ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿಯ ಮತ್ತೊಂದು ಮುಖ ಕಂಡ ಗುಜರಾತ್ Search similar articles
PTI
ಸಮಾಜಘಾತುಕರು ಸರಣಿ ಬಾಂಬ್ ಸ್ಫೋಟಿಸಿ ಅಮಾಯಕರನ್ನು ಬಲಿತೆಗೆದುಕೊಂಡ ಇಪ್ಪತ್ನಾಲ್ಕು ಗಂಟೆಗಳಲ್ಲಿ ಗುಜರಾತ್, ಮುಖ್ಯಮಂತ್ರಿ ನರೇಂದ್ರ ಮೋದಿ ಆಡಳಿತದ ಮತ್ತೊಂದು ಮುಖವನ್ನು ಕಂಡಿತು. ಅಲ್ಲಿ ಉದ್ವೇಗದ ಭಾಷಣಗಳಿರಲಿಲ್ಲ, 'ಗುಜರಾತ್ ಅಸ್ಮಿತಾ'ದ ಮಾತಿರಲಿಲ್ಲ, ಗಲಭೆ ಹುಟ್ಟುವಂತಹ ವಾತಾವರಣಗಳು, ಪ್ರತೀಕಾರದ ಆಕ್ರೋಶ ಇರಲಿಲ್ಲ.

ಟೀಕಾಕಾರರ ನಿರೀಕ್ಷೆಯನ್ನೆಲ್ಲ ಹುಸಿಯಾಗಿಸಿದ ಮೋದಿ ಮತ್ತವರ ತಂಡವು, ಸ್ಫೋಟ ನಡೆದ ಕೆಲವೇ ಕ್ಷಣಗಳಲ್ಲಿ ಕಾರ್ಯಾಚರಣೆಗಿಳಿಯಿತು. ಜನ ಶಾಂತಚಿತ್ತರಾಗುವಂತೆಯೂ, ವದಂತಿಗಳಿಗೆ ಬೆಲೆ ಕೊಡದಂತೆಯೂ ಮೋದಿ ಅವರು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡರೆ, ಮೊದಲ ಸ್ಫೋಟ ನಡೆದ ಅರ್ಧ ಗಂಟೆಯಲ್ಲೇ ಅವರ ಸರಕಾರವು ಸೇನೆಯೊಂದಿಗೆ ಸಂಪರ್ಕ ಸಾಧಿಸಿತು.

"ಇದು ಮಾನವೀಯತೆಯ ಮೇಲೆ ನಡೆದ ದಾಳಿ" ಎಂದು ಮೋದಿ ಬಣ್ಣಿಸಿದರೆ, ಇದು ಭಾರತದ ಮೇಲೆ ನಡೆದ ದಾಳಿ ಅಂತ ಹೇಳಿದವರು ಅವರ ಸಚಿವ ಜಯನಾರಾಯಣ ವ್ಯಾಸ್. 2002ರ ಫೆಬ್ರವರಿ ತಿಂಗಳಲ್ಲಿ ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ 57 ಕರಸೇವಕರನ್ನು ಜೀವಂತ ದಹಿಸಿದ ಪ್ರಕರಣದ ಬಳಿಕ ಬಿಜೆಪಿ ಬಂದ್‌ಗೆ ಕರೆ ನೀಡಿತ್ತಲ್ಲದೆ, ರಾಜ್ಯ ಸರಕಾರವೂ ಈ ಬಂದ್ ಅನ್ನು ಬೆಂಬಲಿಸಿತ್ತು. ಆ ನಂತರ ಹಿಂಸಾಚಾರವೂ ನಡೆಯಿತಲ್ಲದೆ, ಮೋದಿ ಸರಕಾರವು ಸೇನೆಯನ್ನು ಕರೆಸಿಕೊಳ್ಳಲು ಅಂದು ವಿಳಂಬ ಧೋರಣೆ ಅನುಸರಿಸಿತ್ತು. ಪ್ರತೀಕಾರಾತ್ಮಕ ಹಿಂಸಾಚಾರ ಹೆಚ್ಚಾಯಿತು. ಮೊದಲ ಸೇನಾ ತುಕಡಿ ಬಂದಿದ್ದೇ ರೈಲು ದಹನ ನಡೆದ 48 ಗಂಟೆಗಳ ಬಳಿಕ. ಈ ಬಾರಿ ಇದಕ್ಕೆ ವ್ಯತಿರಿಕ್ತವಾಗಿಯೇ ಬಿಜೆಪಿ ಪ್ರತಿಕ್ರಿಯಿಸಿದೆ.

ಶನಿವಾರ ಬಿಜೆಪಿ ಸರಕಾರವು ಅರ್ಧ ಗಂಟೆಯಲ್ಲೇ ಸೇನೆಯನ್ನು ಕರೆಸಿಕೊಂಡಿತು. ಅಹಮದಾಬಾದ್ ಪೊಲೀಸ್ ಕಮಿಶನರ್ ಕಚೇರಿಯಲ್ಲಿ ಪೊಲೀಸ್ ಉನ್ನತಾಧಿಕಾರಿಗಳ ತುರ್ತು ಸಭೆ ನಡೆಯಿತು. 'ಪ್ರತೀಕಾರ ದಾಳಿ ಇಲ್ಲದಂತೆ ನೋಡಿಕೊಳ್ಳಿ' ಎಂದು ಮೋದಿ ಸ್ಪಷ್ಟ ಸೂಚನೆ ನೀಡಿದ್ದರು. ಗೋಧ್ರಾ ದಂಗೆಯ ಸಂದರ್ಭ ಇದೇ ಮೋದಿ 'ಪ್ರತಿಯೊಂದು ಕ್ರಿಯೆಗೂ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ' ಅಂತ ಘೋಷಿಸಿದ್ದರು.

ಈ ಶನಿವಾರ, ಸಾಯಂಕಾಲದ ಹೊತ್ತಿಗೆ ರಾಜ್ಯ ಮೀಸಲು ಪೊಲೀಸ್ ಪಡೆಯ 24 ಕಂಪನಿಗಳನ್ನು ಕಾರ್ಯಾಚರಣೆಗಿಳಿಸಲಾಗಿತ್ತು, ಅವುಗಳಿಗೆ ಗೃಹರಕ್ಷಣಾ ಪಡೆಯ ಗಡಿ ವಿಭಾಗದ ಐದು ಕಂಪನಿಗಳು, ಕ್ಷಿಪ್ರ ಕಾರ್ಯ ಪಡೆಯ (ಆರ್ಎಎಫ್) ನಾಲ್ಕು ಕಂಪನಿಗಳನ್ನು ನೆರವಿಗೆ ಒದಗಿಸಿ ಯಾವುದೇ ಪ್ರತೀಕಾರಾತ್ಮಕ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಲಾಗಿತ್ತು.

ಸ್ಫೋಟ ನಡೆದ ಒಂದು ಗಂಟೆಯೊಳಗೆ ಗುಜರಾತ್ ಮುಖ್ಯ ಕಾರ್ಯದರ್ಶಿ ಮಂಜುಳ ಸುಬ್ರಹ್ಮಣ್ಯಂ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರು ಮಿಲಿಟರಿ ಬೆಂಬಲದ ಕುರಿತು ತ್ವರಿತ ಮಾತುಕತೆ ನಡೆಸಿದರು. ಮಧ್ಯರಾತ್ರಿಯೊಳಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಕಾರ್ಯದರ್ಶಿ ಜಿ.ಸಿ.ಮುರ್ಮು ಅವರು ಸೇನಾ ನಿಯೋಜನೆಗಾಗಿ ಕೋರಿಕೆ ಆದೇಶಗಳನ್ನು ಹೊರಡಿಸಿದರು. ಬೆಳಗಾಗುವುದರೊಳಗೆ ಅಹಮದಾಬಾದಿನ ಬಾಂಬ್ ಬಾಧಿತ ಪ್ರದೇಶಗಳಲ್ಲಿ ಸೇನೆಯ ಎರಡು ತುಕಡಿಗಳು ಮಾರ್ಚ್ ಫಾಸ್ಟ್ ಮಾಡುತ್ತಿದ್ದವು.

ಮಾತ್ರವಲ್ಲ, ಮೋದಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರನ್ನೂ ತಕ್ಷಣವೇ ಸಂಪರ್ಕಿಸಿದ್ದರು.

ಕಳೆದ ಎರಡು ವರ್ಷಗಳಲ್ಲಿ ಗುಜರಾತಿನ ವ್ಯಾವಹಾರಿಕ ಮತ್ತು ಅಭಿವೃದ್ಧಿ ರಂಗವು ನಾಟಕೀಯ ಬದಲಾವಣೆಗಳನ್ನು ಕಂಡಿವೆ. 2007ರ ಜನವರಿ ತಿಂಗಳಲ್ಲಿ ನಡೆದಿದ್ದ ವೈಬ್ರೆಂಟ್ ಗುಜರಾತ್ ಇನ್ವೆಸ್ಟ್‌ಮೆಂಟ್ ಸಮಾವೇಶದಲ್ಲಿ ಖ್ಯಾತ ಉದ್ಯಮಿ ರತನ್ ಟಾಟಾ ಅವರೇ ಹೇಳಿದ್ದು : "ಗುಜರಾತಿನಲ್ಲಿ ಹೂಡಿಕೆ ಮಾಡದಿದ್ದರೆ ಆತನೊಬ್ಬ ಮೂರ್ಖನಿದ್ದಂತೆ"!

ಈ ಹೆಸರನ್ನು ಹಾಳುಮಾಡಿಕೊಳ್ಳುವುದು ಗುಜರಾತ್ ಸರಕಾರಕ್ಕೆ ಇಷ್ಟವಿಲ್ಲ. ಇದೇ ಕಾರಣಕ್ಕೆ ಗುಜರಾತನ್ನು ಮೋದಿ ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿದ್ದಾರೆ, ಅವರ ಸಂಕಲ್ಪವೂ ಅದೇ ಆಗಿದೆ ಎನ್ನುತ್ತಾರೆ ಸರಕಾರದ ಹಿರಿಯ ಅಧಿಕಾರಿಯೊಬ್ಬರು.
ಮತ್ತಷ್ಟು
ನಾಚಿಕೆಗೇಡು, ಪ್ರಜಾತಂತ್ರದ ಕಪ್ಪು ಚುಕ್ಕೆ!
ವಿಶ್ವಾಸ ಮತದ ಇತಿಹಾಸ: ಒಂದು ಹಿನ್ನೋಟ
ಲಂಚ ಪಡೆದವರಿಗಿಲ್ಲ ಚಿಂತೆ, ಕೊಡುವವರಿಗಷ್ಟೇ!
ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
ಅಣ್ಣ-ತಮ್ಮಂದಿರ ಜಗಳದಲ್ಲಿ ಎಸ್ಪಿ ನಲುಗೀತಾ?
ಗೌಡ್ರ ಕಣ್ಣು ಕೇಂದ್ರದ್ ಮ್ಯಾಗೆ...!