ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಆಪರೇಶನ್ ಕಮಲ ಕಳಂಕದೊಂದಿಗೆ ಬಿಜೆಪಿ ಶತದಿನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಪರೇಶನ್ ಕಮಲ ಕಳಂಕದೊಂದಿಗೆ ಬಿಜೆಪಿ ಶತದಿನ
NRB
'ಆಪರೇಶನ್ ಕಮಲ' ಮೂಲಕ ಕಾಂಗ್ರೆಸ್, ಜೆಡಿಎಸ್ ಶಾಸಕರನೇಕರ ರಾಜೀನಾಮೆ ಕೊಡಿಸಿ, ಮಂತ್ರಿಪದವಿಯ ಆಮಿಷದೊಂದಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಲೇ ಪ್ರತಿಪಕ್ಷಗಳ ಆಕ್ರೋಶಕ್ಕೆ ತುತ್ತಾಗಿರುವ ದಕ್ಷಿಣ ಭಾರತದ ಪ್ರಥಮ ಬಿಜೆಪಿ ಸರಕಾರ, ತನ್ನ ಸರಕಾರದ 100 ದಿನಗಳನ್ನು ಮಂಗಳವಾರ ಆಚರಿಸುತ್ತಿದೆ.

ಶತದಿನದ ಸಂಭ್ರಮವನ್ನು ಭರ್ಜರಿಯಾಗಿಯೇ ಆಚರಿಸಲು ಕೇಸರಿ ಪಕ್ಷವು ಸಿದ್ಧವಾಗುತ್ತಿರುವಂತೆಯೇ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಬಿ.ಎಸ್.ಯಡಿಯೂರಪ್ಪ ಸರಕಾರದ 'ವೈಫಲ್ಯ'ಗಳನ್ನು ಎತ್ತಿತೋರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನಗಳನ್ನು ಏರ್ಪಡಿಸುತ್ತಿದೆ. ಪ್ರಧಾನ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಕೂಡ, ಅಕ್ಟೋಬರ್ 2ರಿಂದ ಬಿಜೆಪಿ ಸರಕಾರದ ವಿರುದ್ಧದ ತನ್ನ ಪ್ರತಿಭಟನಾ ಸರಣಿಯನ್ನು ಆರಂಭಿಸಲಿದೆ. ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಬಂದಿದೆ.

ಮೇ ತಿಂಗಳಲ್ಲಿ ಸ್ವಂತ ಬಲದಲ್ಲಿ ಅಸ್ತಿತ್ವಕ್ಕೆ ಬರುವ ಆಶಾವಾದದಲ್ಲಿದ್ದ ಬಿಜೆಪಿಗೆ ಕೇವಲ 3 ಸೀಟುಗಳ ಕೊರತೆ ಕಂಡುಬಂದಿತ್ತು. ಕೊನೆಗೆ ಗಣಿ ನಾಡಿನ ಗಣಿಯೊಡೆಯ ಶಾಸಕರ ಬಲದಿಂದ ಆರು ಮಂದಿ ಪಕ್ಷೇತರರ ಬೆಂಬಲ ಪಡೆದು ಅಧಿಕಾರವನ್ನೂ ರಚಿಸಿದ್ದು ಈಗ ಇತಿಹಾಸ. ಆದರೆ ಒಂದು ಕಡೆಯಿಂದ ಪಕ್ಷೇತರರು ಚಿಗಿತುಕೊಳ್ಳುತ್ತಾರೆ ಎಂಬ ಸುಳಿವು ಸಿಕ್ಕಿದ್ದೇ ತಡ, ಸರಕಾರವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಬಿಜೆಪಿಯ ಚಾಣಾಕ್ಷರು 'ಆಪರೇಶನ್ ಕಮಲ' ಎಂಬ ಆಂದೋಲನವನ್ನಾರಂಭಿಸಿದರು. ಅದರಂತೆ ಎದುರು ಪಕ್ಷಗಳ ಶಾಸಕರ ಪಕ್ಷಾಂತರಕ್ಕೆ ಪ್ರೇರೇಪಿಸುವ ಮೂಲಕ, ವಿಭಿನ್ನ ವಲಯದಿಂದ ತೀವ್ರ ಟೀಕಾ ಪ್ರಹಾರವನ್ನೂ ಎದುರಿಸಬೇಕಾಯಿತು.

ಸರಕಾರ ರಚಿಸುವಲ್ಲಿ ಪಕ್ಷೇತರರ ಬೆಂಬಲ ದೊರಕಿಸಿಕೊಟ್ಟ ಗಣಿ ಧಣಿಗಳು ಕಣಕ್ಕಿಳಿದರೆ ಕೇಳಬೇಕೇ? ಪ್ರತಿಪಕ್ಷಗಳ ಶಾಸಕರಿಗೆ ಆಮಿಷವೊಡ್ಡಿ, ಅವರು ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡುವುದು, ಈ ಹಿಂಬಾಗಿಲ ಪಕ್ಷಾಂತರಕ್ಕೆ ಕೊಡುಗೆಯಾಗಿ ಅಧಿಕಾರ ಮತ್ತು ಮರು ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದು ಈ ಕಾರ್ಯಾಚರಣೆಯ ಕಾರ್ಯತಂತ್ರ.

ಹೊರಗಿನಿಂದ ಬಂದವರು ಮನ್ನಣೆ ಪಡೆದುಕೊಳ್ಳತೊಡಗಿದಂತೆಯೇ, ಸ್ವತಃ ಪಕ್ಷದೊಳಗಿಂದಲೇ ಅಸಮಾಧಾನದ ಹೊಗೆ ಏಳತೊಡಗಿತು. ಬೆಳ್ಳುಬ್ಬಿ ಅವರು ಬೇರೆ ಪಕ್ಷಗಳಿಂದ ಬಂದವರಿಗೆ ಮಂತ್ರಿ ಸ್ಥಾನ ನೀಡುವುದಕ್ಕಾಗಿ ತಮ್ಮ ಸಚಿವ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗಲಂತೂ ಈ ಹೊಗೆಯು ಬೆಂಕಿಯ ರೂಪವನ್ನೇ ಪಡೆದುಕೊಂಡು, ಉತ್ತರ ಕರ್ನಾಟಕದ ಕೆಲವೆಡೆ ಬಸ್ಸಿಗೆ ಬೆಂಕಿ, ಕಲ್ಲುತೂರಾಟ, ಆತ್ಮಹತ್ಯೆ ಯತ್ನ ಮುಂತಾಗಿ ಪ್ರತಿಭಟನಾ ಪ್ರದರ್ಶನಗಳೇ ನಡೆದವು.

ನಿಷ್ಠಾವಂತ ಬಿಜೆಪಿ ಮಂದಿಯ ಎದೆಯಲ್ಲಿ ತಳಮಳ, ಕಳವಳ. ಸರಕಾರ ಸ್ಥಿರಗೊಳಿಸುವ ಕಾರ್ಯಾಚರಣೆಯು ಪಕ್ಷವನ್ನೇ ಅಸ್ಥಿರಗೊಳಿಸುವ ಆತಂಕ ಬೃಹದಾಕಾರವಾಗಿ ಬೆಳೆದುದನ್ನು ತಡವಾಗಿಯಾದರೂ ಅರಿತು ಎಚ್ಚೆತ್ತುಕೊಂಡ ಪಕ್ಷದ ಹೈಕಮಾಂಡ್, ಇನ್ನು ಮುಂದೆ ಯಾವುದೇ ಸಚಿವ ರಾಜೀನಾಮೆ ಕೇಳುವುದಿಲ್ಲ ಎಂಬ ವಾಗ್ದಾನ ನೀಡಬೇಕಾಯಿತು.

ವಿಧಾನಮಂಡಲ: ಈಗಿನ ಸ್ಥಿತಿ ಹೇಗಿದೆ?
ಈ ಹಿಂದೆ, 224 ಸದಸ್ಯಬಲದ ವಿಧಾನಸಭೆಯಲ್ಲಿ 110 ಸ್ಥಾನ ಗೆದ್ದಿದ್ದ ಬಿಜೆಪಿಗೆ, ಬಹುಮತಕ್ಕೆ 113 ಸ್ಥಾನಗಳ ಅವಶ್ಯಕತೆಯಿದ್ದರೂ, ಆರು ಪಕ್ಷೇತರರನ್ನು ಸೆಳೆದು, ಸಂಖ್ಯಾಬಲವನ್ನು 116ಕ್ಕೇರಿಸಿಕೊಂಡಿತ್ತು. ಪ್ರತಿಪಕ್ಷದಲ್ಲಿ 108 ಮಾತ್ರ ಉಳಿಯಿತು. ಅಂದರೆ ಕಾಂಗ್ರೆಸ್ 80 ಹಾಗೂ ಜೆಡಿಎಸ್ 28 ಸ್ಥಾನಗಳನ್ನು ಹೊಂದಿದ್ದವು.

ಆದರೆ ಆಪರೇಶನ್ ಕಮಲದ ಬಳಿಕ ಕಾಂಗ್ರೆಸ್ 3 ಶಾಸಕರು, ಜೆಡಿಎಸ್‌ನ ನಾಲ್ವರು ಶಾಸಕರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಹೀಗಾಗಿ ವಿಧಾನಸಭೆಯ ಈಗಿನ ಬಲಾಬಲ: ಬಿಜೆಪಿ-110, ಕಾಂಗ್ರೆಸ್ 77, ಜೆಡಿಎಸ್-24, ಸ್ವತಂತ್ರರು-6, ನಾಮನಿರ್ದೇಶಿತ-1, ಖಾಲಿ ಬಿದ್ದ ಸ್ಥಾನಗಳು - 7.

ಆಪರೇಶನ್ ಕಮಲದ 'ಬಾಧೆ'ಗೀಡಾಗಿ ಈಗ 'ಮಾಜಿ'ಗಳಾದ ಶಾಸಕರು:
ಜೆಡಿಎಸ್
ಗೌರಿಶಂಕರ್ - ಮಧುಗಿರಿ
ಉಮೇಶ್ ಕತ್ತಿ - ಹುಕ್ಕೇರಿ
ಶಿವನಗೌಡ ನಾಯಕ್ - ದೇವದುರ್ಗ
ಬಾಲಚಂದ್ರ ಜಾರಕಿಹೊಳಿ - ಹರಬಾವಿ

ಕಾಂಗ್ರೆಸ್
ಆನಂದ ಅಸ್ನೋಟಿಕರ್ - ಕಾರವಾರ
ಜಗ್ಗೇಶ್ - ತುರುವೇಕೆರೆ
ನರಸಿಂಹ ಸ್ವಾಮಿ - ದೊಡ್ಡಬಳ್ಳಾಪುರ

ಈ ಆಪರೇಶನ್‌ನಿಂದ ಮನಸ್ಸಿಗೆ ತೀವ್ರ ಗಾಯಗೊಂಡವರನ್ನು ವಿದೇಶಕ್ಕೆ ಕಳುಹಿಸಿದ ಸರಕಾರವು ಸ್ವಲ್ಪಮಟ್ಟಿಗೆ ಬಿಸಿ ತಗ್ಗಿಸುವಂತೆ ಮಾಡಿದೆ. ಆದರೆ, ರಾಜ್ಯದಲ್ಲಿ ಒಂದೆಡೆ ನೆರೆ, ಮತ್ತೊಂದೆಡೆ ಬರ ಕಾಡುತ್ತಿದ್ದರೂ, ಅಮೆರಿಕದಲ್ಲಿ ನಡೆದ 'ಅಕ್ಕ' ಸಮ್ಮೇಳನದಲ್ಲಿ ಶಾಸಕರ ದಂಡೇ ಆಹ್ವಾನವಿಲ್ಲದಿದ್ದರೂ ಹೋಗಿ ನಾಚಿಕೆಪಟ್ಟುಕೊಳ್ಳುವಂತಾಗಿದೆ. ಇದು ಸಾಕಷ್ಟು ಚರ್ಚೆಯ ಸಂಗತಿಯಾಗಿಯೂ ಉಳಿದಿದೆ. ಇದಕ್ಕೂ ಮೊದಲು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮುಖ್ಯಮಂತ್ರಿಯವರ ಸರಕಾರವು, ರಸಗೊಬ್ಬರ ಅಭಾವ ವಿಷಯಕ್ಕೆ ಸಂಬಂಧಿಸಿದಂತೆ, ರೈತರ ಮೇಲೇ ಗೋಲೀಬಾರ್ ನಡೆಸಿದ ಆರೋಪವನ್ನು ಎದುರಿಸಬೇಕಾಯಿತು.

ಅಭಿವೃದ್ಧಿಯೇ ಮೂಲ ಮಂತ್ರ ಎಂದು ಅಧಿಕಾರಕ್ಕೇರಿದಂದಿನಿಂದಲೂ ಪಠಿಸುತ್ತಾ ಬಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕಳೆದ ತಮ್ಮ 100 ದಿನಗಳ ಆಡಳಿತದಲ್ಲಿ, ನೀಡಿದ ವಾಗ್ದಾನವನ್ನು ಎಷ್ಟರ ಮಟ್ಟಿಗೆ ಈಡೇರಿಸಿದ್ದಾರೆ ಎಂಬುದು ವಿಶ್ಲೇಷಿಸಬೇಕಾದ ಅಂಶ. ಅವರ ಆಡಳಿತ ಹೇಗಿತ್ತು? ನೀವೇನು ಹೇಳುತ್ತೀರಿ?
ಮತ್ತಷ್ಟು
ಜರ್ದಾರಿ: ಜೈಲಿನಿಂದ ಅಧ್ಯಕ್ಷ ಪಟ್ಟಕ್ಕೆ ಸಾಗಿ ಬಂದ ದಾರಿ
ಬನ್ನಿ, ಬಿಹಾರ ಪ್ರವಾಹ ಪೀಡಿತರಿಗೆ ನೆರವಾಗೋಣ
ಮೋದಿಯ ಮತ್ತೊಂದು ಮುಖ ಕಂಡ ಗುಜರಾತ್
ನಾಚಿಕೆಗೇಡು, ಪ್ರಜಾತಂತ್ರದ ಕಪ್ಪು ಚುಕ್ಕೆ!
ವಿಶ್ವಾಸ ಮತದ ಇತಿಹಾಸ: ಒಂದು ಹಿನ್ನೋಟ
ಲಂಚ ಪಡೆದವರಿಗಿಲ್ಲ ಚಿಂತೆ, ಕೊಡುವವರಿಗಷ್ಟೇ!