್ಬರು ಮಹಿಳೆಯರು ಸೋಮವಾರ ಮಧ್ಯರಾತ್ರಿ ಹೊಸ ವರ್ಷಾಚರಣೆ ಸಂದರ್ಭ ಇಬ್ಬರು ಪುರುಷರೊಂದಿಗೆ ಫೈವ್ ಸ್ಟಾರ್ ಹೋಟೆಲಿನಿಂದ ಜುಹು ಬೀಚ್ ಕಡೆಗೆ ಹೊರಟಿದ್ದಾಗ ಈ ಘಟನೆ ನಡೆದಿತ್ತು.

ಪೊಲೀಸರು ಕೇಸು ದಾಖಲಿಸಿಕೊಳ್ಳಲು ಹಿಂದೆ-ಮುಂದೆ ನೋಡಿದ್ದರು. ಅದು ನಮ್ಮ ಠಾಣೆಯ ವ್ಯಾಪ್ತಿಯಲ್ಲಿಲ್ಲ ಅಂತೆಲ್ಲಾ ಸತಾಯಿಸಿದರು. ಕೊನೆಗೂ ಒತ್ತಡ ಹೆಚ್ಚಾದಾಗ ಕೇಸು ದಾಖಲಿಸಿಕೊಂಡರು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಶನರ್ ಡಿ.ಎನ್.ಜಾಧವ್, "ಇಂಥದ್ದೆಲ್ಲಾ ಎಲ್ಲೆಲ್ಲೂ ನಡೆಯುತ್ತದೆ. ನಾನಿರುವಲ್ಲೂ ನಡೆಯುತ್ತದೆ. ಪ್ರತಿಯೊಬ್ಬರ ಹಿಂದೆ ಒಂದೊಂದು ಪೊಲೀಸರನ್ನು ನಿಯೋಜಿಸುವುದು ಸಾಧ್ಯವಿಲ್ಲ" ಎಂದು ನೀಡಿದ ಹೇಳಿಕೆ ಜನತೆಯ ಆಕ್ರೋಶ ಹೆಚ್ಚಿಸಲು ಕಾರಣವಾಯಿತು. ಸಣ್ಣ ದಿಣ್ಣೆಯನ್ನು ಪರ್ವತ ಮಾಡಬೇಡಿ ಅನ್ನುವುದು ಅವರು ಮಾಧ್ಯಮಗಳಿಗೆ ನೀಡಿದ ಉಚಿತ ಸಲಹೆ.

ಈ ಘಟನೆ ನಡೆದ ಸುಮಾರು 36 ಗಂಟೆಗಳ ಬಳಿಕವಷ್ಟೇ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ಆ ಕರಾಳ ಘಟನೆಯನ್ನು ಮಹಿಳೆ ಮತ್ತು ಆಕೆಯ ಪತಿಯೇ ಟ್ಯಾಬ್ಲಾಯ್ಡ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

"ನಾವು ಆ ಕರಾಳ ರಾತ್ರಿ ಹೋಟೆಲಿನಿಂದ ಹೊರಬಿದ್ದಾಗ, ಯಾವುದೇ ರೀತಿಯ ತೊಂದರೆ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಸುಮಾರು 50ಕ್ಕೂ ಹೆಚ್ಚಿದ್ದ ಜನರು ನನ್ನ ಪತ್ನಿಯನ್ನು ಹಿಡಿದೆಳೆದರು. ಆಕೆ ಹಾಗೂ ಆಕೆಯ ತಂಗಿಯ ಜತೆಗೆ ಅತ್ಯಂತ ಅಸಭ್ಯವಾಗಿ ವರ್ತಿಸಿದರು. ಅವರು ಇಷ್ಟೆಲ್ಲಾ ಮಾಡುತ್ತಿದ್ದರೂ ಯಾರು ಕೂಡ ನಮ್ಮ ಸಹಾಯಕ್ಕೆ ಬರಲಿಲ್ಲ".

ಹಾಗಿದ್ದರೆ ಮುಂಬಯಿಗರು ಬೇರೆಯವರಿಗೆ ಸಹಾಯ ಮಾಡುವ ಮನಸ್ಸಿಲ್ಲದವರು ಎಂಬುದು ನಮಗೆ ಖಚಿತವಾಯಿತು ಎಂದು ಅವರು ಹತಾಶೆಯಿಂದ ಹೇಳಿದ್ದಾರೆ.

ಇಂಥದ್ದೇ ಪ್ರಕರಣ ಕೇರಳದ ಕೊಚ್ಚಿಯಲ್ಲೂ ನಡೆದಿದೆ. ವಿದೇಶೀ ತರುಣಿಯೊಬ್ಬಳ ಮೇಲೆ ಕೈಮಾಡಲಾಗಿದೆ. ಆಕೆಯ ಹತಾಶ ತಂದೆಯಂತೂ ಭಾರತೀಯರ ಈ ನಡತೆ ಬಗ್ಗೆ ತೀರಾ ಅಸಹ್ಯ ಎಂದು ದೂಷಿಸಿದ್ದಾರೆ. "ನಮಗೆ ಭಾರತ, ಭಾರತೀಯರ ಬಗ್ಗೆ ಗೌರವವಿದೆ. ಆದರೆ ಈ ಯುವಕರೇಕೆ ಹೀಗೆ ಮಾಡುತ್ತಿದ್ದಾರೆ? ಅವರನ್ನು ತಡೆಯುವವರಿಲ್ಲವೇ" ಎಂದು ಪ್ರಶ್ನಿಸಿರುವುದು ನಮ್ಮ ವ್ಯವಸ್ಥೆಯ ಮೇಲಿಟ್ಟ ಕಪ್ಪು ಚುಕ್ಕಿ.

ತಾವೆಷ್ಟೇ ಸಂಭ್ರಮ ಪಡಲಿ, ಆದರೆ ಬೇರೆಯವರಿಗೇಕೆ ತೊಂದರೆ ಕೊಡಬೇಕು ಎಂಬುದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವ ಪ್ರಶ್ನೆ. ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಪೊಲೀಸರೇ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿ ಹೇಳಿಕೆ ನೀಡಿದರೆ, ಇಂಥ ಕಾಮಪಿಪಾಸುಗಳಿಗೆ ಉತ್ತೇಜನ ನೀಡಿದಂತಾಗುವುದಿಲ್ಲವೇ?
ಮತ್ತಷ್ಟು
ರಾಜಕೀಯ ಹತ್ಯೆಗಳ ತಾಣ ಉಪಖಂಡ
ಹೋರಾಟವೇ ಬದುಕಾಗಿಸಿದ ಬೇನಜೀರ್
ವೆಬ್‌ದುನಿಯಾ ಸಮೀಕ್ಷೆ - 2007
ಮೋದಿ, ಮಾಧ್ಯಮ ಮತ್ತು ರಾಜಕೀಯ
ಬಿಜೆಪಿ ವಿಜಯ : ದಿಲ್ಲಿ ಗದ್ದುಗೆಯಲ್ಲಿ ಪಶ್ಚಾತ್ ಕಂಪನ
ಮೋದಿ ಮೋಡಿಗೆ ಮತ್ತೆ ಅರಳಿದ '' ಕಮಲ''