ಆತ್ಮೀಯ ಓದುಗರೆ,
ಹೌದು. ಬದಲಾವಣೆ ಎಂಬುದು ನಿರಂತರ. ಅದು ನಿಂತ ನೀರಾದರೆ ಜಗತ್ತಿನಲ್ಲಿ ಯಾವತ್ತೂ ಹೊಸತನವೆಂಬುದು ಇರಲಾರದು, ಚರ್ವಿತ ಚರ್ವಣವಾಗುವುದು ಯಾರಿಗೂ ಇಷ್ಟವಿಲ್ಲ. ಇದೇ ಕಾರಣಕ್ಕೆ ನಾವು ಬದಲಾಗಿದ್ದೇವೆ. ಅದು ನಿಮ್ಮೆಲ್ಲರ ಸಲಹೆ ಸೂಚನೆಗಳ ಆತ್ಮೀಯ ಸ್ಪಂದನೆಗಳಿಂದಾಗಿ.
ವೆಬ್‌ದುನಿಯಾ ಬದಲಾಗುತ್ತಿದೆ ಎಂಬ ನಮ್ಮ ಉದ್ದೇಶವನ್ನು ಪ್ರಕಟಪಡಿಸಿದ ತಕ್ಷಣ ಅಸಂಖ್ಯ ಅಭಿಮಾನಿಗಳು ಕಾತರದಿಂದ ಕಾಯುತ್ತಾ, ಕುತೂಹಲ ಹತ್ತಿಕ್ಕಿಕೊಳ್ಳದೆ ಕೆಲವರಂತೂ ಇ-ಮೇಲ್ ಮೂಲಕ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದು ನೀವು ನಮ್ಮ ಮೇಲಿಟ್ಟ ಪ್ರೀತಿ ಅಭಿಮಾನಕ್ಕೆ ಸಾಕ್ಷಿ. ಮತ್ತೆ ಕೆಲವರಿಗೆ ತಾವು ನೀಡಿದ ಸಲಹೆಗಳು ಜಾರಿಯಾಗಿವೆಯೇ ಎಂದು ತಿಳಿದುಕೊಳ್ಳುವ ಕುತೂಹಲ.
ಸದಾ ಹೊಸ ಹೊಸ ಆವಿಷ್ಕಾರಗಳಿಗೆ, ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ಬದ್ಧವಾಗಿರುವ ವೆಬ್‌ದುನಿಯಾ ತಂಡವು, ಈಗಾಗಲೇ ನಾವು ಸ್ಪಷ್ಟಪಡಿಸಿರುವಂತೆ, ಈ ಬದಲಾದ, ಹೊಸ ವಿನ್ಯಾಸದ, ಹೊಸತನದ ಮುಖಪುಟವನ್ನು ನಿಮ್ಮ ಅಂದರೆ ನಮ್ಮ ನೆಚ್ಚಿನ ಓದುಗರ ಮುಂದಿಡಲು ಹರ್ಷಿಸುತ್ತದೆ. ಇದರ ಹಿಂದೆ ವೆಬ್‌ದುನಿಯಾ ತಂಡದ ನಿರಂತರ ಪರಿಶ್ರಮವಿದೆ, ಅದಕ್ಕೂ ಹೆಚ್ಚಿನದಾಗಿ ನಿಮ್ಮ ಸಲಹೆ ಸೂಚನೆಗಳಿವೆ, ಪ್ರೋತ್ಸಾಹವಿದೆ, ಆಶೀರ್ವಾದದ ಶ್ರೀರಕ್ಷೆಯಿದೆ.
ಹೊಸ ಮುಖ ಪುಟ ವಿನ್ಯಾಸದತ್ತ ಕಣ್ಣು ಹಾಯಿಸಿದರೆ, ಎಡ ಪಾರ್ಶ್ವದಲ್ಲಿರುವ ಲಂಬ ಸಾಲಿನಲ್ಲಿ ವೆಬ್‌ದುನಿಯಾದೊಳಗಿನ ಎಲ್ಲ ಹೂರಣಗಳ ಕೊಂಡಿಗಳಿದ್ದರೆ, ಮಧ್ಯಭಾಗದಲ್ಲಿ ಬಹುತೇಕ ಪ್ರಮುಖ ಚಾನೆಲ್‌ಗಳಲ್ಲಿರುವ ಆಕರ್ಷಕ ಮಾಹಿತಿಗಳಿಗೆ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇದೆ. ಅಂತೆಯೇ, ಬಲ ಪಾರ್ಶ್ವದಲ್ಲಿ ವೆಬ್‌ದುನಿಯಾದ ಹೊಸ ಹೊಸ ಸೇವೆಗಳಾದ ಮೈ ವೆಬ್‌ದುನಿಯಾ ಎಂಬ ಬ್ಲಾಗ್, ಆನ್‌ಲೈನ್ ಗೇಮ್ಸ್, ಯಾವುದೇ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಪೂರಕವಾಗುವ ವೆಬ್‌ದುನಿಯಾ ಕ್ವೆಸ್ಟ್ ಮುಂತಾದ ಸೇವೆಗಳಲ್ಲಿನ ವೆಬ್‌ದುನಿಯಾ ಓದುಗರ ಭಾಗೀದಾರಿಯ ಪ್ರತೀಕವಾಗಿ ನೀವು ಸಂಪಾದಿಸಿದ ಅಂಕಗಳ ಸುಳಿವು ನೀಡುವ ಮಾಹಿತಿ ಇದೆ. ಇದಲ್ಲದೆ ಕಾಲ ಕಾಲಕ್ಕೆ ವೆಬ್‌ದುನಿಯಾ ಹೊರ ತಂದಿರುವ ವಿಶೇಷ ಸಂಚಿಕೆಗಳ ಮೇಲೆ ಮರಳಿ ಕಣ್ಣು ಹಾಯಿಸುವಂತಾಗಲು ಕೊಂಡಿಗಳೂ ಲಭ್ಯವಿವೆ.
ಇನ್ನೊಂದು ವಿಶೇಷ ಸಂಗತಿಯಿದೆ. ಲೋಕೋ ಭಿನ್ನ ರುಚಿಃ ಎಂಬ ಉಕ್ತಿಗೆ ಅನುಗುಣವಾಗಿ, ಓದುಗರು ತಮಗಿಷ್ಟವಾದ ಬಣ್ಣವನ್ನೂ ಕನ್ನಡ ವೆಬ್‌ದುನಿಯಾದ ಮುಖಪುಟಕ್ಕೆ ನೀಡಬಹುದು. ಬಲ ಮೇಲ್ತುದಿಯಲ್ಲಿರುವ "ಚೇಂಜ್ ಕಲರ್" ಎಂಬಲ್ಲಿ ನೀಡಲಾಗಿರುವ ಬಣ್ಣಗಳಲ್ಲಿ ನಿಮಗಿಷ್ಟವಾದ ಬಣ್ಣವನ್ನು ನೀವೇ ಆರಿಸಿಕೊಂಡು ಅದನ್ನು ಮುಖಪುಟಕ್ಕೆ ಅಳವಡಿಸಿಕೊಳ್ಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ವೆಬ್‌ದುನಿಯಾದ ಒಳ ಹೂರಣಗಳ ಜಾಲಾಡುವಿಕೆ (ನೇವಿಗೇಷನ್) ಸುಲಭ ಸಾಧ್ಯವಾಗಿದೆ.
ಒಂದು ವರ್ಷದ ಹಿಂದೆ ಕನ್ನಡ ವೆಬ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದ, ಭಾರತದ 9 ಭಾಷೆಗಳಲ್ಲಿರುವ ದೇಶದ ಮೊದಲ ಬಹುಭಾಷಾ ಪೋರ್ಟಲ್ ಎಂಬ ಹೆಗ್ಗಳಿಕೆ ಹೊಂದಿರುವ ವೆಬ್‌ದುನಿಯಾವನ್ನು ನೀವೆಲ್ಲರೂ ಪ್ರೀತಿಯಿಂದ ಒಪ್ಪಿಕೊಂಡಿದ್ದೀರಿ, ಮೆಚ್ಚಿಕೊಂಡಿದ್ದೀರಿ, ಕಾಲ ಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಾ ಪ್ರೋತ್ಸಾಹಿಸಿದ್ದೀರಿ, ಒಟ್ಟಿನಲ್ಲಿ ಹೇಳುವುದಾದರೆ, ನಿಮ್ಮದೇ ಪೋರ್ಟಲನ್ನು ನೀವು ಮಡಿಲಲ್ಲಿಟ್ಟು ಬೆಳೆಸಿದ್ದೀರಿ.
ಎಂದಿನಂತೆ ನಿಮ್ಮ ನಿರಂತರ ಪ್ರೋತ್ಸಾಹ, ಸಲಹೆ ಸೂಚನೆಗಳನ್ನು ನಾವು ಎದುರು ನೋಡುತ್ತಿದ್ದೇವೆ. ಇದಕ್ಕಾಗಿ ನಿಮಗೆ ಆತ್ಮೀಯ ಧನ್ಯವಾದಗಳು.
ಹೊಸ ವಿನ್ಯಾಸ ನಿಮಗೆ ಹೇಗನಿಸಿತು? ನಮಗೆ ಬರೆದು ತಿಳಿಸಿ.
-ಸಂಪಾದಕ
|