ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೋರಾಡು ಕನ್ನಡಿಗ- ಉಗ್ರರ ಬೇರು ಕೀಳಲು, ಆಡಳಿತ ಎಚ್ಚೆತ್ತುಕೊಳ್ಳಲು!
WD
ದೇಶದ ಪ್ರಧಾನ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗುತ್ತಿರುವ ಕರ್ನಾಟಕ ಯಾವ ಪರಿ ಬೆಳೆದಿದೆಯೋ, ಅದಕ್ಕಿಂತಲೂ ವೇಗವಾಗಿ ಅಂತಾರಾಷ್ಟ್ರೀಯ ಉಗ್ರಗಾಮಿಗಳ ತಾಣವಾಗಿಯೂ ಬೆಳೆಯತೊಡಗಿರುವುದು ಆತಂಕಕಾರಿ ಸಂಗತಿ.

ಇತ್ತೀಚೆಗೆ ಅಲ್ಲಲ್ಲಿ ಸೆರೆ ಸಿಕ್ಕುತ್ತಿರುವ ಉಗ್ರಗಾಮಿಗಳು, ಅಲ್ಲಲ್ಲಿ ಲಭ್ಯವಾಗುತ್ತಿರುವ ಅತ್ಯಾಧುನಿಕ ಸ್ಫೋಟಕ ಸಾಮಗ್ರಿಗಳು... ಇವನ್ನೆಲ್ಲಾ ಗಮನಿಸುತ್ತಿದ್ದರೆ, ರಾಜ್ಯದ ಸಮೃದ್ಧ ಕಾಡುಗಳಲ್ಲಿ ಹುದುಗಿಕೊಂಡು ಕಾರ್ಯಾಚರಣೆ ನಡೆಸುತ್ತಿರುವ ಉಗ್ರರು ಯಾವ ಮಟ್ಟಕ್ಕೆ ಬೆಳೆದಿದ್ದಾರೆ ಎಂಬುದನ್ನು ಅರಿತುಕೊಳ್ಳಬಹುದು. ಅದೇ ರೀತಿ ಆಳುವವರು ಯಾವ ರೀತಿಯಲ್ಲಿ ಇತ್ತ ಕಡೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದರ ಸೂಚಕವೂ ಇದು ಎನ್ನಬಹುದು.

ಬಂಧಿತ ಉಗ್ರರು ಬಯಲು ಮಾಡಿರುವ ಕೆಲವು ಸ್ಫೋಟಕ ಮಾಹಿತಿಗಳು, ಅವರಲ್ಲಿ ದೊರೆತ ನಕಾಶೆಗಳು... ಇವೆಲ್ಲವೂ ರಾಜ್ಯವು ಉಗ್ರರ ಕಾರ್ಯಾಚರಣೆಗೆ ಎಷ್ಟು ಸುಲಭ ಗುರಿಯಾಗುತ್ತಿದೆ ಎಂಬುದನ್ನು ನಿರೂಪಿಸಿದೆ.

ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಹೇಳುವಂತೆ, ಉಗ್ರ ಸಂಘಟನೆಗಳಿಗೆ ರಾಜ್ಯದಲ್ಲಿ ದಟ್ಟವಾಗಿ ಬೆಳೆದಿರುವ ಕಾಡುಗಳು ಮಾತ್ರವೇ ಆಶ್ರಯ ನೀಡುತ್ತಿರುವುದಲ್ಲ. ಬೆಂಗಳೂರಿನಂತಹ ಕಾಸ್ಮೋಪಾಲಿಟನ್ ನಗರಗಳಲ್ಲಿ ಕೂಡ ಉಗ್ರರು ಸುಲಭವಾಗಿ ಸ್ಥಳೀಯರಲ್ಲೊಂದಾಗಿ, ಏನೂ ಗೊತ್ತಿಲ್ಲದವರಂತೆ ಇರಬಹುದು.

ವಾಸ್ತವವಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಸ್ಥಳೀಯರೇ ಈ ಉಗ್ರಗಾಮಿಗಳಿಗೆ ಗೊತ್ತಿದ್ದೋ... ಗೊತ್ತಿಲ್ಲದೆಯೋ... ಆಶ್ರಯ ನೀಡಿರುತ್ತಾರೆ. ಅಷ್ಟರ ಮಟ್ಟಿಗೆ ಉಗ್ರರದು ಯೋಜಿತ ಕಾರ್ಯಾಚರಣೆ. ನಿಷೇಧಿತ ಉಗ್ರಗಾಮಿ ಸಂಘಟನೆ ಸಿಮಿಯ ಕಾರ್ಯಕರ್ತರಾದ ಅಬ್ದುಲ್ ಗೌಸ್ ಆಲಿಯಾಸ್ ರಿಯಾಜುದ್ದೀನ್, ಅಸಾಫದುಲ್ಲಾ ಅಬೂಬಕ್ಕರ್ ಅವರನ್ನು ಇತ್ತೀಚೆಗೆ ದಾವಣಗೆರೆಯಲ್ಲಿ ಮತ್ತು ಅವರ ಸಹಾಯಕ ಆಸಿಫ್‌ನನ್ನು ಹುಬ್ಬಳ್ಳಿಯಿಂದ ಬಂಧಿಸಿರುವುದು ಕೇವಲ ದೊಡ್ಡ ಸಾಗರದ ಒಂದೆರಡು ಕೊಡ ನೀರು ಇದ್ದಂತೆ ಮಾತ್ರ.

ಸ್ಥಳೀಯರು ಈ ಉಗ್ರರ ಸಂಶಯಾಸ್ಪದ ಚಟುವಟಿಕೆಗಾಗಿ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರೂ, ಅವರನ್ನು ಕೇವಲ ವಾಹನಗಳ್ಳರ ರೂಪದಲ್ಲಿ ಗುರುತಿಸಲಾಗಿತ್ತು. ಆದರೆ ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಅವರ ಅಡಗುದಾಣಗಳು, ಸಂಚುಗಳು ಒಂದೊಂದಾಗಿ ಬೆಳಕಿಗೆ ಬರತೊಡಗಿದಂತೆ ಪೊಲೀಸರೇ ಬೆಚ್ಚಿ ಬೀಳತೊಡಗಿದರು. ಇದೀಗ ಜೀವ ಹಿಡಿಯಲ್ಲಿ ಹಿಡಿದು ಬದುಕಿಕೊಂಡಿರಬೇಕಾದ ಸರದಿ ರಾಜ್ಯದ ಜನತೆಯದು.

ಉಡುಪಿಯ ಶ್ರೀಕೃಷ್ಣ ಮಠ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಕಾಶೆ, ವಿವಿಧ ದೇಶಗಳ ಪಾಸ್‌ಪೋರ್ಟ್‌ಗಳು, ದಾಖಲೆ ಪತ್ರಗಳು... ಮುಂತಾಗಿ ಉಗ್ರರ ಕೈಯಲ್ಲಿ ದೊರೆತ ಮಾಹಿತಿಯನ್ನು ನೋಡಿದರೆ, ಉಗ್ರರ ಚಟುವಟಿಕೆ ಎಣಿಸಿದಷ್ಟರ ಮಟ್ಟಿಗೆ ಸೀಮಿತವಾಗಿಲ್ಲ ಎಂಬುದು ವೇದ್ಯವಾಗುತ್ತದೆ.

ತ್ವರಿತ ಬೆಳವಣಿಗೆಗಳಲ್ಲಿ, ಶಂಕಿತ ಉಗ್ರರು ಸಂಚು ರೂಪಿಸಿದ ಹಲವು ಘಟನೆಗಳ ಬಗ್ಗೆ ಮಾಹಿತಿ ದೊರೆಯಿತು. ಅದರಲ್ಲಿ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ಗೋವಾದ ಬೀಚ್‌ಗಳಲ್ಲಿ ಸ್ಫೋಟದ ಮಾಹಿತಿಯೂ ಸೇರಿತ್ತು. ಪಾಕಿಸ್ತಾನದಲ್ಲಿ ತರಬೇತಿ ಪಡೆದು ಬಂದಿರುವುದಾಗಿ ಮಹಮದ್ ಗೌಸ್ ಒಪ್ಪಿಕೊಂಡಿದ್ದಾನೆ ಮಾತ್ರವಲ್ಲದೆ, ಐಐಎಸ್‌ಸಿ ದಾಳಿಗೂ ತನ್ನ ಕೈವಾಡವಿತ್ತೆಂಬುದನ್ನು ಬಯಲು ಮಾಡಿದ್ದಾನೆ ಎಂಬ ಅಂಶಗಳು, ಪಾಕಿಸ್ತಾನಿ ಉಗ್ರರು ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಆಳವಾಗಿ ಬೇರು ಬಿಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ.

ಇನ್ನಾದರೂ ರಾಜ್ಯದ ಆಡಳಿತ ಎಚ್ಚೆತ್ತುಕೊಂಡೀತೇ?
ಮತ್ತಷ್ಟು
ಇಂಧನ ಬೆಲೆ ಏರಿಕೆ: ಅಂತಿಮ ಹೊರೆ ಜನರ ಮೇಲೆ
ಮದುವೆ ವಿಷಯದಲ್ಲೂ ಈತ ಚಿನ್ನದ ಹುಡುಗನೇ
ಪತ್ರಿಕೋದ್ಯಮದಲ್ಲಿ ಕೈಯಾಡಿಸಲಿರುವ ಪ್ರಿನ್ಸ್ ವಿಲಿಯಂ
ಗಣರಾಜ್ಯೋತ್ಸವ ದಿನಾಚರಣೆಗಾಗಿ ವಿಶೇಷ ಪುಟ
ದೇವೇಗೌಡ್ರ ಮಾತು ಕನ್ನಡಿಗರೆಲ್ಲಾ ಒಪ್ತಾರೆ!
ಮ್ಯಾಟ್: ನಿಖರತೆಯೇ ಇಲ್ಲಿ ಪ್ರಧಾನ!