ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವೇಗೌಡ್ರ ಮಾತು ಕನ್ನಡಿಗರೆಲ್ಲಾ ಒಪ್ತಾರೆ!
ಅವಿನಾಶ್ ಬಿ.
"ನಾ'ನೊಬ್ಬ ಕನ್ನಡಿಗ ಆಗಿರುವುದಕ್ಕೇ ನಾಚಿಕೆಯಾಗ್ತಿದೆ. ಯಾವುದೋ ಪಾಪ ಮಾಡಿ ಕರ್ನಾಟಕದಲ್ಲಿ ಹುಟ್ಟಿದ್ದೀನಿ. ಇಲ್ಲಿ ಹುಟ್ಬಾರ್ದಿತ್ತು. ಆದ್ರೆ ಹುಟ್ಟಿದ್ದು ನನ್ನ ಕರ್ಮ" ಅನ್ನೋ ಆಣಿಮುತ್ತುಗಳು ಒಂದು ಕಾಲದಲ್ಲಿ ದೇಶವನ್ನೇ ಆಳಿದ್ದ ಮಾಜಿ ಪ್ರಧಾನಿಯೊಬ್ಬರ ಬಾಯಿಂದ ಉದುರಿವೆ ಎಂಬುದನ್ನು ಕೇಳಿದ್ದೇವೆ, ಓದಿದ್ದೇವೆ. ಬೀದರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಮ್ಮನ್ನು ಟೀಕಿಸುತ್ತಿರುವ ಪಕ್ಷಗಳ ವಿರುದ್ಧ ಕೆಂಡ ಕಾರುತ್ತಾ ಕಾರುತ್ತಾ ಅವರು ಒಳಗಿದ್ದ ತಳಮಳವನ್ನು ಕಾರಿದ್ದು, ತಮ್ಮ ನಿಜರೂಪವನ್ನು ತೋರಿದ್ದು ಈ ವಾಕ್ಯಗಳ ಮೂಲಕ.

ಅವರ ಇತ್ತೀಚಿನ ರಾಜಕೀಯದಾಟಗಳನ್ನು ಕಂಡವರಿಗೆ ಅಂಥವರ ಬಾಯಿಯಿಂದ ಇಂಥ ಪದಗಳು ಉದುರಿರುವುದರಲ್ಲೇನೂ ಅಚ್ಚರಿ ಇಲ್ಲ ಅನ್ನಿಸದಿರದು. ಹಾಗಾಗಿ ಇಂಥವರನ್ನು "ನಮ್ಮ ಕನ್ನಡಿಗ ಪ್ರಧಾನಿ" ಅಂತ ಒಂದು ಕಾಲದಲ್ಲಿ ಹೆಮ್ಮೆಯಿಂದ ಒಪ್ಪಿಕೊಂಡಿದ್ದವರೆಲ್ಲಾ ಅವರ ಇದೇ ಮಾತನ್ನು ಅವರಿಗೇ ತಿರುಗಿಸಿ ಹೇಳಲು ಸಜ್ಜಾಗುತ್ತಿದ್ದಾರೆ.

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಆದರೆ ನಮ್ಮ ರಾಜಕಾರಣಿಗಳಂತೂ ಸಿಟ್ಟಿನ ಭರದಲ್ಲೋ, ಅಥವಾ ಉದ್ವೇಗದಲ್ಲೋ, ಆವೇಶದಲ್ಲೋ ಆಡಿದ ಮಾತನ್ನು ಒಂದು ಪತ್ರಿಕಾಗೋಷ್ಠಿ ಕರೆದು, 'ನಾನು ಆ ರೀತಿ ಹೇಳಿಯೇ ಇಲ್ಲ, ಇದು ಮಾಧ್ಯಮದವರು ತಿರುಚಿದ್ದು' ಅಂತ ಗೂಬೆ ಕೂರಿಸುವುದೂ, 'ಮಾಧ್ಯಮದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಇದು ಪ್ರತಿಪಕ್ಷಗಳ ಸಂಚು' ಅಂತ ಜಾರಿಕೊಳ್ಳುವುದೂ ಅತ್ಯಂತ ಸುಲಭವಾಗಿಬಿಟ್ಟಿದೆ ಮತ್ತು ಅದೊಂದು ಪರಂಪರೆಯೂ ಆಗಿಬಿಟ್ಟಿದೆ. ಹಾಗಾಗಿ ರಾಜಕೀಯದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಪರಿಸ್ಥಿತಿಯನ್ನೇ ಅವರೆಲ್ಲಾ ನೆಚ್ಚಿಕೊಂಡಿದ್ದಾರೆ.

ಕನ್ನಡ ಮಣ್ಣಿನಲ್ಲೇ ಹುಟ್ಟಿ, ಕನ್ನಡ ಮಣ್ಣಿನದೇ ಅನ್ನ ತಿಂದು, ಕನ್ನಡಿಗರಿಂದಲೇ ಮೇಲೆ ಬಂದ ವ್ಯಕ್ತಿ, ತಮ್ಮ ಸಡಿಲ ನಾಲಿಗೆಯ ಮೂಲಕ ಆರು ಕೋಟಿ ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ ಈ ರೀತಿ ಹೇಳಿಕೆ ನೀಡಿದ್ದಿದ್ದರೆ ಆತನ ಕಥೆ ಏನಾಗುತ್ತಿತ್ತೆಂದು ಊಹಿಸುವುದೂ ಸಾಧ್ಯವಾಗದ ಮಾತು. ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಅಂತ ನಾವೆಲ್ಲಾ ತಿಳಿದುಕೊಂಡಿರುವ ವ್ಯಕ್ತಿ ತಮ್ಮ ಜವಾಬ್ದಾರಿ ಯಾವ ಮಟ್ಟದಲ್ಲಿದೆ, ತಾವು ಯಾವ ಸ್ಥಾನಕ್ಕೆ ಅರ್ಹರು ಎಂಬುದನ್ನು ಬಟಾಬಯಲಾಗಿಸಿದ್ದಾರೆ.

ದ್ವೇಷ ರಾಜಕಾರಣ ಮತ್ತು ವಂಶ ರಾಜಕಾರಣವನ್ನೇ ಬಂಡವಾಳವಾಗಿಸಿಕೊಂಡು ಒಂದು ಮಟ್ಟಕ್ಕೇರಿರುವವರಿಂದ ಇಂಥ ಮಾತುಗಳು ಬರುವುದಕ್ಕೆ, ಬಹುಶಃ ಇತ್ತೀಚಿನ ವಿದ್ಯಮಾನಗಳ ಫಲಿತವಾದ ಹತಾಶೆ ಕಾರಣವಿದ್ದಿರಬಹುದೇ? ಬರಲಿರುವ ಚುನಾವಣೆಗಳಲ್ಲಿ ಕನ್ನಡ ನಾಡಿನ ಪ್ರಜ್ಞಾವಂತ ಮತದಾರ ಸಮರ್ಥರಿಗೆ, ಅರ್ಹರಿಗೆ ಮತ ಹಾಕಲು ಸಿದ್ಧನಾಗಿದ್ದಾನೆ ಹಾಗೂ ಅನರ್ಹರನ್ನು, ಢೋಂಗಿ ಜಾತ್ಯತೀತರನ್ನು, ಕೇವಲವಾದ ರಾಜಕೀಯ ಪ್ರದರ್ಶಿಸಿದವರನ್ನು, ಮಾತಿಗೆ ತಪ್ಪಿದವರನ್ನು, ಸಭ್ಯತೆಯ ಎಲ್ಲಾ ಎಲ್ಲೆಯನ್ನು ಮೀರಿದವರನ್ನು ತಿರಸ್ಕರಿಸುತ್ತಾನೆ ಅಂತ ಅವರಿಗೆ ಮನದಟ್ಟಾಗಿದೆಯೇ? ಹಾಗೇನಾದರೂ ಇದ್ದರೆ ಅವರ ಬಗ್ಗೆ ಒಂದಷ್ಟು ಅಸಹನೀಯವಾದ ಮತ್ತು ಅಯ್ಯೋ ಪಾಪ, ಈ ಸ್ಥಿತಿ ಬರಬಾರದಿತ್ತು ಅನ್ನೋ ಅನುಕಂಪವಿದೆ.

ರಾಷ್ಟ್ರಮಟ್ಟದ ರಾಜಕಾರಣಿಯಾಗುವ ಎಲ್ಲಾ ಅರ್ಹತೆಗಳಿದ್ದೂ, ರಾಜ್ಯದಲ್ಲಿ ಕ್ಷುಲ್ಲಕ ಕಾಲೆಳೆಯುವ ರಾಜಕೀಯಕ್ಕೆ ಸೀಮಿತವಾಗಿಸಿಕೊಂಡಿದ್ದಲ್ಲದೆ, ರಾಜ್ಯ ರಾಜಕಾರಣವನ್ನೇ ಮನೆ ರಾಜಕೀಯವನ್ನಾಗಿಸಲು, ಅದಕ್ಕಾಗಿ ನಂಬಿದವರನ್ನೆಲ್ಲಾ ಪಕ್ಷ ತ್ಯಜಿಸುವಂತೆ ಮಾಡಲು ಹೇಸದವರಿಂದ ಇಂಥದ್ದೊಂದು ಮಾತನ್ನು ನಿರೀಕ್ಷಿಸುವುದೇನೂ ತಪ್ಪಿಲ್ಲ, ಬಿಡಿ. ಕನ್ನಡಿಗರ ದೌರ್ಭಾಗ್ಯವಿದು.

ಹಾಗಾಗಿ ಅವರ ಮಾತುಗಳನ್ನು ಕನ್ನಡಿಗರು ಒಪ್ಪುತ್ತಾರೆ. ಅವರೇ ಹೇಳಿದಂತೆ "ಅವರೊಬ್ಬ ಕನ್ನಡಿಗ ಆಗಿರುವುದಕ್ಕೇ ನಾಚಿಕೆಯಾಗ್ತಿದೆ, ಕರ್ನಾಟಕದಲ್ಲಿ ಹುಟ್ಟಿದ್ದಾರೆ, ಇಲ್ಲಿ ಹುಟ್ಬಾರ್ದಿತ್ತು. ಆದ್ರೆ ಹುಟ್ಟಿದ್ದು ಅವರದ್ದಲ್ಲ, ನಮ್ಮ ಕರ್ಮ" ಅಂತ ಅಂದುಕೊಳ್ಳೋ ಪರಿಸ್ಥಿತಿ ಕನ್ನಡಿಗರದು.

ಓದುಗರೇ, ನಿಮಗೇನನಿಸುತ್ತದೆ.... ಇಲ್ಲೇ ಕೆಳಗೆ ಬರೆಯಿರಿ...
ಮತ್ತಷ್ಟು
ಮ್ಯಾಟ್: ನಿಖರತೆಯೇ ಇಲ್ಲಿ ಪ್ರಧಾನ!
ಬಿಜೆಪಿಯ ಅಲ್ಪಸಂಖ್ಯಾತರ ಜಪ
ವೆಬ್‌ದುನಿಯಾ ಸಮೀಕ್ಷೆ: ಬಚ್ಚನ್, ಐಶ್, ಮೋದಿ, ಸಾನಿಯಾ ಶ್ರೇಷ್ಠರು
ಸಮೀಕ್ಷೆ -2007: ಹೆಗ್ಗಡೆ, ದ್ರಾವಿಡ್ ಶ್ರೇಷ್ಠರು
ತುತ್ತು ಅನ್ನ, ಬೊಗಸೆ ನೀರು, ಮತ್ತೊಂದು ಕಾರು!
ಸ್ವಪ್ನ ನಗರಿ ದುಃಸ್ವಪ್ನವಾದಾಗ...