ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರ್ಚ್ 30 ಬೆಂಗಳೂರು ವಿಮಾನ ನಿಲ್ದಾಣ ಕಾರ್ಯಾರಂಭ
NRB
ಮಾಹಿತಿ ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿಗೆ ಸಿಕ್ಕಿರುವ ಅಂತಾರಾಷ್ಟ್ರೀಯ ಮಾನ್ಯತೆಗೆ ಮತ್ತೊಂದು ಗರಿ ಸೇರಲು ಇನ್ನು ಕೆಲವೇ ದಿನಗಳು ಉಳಿದಿವೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಕೀರ್ತಿಪತಾಕೆಯನ್ನು ಹಾರಿಸಲಿದೆ ಎಂಬ ಪ್ರತಿಷ್ಠೆಯನ್ನು ಈಗಾಗಲೇ ಗಳಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಚ್ 30 ರಂದು ಕಾರ್ಯಾರಂಭ ಮಾಡಲಿದೆ.

ಜಾಗತಿಕ ಪ್ರಯಾಣಿಕರನ್ನು ಹಾಗೂ ಸರಕು ಸಾಗಣೆ ವಹಿವಾಟನ್ನು ಪ್ರತಿಷ್ಠೆಗೆ ಧಕ್ಕೆ ಬಾರದಂತೆ ಸಮರ್ಥವಾಗಿ ನಿಭಾಯಿಸುವುದು ಹುಡುಗಾಟದ ಮಾತಲ್ಲ. ಇದನ್ನು ಸುಲಲಿತಗೊಳಿಸುವ ದೃಷ್ಟಿಯಿಂದ ಅಗತ್ಯವಾದ ಕಂಪ್ಯೂಟರ್ ಸೌಲಭ್ಯ, ವಿವಿಧ ಶ್ರೇಣಿಯ ವಾಹನ ಸೌಕರ್ಯವೇ ಅಲ್ಲದೆ ತರಬೇತಿ ಪಡೆದ ಸಿಬ್ಬಂದಿವರ್ಗ ಈಗಾಗಲೇ ಪೂರ್ವಭಾವಿ ತಾಲೀಮನ್ನು ನಡೆಸುತ್ತಿರುವುದು ನೋಡುಗರ ಕಣ್ಮನ ತಣಿಸುತ್ತದೆ. ಅಷ್ಟೇ ಅಲ್ಲ, ನಾವಿರುವುದು ಬೆಂಗಳೂರಿನ ಅಥವಾ ನ್ಯೂಯಾರ್ಕ್ ಏರ್ಪೋರ್ಟ್‌ನಲ್ಲಾ ಎಂದು ಅರೆಕ್ಷಣ ಗೊಂದಲ ನಮ್ಮನ್ನು ಕಾಡುವುದು ಸಹಜ.

ವಿಮಾನ ನಿಲ್ದಾಣಕ್ಕೆ ಬರುವವರ ವಾಹನಗಳ ನಿಲುಗಡೆಯೇ ಇಲ್ಲಿಯವರೆಗೂ ಒಂದು ಸಮಸ್ಯೆಯಾಗಿತ್ತು. ಆದರೆ ಈ ಹೊಸ ವಿಮಾನ ನಿಲ್ದಾಣದಲ್ಲಿ ಸುಮಾರು 2000 ಕಾರುಗಳಿಗೆ ನಿಲುಗಡೆ ಸೌಲಭ್ಯವನ್ನು ಕಲ್ಪಿಸಿರುವುದು, ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು 900 ಟ್ಯಾಕ್ಸಿಗಳನ್ನು ವ್ಯವಸ್ಥೆಗೊಳಿಸಿರುವುದು ಮತ್ತು ವಿದೇಶಿ ಪ್ರಯಾಣಿಕರ ಸಲುವಾಗಿಯೇ ಲಿಮೋಸಿನ್ ಕಾರಿನ ವ್ಯವಸ್ಥೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನದ ನಗರವೆಂಬ ಹಣೆಪಟ್ಟಿ ಪಡೆದಾಗಿನಿಂದ ಈ ಎಲ್ಲ ಮೂಲಸೌಕರ್ಯಗಳ ಅಗತ್ಯವಿತ್ತು. ಅದನ್ನು ಸಮರ್ಥವಾಗಿ ಆಡಳಿತ ವರ್ಗ ಮನಗಂಡಿರುವುದು ಇಲ್ಲಿನ ಹೆಗ್ಗಳಿಕೆ.

ಇದುವರೆಗೂ ಬೆಂಗಳೂರು ಸುರಕ್ಷಿತ ತಾಣವೆಂದು ಹೆಸರಾಗಿತ್ತು. ಆದರೆ, ದಿನೇ ದಿನೇ ಹೆಚ್ಚುತ್ತಿರುವ ಭಯೋತ್ಪಾದಕರ ಚಟುವಟಿಕೆಯ ಹಿನ್ನೆಲೆಯಲ್ಲಿ ಮತ್ತು ನಿನ್ನೆಯಷ್ಟೇ (ಶುಕ್ರವಾರ) ಶಂಕಿತ ಉಗ್ರ ಯಾಹ್ಯಾನನ್ನು ಸಿಓಡಿ ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಉಗ್ರರ ದಾಳಿಯ ಸಂಭವನೀಯ ತಾಣಗಳಲ್ಲಿ ಒಂದು ಎಂಬ ಎಚ್ಚರಿಕೆ ಈಗಾಗಲೇ ಲಭಿಸಿರುವುದರಿಂದ ಪ್ರಯಾಣಿಕರ ಸುರಕ್ಷತೆಯನ್ನು ಹಾಗೂ ನಿಲ್ದಾಣದ ರಕ್ಷಣೆಯನ್ನು ಆದ್ಯತೆಯನ್ನಾಗಿ ಪರಿಗಣಿಸಿ ಕಟ್ಟೆಚ್ಚರದ ಕಣ್ಗಾವಲು ಇಡಲಾಗಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರ ಸುರಕ್ಷತೆಯ ಅಣಕು ಪರೀಕ್ಷೆಯನ್ನೂ ನಡೆಸಲಾಗುತ್ತಿದೆ.

ಭಾರತದಲ್ಲಿನ ವಿಮಾನ ಪ್ರಯಾಣಿಕರ ವೈಯಕ್ತಿಕ ಲಗೇಜುಗಳು ಹಾಗೂ ವಿಮಾನ ನಿಲ್ದಾಣದ ನಿರ್ವಹಣೆಯಲ್ಲಿನ ಅಸಮರ್ಪಕತೆಯನ್ನು ಕುರಿತು ಇದುವರೆಗೂ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದವು. ಈಗ ಇದೇ ಮೊದಲ ಬಾರಿಗೆ ನಿಲ್ದಾಣ ನಿರ್ವಹಣೆ ಜವಾಬ್ದಾರಿಯನ್ನು ವಿವಿಧ ಏಜೆನ್ಸಿಗಳಿಗೆ ನೀಡಲಾಗಿದ್ದು ಅವುಗಳ ನಡುವೆ ಪರಸ್ಪರ ಹೊಂದಾಣಿಕೆ ಇರುವುದರ ಕಡೆಗೂ ಗಮನಹರಿಸಲಾಗಿದೆ. ಇದರ ಜೊತೆಗೆ ವಿಮಾನ ನಿಲ್ದಾಣದೊಳಗೆ ಕಾಲಿಡುವುದರಿಂದ ಮೊದಲ್ಗೊಂಡು ವಿಮಾನಕ್ಕೆ ಲಗೇಜನ್ನು ಸಾಗಿಸುವವರೆಗೆ ಪ್ರಯಾಣಿಕರಿಗೆ ಯಾವುದೇ ಕಿರುಕುಳ ಆಗದಂತೆ ಗಮನಹರಿಸಿರುವುದು ಈಗಿನ ವೈಶಿಷ್ಟ್ಯ.

ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ ವಿಮಾನ ನಿಲ್ದಾಣ ಹಲವೊಂದು ವಿವಾದಗಳಿಗೂ ಕಾರಣವಾಗಿ ಸೂಕ್ತ ಸಮಯದಲ್ಲಿ ಸಿದ್ಧವಾಗುವುದೋ ಇಲ್ಲವೋ; ಸಿದ್ಧವಾದರೂ ಅದು ಅವಸರದ ಅಡುಗೆಯಂತೆ ಇರಬಹುದೇನೋ ಎಂಬ ಸಂದೇಹಗಳೇ ಎಲ್ಲರಲ್ಲೂ ಕಾಡುತ್ತಿದ್ದವು. ನಿಗದಿತ ಸಮಯದಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆಯಾಗುವುದರ ಬಗೆಗೂ ಹಲವರಲ್ಲಿ ಸಂದೇಹಗಳಿದ್ದುವು. ಈಗ ಪೂರ್ವ ನಿರ್ಧಾರಿತ ಕಾರ್ಯಸೂಚಿಯಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಾರ್ಚ್ 28ರಂದು ವಿಧ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. 30ರಂದು ಕಾರ್ಯಾರಂಭ ಮಾಡಲಿರುವ ಈ ವಿಮಾನ ನಿಲ್ದಾಣದಿಂದ ದಿನವೊಂದಕ್ಕೆ ಸರಾಸರಿ 300 ವಿಮಾನಗಳು ಬಂದಿಳಿಯಲಿವೆ ಎಂಬುದು ಒಂದು ಅಂದಾಜು. ಹಾಗಾದಲ್ಲಿ ಅಂತಾರಾಷ್ಟ್ರೀಯ ಭೂಪಟದಲ್ಲಿ ಬೆಂಗಳೂರಿನ ಹೆಸರು ದಪ್ಪ ಅಕ್ಷರಗಳಲ್ಲಿ ಕಾಣಿಸಿಕೊಳ್ಳುವಂತಾಗುತ್ತದೆ.

ಅಲ್ಲಿಗೆ ಬೆಂಗಳೂರಿಗರ, ಕನ್ನಡಿಗರ, ಅಷ್ಟೇ ಏಕೆ ಸಮಸ್ತ ಭಾರತೀಯರೆಲ್ಲರ ಕನಸು ನನಸಾದಂತಾಗುತ್ತದೆ.
ಮತ್ತಷ್ಟು
ಐಐಟಿ-ಜೆಇಇ ಒಂದು ಸವಾಲೇ?
ಹೋರಾಡು ಕನ್ನಡಿಗ- ಉಗ್ರರ ಬೇರು ಕೀಳಲು, ಆಡಳಿತ ಎಚ್ಚೆತ್ತುಕೊಳ್ಳಲು!
ಇಂಧನ ಬೆಲೆ ಏರಿಕೆ: ಅಂತಿಮ ಹೊರೆ ಜನರ ಮೇಲೆ
ಮದುವೆ ವಿಷಯದಲ್ಲೂ ಈತ ಚಿನ್ನದ ಹುಡುಗನೇ
ಪತ್ರಿಕೋದ್ಯಮದಲ್ಲಿ ಕೈಯಾಡಿಸಲಿರುವ ಪ್ರಿನ್ಸ್ ವಿಲಿಯಂ
ಗಣರಾಜ್ಯೋತ್ಸವ ದಿನಾಚರಣೆಗಾಗಿ ವಿಶೇಷ ಪುಟ