ಇದು ಬೆಲೆ ಏರಿಕೆಗೆ ನಾಂದಿ ಹಾಡುತ್ತದೆ ಎನ್ನಲಾಗುವುದಿಲ್ಲ. ಯಾಕೆಂದರೆ ಈ ನಾಂದಿಯನ್ನು ಯಾವತ್ತೋ ಇರಿಸಲಾಗಿದೆ. ಈಗ, ಜನಸಾಮಾನ್ಯರು ಕಳೆದ ಕೆಲವು ತಿಂಗಳಿಂದ ಬೆಲೆ ಏರಿಕೆಯಿಂದ ತತ್ತರಿಸಿ ಬೊಬ್ಬಿಡುತ್ತಿದ್ದರೂ ಕೇಂದ್ರದ ಯುಪಿಎ ಬೆಲೆಯನ್ನು ಆಗಸದೆತ್ತರಕ್ಕೆ ಏರಿಸುವ ನಿಟ್ಟಿನಲ್ಲಿ ಬೆಂಕಿಗೆ ಪೆಟ್ರೋಲ್ ಸುರಿದುಬಿಟ್ಟಿದೆಯಷ್ಟೆ.
ಮೂವರು ಅತ್ಯುತ್ತಮ ಅನ್ನಿಸಿಕೊಂಡ ಆರ್ಥಿಕ ತಜ್ಞರ ಕೈಯಲ್ಲಿ ಭಾರತದ ಭವಿಷ್ಯವಿದೆ. ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಭಾರತವನ್ನು ಉತ್ತಮ ಪಥದಲ್ಲಿ ಮುನ್ನಡೆಸುತ್ತಾರೆ, ಆಮ್ ಆದ್ಮಿ ಸಂತಸದಲ್ಲಿರುತ್ತಾನೆ ಎಂಬ ನಿರೀಕ್ಷೆಗಳೆಲ್ಲಾ ಮಣ್ಣುಪಾಲಾಗಿವೆ. ಇಂಥ ದೈತ್ಯ ಪ್ರತಿಭೆಗಳಿದ್ದರೂ, ಏರುತ್ತಿರುವ ಬೆಲೆಗಳಿಗೆ ಕಡಿವಾಣ ಹಾಕಲಾರದೆ, ಜನಸಾಮಾನ್ಯರನ್ನೇ ಗುರಿಯಾಗಿಸಿಕೊಂಡು ಮಾಡಿರುವ ಈ ಬೆಲೆ ಏರಿಕೆ ಖಂಡಿತ ಅಸಮರ್ಥನೀಯ.
ಮೂಲ ಮೌಲ್ಯಕ್ಕಿಂತ ಹೆಚ್ಚು ತೆರಿಗೆ |
| ಮೂಲ ಬೆಲೆ 21.93 ರೂ., ಅಬಕಾರಿ ಸುಂಕ 14.35 ರೂ., ಶೈಕ್ಷಣಿಕ ತೆರಿಗೆ 0.43 ರೂ., ಡೀಲರ್ ಕಮಿಷನ್ 1.05 ರೂ., ವ್ಯಾಟ್ 5.5 ರೂ., ಕಚ್ಚಾ ತೈಲ ಸೀಮಾ ಸುಂಕ 1.10 ರೂ., ಪೆಟ್ರೋಲ್ ಸೀಮಾ ಶುಲ್ಕ 1.54 ರೂ. ಅಂದರೆ 22 ರೂಪಾಯಿ ಪೆಟ್ರೋಲಿಗೆ 28 ರೂಪಾಯಿ ಹೆಚ್ಚುವರಿ ತೆರಿಗೆ ತೆರಬೇಕು! |
| |
ಜಾಗತಿಕವಾಗಿ ಕಚ್ಚಾ ತೈಲಗಳ ಬೆಲೆ ಏರಿಕೆಯಿಂದಾಗಿ ತೈಲ ಸಂಪನ್ಮೂಲವನ್ನು ಆಮದು ಮಾಡಿಕೊಂಡು ಭಾರತದಲ್ಲಿ ವಿತರಿಸುತ್ತಿರುವ ಬಿಪಿಸಿಎಲ್, ಎಚ್‌ಪಿಸಿಎಲ್ ಮತ್ತು ಐಒಸಿಗಳು ನಷ್ಟದಲ್ಲಿವೆ. ಅವುಗಳ ನಷ್ಟ ತಡೆಯಬೇಕು ಎಂಬುದು ಎಲ್ಲರೂ ಒಪ್ಪತಕ್ಕ ಮಾತು. ಆದರೆ ಈ ನಷ್ಟವನ್ನು ಜನಸಾಮಾನ್ಯರ ಮೇಲೆ ಪರಿಪೂರ್ಣವಾಗಿ ಹೇರುವುದು ಮಾತ್ರ ಅಕ್ಷಮ್ಯ.
ಮಂತ್ರಿ ಮಹೋದಯರು, ಅಧಿಕಾರಿಗಳೇ ಮುಂತಾದ 'ಜನಸೇವಕರು' ಎಂದು ಕರೆಸಿಕೊಳ್ಳುತ್ತಿರುವವರು ಪಡೆಯುತ್ತಿರುವ ಉಚಿತ ಪೆಟ್ರೋಲ್ ಅಥವಾ ಪೆಟ್ರೋಲ್ ಶುಲ್ಕ ಮತ್ತು ಇತರ ಐಷಾರಾಮಿ ಸೌಲಭ್ಯಗಳನ್ನು, ಸವಲತ್ತುಗಳನ್ನು ಹಿಂತೆಗೆದುಕೊಂಡರೆ ದೇಶದ ಖಜಾನೆಗೆ ಕೋಟಿ ಕೋಟಿ ಲಾಭವಾಗುತ್ತಿರಲಿಲ್ಲವೇ? ಅಷ್ಟಕ್ಕೂ ಪೆಟ್ರೋಲ್, ಡೀಸೆಲ್‌ಗಳ ನಿಜ ಮೌಲ್ಯ ಎಷ್ಟು ಅಂತ ಯೋಚಿಸಿದರೆ, ಶೇ.53ರಷ್ಟು ಕೇಂದ್ರ ಸರಕಾರ ಪೆಟ್ರೋಲ್‌ಗೆ ತೆರಿಗೆ (ಸೀಮಾ ಸುಂಕ, ಅಬಕಾರಿ ಸುಂಕ, ಮಾರಾಟ ತೆರಿಗೆ, ಸಾಗಣೆ ಶುಲ್ಕ ಇತ್ಯಾದಿ ಸೇರಿ) ಹೇರುತ್ತಿದ್ದರೆ, ರಾಜ್ಯ ಸರಕಾರಗಳು ಕೂಡ ಶೇ.20-25ರಷ್ಟು ತೆರಿಗೆ ವಿಧಿಸುತ್ತವೆ. ಜನಸಾಮಾನ್ಯರ ಮೇಲಿಂದ ಈ ತೆರಿಗೆ ಹೊಡೆತ ಕಡಿತ ಮಾಡುವುದೂ ಒಂದು ಪರ್ಯಾಯ ಮಾರ್ಗ. ಕೆಲವು ಸಮಯದ ಹಿಂದೆ ಬಿಜೆಪಿ ರಾಜ್ಯ ಸರಕಾರಗಳು ಪೆಟ್ರೋಲ್ ತೆರಿಗೆ ಕಡಿತಗೊಳಿಸಿ, ಜನಸಾಮಾನ್ಯರನ್ನು ಸ್ವಲ್ಪಮಟ್ಟಿನ ಶಾಕ್‌ನಿಂದ ಬಚಾವ್ ಮಾಡಿದ್ದು ಇಲ್ಲಿ ಉಲ್ಲೇಖನೀಯ.
ಸೂಕ್ತ ಯೋಜನೆಯೇ ಇಲ್ಲದೆ ಸರಕಾರ ಚಲಾಯಿಸಿದರೆ ಹೀಗೂ ಆಗುತ್ತದೆ, ಜನಸಾಮಾನ್ಯರದು ನಾಯಿಪಾಡಾಗುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅಂತಾರಾಷ್ಟ್ರಿಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರುತ್ತಲೇ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಕೊನೆ ಕ್ಷಣದಲ್ಲಿ ಎಲ್ಲವನ್ನೂ ಜನಸಾಮಾನ್ಯರ ಮೇಲೆ ಹಾಕಿದರೆ ಖಂಡಿತಾ ಅಂಥವರಿಗೆ ಜನ ಪಾಠ ಕಲಿಸುತ್ತಾರೆ ಎಂಬುದಕ್ಕೆ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಸೂಕ್ತ ಪೂರ್ವಸಿದ್ಧತೆ, ಒಂದು ಸ್ಪಷ್ಟ ಗುರಿಯುಳ್ಳ ಆರ್ಥಿಕ ನೀತಿ ರೂಪಿಸಿದ್ದಿದ್ದರೆ ಖಂಡಿತಾ ಈಗಿನ ಸ್ಥಿತಿಯನ್ನು ತಪ್ಪಿಸಬಹುದಾಗಿತ್ತು. ಈಗಿನ ನೀತಿಯಂತೂ 'ಉಳ್ಳವರಲ್ಲೇ ಹಣ ಸೇರು'ವಂಥದ್ದು. ಐಟಿ-ಬಿಟಿ ಕಂಪನಿಗಳಿಗೆ ಕರೆಕರೆದು ಭೂಮಿ ಕೊಡುತ್ತಾರೆ, ಕೊಡಬಹುದಾದ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿಕೊಡುತ್ತಾರೆ. ಆದರೆ ಇಲ್ಲೇ ಇರುವವರ ಬಗ್ಗೆ ಕಾಳಜಿ ತೋರುವುದಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರುತ್ತಿರುವ ಕಚ್ಚಾತೈಲ ಬೆಲೆ ನಿಗ್ರಹಿಸಬೇಕಿರುವುದು ಜಾಗತಿಕವಾಗಿ ಶಕ್ತ ರಾಷ್ಟ್ರಗಳ ಬದ್ಧತೆಯೂ ಹೌದು. ಈ ಬಗ್ಗೆ ಚಿಂತಿಸಬೇಕಿರುವುದು ಅವರ ಕರ್ತವ್ಯವೂ ಹೌದು. ಆದರೆ, ರಾಜಕೀಯ ಇಚ್ಛಾಶಕ್ತಿಯಿಲ್ಲದ ಅಂತಾರಾಷ್ಟ್ರೀಯ ಮಟ್ಟದ ನಾಯಕರಿಂದಾಗಿ ಜಗತ್ತಿನ ಜನಸಾಮಾನ್ಯರೇ ಯಾವಾಗಲೂ ಬಲಿಪಶುವಾಗಬೇಕಿರುವುದು ವ್ಯವಸ್ಥೆಯ ದುರಂತ. ಪೆಟ್ರೋಲಿಯಂ ಬಳಸುತ್ತಿರುವ ಕೈಗಾರಿಕೆಗಳಿಗೆ ಸಾಧ್ಯವಿರುವವುಗಳಿಗೆಲ್ಲಾ ಸೌರಶಕ್ತಿಯನ್ನು, ವಾಯು ಶಕ್ತಿಯನ್ನು ಬಳಸಲು ಪ್ರೇರೇಪಿಸುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕಬಹುದಿತ್ತು. ಸೌರಶಕ್ತಿ ಬಳಕೆಗೆ ಸರಕಾರ ಬಲವಾಗಿ ಉತ್ತೇಜನವನ್ನೇಕೆ ನೀಡುತ್ತಿಲ್ಲ? ಸುಲಭ-ಸಾಧ್ಯ ಆಗಿರುವ ಅದು ಕೂಡ ಜನರ ಕೈಗೆ ನಿಲುಕದಷ್ಟು ಎತ್ತರಕ್ಕೇರುವಂತಾಗಿದ್ದೇಕೆ? ಪರ್ಯಾಯ ಇಂಧನ ಬಳಕೆಗೆ ಸರಕಾರವೇಕೆ ಪ್ರೋತ್ಸಾಹ ನೀಡುತ್ತಿಲ್ಲ? ಈ ಬಗ್ಗೆ ನಮ್ಮ ಸರಕಾರಗಳು ಗಮನ ಹರಿಸಬೇಕಿದೆ. ಮುಂದೈತೆ ಬೆಲೆ ಏರಿಕೆಯ ಹಬ್ಬ! ಆಯಿತು, ಏರಿದ್ದು ಪೆಟ್ರೋಲಿಯಂ ದರ ಮಾತ್ರ ಅಂತ ಸುಮ್ಮನೆ ಕುಳಿತುಕೊಳ್ಳಲಾದೀತೇ? ಖಂಡಿತಾ ಇಲ್ಲ, ಆಮ್ ಆದ್ಮೀ ಎಂದೇ ಕಾಂಗ್ರೆಸಿಗರಿಂಗ ಪ್ರೀತಿಯಿಂದ ಕರೆಸಿಕೊಳ್ಳುವ, ಕರೆಸಿಕೊಳ್ಳುತ್ತಲೇ ಬಂದ ಜನಸಾಮಾನ್ಯರ ಜೀವನವನ್ನು ಹಿಂಡುವ ಪ್ರಕ್ರಿಯೆಗೂ ಚಾಲನೆ ದೊರೆತಿದೆ. ತೈಲ ದರ ಹೆಚ್ಚಳದ ಪರಿಣಾಮದ ಸರಣಿಯನ್ನೇ ನೋಡಿ... ಇನ್ನು ಮುಂದೆ ಸಾರಿಗೆ-ಸಾಗಾಟ ವೆಚ್ಚ ಎಂದು ವಾಹನಗಳು ಪ್ರಯಾಣ ದರ ಏರಿಸುತ್ತವೆ ಮತ್ತು ಸರಕು ಸಾಗಣೆ ದರ ಹೆಚ್ಚಿಸುತ್ತವೆ. ಸಾರಿಗೆ ಕ್ಷೇತ್ರದ ಪರಿಣಾಮವನ್ನು ಸರಿದೂಗಿಸಲು ಜೀವನಾವಶ್ಯಕ ವಸ್ತುಗಳಾದ ಆಹಾರ, ಹಾಲು, ವೈದ್ಯಕೀಯ ವಸ್ತುಗಳ ಬೆಲೆಯನ್ನೂ ಏರಿಸಲಾಗುತ್ತದೆ. ದೇಶದ ಒಂದು ಕಡೆಯಿಂದ ಮತ್ತೊಂದೆಡೆಗೆ ರವಾನೆಯಾಗುತ್ತಾ ಮಾರುಕಟ್ಟೆ ಹೊಂದಿರುವ ಅಕ್ಕಿ, ತರಕಾರಿ, ಬೇಳೆ ಕಾಳುಗಳ ಮೇಲೆ ಈ ಸಾಗಾಣಿಕ ವೆಚ್ಚದ ಹೆಚ್ಚಳವನ್ನೂ ಹೇರಲಾಗುತ್ತದೆ. ಅಲ್ಲಿಗೆ ಜನ ಸಾಮಾನ್ಯರು ಯಾವುದೇ ಅವಶ್ಯಕ ವಸ್ತುಗಳನ್ನು ಖರೀದಿಸಲಾಗದಂತಾಗುತ್ತದೆ.
ಇದೀಗ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಲು ಹೊಸ ವೇಗ ದೊರೆತದ್ದಷ್ಟೇ ಅಲ್ಲ, ಹಣದುಬ್ಬರ ಕೂಡ ಏರುತ್ತದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ದರ ಇಳಿಯುತ್ತದೆ. ಒಟ್ಟಿನಲ್ಲಿ ದೇಶವನ್ನು ಯಾವ ರೀತಿ ಆಳಬಾರದು ಎಂಬುದಕ್ಕೆ ಕೇಂದ್ರ ಸರಕಾರ ಅತ್ಯುತ್ತಮ ಉದಾಹರಣೆ ನೀಡಿದಂತಾಗಿದೆ. ಹಣದುಬ್ಬರ ಎರಡಂಕಿ ಏರದಂತೆ ಪ್ರಾರ್ಥನೆ ಮಾಡುವುದೊಂದೇ ನಮಗುಳಿದಿರುವ ಏಕೈಕ ಮಾರ್ಗ.
ಲಭ್ಯ ಅಂಕಿಅಂಶವೊಂದರ ಪ್ರಕಾರ, ಪೆಟ್ರೋಲ್ ಬೆಲೆ ಲೀಟರಿಗೆ 51.90 ಅಂತ ಲೆಕ್ಕ ಇದ್ದರೆ (ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 130 ಡಾಲರ್ ಇದ್ದಾಗ), ಭಾರತದಲ್ಲಿ ಅದರ ಬೆಲೆ ಈ ರೀತಿ ಇರುತ್ತದೆ: ಮೂಲ ಬೆಲೆ 21.93 ರೂ., ಅಬಕಾರಿ ಸುಂಕ 14.35 ರೂ., ಶೈಕ್ಷಣಿಕ ತೆರಿಗೆ 0.43 ರೂ., ಡೀಲರ್ ಕಮಿಷನ್ 1.05 ರೂ., ವ್ಯಾಟ್ 5.5 ರೂ., ಕಚ್ಚಾ ತೈಲ ಸೀಮಾ ಸುಂಕ 1.10 ರೂ., ಪೆಟ್ರೋಲ್ ಸೀಮಾ ಶುಲ್ಕ 1.54 ರೂ. ಅಂದರೆ 22 ರೂಪಾಯಿ ಪೆಟ್ರೋಲಿಗೆ 28 ರೂಪಾಯಿ ಹೆಚ್ಚುವರಿ ತೆರಿಗೆ ತೆರಬೇಕು!ಬರಲಿವೆ ಪ್ರತಿಭಟನಾ ನಾಟಕಗಳು! ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಹೊರಗಿನಿಂದ ಬೆಂಬಲಿಸುತ್ತಲೇ ಬಂದಿರುವ ಎಡಪಕ್ಷಗಳು ಮಾಮೂಲಿಯಾಗಿ, ತಮ್ಮ ಎಂದಿನ ಶೈಲಿಯಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತವೆ. ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತವೆ. ಪ್ರತಿಪಕ್ಷವಾದ ಬಿಜೆಪಿ ಕೂಡ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತದೆ. ಎಡಪಕ್ಷಗಳು ಮತ್ತು ಬಿಜೆಪಿಯ ನಡುವೆ ಪ್ರತಿಭಟನೆಗಾಗಿ ಪೈಪೋಟಿಯೇ ಆರಂಭವಾದರೂ ಅಚ್ಚರಿಯಿಲ್ಲ. ಎಡಪಕ್ಷಗಳು ಹಿಂದಿನ ಎನ್‌ಡಿಎ ಸರಕಾರಕ್ಕೂ, ಈಗಿನ ಸರಕಾರಕ್ಕೂ ಸಾಕಷ್ಟು ಬೈಗುಳದ ದಾಳಿ ನಡೆಸಿದ ನಂತರ, ಬಿಜೆಪಿ ಕೂಡ ಕಾಂಗ್ರೆಸ್ ವಿತ್ತ ನೀತಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ ನಂತರ, ಒಂದು ವಾರ ಕಳೆಯುತ್ತದೆ. ಜನ ಸಾಮಾನ್ಯರ ಆಕ್ರೋಶ ನಿಧಾನವಾಗಿ ತಣ್ಣಗಾಗಿರುತ್ತದೆ. ಹೊಸ ದರಗಳಿಂದಾಗಿ ಅವರು ತುತ್ತು ಅನ್ನಕ್ಕೆ ಒದ್ದಾಡುತ್ತಿದ್ದರೂ ಅದಕ್ಕೆ ಹೊಂದಿಕೊಳ್ಳಲೇಬೇಕಾದ ಪರಿಸ್ಥಿತಿಯಲ್ಲಿ ಮುಂದುವರಿಯತೊಡಗುತ್ತಾರೆ.
ಇವರು ಪ್ರತಿಭಟನೆ ಬದಿಗಿಟ್ಟು, ಬೆಲೆಯನ್ನು ಯಾವ ರೀತಿ ತಗ್ಗಿಸಬಹುದು ಅಂತ ಚಿಂತಿಸಿ, ಆಮ್ ಆದ್ಮಿಯ ಪರಿಸ್ಥಿತಿಯನ್ನು ನೆನೆದು, ರಾಜಕೀಯ ವೈಮನಸ್ಯ ಮರೆತು ಒಟ್ಟಾಗಿ ಚರ್ಚಿಸುವುದರ ಬದಲು ಕೂಗಾಡುತ್ತಾ, ಪರಸ್ಪರ ವಾಗ್ದಾಳಿಗಳಲ್ಲಿ ನಿರತರಾದರೆ, ಜನಸಾಮಾನ್ಯರಿಗೆ ಪುಕ್ಕಟೆ ಮನರಂಜನೆಯಷ್ಟೇ ದೊರೆಯಬಹುದು.
ಅಲ್ಲ, ಬಡ ಜನರೇನು ಪೆಟ್ರೋಲ್ ಕುಡಿಯುತ್ತಾರಾ? ಅಂತ ಅಧಿಕಾರಾರೂಢರು ಪ್ರಶ್ನಿಸಲೂಬಹುದು. ಹೌದು. ಪೆಟ್ರೋಲ್ ಕುಡಿಯಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಅಂತ ಆಕ್ರೋಶಿತ ವರ್ಗದಿಂದ ಉತ್ತರವೂ ದೊರೆಯಬಹುದು!
ಜನರಿಂದ ಜನರಿಗಾಗಿಯೇ ಇರುವ ಸರಕಾರ ಎಂಬ ಪ್ರಜಾಪ್ರಭುತ್ವದ ಮೂಲ ತತ್ವ ಏನಾಯಿತು? ದಿನಗೂಲಿ ನೌಕರರ, ಬಡ ಜನತೆಯ, ಅಸಂಘಟಿತ ವರ್ಗದ ಜನತೆಯ ಪಾಡೇನು? ದೇವರಿಗೇ ಗೊತ್ತು!
|