ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೌಡ್ರ ಕಣ್ಣು ಕೇಂದ್ರದ್ ಮ್ಯಾಗೆ...!  Search similar articles
ಅವಿನಾಶ್
ರಾಜಕೀಯ ಕಲಿಯಬೇಕಿದ್ದರೆ ದೇವೇಗೌಡರ ಪಾಠಶಾಲೆಗೆ ಹೋಗಬೇಕು. ಮೊನ್ನೆ ಮೊನ್ನೆಯವರೆಗೂ ಬದ್ಧ ವೈರಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಡುತ್ತಲೇ ಬಂದಿದ್ದ ಮಾಜಿ
NRB
ಪ್ರಧಾನಿ ದೇವೇಗೌಡರೀಗ ಕಾಂಗ್ರೆಸಿಗೆ ಹತ್ತಿರವಾಗತೊಡಗಿರುವುದು ರಾಜಕೀಯ ಪಂಡಿತರಿಗೆ ಸಾಧ್ಯಾಸಾಧ್ಯತೆಯ ಹೊಸ ಲೆಕ್ಕಾಚಾರಕ್ಕೆ ಮೇವು ಒದಗಿಸಿಕೊಟ್ಟಿದೆ.


ಕೇಂದ್ರದಲ್ಲಿ ಎಡಪಕ್ಷಗಳ ಹಂಗಿನಿಂದ ಹೊರಬರಲು ನಿರ್ಧರಿಸಿರುವ ಯುಪಿಎ ಸರಕಾರ ಪತನದಂಚಿನಲ್ಲಿರುವಾಗ, ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಂದೊಂದು ಸಂಸದ ಸ್ಥಾನ ಕೂಡ ಅತ್ಯಮೂಲ್ಯ. ಹೀಗಾಗಿ ಎರಡು ಸಂಸತ್ಸದಸ್ಯರನ್ನು ಹೊಂದಿರುವ ಜಾತ್ಯತೀತ ಜನತಾ ದಳ ಬೆಂಬಲ ನಿಮಗೆ ಇದೆ ಎಂದು ದೇವೇಗೌಡರು ಘೋಷಿಸಿದ್ದಾರೆ.

ದೇವೇಗೌಡರು ಕಾಂಗ್ರೆಸ್ ಬಳಿ ಹೋಗಬೇಕಿದ್ದರೆ ಏನಾದರೂ ಲಾಭದಾಯದ ಉದ್ದೇಶವಿದ್ದೇ ಇರುತ್ತದೆ ಎಂಬುದು ಅವರನ್ನು, ಅವರ ರಾಜಕೀಯವನ್ನು ಬಲ್ಲವರೆಲ್ಲರೂ ಒಪ್ಪತಕ್ಕ ಸಂಗತಿ. ಈ ಉದ್ದೇಶಗಳೇನಿರಬಹುದು?

ಅದನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು, ಕರ್ನಾಟಕ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ ಬೆಳವಣಿಗೆಯತ್ತ ಒಂದು ನೋಟ ಹರಿಸಿದರೆ...

ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಬಿಜೆಪಿ ಸರಕಾರ ಸ್ವತಂತ್ರ ಶಾಸಕರ ಹಂಗಿನರಮನೆಯಿಂದ ಹೊರಬಂದು, ಸ್ವತಂತ್ರರು ಭವಿಷ್ಯದಲ್ಲಿ ಸರಕಾರಕ್ಕೆ ಅಸ್ಥಿರತೆಯ ಆತಂಕ ಸೃಷ್ಟಿಸದಂತೆ ತಡೆಬೇಲಿ ಹಾಕಿಕೊಳ್ಳಲು ದೊಡ್ಡ ಪ್ರಳಯಾಂತಕ ಯೋಜನೆಯನ್ನೇ ಹಾಕಿಕೊಂಡಿದೆ. ಗಣಿ ಧಣಿಗಳು ಬೇಟೆಯ ಆಟದಲ್ಲಿ ನಿರತರಾಗಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಶಾಸಕರನ್ನು ಹಿಡಿದುಕೊಂಡು ತಮ್ಮ ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜೆಡಿಎಸ್‌ನಿಂದ ಇಬ್ಬರು ಮತ್ತು ಕಾಂಗ್ರೆಸ್‌ನಿಂದ ಇಬ್ಬರು ಬಿಜೆಪಿಯ ಗಣಿ ವೀರರು ಹಾಕಿದ ಬಲೆಯೊಳಗೆ ಸಿಲುಕಿದ್ದಾರೆ. ಈ ಹಠಾತ್ ಕಾರ್ಯಾಚರಣೆಯು, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡ್ಎಸ್‌ಗಳ ಎದೆಯಲ್ಲಿ ತಲ್ಲಣ ಮೂಡಿಸಿದೆ.

ಗಣಿಯೊಡೆಯರ ಕರಾಮತ್ತು:
ಬಳ್ಳಾರಿ ಗಣಿಯೊಡೆತನ ಹೊಂದಿರುವ ಶಾಸಕರ ಶಿಕಾರಿಯ ಆವೇಗಕ್ಕೆ ಬಿಜೆಪಿ ಪಾಳಯವೇ ದಿಗಿಲುಗೊಂಡಂತಿದೆ. ಈ ಮೊದಲು, ಸರಕಾರ ರಚನೆಗೆ ಬೇಕಾಗಿದ್ದ 5 ಪಕ್ಷೇತರ ಶಾಸಕರನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಗಣಿ ಧಣಿಗಳು, ಈಗ ಸರಕಾರವನ್ನು ಭದ್ರಪಡಿಸಲು, ಅದೇ ಪಕ್ಷೇತರರ ಹಂಗಿನರಮನೆಯಿಂದ ಹೊರಬರಲು ಬೇರೆ ಪಕ್ಷಗಳ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳಲಾರಂಭಿಸಿದ್ದಾರೆ.

ಮೊದಲಿನಿಂದಲೂ ಸರಕಾರ ರಚಿಸಲು ಮತ್ತು ಸರಕಾರ ಉಳಿಸಲು ಆಕ್ರಮಣಕಾರಿ ನಿರ್ಧಾರಗಳನ್ನೇ ಕೈಗೊಳ್ಳುತ್ತಿದ್ದ ಬಿಜೆಪಿ, ಇದೀಗ ಅದೇ ತಂತ್ರವನ್ನು ಮುಂದುವರಿಸುವ ನಿಟ್ಟಿನಲ್ಲಿ ಗಣಿ ಶಾಸಕರಾದ ಶ್ರೀರಾಮುಲು, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಪಡೆ ಕಾರ್ಯ ನಿರತವಾಗಿದೆ.

ಸಂಖ್ಯಾಬಲದ ಏರಿಳಿತ:
ಇದರೊಂದಿಗೆ, ರಾಜ್ಯದ ರಾಜಕೀಯದ ಸಂಖ್ಯಾಬಲವು ಮತ್ತೊಂದು ಮಗ್ಗುಲಿಗೆ ವಾಲಿದೆ. ಚುನಾವಣಾ ಫಲಿತಾಂಶ ಹೊರಬಿದ್ದಾಗ 224 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 110, ಕಾಂಗ್ರೆಸ್ 80 ಹಾಗೂ ಜನತಾ ದಳ 28 ಸ್ಥಾನಗಳನ್ನು ಗೆದ್ದುಕೊಂಡಿದ್ದವು ಹಾಗೂ 6 ಮಂದಿ ಪಕ್ಷೇತರರು ವಿಜಯಿಯಾಗಿದ್ದರು. ಬಹುಮತಕ್ಕೆ ಬೇಕಿದ್ದುದು 113 ಸ್ಥಾನಗಳು, ಆದರೆ ಎಲ್ಲ ಪಕ್ಷೇತರರು ಬಿಜೆಪಿ ಸರಕಾರ ಸೇರಿಕೊಂಡು 116ರ ಬಲದೊಂದಿಗೆ ತಮ್ಮ ನೆಲೆಯನ್ನು ಮತ್ತು ಸರಕಾರದ ಬಲವನ್ನು ಭದ್ರಗೊಳಿಸಿದ್ದರು.

ಕಳೆದ ಮೂರು ದಿನಗಳಲ್ಲಿ, ಕಾಂಗ್ರೆಸ್‌ನಿಂದ ಕಾರವಾರ ಶಾಸಕ ಆನಂದ ಅಸ್ನೋಟಿಕರ್, ದೊಡ್ಡಬಳ್ಳಾಪುರ ಶಾಸಕ ಜೆ.ನರಸಿಂಹಸ್ವಾಮಿ (ಆರ್.ಎಲ್.ಜಾಲಪ್ಪ ಪುತ್ರ) ಮತ್ತು ಜೆಡಿಎಸ್‌ನಿಂದ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಅವರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡುಬಿಟ್ಟಿದ್ದಾರೆ. ಇದರಿಂದಾಗಿ ಸದನದಲ್ಲಿ ಸದಸ್ಯಬಲವು ಕಾಂಗ್ರೆಸ್ 78ಕ್ಕೆ ಹಾಗೂ ಜೆಡಿಎಸ್ 26ಕ್ಕೆ ಇಳಿದಂತಾಯಿತು.

ಇದರೊಂದಿಗೆ, ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ, ಏನಾದರೂ ತಂತ್ರ-ಪ್ರತಿತಂತ್ರ ರೂಪಿಸಿ ಪಕ್ಷೇತರ ಶಾಸಕರನ್ನು ಎಳೆದುಕೊಂಡರೂ, ಸರಕಾರ ಉರುಳಿಸಲು ಸಾಧ್ಯವಾಗದ ಹಂತಕ್ಕೆ ತಲುಪಿದಂತಾಯಿತು. ಈಗ ಬಿಜೆಪಿಯ ಬಲ ಏರಿಲ್ಲವಾದರೂ, ಪ್ರತಿಪಕ್ಷಗಳು ಒಟ್ಟಾಗಿ ಏನಾದರೂ ತಂತ್ರ ರೂಪಿಸಿ ಸರಕಾರದ ಕಾಲೆಳೆದು, ಸಿಂಹಾಸನಾರೂಢವಾಗಬಹುದು ಎಂಬ ಆತಂಕದ ಕ್ಷಣಗಳು ಮಾತ್ರ ದೂರವಾಗಿಬಿಟ್ಟಿದೆ. ಯಾಕೆಂದರೆ, ಹಿಂದಿನ ಲೆಕ್ಕಾಚಾರದ ಪ್ರಕಾರ, ಕಾಂಗ್ರೆಸ್ 80, ಜೆಡಿಎಸ್ 28 ಹಾಗೂ 6 ಪಕ್ಷೇತರರು ಸೇರಿಕೊಂಡರೆ 114 ಸ್ಥಾನಗಳೊಂದಿಗೆ, ಅತಿದೊಡ್ಡ ಕೂಟವಾಗಿ ಮೂಡಿಬರುವ ಸಾಧ್ಯತೆಗಳಿದ್ದವು ಮತ್ತು ಸರಕಾರ ಉರುಳಿಸುವಷ್ಟು ಬಲವೂ ಅವರಿಗೆ ಇದ್ದಿರಬಹುದಾಗಿತ್ತು. ಈಗ ಬಿಜೆಪಿಗೆ ಆ ಭಯ ದೂರವಾಗಿದೆ ಎನ್ನುವುದಕ್ಕಿಂತಲೂ ಭಯ ದೂರ ಮಾಡಿಸಿಕೊಂಡಿದೆ ಎನ್ನಬಹುದು.

ಜಾತಿ ಲೆಕ್ಕಾಚಾರ:
ಬಿಜೆಪಿಯು ಹಿಂದುಳಿದ ಜಾತಿ, ಪಂಗಡದವರಿಗೆ ಸೂಕ್ತ ಪ್ರಾತಿನಿಧ್ಯ, ಸ್ಥಾನಮಾನ ನೀಡುತ್ತಿಲ್ಲ ಎಂಬ ಬಗ್ಗೆ ಈಗಾಗಲೇ ಅಪಸ್ವರ ಕೇಳಲಾರಂಭಿಸಿದೆ. ಇದರ ಅನುಸಾರವೇ ತಮ್ಮ ಪಕ್ಷದಲ್ಲಿ ಕೊರತೆಯಿರುವ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಜನರನ್ನು ಸೆಳೆಯುವುದು ಅದರ ಉದ್ದೇಶ. ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಶಿವನಗೌಡ ನಾಯಕ್ ಮತ್ತು ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಪರಿಶಿಷ್ಟ ಪಂಗಡದವರು. ಕಾಂಗ್ರೆಸಿನಿಂದ ಬಂದಿರುವ ಆನಂದ ಅಸ್ನೋಟಿಕರ್ ಮತ್ತು ಜೆ.ನರಸಿಂಹಸ್ವಾಮಿ ಅವರಿಬ್ಬರೂ ಹಿಂದುಳಿದ ವರ್ಗದ ನಾಯಕರು.

ಈ ಜಾತಿ ಲೆಕ್ಕಾಚಾರದೊಂದಿಗೆ, ಗೆಲ್ಲುವ ಸಾಮರ್ಥ್ಯವನ್ನೂ ಅಳೆದು ತೂಗಿ ಬಿಜೆಪಿಯು ಈ 'ಬೇಟೆ' ಕಾರ್ಯಾಚರಣೆ ಆರಂಭಿಸಿತ್ತೆನ್ನುವುದನ್ನು ಈ ನಾಲ್ವರ ಹಿನ್ನೆಲೆ ತಿಳಿದುಕೊಂಡರೆ ಗೊತ್ತಾಗುತ್ತದೆ. ಈ ನಾಲ್ಕು ಮಂದಿ ಶಾಸಕರಿಗೆ ವೈಯಕ್ತಿಕ ವರ್ಚಸ್ಸಿದೆ ಮತ್ತು ಇತ್ತೀಚಿನ ಚುನಾವಣೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮತಗಳೂ ದೊರೆತಿವೆ. ಒಂದಷ್ಟು ಶ್ರಮ ವಹಿಸಿದಲ್ಲಿ ಅವರನ್ನು ಮತ್ತೆ ಗೆಲ್ಲಿಸಿ ತರಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಆದರೆ, ಎಲ್ಲಾದರೂ ಲೆಕ್ಕಾಚಾರ ಸ್ವಲ್ಪ ತಪ್ಪಿದರೆ, ಮತ್ತೆ ಚುನಾವಣಾ ಕಣಕ್ಕಿಳಿಯಲಿರುವ ಈ ಅಭ್ಯರ್ಥಿಗಳು ಸೋತರೆ, ಅವರ ಪರಿಸ್ಥಿತಿ ಮಾತ್ರ ಅನೂಹ್ಯ.

ಗೌಡರ ಚಾಣಾಕ್ಷತೆ:
ಈ ಎಲ್ಲ ಕಾರಣಗಳಿಂದ, ಮತ್ತು ಈ ಹಿಂದಿನ 'ವಿಶ್ವಾಸದ್ರೋಹ' ಪ್ರಕರಣದ ಹಿನ್ನೆಲೆಯೊಂದಿಗೆ, ಈಗ ಅಧಿಕಾರದಲ್ಲಿ ಭದ್ರವಾಗಿ ಕೂತಿರುವ ಬಿಜೆಪಿ, ತಮ್ಮನ್ನು, ತಮ್ಮ ಪಕ್ಷವನ್ನು ರಾಜಕೀಯವಾಗಿ ನಿರ್ನಾಮ ಮಾಡುವ ಆತಂಕ ಗೌಡ ಕುಟುಂಬಕ್ಕೆ ಮೊದಲಿನಿಂದಲೂ ಇದ್ದೇ ಇದೆ. ಪಕ್ಷದ ಘಟಾನುಘಟಿ ನಾಯಕರೆಲ್ಲರೂ ಬಿಜೆಪಿಯನ್ನೋ, ಕಾಂಗ್ರೆಸ್ಸನ್ನೋ ಸೇರಿಕೊಂಡಿರುವುದರಿಂದ ಅಸ್ತಿತ್ವದ ಆತಂಕ ಅವರಿಗೆ ಕಾಡುತ್ತಿರುವುದು ಕೂಡ ಸಹಜ. ಇದರೊಂದಿಗೆ ಅಳಿದು ಪಕ್ಷದಲ್ಲಿ ಉಳಿದುಕೊಂಡಿರುವವರು ಕೂಡ ಬಿಜೆಪಿ ತೆಕ್ಕೆಗೆ ಜಾರುತ್ತಿದ್ದಾರೆ. ಹೀಗಾದರೆ ಫೀನಿಕ್ಸ್ ಹಕ್ಕಿಯಾಗುವುದಾದರೂ ಹೇಗೆ ಎಂಬ ಚಿಂತೆ ಕಾಡಿದ್ದೇ ತಡ, ದೇವೇಗೌಡರ ಚಾಣಕ್ಯ ತಲೆ ಕೆಲಸ ಮಾಡಿದೆ.

ಪರಮಾಣು ಒಪ್ಪಂದದ ಹಿನ್ನೆಲೆಯಲ್ಲಿ ಪತನಗೊಳ್ಳುವ ಕೇಂದ್ರ ಸರಕಾರ ಲೋಕಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕಾಗಿಬಂದರೆ, ತಮ್ಮಿಬ್ಬರು ಸಂಸದರ ಬೆಂಬಲ ಘೋಷಿಸಿಬಿಟ್ಟಿದ್ದಾರೆ. ಕೇಂದ್ರವು ಕೂಡ ಕೊಟ್ಟ ಮಾತು ತಪ್ಪುವುದಕ್ಕೆ ಪ್ರಸಿದ್ಧಿಪಡೆದಿರುವ ಗೌಡರ ಬೆಂಬಲದ ಕೊಡುಗೆಯನ್ನು ಸದ್ಯಕ್ಕೆ ಕಡೆಗಣಿಸುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಎಡಪಕ್ಷಗಳು 59 ಸಂಸದರ ಬೆಂಬಲ ಹಿಂತೆಗೆದುಕೊಂಡರೆ, ಅದಕ್ಕೆ 39 ಮಂದಿ ಸಮಾಜವಾದಿ ಪಕ್ಷದ ಬೆಂಬಲ ದೊರೆಯುತ್ತದೆ. ಉಳಿದ ಸ್ಥಾನಗಳಿಗಾಗಿ ಅದು ಸಣ್ಣ ಪುಟ್ಟ ಪಕ್ಷಗಳ ಬೆಂಬಲ ನಿರೀಕ್ಷೆಯಲ್ಲಿದೆ.

ಈ ಇಬ್ಬರು ಸಂಸದರನ್ನು ಹಿಡಿದುಕೊಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಕುಣಿಸುವುದು ದೇವೇಗೌಡರಿಗೆ ಕಷ್ಟವಾಗಲಾರದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಕೇಂದ್ರದಲ್ಲಿ ಆಗದಿದ್ದರೆ ರಾಜ್ಯದಲ್ಲಿ, ರಾಜ್ಯದಲ್ಲಿಲ್ಲದಿದ್ದರೆ ಕೇಂದ್ರದಲ್ಲಿ... ಎಲ್ಲಾದರೂ ಸರಿ, ಸದಾ ಚಟುವಟಿಕೆಯಲ್ಲಿರುವುದು ದೇವೇಗೌಡರ ರಾಜಕೀಯ ನೀತಿ.

ಆದರೆ, ಹಿಂದೆ ಧರ್ಮ ಸಿಂಗ್ ಸರಕಾರವಿದ್ದಾಗ ತಮ್ಮನ್ನು ಕಡೆಗಣಿಸುತ್ತಾ, ನೇರವಾಗಿ 'ಮೇಡಂ' ಅವರ ಮೂಲಕವೇ ಕೆಲಸ ಮಾಡಿಸಿಕೊಳ್ಳುತ್ತಿದ್ದ ಗೌಡರು, ಮತ್ತೀಗ ಕಾಂಗ್ರೆಸ್ ಜತೆ ಕೇಂದ್ರದಲ್ಲಿ ಆಟವಾಡಲು ಸಿದ್ಧರಾಗಿರುವುದು ರಾಜ್ಯ ಕಾಂಗ್ರೆಸಿಗರಿಗೆ ಇರಿಸು ಮುರಿಸು, ಸಿಟ್ಟು, ಬೇಸರ... ಆದರೇನು ಮಾಡುವುದು, ಹಣದುಬ್ಬರ, ಬೆಲೆ ಏರಿಕೆ ಇತ್ಯಾದಿಗಳಿಂದ ಕಂಗೆಟ್ಟು ಲೋಕಸಭೆ ಚುನಾವಣೆ ಮುಂದೂಡಲು ಶಪಥ ತೊಟ್ಟಂತಿರುವ ಯುಪಿಎ ಸರಕಾರದ ಉಳಿವೇ ಈಗ ಕಾಂಗ್ರೆಸ್‌ನ ನಂ.1 ಆದ್ಯತೆ. ಹೀಗಾಗಿ ರಾಜ್ಯ ಕಾಂಗ್ರೆಸಿಗರು ತೆಪ್ಪಗಿರಲೇಬೇಕಾಗುತ್ತದೆ.

ಇನ್ನೂ ಒಂದು ಕಾರಣವಿದೆ ತೆಪ್ಪಗಿರಲು. ಬಿಜೆಪಿಯ ಬೇಟೆಗೆ ತಮ್ಮ ಪಕ್ಷವೂ ಬಲಿಯಾಗಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಸಮಾನ ದುಃಖಿಗಳು. ರಾಜೀನಾಮೆ ನೀಡಿದ ಶಾಸಕರ ಕ್ಷೇತ್ರಗಳಿಗೆ ನಡೆಯಬಹುದಾದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ನಿಲ್ಲಲಿರುವ ಈ ಅಭ್ಯರ್ಥಿಗಳನ್ನು ಶತಾಯಗತಾಯ ಸೋಲಿಸುವುದು ಉಭಯ ಪಕ್ಷಗಳ ಸಮಾನ ಉದ್ದೇಶ. ಇದರ ಈಡೇರಿಕೆಗೆ ಪರಸ್ಪರ ಕೈ ಜೋಡಿಸುವ ಅನಿವಾರ್ಯತೆಯೂ ಇದೆ.

ಹೀಗಾಗಿ ರಾಜಕೀಯದಲ್ಲಿ ಏನೂ ನಡೆಯಬಹುದು ಎಂಬ ವಾದಕ್ಕೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗಿದೆ. ಮರೆಯಲ್ಲಿ ಮತದಾರ ನಗುತ್ತಿದ್ದಾನೆ!
ಮತ್ತಷ್ಟು
ನೀವು ಪ್ರಧಾನಿಯಾದರೆ?....
ವೀರ ಯೋಧ, ಶ್ರೇಷ್ಠ ವ್ಯಕ್ತಿ ಮಣಿಕ್‌ಶಾ
ಭಾರತೀಯ ನೃತ್ಯಕ್ಕೆ ಜಾಗತಿಕ ಮನ್ನಣೆ ದೊರಕಿಸಿದ ಗುರು ಗೋಪೀನಾಥ್  
ವೆಬ್‌ದುನಿಯಾ ಬದಲಾಗಿದೆ...
ನಿರೀಕ್ಷಿಸಿ... ವೆಬ್‌ದುನಿಯಾ ಬದಲಾಗುತ್ತಿದೆ...!
ಜನರ ಚಡಪಡಿಕೆಯ ಬೆಂಕಿಗೆ ಪೆಟ್ರೋಲ್!