ಚಂದ್ರಾವತಿ ಬಡ್ಡಡ್ಕ ರಾಜ್ಯದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬರುತ್ತಿದೆ. 2004ರ ಚುನಾವಣೆಯ ಬಳಿಕ ರಾಜ್ಯದಲ್ಲಿ ರಾಜಕೀಯವೇ ಮೇಳೈಸಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ರಾಜ್ಯದ ಜನತೆಯಂತೂ ರಾಜ್ಯದಲ್ಲಿ ಅಸಹ್ಯಕರ ರಾಜಕೀಯವನ್ನು ಕಂಡು ರೋಸಿಹೋಗಿದ್ದಾರೆ. ಇದೀಗ 13ನೇ ವಿಧಾನಸಭಾ ಚುನಾವಣೆಗಳು ಮುಗಿದಿದ್ದು ಹೊಸ ಸರಕಾರ ಅಧಿಕಾರ ಕೈಗೆತ್ತಿಕೊಳ್ಳುತ್ತಿದೆ.
ಅಂತಂತ್ರ ಸರಕಾರ, ಬಳಿಕದ ಕುತಂತ್ರ ಸರಕಾರವನ್ನು ನೋಡಿದ ಪ್ರಜೆಗಳು ಯಾವುದೇ ಪಕ್ಷವಾದರೂ ಬರಲಿ ಐದು ವರ್ಷ ಅಧಿಕಾರದಲ್ಲಿರಲಿ ಎಂಬ ಆಶಯ ಹೊಂದಿದ್ದರು. ಕಳೆದ ಬಾರಿ ಮಿತ್ರ ಪಕ್ಷ ಜೆಡಿಎಸ್ ಎಸಗಿರುವ ಮಿತ್ರದ್ರೋಹ, ಬಳಿಕದ ಛಾಪಾಕಾಗದದಲ್ಲಿ ಷರತ್ತುಗಳಿಗೆ ಸಹಿಹಾಕಬೇಕೆಂಬ ಪಟ್ಟು ಹಿಡಿದು ಏಳು ದಿನಗಳ ಸರಕಾರವನ್ನು ಉರುಳಿಸಿದ ದೇವೇಗೌಡರ ತಂತ್ರ, ಇದರೊಂದಿಗೆ 20:20 ಸರಕಾರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾರಿಗೆ ತಂದಿದ್ದ ಜನಪ್ರಿಯ ಕಾರ್ಯಗಳು, ರಾಜ್ಯದಲ್ಲಿ ಜಾರಿಗೆ ಬಂದ ಕ್ಷೇತ್ರ ಪುನರ್ವಿಂಗಡಣೆ, ಜತೆಗೆ ಇದೊಂದು ಬಾರಿ ಅವಕಾಶ ಕೊಡಿ ಎಂಬ ವಿನಂತಿ- ಅಂತೂ ಇವುಗಳಲ್ಲಿ ಎಲ್ಲವೂ ಅಥವಾ ಯಾವುದಾದರೂ ಒಂದು, ಇಲ್ಲವೇ ಕೆಲವು ಅಂಶಗಳು ಸೇರಿ ಈ ಸಾರಿ ಭಾರತೀಯ ಜನತಾ ಪಕ್ಷವು ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಪೂರ್ಣಪ್ರಮಾಣದಲ್ಲಿ ಅಧಿಕಾರದ ಗದ್ದುಗೆ ಏರುವಂತೆ ಮಾಡಿದೆ.
ಬದಲಾಗುತ್ತಿರುವ ಕಾಲಾವಸ್ಥೆಗೆ ತಕ್ಕಂತೆ ಮತದಾರನೂ ಬದಲಾಗಿದ್ದಾನೆ. ಚುನಾವಣೆಯ ಫಲಿತಾಂಶವನ್ನು ವೀಕ್ಷಿಸಿದರೆ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಕೇವಲ ರಾಜಕೀಯವನ್ನೇ ಮಾಡಿದ ಘಟಾನುಘಟಿ ರಾಜಕರಾಣಿಗಳನ್ನು ಅವರ ಸ್ವಂತ ಕ್ಷೇತ್ರದ ಜನತೆ ಉದ್ದಕ್ಕೆ ಮಲಗಿಸಿದ್ದಾರೆ.
ಮುಂದಿನ ಸರಕಾರ ಈ ಅಂಶಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದಲೇ ಮುಂದಡಿ ಇಡಬೇಕಾಗಿದೆ. ಗೆದ್ದಿರೋ ಎಲ್ಲಾ ಶಾಸಕರೂ ಸಚಿವರಾಗಲು ಸಾಧ್ಯವಿಲ್ಲದ ಕಾರಣ ಅವಕಾಶ ವಂಚಿತರೊಳಗೆ ಅಸಮಾಧಾನದ ಹೊಗೆ ಏಳುವುದಂತೂ ಸಹಜ. ಅದಲ್ಲದೆ ಯಡಿಯೂರಪ್ಪನವರ ಕಾಲೆಳೆಯಲು ಯತ್ನಿಸುವವರೂ ಪಕ್ಷದೊಳಗೇ ಇದ್ದಾರೆಂಬುದೂ ಬಹಿರಂಗ ರಹಸ್ಯ. ನೂತನ ಮುಖ್ಯಮಂತ್ರಿಗಳು ಇವೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪಳಗಿದ ರಾಜಕಾರಣಿ ಹೌದು.
ಸ್ವಾತಂತ್ರ್ಯಾನಂತರ ರಾಜ್ಯವನ್ನು ಆಳಿದ ಅಷ್ಟೂ ಸರಕಾರಗಳೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿವೆ. ಉತ್ತಮ ಅಭಿವೃದ್ಧಿ ಯೋಜನೆಗಳನ್ನೂ ಹಮ್ಮಿಕೊಂಡಿವೆ. ಅಂದಿಗೂ ಇಂದಿಗೂ ಹೋಲಿಸಿದರೆ ಸುಧಾರಣೆಯೇ ಆಗಿಲ್ಲ, ಜನತೆಯ ಸ್ಥಿತಿಗತಿಗಳಲ್ಲಿ ಬದಲಾವಣೆಯೇ ಆಗಿಲ್ಲ ಅಂತ ಅಂದರೆ ಅದು ತೀರಾ ಋಣಾತ್ಮಕ. ಆದರೂ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಯಾಕೆ ಆಗಿಲ್ಲ ಎಂದರೆ, ಸರಕಾರ ಜಾರಿಗೆ ತರುವ ಕಾರ್ಯಕ್ರಮಗಳು ಯಾರಿಗೆ ತಲುಪಬೇಕೋ ಅವರಿಗೆ ತಲುಪದಿರುವುದು. ನಿಜವಾದ ಫಲಾನುಭವಿಗಳನ್ನು ಬಿಟ್ಟು ಇನ್ಯಾರದೋ ಅಭಿವೃದ್ಧಿಗೆ ವ್ಯಯವಾಗುತ್ತಿದೆ.
ರಾಜ್ಯದ ರಾಜಧಾನಿ ಬೆಂಗಳೂರನ್ನೇ ತೆಗೆದುಕೊಂಡರೆ ಅಸಾಧ್ಯವಾದ ವಾಹನ ದಟ್ಟಣೆಯೇ ಇಲ್ಲಿನ ಬಹುದೊಡ್ಡ ಸಮಸ್ಯೆ. ನಮಗೆ ಬೆಂಗಳೂರು ಸಿಂಗಾಪುರವಾಗುವುದು ಬೇಕಿಲ್ಲ. ಬದಲಿಗೆ ಇಲ್ಲಿನ ಪ್ರಮುಖ ಸಮಸ್ಯೆಯಾಗಿರುವ ಟ್ರಾಫಿಕ್ ಸಮಸ್ಯೆಯ ನಿವಾರಣೆ ಮೊದಲು ಆಗಬೇಕು ಎಂಬುದು ಹೆಚ್ಚಿನ ಬೆಂಗಳೂರಿಗರ ಅಭಿಪ್ರಾಯ.
ರಾಜ್ಯದಲ್ಲಿ ಹಲವು ಯೋಜನೆಗಳಿಗೆ ಅದೆಷ್ಟೋ ಕೋಟಿ ರೂಪಾಯಿಗಳು ವ್ಯಯವಾಗುತ್ತದೆ. ಹೆಚ್ಚಿನೆಡೆ ಪೋಲಾಗುತ್ತದೆ. ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ರಸ್ತೆ ಸಮಸ್ಯೆ ರಾಜ್ಯದ ಉದ್ದಗಲವನ್ನು ಕಾಡುತ್ತಿರುವುದು. ಎಷ್ಟೋ ಹಳ್ಳಿಗಳಿಗೆ ಇನ್ನೂ ಸಾರಿಗೆ ಸೌಲಭ್ಯವಿಲ್ಲ. ಸರಕಾರ ಮನಸ್ಸು ಮಾಡಿ ವೈಜ್ಞಾನಿಕವಾದ ರೀತಿಯಲ್ಲಿ ಯೋಜನೆ ಹಮ್ಮಿಕೊಂಡಲ್ಲಿ ಸೂಕ್ತವಾದ ರಸ್ತೆ ಸೌಕರ್ಯ ಕಲ್ಪಿಸಿಕೊಡಲು ಯಾಕೆ ಸಾಧ್ಯವಿಲ್ಲ?
ರಾಜ್ಯದ ಆರ್ಥಿಕ ಅಸಮರ್ಥರನ್ನು ಕಾಡುತ್ತಿರುವುದು ಆರೋಗ್ಯ ಸಮಸ್ಯೆ. ವೈದ್ಯಕೀಯ ಚಿಕಿತ್ಸೆ ಸಾಮಾನ್ಯನ ಕೈಗೆಟುಕದ ದೂರಕ್ಕೆ ಸಾಗಿದೆ. ಕಮ್ಯೂನಿಸ್ಟ್ ಆಡಳಿತವಿರುವ ಕ್ಯೂಬಾದಂತ ಪುಟ್ಟ ರಾಷ್ಟ್ರದಲ್ಲಿ ಎಲ್ಲರಿಗೂ ಉಚಿತ ಆರೋಗ್ಯ. ನಮ್ಮಲ್ಲೂ ಉಚಿತ ವೈದ್ಯಕೀಯ ವ್ಯವಸ್ಥೆ ಇದ್ದರೂ, ಅದರ ಪುರಾತನ ಕಾಲದ ಕಾರ್ಯವೈಖರಿ ಪ್ರಸಕ್ತ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿಲ್ಲ. ಸರಕಾರ ಕೋಟಿಗಟ್ಟಲೆ ವ್ಯಯಿಸುತ್ತಿರುವುದು ಫಲಕಾರಿಯಾಗುತ್ತಿಲ್ಲ. ಕೆಲವೆಡೆ ಸೂಕ್ತ ಸೌಲಭ್ಯಗಳಿಲ್ಲ. ಸೌಲಭ್ಯಗಳಿದ್ದೆಡೆ ನಿರ್ವಹಣೆ ಇಲ್ಲ!
ಜನತೆಗೆ ಅವಶ್ಯಕವಾಗಿರುವ ಇನ್ನೊಂದು ಅಂಶ ಶಿಕ್ಷಣ. ಹೆಣ್ಣುಮಕ್ಕಳಿಗೆ ಮಾತ್ರ ಉಚಿತ ಶಿಕ್ಷಣ ಲಭಿಸಿದರೆ ಸಾಕಾಗುವುದಿಲ್ಲ. ಎಸ್ಸೆಸ್ಸೆಲ್ಸಿ ತನಕವಾದರೂ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣಬೇಕು. ಸಾಮರ್ಥ್ಯಉಳ್ಳವರು ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ತೆತ್ತು ಖಾಸಗೀ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸುತ್ತಾರೆ. ಆದರೆ ಬಡವರು? ಬಡವರೆಂದಾಗ ಜಾತಿಯ ಮಾನದಂಡ ಬೇಡ. ಕೆಳಜಾತಿಯವರಲ್ಲಿ ಮನೆಮೇಲೆ ಮನೆಕಟ್ಟಿದವರಿದ್ದಾರೆ. ಅಂತೆಯೇ ಮೇಲ್ಜಾತಿಯವರಲ್ಲಿ ಮನೆ ಇಲ್ಲದೇ ಇರುವವರೂ ಇದ್ದಾರೆ. ಜಾತಿ ಆಧಾರಕ್ಕಿಂತ ಆರ್ಥಿಕ, ಶೈಕ್ಷಣಿಕ ಆಧಾರದಲ್ಲಿ ಹಿಂದುಳಿದವರು ಮತ್ತು ಮುಂದುವರಿದವರ ನಿರ್ಧಾರವಾದೀತೇ?
ನಮ್ಮ ರಾಜ್ಯದಲ್ಲಿ ಇತರರೆಲ್ಲರಿಗೆ ಹೋಲಿಸಿದರೆ ಬಡರೈತರಷ್ಟು ಗೋಳು ಬಹುಶಃ ಇನ್ಯಾವ ವರ್ಗವೂ ಅನುಭವಿಸುತ್ತಿಲ್ಲ. ಸಾಲಸೋಲ ಮಾಡಿ ಕೃಷಿಮಾಡುವ ಇಂತಹವರಿಗೆ ಮನೆಯಲ್ಲಿ ಯಾವತ್ತೂ ಮಳೆಗಾಲವೇ. ಕೃಷಿಗೋಸ್ಕರ ಮಾಡಿರುವ ಸಾಲದ ಮರುಪಾವತಿಯೇ ಇವರ ಏಕೈಕ ಗುರಿಯಾಗಿರುವ, ಸೂಕ್ತ ಮಾರ್ಗದರ್ಶನವೂ ಇಲ್ಲದೆ, ಇತ್ತಲಿಂದ ಮಾಡಿದ ಕೃಷಿಯೂ ಕೈಗೆ ಹತ್ತದೆ, ಕೃಷಿಕರ ಜೀವನ ನಿತ್ಯದುಃಖದ್ದು. ಐಶಾರಾಮಿ ವಸ್ತುಗಳನ್ನು ಬಿಡಿ, ಹಣಕೊಟ್ಟು ಹಾಲು ಖರೀದಿಸುವುದೂ ಇಂತಹ ಕುಟುಂಬಗಳಿಗೆ ದುಬಾರಿ. ವಿಪರ್ಯಾಸವೆಂದರೆ ಸರಕಾರಿ ಕಡತಗಳಲ್ಲಿ ಇವರೆಲ್ಲ ಶ್ರೀಮಂತರು. ಇಂತಿಷ್ಟು ಮಿತಿಗಿಂತ ಹೆಚ್ಚಿನ ಆಸ್ತಿಹೊಂದಿರುವವರು ಎಂಬ ಬಡತನ-ಸಿರಿತನವನ್ನು ವಿಂಗಡಿಸುವ ರೇಖೆಯು ಶ್ರೀಮಂತರು ಎಂಬುದಾಗಿ ನಿರ್ಧರಿಸುವ ಕಾರಣ ಪ್ರಾಯೋಗಿಕವಾಗಿ ಬಡವರಾಗಿರುವ ಇವರು ತಾತ್ವಿಕವಾಗಿ ಶ್ರೀಮಂತರು? ಇಂತಹ ರೈತರಿಗೆ ಸರಕಾರದ ಸೌಲಭ್ಯಗಳು ದಕ್ಕುವುದಿಲ್ಲ. ವಾಸ್ತವಿಕತೆಯಲ್ಲಿ ಇವರು ಅಸಮರ್ಥರಾಗಿದ್ದರೂ, ದಾಖಲೆಗಳ ಪ್ರಕಾರ ಶ್ರೀಮಂತರಾಗಿರುವುದೇ ಇದಕ್ಕೆ ಕಾರಣ.
ಇಂತಹ ಅರೆಬರೆ ಕೃಷಿಕರಿಗಿಂತ ದಿನಗೂಲಿಗೆ ತೆರಳುವ ಕೃಷಿ ಕಾರ್ಮಿಕರ ಪರಿಸ್ಥಿತಿಯೇ ಉತ್ತಮವಿರಬಹುದೇನೋ... ಗ್ರಾಮೀಣ ಪ್ರದೇಶದ ಎಷ್ಟೋ ಕುಟುಂಬಗಳು ದಿನನಿತ್ಯ ಹೊಟ್ಟೆ ತುಂಬ ಉಣ್ಣುವ ಪರಿಸ್ಥಿತಿಯಲ್ಲಿ ಇಲ್ಲ. ಸಮತೋಲಿತ ಪೌಷ್ಟಿಕಾಂಶಗಳನ್ನು ಹೊಂದಿದ ಆಹಾರ ಸೇವಿಸುವ ಮಾತಂತೂ ಬಲುದೂರ.
ರೈತ ಕುಟುಂಬದಲ್ಲಿ ಜನಿಸಿದ, ರೈತರ ಕಷ್ಟಗಳನ್ನು ಹತ್ತಿರದಿಂದ ಕಂಡ ಯಡಿಯೂರಪ್ಪ ನೇತೃತ್ವದ ನೂತನ ಸರಕಾರವು ಇಂತಹ ಬುಡತಳದ ಸಮಸ್ಯೆಗಳನ್ನು ಸೂಕ್ತವಾಗಿ ಅರಿತುಕೊಂಡು ಇವುಗಳ ಪರಿಹಾರಕ್ಕೆ ಪ್ರಯತ್ನಿಸುವ ಮನಸ್ಸು ಮಾಡಲಿ ಎಂಬುದು, ಅವರ ಈ ಅಧಿಕಾರ ಗ್ರಹಣದ ಸಂಭ್ರಮೋಲ್ಲಾಸದ ವೇಳೆ ಕಳಕಳಿಯ ಆಶಯ.
|