ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಚ ಪಡೆದವರಿಗಿಲ್ಲ ಚಿಂತೆ, ಕೊಡುವವರಿಗಷ್ಟೇ!  Search similar articles
ಕೇಂದ್ರದ ಯುಪಿಎ ಸರಕಾರದ ವಿಶ್ವಾಸಮತ ಯಾಚನೆಯ ಆ ಮಹಾನ್ ದಿನ ಸಮೀಪಿಸುತ್ತಿರುವಂತೆಯೇ ನರಸಿಂಹ ರಾವ್ ಕಾಲದ ಸಂಸದರ ಖರೀದಿ ಪ್ರಕರಣ ಮತ್ತೊಮ್ಮೆ ನೆನಪಿಗೆ ಬರುತ್ತಿದೆ. ಈ ಬಾರಿಯೂ ಕುದುರೆ ವ್ಯಾಪಾರ ನಡೆಯುತ್ತಿದ್ದು, ಪ್ರತೀ ಸಂಸದರ ಬೆಲೆ 25 ಕೋಟಿ ರೂ. ಎಂದು ಎಡಪಕ್ಷಗಳು ಈಗಾಗಲೇ ಆರೋಪ ಮಾಡಿವೆ.

ಆದರೆ ಲಂಚ ಪಡೆಯುವವರಿಗಿಂತಲೂ ಲಂಚ ಕೊಡುವವರೇ ಕಾನೂನಿನ ಸುಳಿಯಲ್ಲಿ ಸಿಲುಕುತ್ತಾರೆ ಎಂಬುದು ಸುಪ್ರೀಂಕೋರ್ಟ್ ತೀರ್ಪಿನ ಸಾರಾಂಶ ನೋಡಿದರೆ ತಿಳಿಯುತ್ತದೆ. ದಶಕದ ಹಿಂದೆ ನರಸಿಂಹ ರಾವ್ ಸರಕಾರವನ್ನು ಅವಿಶ್ವಾಸ ನಿರ್ಣಯದಿಂದ ಪಾರು ಮಾಡಲು ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸದರು ಭಾರೀ ಪ್ರಮಾಣದ ಹಣ ಪಡೆದ ಪ್ರಕರಣದಲ್ಲಿ ದೇಶದ ವರಿಷ್ಠ ನ್ಯಾಯಾಲಯವು ಒಂದು ತೀರ್ಪು ನೀಡಿತ್ತು.

ಅದನ್ನು ಪರಿಶೀಲಿಸಿದರೆ, ಲಂಚ ಪಡೆಯುವ ಸಂಸದರಿಗೆ ಸಾಂವಿಧಾನಿಕ ವಿನಾಯಿತಿ ಇದೆ. ಸರಕಾರವೊಂದನ್ನು ರಕ್ಷಿಸುವ ನಿಟ್ಟಿನಲ್ಲಿ ಅಥವಾ ಅದರ ವಿರುದ್ಧ ಮತ ಚಲಾಯಿಸಲು ಲಂಚ ಪಡೆದುಕೊಳ್ಳುವಾಗ ಸಂಸದರು ಒಂದು ವಿಷಯ ಗಮನದಲ್ಲಿರಿಸಿಕೊಂಡರೆ ಅವರು ಪಾರಾದಂತೆ. ಅದೆಂದರೆ, ಅವರು ಮತ ಚಲಾಯಿಸಿರುವುದು ಖಚಿತವಾಗಬೇಕು. ಒಟ್ಟಿನಲ್ಲಿ ಮತ ಚಲಾಯಿಸಿದರೆ ಈ ಸಂಸದರು ಕ್ರಿಮಿನಲ್ ಕ್ರಮದಿಂದ ಬಚಾವ್ ಆಗಬಹುದು. ನ್ಯಾಯಮೂರ್ತಿ ಎಸ್.ಬಿ.ಭರೂಚಾ ನೀಡಿದ ಈ ತೀರ್ಪು ವಿವಾದದ ಧೂಳೆಬ್ಬಿಸಿತ್ತು.

ಸಂವಿಧಾನದ 105(2) ವಿಧಿಯನ್ನು ಸ್ಥೂಲವಾಗಿ ಹೇಳಬಹುದಾದರೆ, "ಸಂಸತ್ತಿನಲ್ಲಿ ನೀಡಲಾದ ಹೇಳಿಕೆ ಅಥವಾ ಚಲಾಯಿಸಲಾದ ಮತ"ಕ್ಕೆ ಸಂಬಂಧಿಸಿ ಯಾವುದೇ ಸಂಸದನ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತಿಲ್ಲ. ಇದುವೇ ಲಂಚ ಸ್ವೀಕರಿಸುವ ಸಂಸದರಿಗೆ ರಕ್ಷಣೆಯಾಗಿ ಪರಿಣಮಿಸಿದೆ.

ತತ್ಪರಿಣಾಮವಾಗಿ, 1993ರಲ್ಲಿ ಘಟಿಸಿದೆಯೆನ್ನಲಾದ ಕುದುರೆ ವ್ಯಾಪಾರಕ್ಕೆ ಸಂಬಂಧಿಸಿ, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಜನತಾ ದಳ (ಅಜಿತ್ ಸಿಂಗ್ ಬಣ)ದ 10 ಸಂಸದರ ಮೇಲಿನ ಲಂಚ ಸ್ವೀಕಾರ ಆರೋಪ ಕೈಬಿಡಲಾಯಿತು. ಆದರೆ ಅಜಿತ್ ಸಿಂಗ್ ಅವರು ಈ ವಿನಾಯಿತಿಯನ್ನೂ ಪಡೆಯಲಾಗಲಿಲ್ಲ, ಕಾರಣವೆಂದರೆ ಅವರು ಅಂದು ಮತದಾನದಿಂದ ತಪ್ಪಿಸಿಕೊಂಡಿದ್ದರು.

ಸುಪ್ರೀಂ ಕೋರ್ಟು ಅಜಿತ್ ಸಿಂಗ್ ಹಾಗೂ ಲಂಚ ನೀಡಿದ್ದರೆನ್ನಲಾದ ನರಸಿಂಹ ರಾವ್, ವೀರಪ್ಪ ಮೊಯಿಲಿ ಸೇರಿದಂತೆ ಇತರ ಐವರ ಮೇಲೆ ಕ್ರಮ ಕೈಗೊಳ್ಳಲು ಹಸಿರು ನಿಶಾನೆ ತೋರಿಸಿತ್ತು. ಬಹುಶಃ ಜೆಎಂಎಂ ಹಗರಣ ಅಜಿತ್ ಸಿಂಗ್ ಆಗಲೀ, ವೀರಪ್ಪ ಮೊಯಿಲಿ ಅವರಿಗಾಗಲಿ ಯಾವುದೇ ಪ್ರಭಾವ ಬೀರಿದಂತೆ ಕಂಡುಬರುತ್ತಿಲ್ಲ. ಯಾಕೆಂದರೆ ಈಗಲೂ ಅವರ ಹೆಸರು ಮತ್ತೆ ಕೇಳಿಬರುತ್ತಿದೆ.
ಮತ್ತಷ್ಟು
ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
ಅಣ್ಣ-ತಮ್ಮಂದಿರ ಜಗಳದಲ್ಲಿ ಎಸ್ಪಿ ನಲುಗೀತಾ?
ಗೌಡ್ರ ಕಣ್ಣು ಕೇಂದ್ರದ್ ಮ್ಯಾಗೆ...!
ನೀವು ಪ್ರಧಾನಿಯಾದರೆ?....
ವೀರ ಯೋಧ, ಶ್ರೇಷ್ಠ ವ್ಯಕ್ತಿ ಮಣಿಕ್‌ಶಾ
ಭಾರತೀಯ ನೃತ್ಯಕ್ಕೆ ಜಾಗತಿಕ ಮನ್ನಣೆ ದೊರಕಿಸಿದ ಗುರು ಗೋಪೀನಾಥ್