ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೆಬ್‌ದುನಿಯಾ ಸಮೀಕ್ಷೆ: ಬಚ್ಚನ್, ಐಶ್, ಮೋದಿ, ಸಾನಿಯಾ ಶ್ರೇಷ್ಠರು
PTI
2007ರ ಅತ್ಯಂತ ಜನಪ್ರಿಯ ವ್ಯಕ್ತಿಗಳು ಯಾರು ಎಂದು ಜನಾಭಿಪ್ರಾಯ ಸಂಗ್ರಹಿಸುವುದಕ್ಕಾಗಿ ವೆಬ್‌ದುನಿಯಾ ನಡೆಸಿದ ಅಭೂತಪೂರ್ವ ಆನ್‌ಲೈನ್ ಸಮೀಕ್ಷೆಯಲ್ಲಿ ಬಾಲಿವುಡ್‌ನ ಪ್ರಥಮ ಕುಟುಂಬ ಎಂಬ ಹೆಗ್ಗಳಿಕೆಯ ಬಚ್ಚನ್ ಕುಟುಂಬ ಪಾರಮ್ಯ ಮೆರೆದಿದೆ. ಕರ್ನಾಟಕಕ್ಕೆ ಸಂಬಂಧಿಸಿ ನಡೆಸಲಾದ ಸಮೀಕ್ಷೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಮೂಡಿಬಂದಿದ್ದಾರೆ. ರಾಜ್ಯದ ಸಮೀಕ್ಷಾ ವಿವರ ಇಲ್ಲಿದೆ.

9 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುವ ಭಾರತದ ಮೊದಲ ಬಹುಭಾಷಾ ಪೋರ್ಟಲ್ ವೆಬ್‌ದುನಿಯಾ, ಸಂದು ಹೋದ ವರ್ಷದ ಜನಪ್ರಿಯ ವ್ಯಕ್ತಿಗಳನ್ನು ವಿಭಿನ್ನ ವಿಭಾಗಗಳಲ್ಲಿ ಗುರುತಿಸುವ ನಿಟ್ಟಿನಲ್ಲಿ 100 ಮಿಲಿಯ ನೆಟ್ ಬಳಕೆದಾರರಿಗಾಗಿ ಈ ವಿಶಿಷ್ಟವಾದ, ಮುಕ್ತವಾಗಿ ಪಾಲ್ಗೊಳ್ಳಬಹುದಾದ ಮತದಾನ ಆಯ್ಕೆಯನ್ನು ಕಲ್ಪಿಸಿಕೊಟ್ಟಿತ್ತು. 2007ರಲ್ಲಿ ರಾಜಕೀಯ, ಕ್ರೀಡೆ, ಚಲನಚಿತ್ರ ಮತ್ತಿತರ ಕ್ಷೇತ್ರಗಳಲ್ಲಿ ಶ್ರೇಷ್ಠರು ಯಾರು, ಯಾವುದು ಜನಪ್ರಿಯ ಚಲನಚಿತ್ರ ಎಂಬುದೇ ಮುಂತಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು.

ಡಿಸೆಂಬರ್ 21ರಿಂದ ಜನವರಿ 10ರವರೆಗೆ ಮತದಾನಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ನಮ್ಮ ನಿರೀಕ್ಷೆಗೂ ಮೀರಿ ಸಾವಿರಾರು ಮಂದಿ ನೆಟ್ ಬಳಕೆದಾರರು ತಮ್ಮ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದ ತಕ್ಷಣವೇ ಯಾರು ಮುಂದಿದ್ದಾರೆ, ಯಾರು ಹಿಂದಿದ್ದಾರೆ ಎಂಬುದನ್ನು ತಿಳಿಯುವ ಅವಕಾಶವನ್ನು ಎಲ್ಲಾ ಭಾಷೆಗಳ ಪೋರ್ಟಲ್‌ಗಳಲ್ಲಿ ಒದಗಿಸಲಾಗಿತ್ತು. ಕನ್ನಡ, ಹಿಂದಿ, ತಮಿಳು, ಮಲಯಾಳಂ, ಪಂಜಾಬಿ, ಮರಾಠಿ, ತೆಲುಗು, ಬಂಗಾಳಿ ಮತ್ತು ಗುಜರಾತಿ ಭಾಷೆಗಳ ನೆಟ್ ಬಳಕೆದಾರರು ಇದರಲ್ಲಿ ಸಂಭ್ರಮದಿಂದಲೇ ಪಾಲ್ಗೊಂಡರು.

IFM
ಕೆಲವು ಪ್ರಶ್ನೆಗಳಿಗಂತೂ ಅಚ್ಚರಿಯ ಫಲಿತಾಂಶಗಳು ದೊರೆತವು. ಬಚ್ಚನ್ ಕುಟುಂಬದ ತಂದೆ, ಮಗ ಮತ್ತು ಸೊಸೆ ಕಾಣಿಸಿಕೊಂಡ ವಿಭಾಗಗಳಲ್ಲಿ, ಆನ್‌ಲೈನ್ ಮತದಾರರು ಇಲ್ಲಿ ಸ್ಪರ್ಧೆಯೇ ಇಲ್ಲ ಎಂಬಂತೆ ಮತ ಚಲಾಯಿಸಿದರು. ಈ ಮೂವರೂ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡರು.

ವೆಬ್‌ದುನಿಯಾ ಮತದಾನವು ಹಲವು ಲೆಕ್ಕಾಚಾರಗಳನ್ನೂ ತಲೆಕೆಳಗಾಗಿಸಿದೆ. ಉದಾಹರಣೆಗೆ, ವಿವಾಹ ಎನ್ನುವುದು ಬಾಲಿವುಡ್ ಹೀರೋಯಿನ್‌ಗಳ ಜನಪ್ರಿಯತೆ ಕುಗ್ಗಿಸುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯ. ಇಲ್ಲಿ ದೊರೆತ ಮತಗಳನ್ನು ನೋಡಿದರೆ, ಐಶ್ವರ್ಯಾ ರೈ ಬಚ್ಚನ್, ಅತ್ಯಂತ ನೆಚ್ಚಿನ ವ್ಯಕ್ತಿಯಾಗಿ ಮೂಡಿಬಂದಿರುವುದು ಕೇವಲ ಜನಪ್ರಿಯ ನಟಿಯರು ವಿಭಾಗದಲ್ಲಿ ಮಾತ್ರವೇ ಅಲ್ಲ, ದೇಶದ ಅತ್ಯಂತ ಜನಪ್ರಿಯ ಮಹಿಳಾ ವಿಭಾಗದಲ್ಲೂ ಅವರಿಗೇ ಅತ್ಯಧಿಕ ಮತಗಳು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (17.69% ಮತಗಳು), ಸೂಪರ್ ಕಾಪ್ ಕಿರಣ್ ಬೇಡಿ (14.61%), ಟೆನಿಸ್ ತಾರೆ ಸಾನಿಯಾ ಮಿರ್ಜಾ, (6.54%),ಮತ್ತು ದೇಶದ ಪ್ರಥಮ ಮಹಿಳೆ ಪ್ರತಿಭಾ ಪಾಟೀಲ್ (3.54%) ಅವರಿಗಿಂತ ಐಶ್ವರ್ಯಾ ಬಹಳಷ್ಟು ಮುಂದೆ ಇದ್ದಾರೆ. ಈ ವಿಭಾಗದಲ್ಲಿದ್ದ ಇತರರೆಂದರೆ ಮಮತಾ ಬ್ಯಾನರ್ಜಿ ಮತ್ತು ಜಯಲಲಿತಾ, ಮುಖ್ಯಮಂತ್ರಿಗಳಾದ ವಸುಂಧರಾ ರಾಜೇ, ಮಾಯಾವತಿ ಮತ್ತು ಶೀಲಾ ದೀಕ್ಷಿತ್.

ಭಾರತದ ಅತ್ಯುತ್ತಮ ನಟಿ ವಿಭಾಗದಲ್ಲಿ ಐಶ್ವರ್ಯಾ ಮತ್ತಷ್ಟು ಮುಂದಿದ್ದಾರೆ. ಅವರಿಗೆ ದೊರೆತ ಒಟ್ಟು ಮತಗಳು ಶೇ. 64.4%. ಎರಡನೇ ಸ್ಥಾನ ದೊರೆತದ್ದು 18.87% ಓಟು ಪಡೆದ ರಾಣಿ ಮುಖರ್ಜಿಗೆ.

ಇನ್ನು, 2007ರ ಸೆಕ್ಸೀ ನಟಿಯರ ಪಟ್ಟಿಯಲ್ಲಿ ಬಿಪಾಶಾ ಬಸುವಿಗೆ ದೊರೆತ ಮತಗಳು 55% ಕ್ಕೂ ಹೆಚ್ಚು. ಈ ಸ್ಥಾನಕ್ಕೆ ಅರ್ಹತೆಯಿದ್ದ ಮಲ್ಲಿಕಾ ಶೆರಾವತ್ ಸಾಕಷ್ಟು ಹಿಂದೆ ಬಿದ್ದು ಎರಡನೇ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆಕೆಗೆ ದೊರೆತ ಮತಗಳು 17.7%. ದಕ್ಷಿಣ ರಾಜ್ಯಗಳಿಂದ ಅಭಿನಯಶ್ರೀ, ನಮಿತಾ ಮತ್ತು ನಯನತಾರಾ ಹೆಸರುಗಳಿದ್ದವು.

ಪ್ರತಿಯೊಂದು ವಿಭಾಗಕ್ಕೆ ಯಾರ ಹೆಸರನ್ನು ಸೇರ್ಪಡಿಸಬೇಕು ಎಂದು ನಿರ್ಧರಿಸಿದ್ದು ವೆಬ್‌ದುನಿಯಾದ ವಿವಿಧ ಭಾಷಾ ಪೋರ್ಟಲ್‌ಗಳ 9 ಮಂದಿ ಸಂಪಾದಕರ ತಂಡ. ಕಳೆದ ವರ್ಷ ಸುದ್ದಿ ಮತ್ತು ಲೇಖನ ವಿಭಾಗದಲ್ಲಿ ಹಾಗೂ ಶೋಧ ಎಂಜಿನ್‌ಗಳಲ್ಲಿ ಅತಿ ಹೆಚ್ಚು ಬಾರಿ ಕಾಣಿಸಿಕೊಂಡ ಹೆಸರುಗಳನ್ನೇ ಹೆಕ್ಕಿ ಅವರು ಈ ಪಟ್ಟಿ ತಯಾರಿಸಿದ್ದರು.

ಮಹಿಳಾ ವಿಭಾಗದಲ್ಲಿ ಐಶ್ವರ್ಯಾ ರೈ ಪಾರುಪತ್ಯ ಸಾಧಿಸಿದ್ದರೆ, ಪುರುಷರ ವಿಭಾಗದಲ್ಲಿ ಆಕೆಯ ಮಾವ- ಅಮಿತಾಭ್ ಬಚ್ಚನ್ ಅತ್ಯಂತ ಜನಪ್ರಿಯ ನಟನ ಪಟ್ಟ ಅಲಂಕರಿಸಿದರು. ಬಾಲಿವುಡ್‌ನಿಂದ ವರ್ಷದ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿರುವ ಶಾರೂಖ್ ಖಾನ್‌ಗೆ ಕೇವಲ 8.8 ಶೇ. ಮತಗಳು ದೊರೆತದ್ದು ಅಚ್ಚರಿ ಮೂಡಿಸಿದೆ. ಅಮಿತಾಭ್‌ಗೆ ಸುಮಾರು ಶೇ.40ರಷ್ಟು ಮತ ದೊರೆತಿದ್ದರೆ, ಮಗ ಅಭಿಷೇಕ್ ಬಚ್ಚನ್ 23.71 ಶೇ. ಮತ ಪಡೆದು ಎರಡನೇ ಸ್ಥಾನ ಗಳಿಸಿದ್ದಾರೆ. ಹೃತಿಕ್ ರೋಶನ್ (13.58 ಶೇ.) ಮತ್ತು ದಕ್ಷಿಣ ರಾಜ್ಯಗಳ ಫೇವರಿಟ್ ರಜನೀಕಾಂತ್ (4.02 ಶೇ.) ಓಟು ಗಳಿಸಿದರು. ಖಾನ್‌ಗಳ ನಡುವಣ ಹೋರಾಟ ಇಲ್ಲಿ ಕಂಡುಬರಲೇ ಇಲ್ಲ. ಯಾಕೆಂದರೆ ಸಲ್ಮಾನ್ ಖಾನ್‌ಗೆ ಯಾವುದೇ ಮತಗಳು ಬೀಳಲಿಲ್ಲ ಮತ್ತು ಅಮೀರ್ ಖಾನ್‌ಗೆ ಲಭಿಸಿದ್ದು ಶೇ.3.43 ಓಟುಗಳು.

ಫಲಿತಾಂಶದಲ್ಲಿ ಏರುಪೇರುಗಳು ಕೂಡ ಆಶ್ಚರ್ಯಕರವಾಗಿಯೇ ಇದ್ದವು. ಒಂದು ಹಂತದಲ್ಲಿ ಶಾರೂಖ್ ಖಾನ್ ಅವರ “ಚಕ್ ದೇ ಇಂಡಿಯಾ” 2007ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಬಚ್ಚನ್ ಕುಟುಂಬದ ಅಭಿಮಾನಿಗಳು ಅಭಿಷೇಕ್, ಐಶ್ವರ್ಯಾ ಇದ್ದ “ಗುರು” ಚಿತ್ರವನ್ನೇ ಮುಂದೆ ತಂದರು. ದೇಶ ವಿದೇಶಗಳಲ್ಲಿ ಹುಚ್ಚೆಬ್ಬಿಸಿದ್ದ ದಕ್ಷಿಣದ “ಶಿವಾಜಿ” ಚಿತ್ರವು ಓಂ ಶಾಂತಿ ಓಂಗೆ ಪ್ರಬಲ ಪ್ರತಿಸ್ಪರ್ಧೆ ನೀಡಿ ನಾಲ್ಕನೇ ಸ್ಥಾನ ಪಡೆಯಿತು.

PTI
ಜಾಗತಿಕವಾಗಿ ಅತ್ಯಂತ ಜನಪ್ರಿಯ ವ್ಯಕ್ತಿ ವಿಭಾಗದಲ್ಲಿ ಹಲವು ಏಳುಬೀಳುಗಳು ಕಂಡವು. ಒಂದು ಹಂತದಲ್ಲಿ ಸುನೀತಾ ವಿಲಿಯಮ್ಸ್ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್‌ಗೆ ಗಂಭೀರ ಪ್ರತಿಸ್ಪರ್ಧೆ ಒಡ್ಡಿದ್ದರು. ಆದರೆ, ವಿಶ್ವದ “ದೊಡ್ಡಣ್ಣ” ಎಂದೇ ಕರೆಸಿಕೊಳ್ಳುವ ಬುಷ್ ಅಂತಿಮವಾಗಿ ತಮ್ಮ ಹೆಸರು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. 29.84 ಶೇ. ಮತಗಳೊಂದಿಗೆ ಮೊದಲ ಸ್ಥಾನ ಗಳಿಸಿದ ಅವರು, 24.45 ಶೇ. ಮತ ಗಳಿಸಿದ ಸುನೀತಾ ಮತ್ತು ಉಕ್ಕಿನ ದೊರೆ ಲಕ್ಷ್ಮೀ ಮಿತ್ತಲ್ (ಶೇ.22) ಅವರನ್ನು ಹಿಂದಿಕ್ಕಿದರು.

ದೇಶದ ಅತ್ಯಂತ ಜನಪ್ರಿಯ ವ್ಯಕ್ತಿ ವಿಭಾಗದಲ್ಲೂ ಮೇಲುಗೈ ಸಾಧಿಸಿದವರು ಅಮಿತಾಭ್ ಬಚ್ಚನ್. ಸುಮಾರು ಶೇ.40 ಮತ ಗಳಿಸಿದ ಅವರು, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ (16.34 ಶೇ.) ಮತ್ತು ಮುಖೇಶ್ ಅಂಬಾನಿ (14.88 ಶೇ.) ಗಿಂತ ಸಾಕಷ್ಟು ಮುಂದಿದ್ದಾರೆ. ಈ ವಿಭಾಗದಲ್ಲಿ ಸ್ಥಾನ ಪಡೆದಿರುವ ಏಕೈಕ ಮಹಿಳೆ ಲತಾ ಮಂಗೇಶ್ಕರ್ 6.98 ಮತ ಗಳಿಸುವಲ್ಲಿ ಯಶಸ್ವಿಯಾದರೂ ರಾಹುಲ್ ಗಾಂಧಿ, ರತನ್ ಟಾಟಾ, ಶ್ರೀಶ್ರೀ ರವಿಶಂಕರ್ ಮತ್ತು ಮನಮೋಹನ್ ಸಿಂಗ್ ಅವರಿಗಿಂತ ಮುಂದಿದ್ದಾರೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಮತ್ತು ಬಾಬಾ ರಾಮದೇವ್ ಆಕೆಗಿಂತ ಹೆಚ್ಚು ಮತಗಳನ್ನು ಪಡೆದರು. ರತನ್ ಟಾಟಾ ಅವರು ತಮ್ಮ ಲಕ್ಷ ರೂ. ಕಾರು ನ್ಯಾನೋ ಬಿಡುಗಡೆ ಮಾಡಿದ ದಿನವೇ ಮತದಾನ ಮುಗಿದಿತ್ತು. ಮತ್ತಷ್ಟು ಕಾಲಾವಕಾಶವಿದ್ದಿದ್ದರೆ ಫಲಿತಾಂಶ ಏರುಪೇರಾಗುತ್ತಿತ್ತೇ?

PTI
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಆಯ್ಕೆಯಾಗುವುದರೊಂದಿಗೆ ಇತ್ತೀಚೆಗಿನ ತಮ್ಮ ಚುನಾವಣಾ ವಿಜಯದ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಅವರಿಗೆ ದೊರೆತ ಮತಗಳು 37.89%, ಆನಂತರದ ಸ್ಥಾನ ಲಾಲು ಪ್ರಸಾದ್ ಯಾದವ್ 21.61% ಮತಗಳು. ವಿಶೇಷವೆಂದರೆ ಲಾಲ್ ಕೃಷ್ಣ ಆಡ್ವಾಣಿ ಅವರಿಗೆ ಸೋನಿಯಾ ಮತ್ತು ಮನಮೋಹನ್ ಸಿಂಗ್‌ಗಿಂತ ಹೆಚ್ಚು ಮತಗಳು ಲಭ್ಯವಾಗಿರುವುದು.

ಜನಪ್ರಿಯ ಕ್ರಿಕೆಟಿಗರ ಪಟ್ಟಿಯಲ್ಲಿ ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಅತ್ಯಧಿಕ ಮತಗಳನ್ನು ಕಬಳಿಸಿರುವುದರಲ್ಲಿ ಅಚ್ಚರಿಯಿಲ್ಲ. ಮಹೇಂದ್ರ ಧೋನಿಗೆ ದ್ವಿತೀಯ ಸ್ಥಾನ. ಸೌರವ್
PTI
ಗಂಗೂಲಿ ಅವರು ತಮ್ಮ ಬ್ಯಾಟು ತಿರುಗಿಸುತ್ತಾ, ಇನ್ನೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದ ಛಾಪೊತ್ತಿಸಿ ಮೂರನೇ ಸ್ಥಾನ ಗಳಿಸಿದ್ದಾರೆ.


ಇತರ ಕ್ರೀಡಾ ವಿಭಾಗದಲ್ಲಿ ಸಾನಿಯಾ ಮಿರ್ಜಾ ಅವರು ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಯುವ ನೆಟ್ ಓದುಗರ ಮನಸ್ಸುಗಳನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ.

ವಿವರ ಇಲ್ಲಿದೆ.

ಯಾರಿಗೆ ಎಷ್ಟೆಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
  1 | 2  >> 
ಮತ್ತಷ್ಟು
ಸಮೀಕ್ಷೆ -2007: ಹೆಗ್ಗಡೆ, ದ್ರಾವಿಡ್ ಶ್ರೇಷ್ಠರು
ತುತ್ತು ಅನ್ನ, ಬೊಗಸೆ ನೀರು, ಮತ್ತೊಂದು ಕಾರು!
ಸ್ವಪ್ನ ನಗರಿ ದುಃಸ್ವಪ್ನವಾದಾಗ...
ರಾಜಕೀಯ ಹತ್ಯೆಗಳ ತಾಣ ಉಪಖಂಡ
ಹೋರಾಟವೇ ಬದುಕಾಗಿಸಿದ ಬೇನಜೀರ್
ವೆಬ್‌ದುನಿಯಾ ಸಮೀಕ್ಷೆ - 2007