ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಜರ್ದಾರಿ: ಜೈಲಿನಿಂದ ಅಧ್ಯಕ್ಷ ಪಟ್ಟಕ್ಕೆ ಸಾಗಿ ಬಂದ ದಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜರ್ದಾರಿ: ಜೈಲಿನಿಂದ ಅಧ್ಯಕ್ಷ ಪಟ್ಟಕ್ಕೆ ಸಾಗಿ ಬಂದ ದಾರಿ
ND
ಜೈಲಿನಿಂದ ಹೊರಬಂದು ಪಾಕಿಸ್ತಾನದ ಪರಮೋಚ್ಚ ಪದವಿ ರಾಷ್ಟ್ರಾಧ್ಯಕ್ಷ ಸ್ಥಾನ ಅಲಂಕರಿಸಿದ ಆಸಿಫ್ ಅಲಿ ಜರ್ದಾರಿ ಇದುವರೆಗೆ ಸಾಗಿ ಬಂದ ದಾರಿಯ ತುಂಬಾ ಮುಳ್ಳುಗಳು, ಭ್ರಷ್ಟಾಚಾರದ ವಾಸನೆಯುಕ್ತ ಕೊಳಚೆಯೇ.

ಯೌವನದಲ್ಲಿ ಪೋಲೋ ಆಡುವ ಪ್ಲೇಬಾಯ್ ಎಂದೇ ಕರೆಸಿಕೊಳ್ಳುತ್ತಿದ್ದ ಜರ್ದಾರಿ ಈ ಮಟ್ಟಕ್ಕೇರಲು ಪೂರಕ ಶಕ್ತಿಯೆಂದರೆ ಅವರ ಪತ್ನಿ, ಇತ್ತೀಚೆಗಷ್ಟೇ ಭಯೋತ್ಪಾದಕರ ದಾಳಿಗೆ ಬಲಿಯಾದ, ಪಾಕಿಸ್ತಾನವನ್ನು ಎರಡು ಬಾರಿ ಆಳಿದ್ದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ.

ಫೆಬ್ರವರಿ ತಿಂಗಳಲ್ಲಿ ಭುಟ್ಟ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನೇತೃತ್ವ ವಹಿಸಿ ಅದನ್ನು ಅಧಿಕಾರದ ಗದ್ದುಗೆಯತ್ತ ಕೊಂಡೊಯ್ದ ಬಳಿಕ, ಮೊನ್ನೆ ಆಗಸ್ಟ್ ತಿಂಗಳಲ್ಲಿ ಪರ್ವೇಜ್ ಮುಷರಫ್ ಅಧ್ಯಕ್ಷ ಪದವಿ ತೊರೆಯುವಂತೆ ಮಾಡುವಲ್ಲಿ ಕಾಣದ ಕೈಗಳ ಮೂಲಕ ಕೆಲಸ ಮಾಡಿದ್ದರು.

ಅಧ್ಯಕ್ಷ ಹುದ್ದೆಯು ಭ್ರಷ್ಟಾಚಾರ, ಕೊಲೆ ಮುಂತಾದ ಆರೋಪಗಳಿಂದಾಗಿ 11 ವರ್ಷ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಜರ್ದಾರಿ ರಾಜಕೀಯ ವೃತ್ತಿ ಜೀವನದ ಮಹೋನ್ನತ ಕ್ಷಣ. ಎಲ್ಲಾ ಆರೋಪಗಳನ್ನೂ ಜರ್ದಾರಿ ನಿರಾಕರಿಸಿದ್ದರು. 2004ರಲ್ಲಿ ಅವರಿಗೆ ಈ ಪ್ರಕರಣಗಳಲ್ಲಿ ಜಾಮೀನು ದೊರೆತಿತ್ತು.

ಶನಿವಾರ ಸಂಸತ್ತು ಮತ್ತು ನಾಲ್ಕು ಪ್ರಾಂತೀಯ ಶಾಸನಸಭೆಗಳ ಸದಸ್ಯರನ್ನೊಳಗೊಂಡಂತೆ ಅಧ್ಯಕ್ಷೀಯ ಪದವಿಗೆ ನಡೆದ ಚುನಾವಣೆಯಲ್ಲಿ ಜರ್ದಾರಿ ಸುಲಭ ಜಯ ಗಳಿಸಿದ್ದರೂ, ಪಾಶ್ಚಾತ್ಯ ವಿರೋಧಿ ಭಾವನೆಯೇ ಇರುವ ಪರಮಾಣುಶಕ್ತ ಮುಸ್ಲಿಂ ರಾಷ್ಟ್ರದಲ್ಲಿ ಮತ್ತೊಂದು ರೀತಿಯ ಅಸ್ಥಿರತೆ ತಂದೊಡ್ಡುತ್ತದೆ ಎಂಬ ಆತಂಕ ಪಾಕಿಸ್ತಾನದ ರಾಜಕೀಯ ವ್ಯವಸ್ಥೆಯನ್ನು ಕಂಡು ತಿಳಿದಿರುವವರದು.

ಒಂದು ಕಡೆ, ಐದು ತಿಂಗಳ ಪ್ರಾಯದ ಪಾಕಿಸ್ತಾನದ ಸಮ್ಮಿಶ್ರ ಸರಕಾರದಿಂದ ಮಾಜಿ ಪ್ರಧಾನಿ ನವಾಜ್ ಶರೀಫ್ ನೇತೃತ್ವದ ಮುಸ್ಲಿಂ ಲೀಗ್ ಪಕ್ಷವು, ಜರ್ದಾರಿಯ ಮೇಲೆ ವಿಶ್ವಾಸ ಕಳೆದುಕೊಂಡು ಹೊರಬಂದು ಸರಕಾರದ ಅಸ್ತಿತ್ವವೇ ಅಸ್ಥಿರತೆಯಲ್ಲಿದೆ. ಮತ್ತೊಂದೆಡೆ, ಉಗ್ರವಾದ ಪೀಡಿತ ರಾಷ್ಟ್ರದಲ್ಲಿ, ಅಭಿವೃದ್ಧಿ ಕಾರ್ಯ ಏನಾದರೂ ಆಗಬೇಕಿದ್ದರೆ, ಭಾರೀ ಪ್ರಮಾಣದ ವಿದೇಶೀ ಬಂಡವಾಳದ ಅವಶ್ಯಕತೆಯಿದೆ. ಅತ್ತ ಕಡೆಯಿಂದ ಹೆಚ್ಚುತ್ತಿರುವ ಅಮೆರಿಕ ಪಡೆಗಳ ದಾಳಿಯಿಂದ ತಾಲಿಬಾನ್ ಉಗ್ರರು ತೀವ್ರ ಆಕ್ರೋಶಗೊಂಡು ವಾಯುವ್ಯ ಭಾಗದಲ್ಲಿ ಹಿಂಸಾಚಾರದ ಸರಣಿಯನ್ನೇ ಆರಂಭಿಸಿದ್ದಾರೆ.

ಜರ್ದಾರಿ ಬಗ್ಗೆ ಸ್ವತಃ ಭುಟ್ಟೋಗೆ ವಿಶ್ವಾಸವಿರಲಿಲ್ಲ ಎನ್ನುತ್ತಾರೆ ವಿಶ್ಲೇಷಕರು. ಸ್ವತಃ ಅವರ ಪಿಪಿಪಿ ಪಕ್ಷದಲ್ಲಿ ಜರ್ದಾರಿಯ ಮೇಲೆ ವಿಶ್ವಾಸ ಕಳೆದುಕೊಂಡ ಅದೆಷ್ಟೋ ಮಂದಿ ಇದ್ದಾರೆ. ಈ ಕಾರಣಕ್ಕಾಗಿಯೇ ಭುಟ್ಟೋ ಅವರ ಉಯಿಲಿನಲ್ಲಿ, ಅವರ ಮಗ, 19ರ ಹರೆಯದ ಆಕ್ಸ್‌ಫರ್ಡ್ ವಿದ್ಯಾರ್ಥಿ ಬಿಲಾವಲ್ ಜತೆಗೆ ಜರ್ದಾರಿಯನ್ನು ಪಿಪಿಪಿಯ ಸಹ ಅಧ್ಯಕ್ಷನನ್ನಾಗಿ ಉಲ್ಲೇಖಿಸಿದ್ದರು.

ಜರ್ದಾರಿಗೆ ಅವರ ಪತ್ನಿ ಆಕರ್ಷಿಸುತ್ತಿದ್ದ ಮಾದರಿಯಲ್ಲಿ ಜನರನ್ನು ಆಕರ್ಷಿಸುವ ತಾಕತ್ತಿಲ್ಲ. ಅವರ ಪಕ್ಷದಲ್ಲೇ ಅವರನ್ನು 'ಹೊರಗಿನವರು' ಎಂದು ಭಾವಿಸುವ ಸಾಕಷ್ಟು ಮಂದಿಯಿದ್ದಾರೆ. ದಕ್ಷಿಣದ ಸಿಂಧ್ ಪ್ರಾಂತ್ಯದ ಪುಟ್ಟ ಜಮೀನ್ದಾರ ಕುಟುಂಬದ ಹುಡುಗನ ಜತೆಗೆ ಭುಟ್ಟೋ ತಾಯಿ ಏರ್ಪಡಿಸಿದ್ದ ಮದುವೆ ನಿಶ್ಚಿತಾರ್ಥಕ್ಕೆ ತಾನು ನೀಡಿದ್ದ ಮೌನ ಸಮ್ಮತಿಯನ್ನು ಸ್ವತಃ ಬೇನಜೀರ್, 'ತನ್ನ ಜೀವನವು ತುಳಿದಿರುವ ರಾಜಕೀಯ ಪಥಕ್ಕೆ' ತೆತ್ತ ಬೆಲೆ ಎಂದೂ ಬಣ್ಣಿಸಿದ್ದರು. ಈ ದಂಪತಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.

ಆದರೆ, ಬೇನಜೀರ್ ಈ ಮದುವೆಗೆ ತೆತ್ತ ಮತ್ತೊಂದು ಬೆಲೆ ಎಂದರೆ ಕುಟುಂಬದ ಇತರ ಸದಸ್ಯರಿಂದ ದೂರವಾದದ್ದು. ಬೇರೆಲ್ಲಾ ಭುಟ್ಟೋಗಳು ಜರ್ದಾರಿಯನ್ನು ನಂಬುತ್ತಿರಲಿಲ್ಲ. 1996ರಲ್ಲಿ ಬೇನಜೀರ್ ಸಹೋದರ ಮುರ್ತಜಾ ಕರಾಚಿಯಲ್ಲಿ ಹತ್ಯೆಗೀಡಾದ ಬಗ್ಗೆ ಜರ್ದಾರಿ ಮೇಲೆ ಆರೋಪಗಳೇ ಇದ್ದವಾದರೂ, ಶಿಕ್ಷೆಯಾಗಿರಲಿಲ್ಲ.

2004ರಲ್ಲಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಜರ್ದಾರಿ, ದೇಶಭ್ರಷ್ಟಳಾಗಿದ್ದ ಬೇನಜೀರ್ ಜತೆ ಸೇರಿಕೊಂಡರು. ಹಳೆಯ ಕೇಸುಗಳನ್ನು ಮರಳಿ ತೆರೆಯುವುದಿಲ್ಲ ಎಂದು ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ವಾಗ್ದಾನವಿತ್ತ ಬಳಿಕವಷ್ಟೇ ಅವರಿಬ್ಬರೂ ಪಾಕಿಸ್ತಾನಕ್ಕೆ ಮರಳಿದ್ದರು.

ಜರ್ದಾರಿ ಹೇಳುತ್ತಿದ್ದ "ರಾಜಕೀಯ ಪ್ರೇರಿತ" ಆರೋಪಗಳನ್ನು ಎಂದಿಗೂ ಸಾಬೀತು ಮಾಡಲಾಗಿರಲಿಲ್ಲ. ಆದರೆ ಹೆಚ್ಚಾಗಿ "ಮಿ.ಟೆನ್ ಪರ್ಸೆಂಟ್" ಎಂದೇ ಕರೆಸಿಕೊಳ್ಳುತ್ತಿದ್ದ ಜರ್ದಾರಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿರುವುದು ಅವರ ಪ್ರತಿಷ್ಠೆಯನ್ನು ಎತ್ತರಕ್ಕೇರಿಸಲು ಸಾಕಾಗಲಿಲ್ಲ.

ಪಿಪಿಪಿಯ ಮಾಜಿ ಸದಸ್ಯ, ಈಗ ರಾಜಕೀಯ ವಿಶ್ಲೇಷಕರಾಗಿರುವ ಶಫ್ಕತ್ ಮೆಹಮೂದ್ ಅವರು ಪಾಕಿಸ್ತಾನದ ದೈನಿಕ 'ದಿ ನ್ಯೂಸ್'ನಲ್ಲಿ ಹೀಗೆ ಬರೆದಿದ್ದಾರೆ: "ತಮ್ಮ ಇಮೇಜ್ ಬದಲಾಯಿಸಲೇಬೇಕಾದ ಹತಾಶ ಅನಿವಾರ್ಯತೆಯಲ್ಲಿ ಅವರಿದ್ದಾರೆ. ಈ ರೀತಿ ಆಗಬೇಕಿದ್ದರೆ, ಅವರು ಇದುವರೆಗೆ ಹೇಗಿದ್ದರೋ ಅದಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳಬೇಕಾಗಿದೆ"!

ಆದರೆ ಜರ್ದಾರಿ ಅವರ ಹಿಂಬಾಲಕರ ಪ್ರಕಾರ, ಜರ್ದಾರಿ ಪ್ರತಿಷ್ಠೆಗೆ ಹಾನಿಯಾಗಿರುವುದು ಮಾಧ್ಯಮಗಳ ಒಂದು ವರ್ಗದಿಂದ.

ಮುಷರಫ್ ಅವರಿಂದ ಅಮಾನತುಗೊಳಿಸಲ್ಪಟ್ಟ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮರು ನೇಮಕ ಆಗದಿರುವುದಕ್ಕೆ ಜರ್ದಾರಿ ಅವರ 'ಮುಷರಫ್ ಲಿಂಕ್' ಕಾರಣ ಎಂಬ ವಾದವೂ ಒಂದೆಡೆ ಕೇಳಿಬರುತ್ತಿದೆ. ಬೇನಜೀರ್ ಹತ್ಯೆಯಲ್ಲೂ ಅವರ ಮೇಲೆ ಶಂಕೆ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ. ಇಂಥ ಕಳಂಕಿತ ಹಿನ್ನೆಲೆಯಿರುವ ಜರ್ದಾರಿ ಕೈಯಲ್ಲಿ ಪಾಕಿಸ್ತಾನವಿದೆ. ಅಣ್ವಸ್ತ್ರದ ಬಟನ್ ಅವರ ಕೈಯಲ್ಲಿದೆ. ಪಾಕಿಸ್ತಾನ ಹಳಿಗೆ ಮರಳೀತೇ ಎಂಬುದು ಕಾದು ನೋಡಬೇಕಾದ ಅಂಶ.
ಮತ್ತಷ್ಟು
ಬನ್ನಿ, ಬಿಹಾರ ಪ್ರವಾಹ ಪೀಡಿತರಿಗೆ ನೆರವಾಗೋಣ
ಮೋದಿಯ ಮತ್ತೊಂದು ಮುಖ ಕಂಡ ಗುಜರಾತ್
ನಾಚಿಕೆಗೇಡು, ಪ್ರಜಾತಂತ್ರದ ಕಪ್ಪು ಚುಕ್ಕೆ!
ವಿಶ್ವಾಸ ಮತದ ಇತಿಹಾಸ: ಒಂದು ಹಿನ್ನೋಟ
ಲಂಚ ಪಡೆದವರಿಗಿಲ್ಲ ಚಿಂತೆ, ಕೊಡುವವರಿಗಷ್ಟೇ!
ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ