ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ವಿಶ್ವ ಸೃಷ್ಟಿಯ ಮರ್ಮವರಿಯಲು ಬಿಗ್ ಬ್ಯಾಂಗ್ ಮಹಾಪ್ರಯೋಗ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವ ಸೃಷ್ಟಿಯ ಮರ್ಮವರಿಯಲು ಬಿಗ್ ಬ್ಯಾಂಗ್ ಮಹಾಪ್ರಯೋಗ !
ND
ಊಹೆಗೆ ನಿಲುಕದ ಬ್ರಹ್ಮಾಂಡ ಸೃಷ್ಟಿಯ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡಿರುವ ಮಾನವ, ಮಗದೊಂದು ಸಾಹಸಕ್ಕೆ ಕೈ ಹಚ್ಚಿದ್ದಾನೆ. 'ಬಿಗ್ ಬ್ಯಾಂಗ್' (ಮಹಾ ಸ್ಫೋಟ) ಸಿದ್ಧಾಂತವನ್ನು ಪುನರಪಿ ರೂಪಿಸಿ, ತಮ್ಮ ವಾದ ಸರಿ ಎಂಬುದನ್ನು ನಿರೂಪಿಸುವ ಪ್ರಯತ್ನವಾಗಿ ವಿಜ್ಞಾನಿಗಳು ಬುಧವಾರ ಜಿನೇವಾದಲ್ಲಿ 27.36 ಕಿ.ಮೀ. ಉದ್ದದ ಭೂಗತ ಕೊಳವೆಯಲ್ಲಿ ಪ್ರೋಟಾನ್‌ಗಳ ಮೊದಲ ಕಿರಣವನ್ನು ಹಾಯಿಸಿದ್ದಾರೆ.

ಭಾರತದ ಮೂವತ್ತಕ್ಕೂ ಹೆಚ್ಚು ವಿಜ್ಞಾನಿಗಳ ಸಹಿತ ವಿಶ್ವಾದ್ಯಂತದಿಂದ ಬಂದಿರುವ ಸುಮಾರು 9 ಸಾವಿರ ವಿಜ್ಞಾನಿಗಳು, ಬ್ರಹ್ಮಾಂಡ ಸ್ಫೋಟ, ಜೀವಸೃಷ್ಟಿ ಮುಂತಾದವುಗಳ ನಿಗೂಢತೆಯನ್ನು ಭೇದಿಸುವ ನಿಟ್ಟಿನಲ್ಲಿ ಕಾರ್ಯಾರಂಭಿಸಿದ್ದಾರೆ. ಈ ಪ್ರಯೋಗದಿಂದ ಜಗತ್ತಿನ ಸೃಷ್ಟಿ ಕಾರ್ಯ ಹೇಗಾಯಿತು, ಜೀವ ಜಗತ್ತು ಹೇಗೆ ಆರಂಭವಾಯಿತು ಇತ್ಯಾದಿ ಅದೆಷ್ಟೋ ಪ್ರಶ್ನಾವಳಿಗಳಿಗೆ ಉತ್ತರ ದೊರೆಯುವ ಸಾಧ್ಯತೆಗಳಿವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

2003ರಲ್ಲಿ ಫ್ರಾನ್ಸ್-ಸ್ವಿಜರ್ಲೆಂಡ್ ಗಡಿಯಲ್ಲಿ 38 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಲಾರ್ಜ್ ಹೆಡ್ರಾನ್ ಕೊಲೈಡರ್ (ಎಲ್ಎಚ್‌ಸಿ) ಎಂಬ ಅಣು ವೇಗೋತ್ಕರ್ಷಕ ಕೊಳವೆಯಲ್ಲಿ ಪ್ರೋಟಾನ್ ಹಾಯಿಸಲಾಗಿದ್ದು, ವಿಶ್ವ ಸೃಷ್ಟಿಯ ಕುತೂಹಲಕರ ಅಂಶಗಳು ಸುಮಾರು ಒಂದು ತಿಂಗಳ ಬಳಿಕ ನಿಧಾನವಾಗಿ ಹೊರಬೀಳಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಎಲ್ಎಚ್‌ಸಿಯನ್ನು ಭೂಗರ್ಭದೊಳಗೆ ನೂರಾರು ಅಡಿಗಳಷ್ಟು ಕೆಳಗೆ ಸ್ಥಾಪಿಸಲಾಗಿದೆ. ಇಡೀ ಪ್ರಯೋಗದ ವೆಚ್ಚ 900 ಕೋಟಿ ಡಾಲರ್!

ವಿಶ್ವವು ಸೃಷ್ಟಿಯಾಗಿದ್ದೇ ಅಣು ಸಂಘರ್ಷದಿಂದ ಎಂದು ಬಲವಾಗಿ ವಾದಿಸುತ್ತಾ ಬಂದಿರುವ ವಿಜ್ಞಾನಿಗಳು, ಭಾರೀ ವೆಚ್ಚದಲ್ಲಿ ಈ ಮಹಾಸ್ಫೋಟದ ಅಣಕು ಪ್ರಯೋಗವನ್ನೇರ್ಪಡಿಸಿ ಇದನ್ನು ಶ್ರುತಪಡಿಸಿಕೊಳ್ಳಲು ಇಂದಿನಿಂದ ಒಂದು ತಿಂಗಳ ಕಾಲ ಶ್ರಮಿಸಲಿದ್ದಾರೆ. ಜೀವ ಉತ್ಪತ್ತಿಯಾಗಿದ್ದು ಹೇಗೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ನಡೆಯುವ ಈ ಪ್ರಯೋಗವನ್ನು ಹಲವಾರು ವೆಬ್ ಸೈಟುಗಳು, ಟಿವಿ ಚಾನೆಲ್‌ಗಳು ನೇರ ಪ್ರಸಾರದ ಮೂಲಕ ತೋರಿಸುತ್ತಿವೆ.

ಪರಮಾಣುಗಳ ಕಣಗಳನ್ನು ಪುಡಿಗೈದು, ಅವುಗಳ ರಚನೆ ಹೇಗಾದವು ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ರಚಿಸಲಾಗಿರುವ ಈ ಹೆಡ್ರಾನ್ ಕೊಲೈಡರ್ ಕೊಳವೆಯು ಹಿಂದೆಂದಿಗಿಂತಲೂ ಅತ್ಯಧಿಕ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕೊಲೈಡರ್, ಬೆಳಕಿನ ವೇಗಕ್ಕೆ ಸಮನಾದಷ್ಟು ವೇಗದಲ್ಲಿ ಕೊಳವೆಯಲ್ಲಿ ಪ್ರೋಟಾನ್‌ಗಳನ್ನು ತಳ್ಳಲು ಸಮರ್ಥವಾಗಿದೆ.

ವಿಜ್ಞಾನಿಗಳು ಈ ಬೃಹತ್ ಕೊಳವೆ ಮೂಲಕ ಹಾಯಿಸಿದ ಪ್ರೋಟಾನ್ ಕಿರಣವು ಗಾತ್ರದಲ್ಲಿ ಮನುಷ್ಯನ ತಲೆಗೂದಲಿನಷ್ಟು ದೊಡ್ಡದಾಗಿತ್ತು ಎಂದು ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆ (ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯಾರ್ ರಿಸರ್ಚ್ - ಇದರ ಫ್ರೆಂಚ್ ಹೃಸ್ವರೂಪ -CERN) ವಕ್ತಾರೆ ಪೌಲಾ ಕಾಟಾಪಾನೊ ತಿಳಿಸಿದ್ದಾರೆ.

ಒಮ್ಮೆ ಈ ಕಿರಣವನ್ನು ಪ್ರದಕ್ಷಿಣಾಕಾರದಲ್ಲಿ ಪರೀಕ್ಷೆ ಮಾಡಿದ ಬಳಿಕ, ಅದಕ್ಕೆ ಎದುರಾಗಿ ಅಪ್ರದಕ್ಷಿಣಾಕಾರವಾಗಿ ಮತ್ತೊಂದು ಪ್ರೋಟಾನ್ ಬೀಮ್ ಕಳುಹಿಸಲಾಗುತ್ತದೆ. ಈ ಮೂಲಕ ಪ್ರೋಟಾನ್‌ಗಳನ್ನು ಪರಸ್ಪರ ಘರ್ಷಿಸಿ, ಅವುಗಳು ಯಾವ ರೀತಿ ರಚನೆಯಾಗಿರಬಹುದು ಎಂಬುದನ್ನು ತಿಳಿಯುವ ಪ್ರಯತ್ನ ಮಾಡಲಾಗುತ್ತದೆ.

ಈ ಪ್ರಯತ್ನಗಳ ಬಗ್ಗೆ ಕೆಲವರು ಅಪಸ್ವರವನ್ನೂ ಎತ್ತಿದ್ದರು. ಪ್ರೋಟಾನ್‌ಗಳನ್ನು ಸಂಘರ್ಷಿಸಿಕೊಳ್ಳುವಂತೆ ಮಾಡುವುದರಿಂದ ಭೂಮಿಯೇ ನಾಶವಾಗುತ್ತದೆ ಎಂಬುದು ಅವರು ನೀಡುವ ಕಾರಣವಾಗಿತ್ತು. ಅಂದರೆ ಈ ಸಂಘರ್ಷದಿಂದ ಪತನಗೊಂಡ ನಕ್ಷತ್ರಗಳಿಂದ ಉಂಟಾಗುವಂತಹ, ಭಾರೀ ಸಾಮರ್ಥ್ಯವುಳ್ಳ ಕಪ್ಪು ಕುಳಿಗಳು ಸೃಷ್ಟಿಯಾಗಲಿದ್ದು, ಅವು ಗ್ರಹಗಳು ಹಾಗೂ ನಕ್ಷತ್ರಗಳನ್ನು ಸೆಳೆದುಕೊಳ್ಳಬಹುದು ಎಂದೂ ಅವರು ಕಾರಣ ನೀಡುತ್ತಾರೆ.

13.7 ಶತಕೋಟಿ ವರ್ಷಗಳ ಹಿಂದೆ ಭೂಮಿಯ ಉತ್ಪತ್ತಿಯಾಯಿತು ಎಂದು ಹೇಳಲಾಗುತ್ತಿದ್ದು, ಇದು ಕೂಡ "ಬಿಗ್ ಬ್ಯಾಂಗ್" (ಮಹಾಸ್ಫೋಟ) ಸಿದ್ಧಾಂತದಿಂದ ಎಂಬುದು ವಿಜ್ಞಾನಿಗಳ ನಂಬಿಕೆ. ಈಗ ಈ ಪ್ರೋಟಾನ್ ಸಂಘರ್ಷ ಸೃಷ್ಟಿಯ ಉದ್ದೇಶವೇನೆಂದರೆ, ಅಂದು ಬ್ರಹ್ಮಾಂಡ ಸೃಷ್ಟಿಯಾದ ಮಿಲಿಸೆಕೆಂಡಿನಲ್ಲಿ ಇದ್ದಂತಹ ಪರಿಸ್ಥಿತಿಯ ಪುನರ್ ಸೃಷ್ಟಿ. ತದ್ವಿರುದ್ಧ ದಿಕ್ಕಿನಿಂದ ವೇಗವಾಗಿ ಧಾವಿಸುವ ಪ್ರೋಟಾನ್ ಕಿರಣಗಳು ಸಂಘರ್ಷಿಸುವುದನ್ನು CERN ಮತ್ತು ವಿಶ್ವಾದ್ಯಂತ ಅಲ್ಲಲ್ಲಿ ನಿಯೋಜಿಸಲಾಗಿರುವ ಪ್ರಯೋಗಾಲಯಗಳ ಕಂಪ್ಯೂಟರುಗಳು ವಿಶ್ಲೇಷಿಸುತ್ತವೆ. ಬ್ರಹ್ಮಾಂಡದಲ್ಲಿ ಜೀವ ಸೃಷ್ಟಿಯಾದದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚಬಲ್ಲ ಒಂದು ಪರಮಾಣು ಕಣಕ್ಕಾಗಿ ವಿಜ್ಞಾನಿಗಳು ಕಾತುರತೆಯಿಂದಿದ್ದಾರೆ.
ಮತ್ತಷ್ಟು
ಆಪರೇಶನ್ ಕಮಲ ಕಳಂಕದೊಂದಿಗೆ ಬಿಜೆಪಿ ಶತದಿನ
ಜರ್ದಾರಿ: ಜೈಲಿನಿಂದ ಅಧ್ಯಕ್ಷ ಪಟ್ಟಕ್ಕೆ ಸಾಗಿ ಬಂದ ದಾರಿ
ಬನ್ನಿ, ಬಿಹಾರ ಪ್ರವಾಹ ಪೀಡಿತರಿಗೆ ನೆರವಾಗೋಣ
ಮೋದಿಯ ಮತ್ತೊಂದು ಮುಖ ಕಂಡ ಗುಜರಾತ್
ನಾಚಿಕೆಗೇಡು, ಪ್ರಜಾತಂತ್ರದ ಕಪ್ಪು ಚುಕ್ಕೆ!
ವಿಶ್ವಾಸ ಮತದ ಇತಿಹಾಸ: ಒಂದು ಹಿನ್ನೋಟ