ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಯ ಅಲ್ಪಸಂಖ್ಯಾತರ ಜಪ
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸವೇ?
ವಿಶೇಷ ವರದಿ: ನ್ಯೂಸ್ ರೂಂ

ನಿನ್ನೆ ನಗರಕ್ಕೆ ಆಗಮಿಸಿದ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ತ್ರೀಯ ಅಧ್ಯಕ್ಷ ಶಹನವಾಜ್ ಹುಸೇನ್‌ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮುಸ್ಲಿಮರು ಬಿಜೆಪಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂಬ ಮಾತುಗಳನ್ನಾಡಿದ್ದಾರೆ. ಮೇ ಅಂತ್ಯದಲ್ಲಿ ಚುನಾವಣೆಗಳು ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಈ ವಿಷಯ ಚರ್ಚೆಯಾಗುತ್ತಿದೆ.

ಹೆಸರು ಹೇಳಲು ಇಚ್ಛಿಸದ ರಾಜಕೀಯ ಪಕ್ಷದ ಮುಖಂಡರೊಬ್ಬರು ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ: ಚುನಾವಣೆ ಬಂದ ತಕ್ಷಣ ಎಲ್ಲ ರಾಜಕೀಯ ಪಕ್ಷದವರಿಗೂ ಒಂದೋ ಅಲ್ಪಸಂಖ್ಯಾತರು ನೆನಪಾಗುತ್ತಾರೆ ಇಲ್ಲವೇ ದುರ್ಬಲ ವರ್ಗದವರು ನೆನಪಾಗುತ್ತಾರೆ. ಏಕೆಂದರೆ ಇಲ್ಲಿ ಯಾವುದೇ ವರ್ಗದ ಕಲ್ಯಾಣ ಎಂಬ ಅಂಶಕ್ಕಿಂತ ಆಯಾ ವರ್ಗಗಳ ಓಟುಗಳೆಡೆಗೆ ಎಲ್ಲರ ಕಣ್ಣೂ ನೆಟ್ಟಿರುತ್ತದೆ.

ಈ ಬಗೆಯ ಅಭಿಪ್ರಾಯಗಳಿಗೆ ಕಾರಣವೂ ಇಲ್ಲದಿಲ್ಲ. ಇಲ್ಲಿಯವರೆಗೂ ರಾಜ್ಯದಲ್ಲಿ ತೆರೆಮರೆಯಲ್ಲಿಯೇ ಆಡುತ್ತಿದ್ದ ಅಥವಾ ಇತರ ಪಕ್ಷಗಳ ಓಟುಗಳನ್ನು ಕಸಿಯುವ ಮೂಲಕವಷ್ಟೇ ಗಮನ ಸೆಳೆಯುತ್ತಿದ್ದ ಬಿಎಸ್ಪಿ ಈಗ ಮುಖ್ಯವಾಹಿನಿಗೆ ಬಂದಿದೆ. ಕರ್ನಾಟಕದಲ್ಲಿ ಪಕ್ಷದ ಸಮಾವೇಶಗಳನ್ನು ನಡೆಸುವ ಮೂಲಕ, ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ, ಎಲ್ಲ ವರ್ಗದವರ ಜೊತೆಗೆ ಮೇಲ್ವರ್ಗದವರನ್ನೂ ಪರಿಗಣಿಸುವ ಮಾತುಗಳನ್ನು ಆಡುವ ಮೂಲಕ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಬಹಿರಂಗವಾಗಿ ಸಾಬೀತು ಮಾಡಹೊರಟಿದೆ. ಬಿಎಸ್ಪಿ ಪಕ್ಷದ ಕೆಲವೊಂದು ತಂತ್ರಗಳು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಾಕಷ್ಟು ಬಿಸಿ ಮುಟ್ಟಿಸಿವೆ. ಕಾಂಗ್ರೆಸ್ನ ಕೆಲ ಅಭ್ಯರ್ಥಿಗಳು ಸೋತದ್ದೇ ಈ ಮಾತಿಗೆ ಸಾಕ್ಷಿ.

ಹೀಗಿರುವಾಗ ಕಾಂಗ್ರೆಸ್ ಖಾಯಂ ಓಟ್ ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತರನ್ನು ತನ್ನೆಡೆಗೆ ಸೆಳೆದರೆ ತಳಪಾಯ ಗಟ್ಟಿ ಎಂದು ಅರಿತಿರುವ ಬಿಜೆಪಿ ಈ ಬಗೆಯ ಹೇಳಿಕೆಗಳನ್ನು ಹೊರಡಿಸುತ್ತಿದೆ. ಅದನ್ನು ಬೇರಾದರೂ ಹೇಳಿದರೆ ಅಷ್ಟೊಂದು ತೂಕವಿರದು ಎಂಬುದನ್ನು ಅರಿತೇ ಮುಸ್ಲಿಂ ನಾಯಕರೊಬ್ಬರಿಂದ ಇಂಥ ಮಾತುಗಳನ್ನಾಡಿಸಿದೆ ಎಂಬುದು ಈ ಹೆಸರು ಹೇಳದ ಮುಖಂಡರ ಅಭಿಪ್ರಾಯ. ಇಷ್ಟು ದಿವಸ ಈ ಕುರಿತು ತುಟಿಕ್ ಪಿಟಿಕ್ ಎನ್ನದ ಬಿಜೆಪಿ ಮತ್ತು ಇದುವರೆಗೂ ಬೆಂಗಳೂರಿನ ಕಡೆ ಅಷ್ಟಾಗಿ ಸುಳಿಯದಿದ್ದ ಶಹನವಾಜ್ ಸದ್ಯದ ಯುದ್ಧಕಾಲದಲ್ಲಿ ಈ ಬಗೆಯ ಶಸ್ತ್ರಭ್ಯಾಸ ಮಾಡುತ್ತಿರುವುದರ ಹಿಂದಿರುವ ಹುನ್ನಾರ ಚುನಾವಣೆಗಳೇ ಅಲ್ಲವೇ ಎಂಬುದು ಈ ಮುಖಂಡರ ಅಭಿಪ್ರಾಯ.

ಅಲ್ಲಿಗೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ರಾಜಕೀಯ ಪಕ್ಷಗಳು ತಮ್ಮ ಅಜೆಂಡಾವನ್ನು ಪ್ರಕಟಪಡಿಸಿವೆ. ತುಳಿತ್ಕೊಳಗಾದವರ ಪಕ್ಷವೆಂದೇ ಹೆಸರಾಗಿದ್ದ ಬಿಎಸ್ಪಿ ಮೇಲ್ವರ್ಗದವರ ಜಪ ಮಾಡುತ್ತಿದ್ದರೆ, ಇತ್ತ ಮೇಲ್ವರ್ಗದವರ ಪಕ್ಷವೆಂದೇ ಬಿಂಬಿತವಾಗಿರುವ ಬಿಜೆಪಿ ಅಲ್ಪಸಂಖ್ಯಾತರ ಜಪ ಮಾಡುತ್ತಿದೆ. ಎರಡೂ ಸಂದರ್ಭಗಳು ಚುನಾವಣೆಯ ಸಂದರ್ಭಗಳು ಎಂಬುದಿಲ್ಲಿ ಸುಸ್ಪಷ್ಟ. ಎಲ್ಲದಕ್ಕೂ ಅಂತಿಮ ಮುದ್ರೆ ಒತ್ತುವವನು ಮಾನ್ಯ ಮತದಾರ. ಹೀಗಾಗಿ ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಚಲಿಸುವ ರಾಜಕೀಯ ಪಕ್ಷಗಳೆಂಬ ಎಲ್ಲ ನದಿಗಳೂ ಸದ್ಯಕ್ಕೆ ಮತದಾರನೆಂಬ ಸಾಗರವನ್ನು ಬೆರೆಯಲು ನಾಮುಂದು ತಾಮುಂದು ಎಂದು ಓಡುತ್ತಿರುವುದು ಸದ್ಯದ ಪರಿಸ್ಥಿತಿಯುಲ್ಲಿ ನಗು ತರಿಸುತ್ತಿದೆ.
ಮತ್ತಷ್ಟು
ವೆಬ್‌ದುನಿಯಾ ಸಮೀಕ್ಷೆ: ಬಚ್ಚನ್, ಐಶ್, ಮೋದಿ, ಸಾನಿಯಾ ಶ್ರೇಷ್ಠರು
ಸಮೀಕ್ಷೆ -2007: ಹೆಗ್ಗಡೆ, ದ್ರಾವಿಡ್ ಶ್ರೇಷ್ಠರು
ತುತ್ತು ಅನ್ನ, ಬೊಗಸೆ ನೀರು, ಮತ್ತೊಂದು ಕಾರು!
ಸ್ವಪ್ನ ನಗರಿ ದುಃಸ್ವಪ್ನವಾದಾಗ...
ರಾಜಕೀಯ ಹತ್ಯೆಗಳ ತಾಣ ಉಪಖಂಡ
ಹೋರಾಟವೇ ಬದುಕಾಗಿಸಿದ ಬೇನಜೀರ್